Skip to content
Opens in a new window
Listen to this chapter • 10:19

[1] ಅನಂತರ ಯೇಸು ಅವರಿಗೆ, “ಇಲ್ಲಿ ನಿಂತವರಲ್ಲಿ ಕೆಲವರು ದೇವರ ರಾಜ್ಯವು ಶಕ್ತಿಯೊಂದಿಗೆ ಬರುವುದನ್ನು ಕಾಣುವವರೆಗೆ ಮರಣದ ಅನುಭವ ಹೊಂದುವುದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದರು.

[2] ಯೇಸು ಆರು ದಿನಗಳಾದ ಮೇಲೆ ಪೇತ್ರ, ಯಾಕೋಬ, ಯೋಹಾನನನ್ನೂ ತಮ್ಮೊಂದಿಗೆ ಕರೆದುಕೊಂಡು ಏಕಾಂತವಾಗಿ ಒಂದು ಎತ್ತರವಾದ ಬೆಟ್ಟಕ್ಕೆ ಹೋದರು. ಅಲ್ಲಿ ಯೇಸು ಅವರ ಮುಂದೆ ರೂಪಾಂತರಗೊಂಡರು.

[3] ಯೇಸುವಿನ ಉಡುಪು ಭೂಮಿಯ ಮೇಲಿರುವ ಯಾವ ಅಗಸನೂ ಬಿಳುಪು ಮಾಡಲಾರದಷ್ಟು ಉಜ್ವಲವಾಗಿ ಹೊಳೆಯುತ್ತಿತ್ತು.

[4] ಆಗ ಅಲ್ಲಿ ಎಲೀಯನು ಮತ್ತು ಮೋಶೆಯು ಯೇಸುವಿನೊಂದಿಗೆ ಮಾತನಾಡುತ್ತಿರುವುದನ್ನು ಅವರು ಕಂಡರು.

[5] ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ನಮಗೆ ಒಳ್ಳೆಯದು. ನಿನಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದರಂತೆ ಮೂರು ಗುಡಾರಗಳನ್ನು ನಾವು ಕಟ್ಟುವೆವು,” ಎಂದು ಹೇಳಿದನು.

[6] ತಾನು ಏನು ಮಾತನಾಡಬೇಕೋ ಅವನಿಗೆ ತಿಳಿದಿರಲಿಲ್ಲ. ಏಕೆಂದರೆ ಅವರು ಬಹಳವಾಗಿ ಹೆದರಿದ್ದರು.

[7] ಆಗ ಅಲ್ಲಿ ಮೋಡವು ಅವರ ಮೇಲೆ ಕವಿದುಕೊಂಡಿತು. ಮೋಡದೊಳಗಿಂದ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನ ಮಾತನ್ನು ಕೇಳಿರಿ,” ಎಂಬ ಧ್ವನಿಯು ಬಂದಿತು.

[8] ಕೂಡಲೇ ಅವರು ಸುತ್ತಲೂ ನೋಡಲಾಗಿ ತಮ್ಮೊಂದಿಗೆ ಯೇಸುವನ್ನೇ ಹೊರತು ಇನ್ನಾರನ್ನೂ ಕಾಣಲಿಲ್ಲ.

[9] ಬೆಟ್ಟದಿಂದ ಇಳಿದು ಬರುತ್ತಿದ್ದಾಗ, ಮನುಷ್ಯಪುತ್ರರಾದ ತಾವು ಸತ್ತವರೊಳಗಿಂದ ಎದ್ದು ಬರುವವರೆಗೆ ಅವರು ಕಂಡದ್ದನ್ನು ಯಾರಿಗೂ ಹೇಳಬಾರದೆಂದು ಯೇಸು ಆಜ್ಞಾಪಿಸಿದರು.

[10] “ಸತ್ತವರೊಳಗಿಂದ ಎದ್ದು ಬರುವುದೆಂದರೆ ಏನು?” ಅವರು ಒಬ್ಬರಿಗೊಬ್ಬರು ಆ ಮಾತನ್ನು ತಮ್ಮತಮ್ಮೊಳಗೆ ಚರ್ಚಿಸಿಕೊಂಡರು.

[11] ಇದಲ್ಲದೆ ಅವರು ಯೇಸುವಿಗೆ, “ಎಲೀಯನು ಮೊದಲು ಬರುವುದು ಅಗತ್ಯವೆಂದು ನಿಯಮ ಬೋಧಕರು ಏಕೆ ಹೇಳುತ್ತಾರೆ?” ಎಂದು ಕೇಳಿದರು.

[12] ಯೇಸು ಅವರಿಗೆ, “ಎಲೀಯನು ಮೊದಲು ಬಂದು ಎಲ್ಲವನ್ನೂ ಸರಿಪಡಿಸುತ್ತಾನೆಂಬ ಮಾತು ನಿಜವೇ. ಆದರೆ ಮನುಷ್ಯಪುತ್ರನಾದ ನಾನು ಬಹಳ ಯಾತನೆಗಳನ್ನು ಅನುಭವಿಸಿ ತಿರಸ್ಕರಿಸಲಾಗಬೇಕೆಂದು ನನ್ನ ವಿಷಯವಾಗಿ ಬರೆದಿರುವುದು ಹೇಗೆ?

[13] ಆದರೆ, ಎಲೀಯನು ನಿಜವಾಗಿಯೂ ಬಂದನು. ಅವನ ವಿಷಯವಾಗಿ ಬರೆದಿರುವಂತೆ ಜನರು ತಮ್ಮ ಮನಸ್ಸಿಗೆ ಬಂದ ಹಾಗೆ ಅವನಿಗೆ ಮಾಡಿದರು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.

[14] ಯೇಸು ತಮ್ಮ ಶಿಷ್ಯರ ಬಳಿಗೆ ಬಂದಾಗ, ಅವರ ಸುತ್ತಲು ದೊಡ್ಡ ಸಮೂಹವನ್ನೂ ನಿಯಮ ಬೋಧಕರು ಅವರೊಂದಿಗೆ ತರ್ಕಿಸುತ್ತಿರುವುದನ್ನೂ ಕಂಡರು.

[15] ಜನರೆಲ್ಲರೂ ಯೇಸುವನ್ನು ಕಂಡಕೂಡಲೇ, ಬಹು ಆಶ್ಚರ್ಯಪಟ್ಟು ಓಡುತ್ತಾ ಬಂದು ಯೇಸುವನ್ನು ವಂದಿಸಿದರು.

[16] ಆಗ ಯೇಸು ಅವರಿಗೆ, “ಅವರೊಂದಿಗೆ ನೀವು ಏನು ತರ್ಕಮಾಡುತ್ತಿದ್ದಿರಿ?” ಎಂದು ಕೇಳಿದರು.

[17] ಸಮೂಹದಲ್ಲಿದ್ದ ಒಬ್ಬನು, “ಬೋಧಕರೇ, ಮೂಕದೆವ್ವ ಹಿಡಿದ ನನ್ನ ಮಗನನ್ನು ನಿನ್ನ ಬಳಿಗೆ ತೆಗೆದುಕೊಂಡು ಬಂದೆನು.

[18] ಅಶುದ್ಧಾತ್ಮವು ಅವನನ್ನು ಹಿಡಿದುಕೊಂಡಾಗಲೆಲ್ಲಾ ಅವನನ್ನು ಒದ್ದಾಡಿಸುತ್ತದೆ. ಅವನು ನೊರೆ ಕಾರುತ್ತಾ ತನ್ನ ಹಲ್ಲು ಕಡಿದು ಸೆಟೆದುಕೊಂಡು ಬೀಳುತ್ತಾನೆ. ಅದನ್ನು ಬಿಡಿಸಬೇಕೆಂದು ನಾನು ನಿನ್ನ ಶಿಷ್ಯರಿಗೆ ಹೇಳಿದೆನು. ಆದರೆ ಅದು ಅವರಿಂದ ಆಗಲಿಲ್ಲ,” ಎಂದು ಹೇಳಿದನು.

[19] ಆಗ ಯೇಸು ಅವರಿಗೆ, “ವಿಶ್ವಾಸವಿಲ್ಲದ ಸಂತಾನವೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,” ಎಂದು ಹೇಳಿದರು.

[20] ಅವರು ಅವನನ್ನು ಯೇಸುವಿನ ಬಳಿಗೆ ತಂದರು. ಯೇಸುವನ್ನು ನೋಡಿದ ತಕ್ಷಣವೇ ಆ ದೆವ್ವವು ಆ ಬಾಲಕನನ್ನು ಒದ್ದಾಡಿಸಿದ್ದರಿಂದ ಅವನು ನೆಲಕ್ಕೆ ಬಿದ್ದು ನೊರೆ ಕಾರುತ್ತಾ ಹೊರಳಾಡಿದನು.

[21] ಯೇಸು ಅವನ ತಂದೆಗೆ, “ಇದು ಇವನನ್ನು ಹಿಡಿದು ಎಷ್ಟು ಕಾಲವಾಯಿತು?” ಎಂದು ಕೇಳಲು, ಅವನು, “ಬಾಲ್ಯದಿಂದಲೇ ಹೀಗಿದೆ.

[22] ಅಶುದ್ಧಾತ್ಮವು ಅವನನ್ನು ಕೊಲ್ಲಬೇಕೆಂದು ಅನೇಕ ಸಾರಿ ಬೆಂಕಿಯೊಳಗೂ ನೀರಿನೊಳಗೂ ಹಾಕಿತು. ಆದರೆ ನೀನು ಏನಾದರೂ ಮಾಡಲು ಸಾಧ್ಯವಿದ್ದರೆ, ಕನಿಕರಿಸಿ ನಮಗೆ ಸಹಾಯಮಾಡು,” ಎಂದನು.

[23] ಆಗ ಯೇಸು ಅವನಿಗೆ, “ನಿನಗೆ ಸಾಧ್ಯವಿದ್ದರೆ ಎನ್ನುತ್ತೀಯಲ್ಲಾ? ನಂಬುವವನಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದರು.

[24] ತಕ್ಷಣವೇ ಬಾಲಕನ ತಂದೆಯು, “ನಾನು ನಂಬುತ್ತೇನೆ. ನನಗೆ ಅಪನಂಬಿಕೆಯಿದೆ ನನಗೆ ಸಹಾಯಮಾಡು,” ಎಂದು ಮೊರೆಯಿಟ್ಟನು.

[25] ಜನರು ಕೂಡಿಕೊಂಡು ಓಡಿಬರುವುದನ್ನು ಯೇಸು ಕಂಡು, ಆ ಅಶುದ್ಧಾತ್ಮವನ್ನು ಗದರಿಸಿ ಅದಕ್ಕೆ, “ಮೂಕ ಮತ್ತು ಕಿವುಡಾದ ಆತ್ಮವೇ, ನೀನು ಅವನೊಳಗಿಂದ ಹೊರಗೆ ಬಾ, ಇನ್ನೆಂದಿಗೂ ಅವನೊಳಗೆ ಸೇರಬಾರದೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ,” ಎಂದರು.

[26] ಆಗ ಅಶುದ್ಧಾತ್ಮವು ಕೂಗಿ ಬಾಲಕನನ್ನು ಕ್ರೂರವಾಗಿ ಒದ್ದಾಡಿಸಿ ಅವನೊಳಗಿಂದ ಹೊರಗೆ ಬಂದಿತು. ಅವನು ಸತ್ತವನ ಹಾಗೆ ಬಿದ್ದಿದ್ದರಿಂದ ಅನೇಕರು, “ಅವನು ಸತ್ತಿದ್ದಾನೆ,” ಎಂದರು.

[27] ಆದರೆ ಯೇಸು ಕೈಹಿಡಿದು ಅವನನ್ನು ಮೇಲಕ್ಕೆತ್ತಲು ಅವನು ಎದ್ದು ನಿಂತನು.

[28] ಯೇಸು ಮನೆಯೊಳಕ್ಕೆ ಬಂದಾಗ, ಅವರ ಶಿಷ್ಯರು ಅವರಿಗೆ ಪ್ರತ್ಯೇಕವಾಗಿ, “ಆ ಅಶುದ್ಧಾತ್ಮವನ್ನು ಹೊರಗೆ ಹಾಕುವುದಕ್ಕೆ ನಮ್ಮಿಂದ ಏಕೆ ಆಗಲಿಲ್ಲ?” ಎಂದು ಕೇಳಿದರು.

[29] ಯೇಸು ಅವರಿಗೆ, “ಈ ತರವಾದದ್ದು ದೇವರ ಪ್ರಾರ್ಥನೆ ಉಪವಾಸಗಳಿಂದ ಹೊರತು ಬೇರೆ ಯಾವುದರಿಂದಲೂ ಹೋಗಲಾರದು,” ಎಂದರು.

[30] ಅವರು ಅಲ್ಲಿಂದ ಹೊರಟು ಗಲಿಲಾಯದ ಮಾರ್ಗವಾಗಿ ಹಾದುಹೋದರು. ತಾವು ಎಲ್ಲಿದ್ದೇವೆ ಎಂಬುದು ಬೇರೆಯವರಿಗೆ ತಿಳಿಯಬಾರದೆಂದು ಯೇಸು ಅಪೇಕ್ಷಿಸಿದರು.

[31] ಏಕೆಂದರೆ ಯೇಸು ತಮ್ಮ ಶಿಷ್ಯರಿಗೆ, “ಮನುಷ್ಯಪುತ್ರನಾದ ನನ್ನನ್ನು ಜನರ ಕೈಗಳಿಗೆ ಒಪ್ಪಿಸಿಕೊಡಲಾಗುವುದು. ಅವರು ನನ್ನನ್ನು ಕೊಲ್ಲುವರು. ನನ್ನನ್ನು ಕೊಂದ ತರುವಾಯ ಮೂರನೆಯ ದಿನದಲ್ಲಿ ನಾನು ಜೀವಂತವಾಗಿ ಏಳುವೆನು,” ಎಂದು ಬೋಧಿಸುತ್ತಿದ್ದರು.

[32] ಆದರೆ ಅವರಲ್ಲಿ ಆ ಮಾತನ್ನು ಯಾರೂ ಗ್ರಹಿಸಲಿಲ್ಲ. ಯೇಸುವನ್ನು ಕೇಳುವುದಕ್ಕೂ ಭಯಪಟ್ಟರು.

[33] ಅವರು ಕಪೆರ್ನೌಮಿಗೆ ಬಂದು ಮನೆಯಲ್ಲಿದ್ದಾಗ, ಯೇಸು ಅವರಿಗೆ, “ದಾರಿಯಲ್ಲಿ ನಿಮ್ಮೊಳಗೆ ನೀವು ಏನು ವಾಗ್ವಾದ ಮಾಡಿದಿರಿ?” ಎಂದು ಕೇಳಿದರು.

[34] ಆದರೆ ಅವರು ಸುಮ್ಮನಿದ್ದರು. ಏಕೆಂದರೆ ಅವರು ತಮ್ಮೊಳಗೆ ಯಾವನು ಅತಿ ದೊಡ್ಡವನು ಎಂದು ದಾರಿಯಲ್ಲಿ ವಾಗ್ವಾದ ಮಾಡಿದ್ದರು.

[35] ಆಗ ಯೇಸು ಕುಳಿತುಕೊಂಡು ಹನ್ನೆರಡು ಮಂದಿಯನ್ನು ಕರೆದು ಅವರಿಗೆ, “ಯಾವನಾದರೂ ಮೊದಲಿನವನಾಗಬೇಕೆಂದು ಇಷ್ಟಪಟ್ಟರೆ ಅವನು ಎಲ್ಲರಿಗಿಂತ ಕಡೆಯವನೂ ಎಲ್ಲರ ಸೇವಕನೂ ಆಗಿರಬೇಕು,” ಎಂದರು.

[36] ಯೇಸು ಒಂದು ಮಗುವನ್ನು ತೆಗೆದುಕೊಂಡು ಅದನ್ನು ಅವರ ಮಧ್ಯದಲ್ಲಿ ನಿಲ್ಲಿಸಿ, ತಮ್ಮ ಕೈಗಳಲ್ಲಿ ಅದನ್ನು ಎತ್ತಿಕೊಂಡು ಅವರಿಗೆ,

[37] “ಯಾವನಾದರೂ ಇಂಥ ಮಕ್ಕಳಲ್ಲಿ ಒಂದನ್ನು ನನ್ನ ಹೆಸರಿನಲ್ಲಿ ಸ್ವೀಕರಿಸಿದರೆ, ಅವನು ನನ್ನನ್ನು ಸ್ವೀಕರಿಸುತ್ತಾನೆ. ಯಾವನು ನನ್ನನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನು ಅಲ್ಲ ನನ್ನನ್ನು ಕಳುಹಿಸಿದ ತಂದೆಯನ್ನೇ ಸ್ವೀಕರಿಸುತ್ತಾನೆ,” ಎಂದರು.

[38] ಆಗ ಯೋಹಾನನು, “ಬೋಧಕರೇ, ನಮ್ಮನ್ನು ಹಿಂಬಾಲಿಸದ ಒಬ್ಬನು ನಿಮ್ಮ ಹೆಸರಿನಲ್ಲಿ ದೆವ್ವ ಓಡಿಸುವುದನ್ನು ನಾವು ಕಂಡೆವು. ಅವನು ನಮ್ಮವನು ಅಲ್ಲದ್ದರಿಂದ ನಾವು ಅವನನ್ನು ತಡೆದೆವು,” ಎಂದು ಹೇಳಿದನು.

[39] ಅದಕ್ಕೆ ಯೇಸು, “ಅವನನ್ನು ತಡೆಯಬೇಡಿರಿ; ನನ್ನ ಹೆಸರಿನಲ್ಲಿ ಅದ್ಭುತಕಾರ್ಯವನ್ನು ಮಾಡಿದವನು, ನನ್ನ ವಿಷಯದಲ್ಲಿ ಕೆಟ್ಟದ್ದನ್ನು ಮಾತನಾಡಲಾರನು.

[40] ನಮಗೆ ವಿರೋಧಿಯಾಗಿರದವನು ನಮ್ಮ ಪಕ್ಷದವನಾಗಿದ್ದಾನೆ.

[41] ಇದಲ್ಲದೆ ನೀವು ಕ್ರಿಸ್ತನಲ್ಲಿ ಸೇರಿದವರಾದ್ದರಿಂದ ಯಾರಾದರೂ ನನ್ನ ಹೆಸರಿನಲ್ಲೆ ನಿಮಗೆ ಒಂದು ಲೋಟ ನೀರನ್ನು ಕೊಟ್ಟರೂ ಅವರು ತಮ್ಮ ಪ್ರತಿಫಲವನ್ನು ಕಳೆದುಕೊಳ್ಳುವುದೇ ಇಲ್ಲವೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.

[42] “ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬರಿಗೆ ಯಾರಾದರೂ ಪಾಪಕ್ಕೆ ಕಾರಣರಾದರೆ, ಅಂಥವರ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವರನ್ನು ಸಮುದ್ರದಲ್ಲಿ ಬಿಸಾಡಿಬಿಡುವುದು ಅವರಿಗೆ ಲೇಸು.

[43] ನಿಮ್ಮ ಕೈ ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ಎರಡು ಕೈಯುಳ್ಳವರಾಗಿ ಎಂದಿಗೂ ಆರದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಅಂಗಹೀನರಾಗಿ ನಿತ್ಯಜೀವನವನ್ನು ಸೇರುವುದು ನಿಮಗೆ ಲೇಸು.

[44] ನರಕದಲ್ಲಿ, “ ‘ಅವರನ್ನು ಕಡಿಯುವ ಹುಳ ಸಾಯುವುದಿಲ್ಲ ಮತ್ತು ಬೆಂಕಿಯು ಆರುವುದಿಲ್ಲ.’

[45] ನಿಮ್ಮ ಕಾಲು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ನೀವು ಎರಡು ಕಾಲುಳ್ಳವರಾಗಿ ಆರದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಕುಂಟರಾಗಿ ನಿತ್ಯಜೀವನವನ್ನು ಸೇರುವುದು ನಿಮಗೆ ಲೇಸು.

[46] ನರಕದಲ್ಲಿ, “ ‘ಅವರನ್ನು ಕಡಿಯುವ ಹುಳ ಸಾಯುವುದಿಲ್ಲ ಮತ್ತು ಬೆಂಕಿಯು ಆರುವುದಿಲ್ಲ.’

[47] ನಿಮ್ಮ ಕಣ್ಣು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಬಿಡಿರಿ. ಎರಡು ಕಣ್ಣುಳ್ಳವರಾಗಿ ನರಕದ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಒಂದು ಕಣ್ಣುಳ್ಳವರಾಗಿ ದೇವರ ರಾಜ್ಯದಲ್ಲಿ ಸೇರುವುದು ನಿಮಗೆ ಲೇಸು.

[48] ನರಕದಲ್ಲಿ, “ ‘ಅವರನ್ನು ಕಡಿಯುವ ಹುಳ ಸಾಯುವುದಿಲ್ಲ, ಮತ್ತು ಬೆಂಕಿಯು ಆರುವುದಿಲ್ಲ.’

[49] ಉಪ್ಪನ್ನು ಪರೀಕ್ಷಿಸುವಂತೆ ಪ್ರತಿಯೊಬ್ಬರು ಬೆಂಕಿಯ ಮೂಲಕ ಪರೀಕ್ಷೆಗೆ ಒಳಪಡಬೇಕಾಗುತ್ತದೆ.

[50] “ಉಪ್ಪು ಒಳ್ಳೆಯದು. ಆದರೆ ಉಪ್ಪೇ ಸಪ್ಪಗಾದರೆ, ಇನ್ನಾವುದರಿಂದ ನೀವು ಅದನ್ನು ರುಚಿಗೊಳಿಸುವಿರಿ? ನಿಮ್ಮೊಳಗೆ ಉಪ್ಪು ಇರುವಂತೆ, ಒಬ್ಬರಿಗೊಬ್ಬರು ಸಮಾಧಾನದಿಂದಿರಿ,” ಎಂದರು.

ಮಾರ್ಕ — Chapters