[1] ಆ ದಿವಸಗಳಲ್ಲಿ ದೊಡ್ಡ ಜನಸಮೂಹ ಕೂಡಿಬಂದಿತು. ಅವರಿಗೆ ಊಟಕ್ಕೆ ಏನೂ ಇಲ್ಲದ್ದರಿಂದ ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು,
[2] “ನಾನು ಈ ಜನಸಮೂಹವನ್ನು ನೋಡಿ ಕನಿಕರಪಡುತ್ತೇನೆ. ಏಕೆಂದರೆ ಮೂರು ದಿನಗಳಿಂದ ಇವರು ನನ್ನೊಂದಿಗಿದ್ದಾರೆ. ಇವರಿಗೆ ಊಟಕ್ಕೆ ಏನೂ ಇಲ್ಲ.
[3] ನಾನು ಇವರನ್ನು ಹಸಿವೆಯಿಂದ ತಮ್ಮ ಮನೆಗಳಿಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಹೋಗುವರು. ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರೆ,” ಎಂದರು.
[4] ಅದಕ್ಕೆ ಶಿಷ್ಯರು ಯೇಸುವಿಗೆ, “ಈ ನಿರ್ಜನ ಪ್ರದೇಶದಲ್ಲಿ ಈ ಜನರನ್ನು ತೃಪ್ತಿಪಡಿಸಲು ಸಾಕಷ್ಟು ರೊಟ್ಟಿಯನ್ನು ಎಲ್ಲಿಂದ ತರುವುದು?” ಎಂದರು.
[5] ಯೇಸು ಅವರಿಗೆ, “ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದ್ದಕ್ಕೆ ಶಿಷ್ಯರು, “ಏಳು ರೊಟ್ಟಿಗಳಿವೆ,” ಎಂದರು.
[6] ಆಗ ಯೇಸು ಜನಸಮೂಹವು ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟು ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ಮುರಿದು ಜನಸಮೂಹಕ್ಕೆ ಹಂಚಲು ತಮ್ಮ ಶಿಷ್ಯರಿಗೆ ಕೊಟ್ಟರು. ಅವರು ಜನಸಮೂಹಕ್ಕೆ ಹಂಚಿದರು.
[7] ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು. ಯೇಸು ಅವುಗಳನ್ನೂ ಆಶೀರ್ವದಿಸಿ ಅವರಿಗೆ ಹಂಚುವಂತೆ ಆಜ್ಞಾಪಿಸಿದರು.
[8] ಜನರು ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಒಟ್ಟುಗೂಡಿಸಿದಾಗ ಏಳು ಬುಟ್ಟಿಗಳು ತುಂಬಿದವು.
[9] ಊಟಮಾಡಿದವರು ಸುಮಾರು ನಾಲ್ಕು ಸಾವಿರ ಮಂದಿ. ಯೇಸು ಅವರನ್ನು ಕಳುಹಿಸಿದ ನಂತರ,
[10] ತಮ್ಮ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು.
[11] ಫರಿಸಾಯರು ಬಂದು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಪರಲೋಕದಿಂದ ತಮಗೆ ಒಂದು ಸೂಚಕಕಾರ್ಯವನ್ನು ಮಾಡಬೇಕೆಂದು ಕೇಳಿ, ಅವರೊಂದಿಗೆ ತರ್ಕಿಸುವುದಕ್ಕೆ ಆರಂಭಿಸಿದರು.
[12] ಯೇಸು ತಮ್ಮ ಆತ್ಮದಲ್ಲಿ ನೊಂದುಕೊಂಡು, “ಈ ಸಂತತಿಯು ಸೂಚಕಕಾರ್ಯವನ್ನು ಹುಡುಕುವುದು ಏಕೆ? ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲಾಗುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದರು.
[13] ಯೇಸು ಅವರನ್ನು ಬಿಟ್ಟು ತಿರುಗಿ ದೋಣಿಯನ್ನು ಹತ್ತಿ ಆಚೆದಡಕ್ಕೆ ಹೊರಟು ಹೋದರು.
[14] ಶಿಷ್ಯರು ರೊಟ್ಟಿಬುತ್ತಿಯನ್ನು ತೆಗೆದುಕೊಳ್ಳುವುದಕ್ಕೆ ಮರೆತಿದ್ದರು. ಇದಲ್ಲದೆ ದೋಣಿಯಲ್ಲಿ ಅವರಿಗೆ ಒಂದೇ ಒಂದು ರೊಟ್ಟಿ ಇತ್ತು.
[15] ಯೇಸು ಅವರಿಗೆ, “ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿಯೂ ಹೆರೋದನ ವಿಷಯದಲ್ಲಿಯೂ ನೀವು ಎಚ್ಚರಿಕೆಯಿಂದಿರಿ,” ಎಂದು ಖಂಡಿತವಾಗಿ ಹೇಳಿದರು.
[16] ಅವರು ತಮ್ಮೊಳಗೆ, “ನಮ್ಮಲ್ಲಿ ರೊಟ್ಟಿ ಇಲ್ಲದಿರುವುದರಿಂದಲೇ ಹೀಗೆ ಹೇಳುತ್ತಿರಬೇಕು,” ಎಂದು ಚರ್ಚಿಸಿಕೊಂಡರು.
[17] ಯೇಸು ಅವರು ಮಾತನಾಡಿದ್ದನ್ನು ತಿಳಿದುಕೊಂಡು ಅವರಿಗೆ, “ನಿಮ್ಮಲ್ಲಿ ರೊಟ್ಟಿ ಇಲ್ಲವೆಂದು ಏಕೆ ಚರ್ಚಿಸಿಕೊಳ್ಳುತ್ತೀರಿ? ನೀವು ಇನ್ನೂ ಕಾಣದೆಯೂ ತಿಳಿದುಕೊಳ್ಳದೆಯೂ ಇದ್ದೀರೋ? ನೀವು ನಿಮ್ಮ ಹೃದಯವನ್ನು ಇನ್ನೂ ಕಠಿಣ ಮಾಡಿಕೊಂಡಿದ್ದೀರೋ?
[18] ಕಣ್ಣುಗಳಿದ್ದೂ ನೀವು ಕಾಣುವುದಿಲ್ಲವೋ? ಕಿವಿಗಳಿದ್ದೂ ನೀವು ಕೇಳುವುದಿಲ್ಲವೋ?
[19] ನಾನು ಆ ಐದು ರೊಟ್ಟಿಗಳನ್ನು ಐದು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಬುಟ್ಟಿಗಳ ತುಂಬ ರೊಟ್ಟಿಯ ತುಂಡುಗಳನ್ನು ಕೂಡಿಸಿದಿರಿ ಎಂದು ನಿಮಗೆ ನೆನಪಿಲ್ಲವೇ?” ಎಂದು ಕೇಳಲು ಅವರು ಯೇಸುವಿಗೆ, “ಹನ್ನೆರಡು ಬುಟ್ಟಿಗಳು,” ಎಂದರು.
[20] “ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಬುಟ್ಟಿಗಳ ತುಂಬ ತುಂಡುಗಳನ್ನು ಕೂಡಿಸಿದಿರಿ?” ಎಂದು ಕೇಳಲು ಅವರು, “ಏಳು ಬುಟ್ಟಿಗಳು,” ಎಂದರು.
[21] ಯೇಸು ಅವರಿಗೆ, “ಹಾಗಾದರೆ ನೀವು ಇನ್ನೂ ಗ್ರಹಿಸದೆ ಇರುವುದು ಹೇಗೆ?” ಎಂದು ಕೇಳಿದರು.
[22] ಯೇಸು ಬೇತ್ಸಾಯಿದಕ್ಕೆ ಬಂದಾಗ, ಕೆಲವರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ತಂದು ಅವನನ್ನು ಮುಟ್ಟಬೇಕೆಂದು ಬೇಡಿಕೊಂಡರು.
[23] ಯೇಸು ಆ ಕುರುಡನ ಕೈಹಿಡಿದು ಊರ ಹೊರಗೆ ಕರೆದುಕೊಂಡು ಹೋಗಿ, ಅವನ ಕಣ್ಣುಗಳ ಮೇಲೆ ಉಗುಳಿ ಅವನ ಮೇಲೆ ತಮ್ಮ ಕೈಯಿಟ್ಟು, “ನಿನಗೆ ಏನಾದರೂ ಕಾಣುತ್ತದೋ?” ಎಂದು ಅವನನ್ನು ಕೇಳಿದರು.
[24] ಅವನು ಮೇಲಕ್ಕೆ ನೋಡಿ, “ಮನುಷ್ಯರು ಮರಗಳ ಹಾಗೆ ಕಾಣುತ್ತಿದ್ದಾರೆ. ಆದರೂ ಅವರು ನಡೆದಾಡುವುದನ್ನು ನೋಡುತ್ತಿದ್ದೇನೆ,” ಎಂದನು.
[25] ತರುವಾಯ ಯೇಸು ತಿರುಗಿ ಅವನ ಕಣ್ಣುಗಳ ಮೇಲೆ ತಮ್ಮ ಕೈಗಳನ್ನಿಟ್ಟರು. ಆಗ ಅವನು ಗುಣಹೊಂದಿದವನಾಗಿ ಎಲ್ಲವನ್ನೂ ಬಹುಸ್ಪಷ್ಟವಾಗಿ ಕಂಡನು.
[26] ಯೇಸು ಅವನಿಗೆ, “ನೀನು ಊರೊಳಕ್ಕೆ ಹೋಗಬೇಡ,” ಎಂದು ಹೇಳಿ ಅವನನ್ನು ಮನೆಗೆ ಕಳುಹಿಸಿಬಿಟ್ಟರು.
[27] ಯೇಸುವೂ ಅವರ ಶಿಷ್ಯರೂ ಕೈಸರೈಯ ಫಿಲಿಪ್ಪಿ ಊರುಗಳಿಗೆ ಹೋದರು. ಯೇಸು ದಾರಿಯಲ್ಲಿ ತಮ್ಮ ಶಿಷ್ಯರಿಗೆ, “ನಾನು ಯಾರೆಂದು ಜನರು ಹೇಳುತ್ತಾರೆ?” ಎಂದು ಕೇಳಿದರು.
[28] ಅವರು, “ಕೆಲವರು ಸ್ನಾನಿಕನಾದ ಯೋಹಾನನು, ಮತ್ತೆ ಕೆಲವರು ಎಲೀಯನು, ಇನ್ನು ಕೆಲವರು ಪ್ರವಾದಿಗಳಲ್ಲಿ ಒಬ್ಬನು ಎನ್ನುತ್ತಾರೆ,” ಎಂದು ಹೇಳಿದರು.
[29] ಅದಕ್ಕೆ ಯೇಸು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಲು, ಪೇತ್ರನು ಯೇಸುವಿಗೆ, “ನೀನು ಕ್ರಿಸ್ತನೇ,” ಎಂದನು.
[30] ತಮ್ಮ ವಿಷಯವಾಗಿ ಅವರು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಖಂಡಿತವಾಗಿ ಹೇಳಿದರು.
[31] ಮನುಷ್ಯಪುತ್ರನಾದ ನಾನು ಅನೇಕ ಬಾಧೆಗಳನ್ನು ಅನುಭವಿಸಿ, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ತಿರಸ್ಕೃತನಾಗಿ ಕೊಲೆಗೆ ಗುರಿಯಾಗಿ ಮೂರು ದಿವಸಗಳಾದ ಮೇಲೆ ಜೀವಂತವಾಗಿ ಎದ್ದು ಬರುವುದು ಅವಶ್ಯ ಎಂದು ಅವರಿಗೆ ಬೋಧಿಸಲಾರಂಭಿಸಿದರು.
[32] ಯೇಸು ಆ ಮಾತನ್ನು ಸ್ಪಷ್ಟವಾಗಿ ಹೇಳಿದ್ದರಿಂದ ಪೇತ್ರನು ಅವರನ್ನು ಪ್ರತ್ಯೇಕವಾಗಿ ಕರೆದು ಯೇಸುವನ್ನು ಗದರಿಸಲಾರಂಭಿಸಿದನು.
[33] ಆದರೆ ಯೇಸು ತಿರುಗಿ ತಮ್ಮ ಶಿಷ್ಯರ ಕಡೆಗೆ ನೋಡಿ ಪೇತ್ರನನ್ನು ಗದರಿಸಿ, “ಸೈತಾನನೇ, ನನ್ನಿಂದ ತೊಲಗಿಹೋಗು! ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ,” ಎಂದು ಹೇಳಿದರು.
[34] ಯೇಸು ಜನರನ್ನೂ ಶಿಷ್ಯರನ್ನೂ ತಮ್ಮ ಬಳಿಗೆ ಕರೆದು ಅವರಿಗೆ, “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವರು ತಮ್ಮನ್ನು ನಿರಾಕರಿಸಿ ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
[35] ತಮ್ಮ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವರು ಅದನ್ನು ಕಳೆದುಕೊಳ್ಳುವರು. ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಯಾರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವರೋ ಅವರು ಅದನ್ನು ಉಳಿಸಿಕೊಳ್ಳುವರು.
[36] ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತಮ್ಮ ಸ್ವಂತ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅವರಿಗೆ ಲಾಭವೇನು?
[37] ಇಲ್ಲವೆ ತಮ್ಮ ಆತ್ಮಕ್ಕೆ ಬದಲಾಗಿ ಏನು ಕೊಡುವರು?
[38] ಯಾರಾದರೂ ವ್ಯಭಿಚಾರದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯವಾಗಿ ನಾಚಿಕೊಳ್ಳುವರೋ ಅವರ ವಿಷಯದಲ್ಲಿ ಮನುಷ್ಯಪುತ್ರನಾದ ನಾನು ಸಹ ನನ್ನ ತಂದೆಯ ಮಹಿಮೆಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿಕೊಳ್ಳುವೆನು,” ಎಂದು ಹೇಳಿದರು.