[1] ಯೆರೂಸಲೇಮಿನಿಂದ ಫರಿಸಾಯರು ಮತ್ತು ಕೆಲವು ನಿಯಮ ಬೋಧಕರು ಯೇಸುವಿನ ಬಳಿಗೆ ಬಂದರು.
[2] ಆಗ ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ, ಅಂದರೆ ಆಚಾರ ಪದ್ಧತಿಯಂತೆ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಕಂಡರು.
[3] ಫರಿಸಾಯರು ಮತ್ತು ಎಲ್ಲಾ ಯೆಹೂದ್ಯರು ಆಚಾರ ಪದ್ಧತಿಯಂತೆ ತಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯದೆ ಊಟಮಾಡುವುದಿಲ್ಲ. ಹೀಗೆ ಅವರ ಪೂರ್ವಿಕರಿಂದ ಬಂದ ಸಂಪ್ರದಾಯವನ್ನು ಪಾಲಿಸುತ್ತಿದ್ದರು.
[4] ಪೇಟೆಗೆ ಹೋಗಿ ಬಂದರೆ ಅವರು ಸ್ನಾನ ಮಾಡದೆ ಊಟಮಾಡುತ್ತಿರಲಿಲ್ಲ. ಮಾತ್ರವಲ್ಲದೆ ಲೋಟ, ಚೆಂಬು ಮತ್ತು ತಪ್ಪಲೆಗಳನ್ನು ಬೆಳಗಿ ತೊಳೆಯುವುದು ಮುಂತಾದ ಅನೇಕ ಶುದ್ಧಾಚಾರಗಳನ್ನು ಅವರು ಪಾಲಿಸುತ್ತಿದ್ದರು.
[5] ಆದ್ದರಿಂದ ಫರಿಸಾಯರು ಮತ್ತು ನಿಯಮ ಬೋಧಕರು, “ನಿನ್ನ ಶಿಷ್ಯರು ಪೂರ್ವಿಕರ ಸಂಪ್ರದಾಯದ ಪ್ರಕಾರ ಏಕೆ ನಡೆಯುವುದಿಲ್ಲ? ಅವರು ಮೈಲಿಗೆಯಾದ ಕೈಗಳಿಂದ ಊಟಮಾಡುತ್ತಾರಲ್ಲಾ?” ಎಂದು ಯೇಸುವನ್ನು ಕೇಳಿದರು.
[6] ಅದಕ್ಕೆ ಯೇಸು, “ಕಪಟಿಗಳೇ, ಯೆಶಾಯನು ನಿಮ್ಮ ವಿಷಯವಾಗಿ ಸರಿಯಾಗಿ ಪ್ರವಾದಿಸಿದ್ದಾನೆ,” ಅವನು ಬರೆದಿರುವಂತೆ: “ ‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ. ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.
[7] ಮನುಷ್ಯರ ಆಜ್ಞೆಗಳನ್ನೇ ಉಪದೇಶಗಳನ್ನಾಗಿ ಬೋಧಿಸುವುದರಿಂದ ನನ್ನನ್ನು ವ್ಯರ್ಥವಾಗಿ ಆರಾಧಿಸುತ್ತಾರೆ.’
[8] ನೀವು ದೇವರ ಆಜ್ಞೆಯನ್ನು ತೊರೆದು, ಮನುಷ್ಯರ ಸಂಪ್ರದಾಯಗಳನ್ನು ಹಿಡಿದುಕೊಂಡಿದ್ದೀರಿ,” ಎಂದರು.
[9] ಯೇಸು ಇನ್ನೂ ಅವರಿಗೆ, “ನಿಮ್ಮ ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಬಹು ಜಾಣತನದಿಂದ ದೇವರ ಆಜ್ಞೆಯನ್ನು ನಿರ್ಲಕ್ಷಿಸುತ್ತೀರಿ.
[10] ‘ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು,’ ಮತ್ತು ‘ತಂದೆತಾಯಿಗಳನ್ನು ದೂಷಿಸುವವನಿಗೆ ಮರಣದಂಡನೆ ಆಗಬೇಕು,’ ಎಂದು ಮೋಶೆ ಹೇಳಿದ್ದಾನೆ.
[11] ಆದರೆ ನೀವು, ಯಾರಾದರೂ ತನ್ನ ತಂದೆಗೆ ಇಲ್ಲವೆ ತಾಯಿಗೆ, ನಾನು ನಿಮ್ಮ ಸಹಾಯಕ್ಕಾಗಿ ಇಟ್ಟಿದ್ದನ್ನು, ‘ದೇವರಿಗೆ ಕಾಣಿಕೆಯಾಗಿ ಕೊಟ್ಟಿದ್ದೇನೆ’ ಎಂದು ಹೇಳುವುದಾದರೆ,
[12] ನೀವು ಅವನನ್ನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನು ಮಾಡುವುದಕ್ಕೂ ಅನುಮತಿಸುವುದಿಲ್ಲ.
[13] ಹೀಗೆ ನೀವು ಮಾಡುತ್ತಾ ಬಂದಿರುವ ಸಂಪ್ರದಾಯಗಳ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ. ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ,” ಎಂದು ಹೇಳಿದರು.
[14] ಯೇಸು ಜನಸಮೂಹವನ್ನು ಪುನಃ ತಮ್ಮ ಬಳಿಗೆ ಕರೆದು, “ಎಲ್ಲರೂ ನನ್ನ ಮಾತುಗಳನ್ನು ಕೇಳಿರಿ, ಅರ್ಥಮಾಡಿಕೊಳ್ಳಿರಿ.
[15] ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಅಶುದ್ಧ ಮಾಡುವುದಿಲ್ಲ. ಆದರೆ ಮನುಷ್ಯನೊಳಗಿಂದ ಹೊರಗೆ ಬರುವಂಥದ್ದು ಅವನನ್ನು ಅಶುದ್ಧ ಮಾಡುತ್ತದೆ.
[16] ಯಾವನಿಗಾದರೂ ಕೇಳುವುದಕ್ಕೆ ಕಿವಿಯಿದ್ದರೆ ಕೇಳಲಿ,” ಎಂದು ಹೇಳಿದರು.
[17] ಆಮೇಲೆ ಯೇಸು ಜನರ ಗುಂಪನ್ನು ಬಿಟ್ಟು ಮನೆಯೊಳಗೆ ಪ್ರವೇಶಿಸಿದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, ಆ ಸಾಮ್ಯದ ವಿಷಯವಾಗಿ ಪ್ರಶ್ನಿಸಿದರು.
[18] ಯೇಸು ಅವರಿಗೆ, “ನೀವೂ ಇಷ್ಟು ಬುದ್ಧಿಹೀನರೋ? ಹೊರಗಿನಿಂದ ಮನುಷ್ಯನೊಳಗೆ ಹೋಗುವಂಥದ್ದು ಅವನನ್ನು ಅಶುದ್ಧ ಮಾಡುವುದಿಲ್ಲವೆಂಬುದು ನಿಮಗೆ ತಿಳಿಯದೋ?
[19] ಏಕೆಂದರೆ ಅದು ಅವನ ಹೃದಯದೊಳಗೆ ಹೋಗದೆ ಹೊಟ್ಟೆಯನ್ನು ಸೇರಿ ಬಳಿಕ ವಿಸರ್ಜಿತವಾಗುತ್ತದೆ. ಹೀಗೆ ಹೇಳುವುದರ ಮೂಲಕ ಎಲ್ಲಾ ಆಹಾರ ಪದಾರ್ಥಗಳು ಶುದ್ಧವಾಗಿವೆ,” ಎಂದು ಯೇಸು ಸೂಚಿಸಿದರು.
[20] ಯೇಸು ಮುಂದುವರಿದು, “ಆದರೆ ಮನುಷ್ಯನೊಳಗಿಂದ ಹೊರಡುವಂಥದ್ದು ಅವನನ್ನು ಅಶುದ್ಧ ಮಾಡುತ್ತವೆ.
[21] ಮನುಷ್ಯನ ಹೃದಯದೊಳಗಿಂದ ಜಾರತ್ವ, ಕಳ್ಳತನ, ಕೊಲೆ,
[22] ವ್ಯಭಿಚಾರ, ಲೋಭ, ದುಷ್ಟತ್ವ, ವಂಚನೆ, ಅಶ್ಲೀಲತೆ, ಅಸೂಯೆ, ನಿಂದೆ, ಗರ್ವ ಮತ್ತು ಮೂರ್ಖತನ ಮುಂತಾದ ದುರಾಲೋಚನೆಗಳು ಹೊರಡುತ್ತವೆ.
[23] ಈ ಎಲ್ಲಾ ಕೇಡುಗಳು ಮನುಷ್ಯನ ಒಳಗಿಂದ ಹೊರಟು ಅವನನ್ನು ಅಶುದ್ಧ ಮಾಡುತ್ತವೆ,” ಎಂದರು.
[24] ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸಮೀಪವಿದ್ದ ಪ್ರದೇಶಕ್ಕೆ ಹೋದರು. ಯೇಸು ಒಂದು ಮನೆಯೊಳಗೆ ಹೋದಾಗ, ಅದು ಯಾರಿಗೂ ತಿಳಿಯಬಾರದೆಂದು ಬಯಸಿದರು. ಆದರೂ ಅವರು ಗುಟ್ಟಾಗಿರಲು ಸಾಧ್ಯವಾಗಲಿಲ್ಲ.
[25] ಹೀಗೆ ಯೇಸುವಿನ ವಿಷಯ ತಿಳಿದ ಕೂಡಲೇ, ಅಶುದ್ಧಾತ್ಮಪೀಡಿತಳಾಗಿದ್ದ ಒಬ್ಬ ಚಿಕ್ಕ ಹುಡುಗಿಯ ತಾಯಿ ಬಂದು ಅವರ ಪಾದಕ್ಕೆ ಬಿದ್ದಳು.
[26] ಆಕೆ, ಸಿರಿಯದ ಫೊಯಿನಿಕೆಯಲ್ಲಿ ಹುಟ್ಟಿದ ಗ್ರೀಕಳಾಗಿದ್ದಳು. ತನ್ನ ಮಗಳಿಗೆ ಹಿಡಿದಿದ್ದ ದೆವ್ವವನ್ನು ಓಡಿಸಬೇಕೆಂದು ಆಕೆ ಯೇಸುವನ್ನು ಬೇಡಿಕೊಂಡಳು.
[27] ಯೇಸು ಆಕೆಗೆ, “ಮೊದಲು ಮಕ್ಕಳು ತಮಗೆ ಬೇಕಾದದ್ದನ್ನು ತಿಂದು ತೃಪ್ತಿಗೊಳ್ಳಲಿ, ಏಕೆಂದರೆ ಮಕ್ಕಳು ತಿನ್ನುವ ರೊಟ್ಟಿಯನ್ನು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ,” ಎಂದರು.
[28] ಅದಕ್ಕೆ ಆಕೆಯು ಯೇಸುವಿಗೆ, “ಹೌದು ಸ್ವಾಮೀ, ಆದರೆ ಮೇಜಿನ ಕೆಳಗಿರುವ ನಾಯಿಮರಿಗಳು ಮಕ್ಕಳ ಕೈಯಿಂದ ಕೆಳಗೆ ಬೀಳುವ ರೊಟ್ಟಿತುಂಡುಗಳನ್ನು ತಿನ್ನುತ್ತವಲ್ಲಾ?” ಎಂದು ಉತ್ತರಕೊಟ್ಟಳು.
[29] ಆಗ ಯೇಸು ಆಕೆಗೆ, “ನೀನು ಕೊಟ್ಟಿರುವ ಈ ಉತ್ತರದ ನಿಮಿತ್ತ ಮನೆಗೆ ಹಿಂದಿರುಗು, ದೆವ್ವವು ನಿನ್ನ ಮಗಳನ್ನು ಬಿಟ್ಟುಹೋಗಿದೆ,” ಎಂದರು.
[30] ಆಕೆ ಮನೆಗೆ ಹೋದಾಗ, ದೆವ್ವ ಅವಳ ಮಗಳನ್ನು ಬಿಟ್ಟುಹೋಗಿತ್ತು ಮತ್ತು ಮಗಳು ಹಾಸಿಗೆಯ ಮೇಲೆ ಮಲಗಿರುವುದನ್ನು ಕಂಡಳು.
[31] ಆಮೇಲೆ ಯೇಸು ಟೈರ್ ಪಟ್ಟಣದ ಸಮೀಪವಿದ್ದ ಪ್ರದೇಶದಿಂದ ಹೊರಟು ಸೀದೋನಿನ ಮಾರ್ಗವಾಗಿ ಗಲಿಲಾಯ ಸರೋವರ ತೀರವನ್ನು ಹಾದು ದೆಕಪೊಲಿ ಪ್ರದೇಶಕ್ಕೆ ಬಂದರು.
[32] ಅಲ್ಲಿ ಕೆಲವರು ಮಾತನಾಡಲಾಗದ ಒಬ್ಬ ಕಿವುಡನನ್ನು ಕರೆದುಕೊಂಡು ಬಂದು ಅವನ ಮೇಲೆ ಕೈಯಿಡಬೇಕೆಂದು ಯೇಸುವನ್ನು ಬೇಡಿಕೊಂಡರು.
[33] ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ತಮ್ಮ ಬೆರಳುಗಳನ್ನು ಅವನ ಕಿವಿಯೊಳಗಿಟ್ಟು ಅನಂತರ ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದರು.
[34] ಯೇಸು ಸ್ವರ್ಗದ ಕಡೆಗೆ ನೋಡಿ, ದೀರ್ಘವಾಗಿ ನಿಟ್ಟುಸಿರುಬಿಟ್ಟು ಅವನಿಗೆ “ಎಪ್ಫಥಾ!” ಎಂದರು. “ತೆರೆಯಲಿ!” ಎಂಬುದು ಅದರ ಅರಮೀಯ ಅರ್ಥ.
[35] ಕೂಡಲೇ ಅವನ ಕಿವಿಗಳು ತೆರೆದವು; ಅವನ ನಾಲಿಗೆಯು ಸಡಿಲವಾಯಿತು. ಅವನು ಸ್ಪಷ್ಟವಾಗಿ ಮಾತನಾಡಲಾರಂಭಿಸಿದನು.
[36] ಯಾವ ಮನುಷ್ಯನಿಗೂ ಇದನ್ನು ಹೇಳಬಾರದೆಂದು ಯೇಸು ಅವರಿಗೆ ಖಂಡಿತವಾಗಿ ಹೇಳಿದರು. ಆದರೆ ಎಷ್ಟು ಖಂಡಿತವಾಗಿ ಹೇಳಿದರೂ ಅವರು ಅದನ್ನು ಮತ್ತಷ್ಟೂ ಹೆಚ್ಚಾಗಿ ಪ್ರಚಾರಮಾಡಿದರು.
[37] ಜನರು ಅತ್ಯಂತ ಆಶ್ಚರ್ಯಪಟ್ಟು, “ಯೇಸು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ. ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರೆ,” ಎಂದುಕೊಳ್ಳುತ್ತಿದ್ದರು.