[1] ಕೆಲವು ದಿನಗಳಾದ ಮೇಲೆ ಯೇಸು ಕಪೆರ್ನೌಮಿಗೆ ಹಿಂದಿರುಗಿದಾಗ, ಅವರು ಮನೆಗೆ ಬಂದಿದ್ದಾರೆಂಬ ವಾರ್ತೆಯು ಜನರಲ್ಲಿ ಹಬ್ಬಿತು.
[2] ಜನರು ಗುಂಪಾಗಿ ಕೂಡಿಬಂದದ್ದರಿಂದ ಮನೆಯೊಳಗಾಗಲಿ ಬಾಗಿಲ ಬಳಿಯಲ್ಲಾಗಲಿ ಸ್ಥಳವಿರಲಿಲ್ಲ. ಯೇಸು ಅವರಿಗೆ ದೇವರ ವಾಕ್ಯವನ್ನು ಹೇಳುತ್ತಿದ್ದರು.
[3] ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರಿಂದ ಹೊರಿಸಿಕೊಂಡು ಅಲ್ಲಿಗೆ ಬಂದರು.
[4] ಜನರ ಗುಂಪಿನ ನಿಮಿತ್ತ ಅವನನ್ನು ಯೇಸುವಿನ ಬಳಿಗೆ ತರಲು ಸಾಧ್ಯವಾಗದೆ ಹೋಯಿತು. ಆದ್ದರಿಂದ ಅವರು ಯೇಸು ಇದ್ದ ಕಡೆ ಮನೆಯ ಮೇಲ್ಚಾವಣಿಯನ್ನು ಒಡೆದು ತೆರೆದು, ಪಾರ್ಶ್ವವಾಯು ರೋಗಿಯನ್ನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು.
[5] ಯೇಸು ಅವರ ನಂಬಿಕೆಯನ್ನು ಕಂಡು, ಆ ಪಾರ್ಶ್ವವಾಯು ರೋಗಿಗೆ, “ಮಗನೇ, ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು.
[6] ಅಲ್ಲಿ ಕುಳಿತಿದ್ದ ಕೆಲವು ನಿಯಮ ಬೋಧಕರು,
[7] “ಈತನು ಏಕೆ ಹೀಗೆ ಮಾತನಾಡುತ್ತಾನೆ? ಈತನು ದೇವದೂಷಣೆ ಮಾಡುತ್ತಿದ್ದಾನೆ! ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು?” ಎಂದು ತಮ್ಮೊಳಗೇ ಆಲೋಚಿಸಿಕೊಳ್ಳುತ್ತಿದ್ದರು.
[8] ಯೇಸು ಅವರು ಯೋಚಿಸುತ್ತಿರುವುದನ್ನು ಕೂಡಲೇ ತಮ್ಮ ಆತ್ಮದಲ್ಲಿ ಗ್ರಹಿಸಿಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಹೀಗೆ ಆಲೋಚಿಸುವುದೇಕೆ?
[9] ಯಾವುದು ಸುಲಭ? ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ,’ ಎಂದು ಹೇಳುವುದೋ?
[10] ಆದರೆ ಮನುಷ್ಯಪುತ್ರನಾದ ನನಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು,” ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ,
[11] “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.
[12] ಕೂಡಲೇ ಅವನು ಎದ್ದು, ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಆಗ ಎಲ್ಲರು ವಿಸ್ಮಯಗೊಂಡು, “ಇಂಥದ್ದನ್ನು ನಾವು ಹಿಂದೆಂದೂ ಕಂಡಿರಲಿಲ್ಲ!” ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು.
[13] ಯೇಸು ಪುನಃ ಸರೋವರದ ತೀರಕ್ಕೆ ಹೋದರು. ಜನರೆಲ್ಲರೂ ಯೇಸುವಿನ ಬಳಿಗೆ ಬಂದರು. ಯೇಸು ಅವರಿಗೆ ಉಪದೇಶಿಸಿದರು.
[14] ಯೇಸು ಅಲ್ಲಿಂದ ಹೋಗುತ್ತಿರುವಾಗ, ಸುಂಕದ ಕಟ್ಟೆಯಲ್ಲಿ ಕುಳಿತಿದ್ದ ಅಲ್ಫಾಯನ ಮಗ ಲೇವಿಯನ್ನು ಕಂಡು, “ನನ್ನನ್ನು ಹಿಂಬಾಲಿಸು,” ಎಂದು ಹೇಳಿದಾಗ, ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.
[15] ಯೇಸು ಲೇವಿಯ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ, ಬಹುಮಂದಿ ಸುಂಕದವರೂ ತಿರಸ್ಕಾರ ಹೊಂದಿದ ಪಾಪಿಗಳೂ ಬಂದು ಯೇಸುವಿನೊಂದಿಗೂ ಅವರ ಶಿಷ್ಯರೊಂದಿಗೂ ಕುಳಿತುಕೊಂಡರು. ಬಹುಜನರು ಅವರನ್ನು ಹಿಂಬಾಲಿಸುತ್ತಿದ್ದರು.
[16] ಫರಿಸಾಯರಾದ ನಿಯಮ ಬೋಧಕರು ಪಾಪಿಗಳ ಮತ್ತು ಸುಂಕದವರ ಸಂಗಡ ಯೇಸು ಊಟಮಾಡುವುದನ್ನು ಕಂಡು, “ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಯೇಸುವಿನ ಶಿಷ್ಯರನ್ನು ಕೇಳಿದರು.
[17] ಯೇಸು ಇದನ್ನು ಕೇಳಿಸಿಕೊಂಡು ಅವರಿಗೆ, “ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ, ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲು ಬಂದಿದ್ದೇನೆ,” ಎಂದು ಹೇಳಿದರು.
[18] ಯೋಹಾನನ ಶಿಷ್ಯರು ಮತ್ತು ಫರಿಸಾಯರು ಉಪವಾಸಮಾಡುತ್ತಿದ್ದರು. ಆಗ ಕೆಲವರು ಯೇಸುವಿನ ಬಳಿಗೆ ಬಂದು, “ಯೋಹಾನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸ ಮಾಡುತ್ತಾರೆ, ಆದರೆ ನಿನ್ನ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು.
[19] ಅದಕ್ಕೆ ಯೇಸು ಅವರಿಗೆ, “ಮದುಮಗನು ತಮ್ಮ ಜೊತೆಯಲ್ಲಿ ಇರುವ ತನಕ ಮದುಮಗನ ಆಪ್ತರು ಹೇಗೆ ಉಪವಾಸ ಮಾಡುವರು? ಮದುಮಗನು ಅವರ ಸಂಗಡ ಇರುವವರೆಗೆ ಅವರು ಉಪವಾಸ ಮಾಡಲಾಗದು.
[20] ಆದರೆ ಮದುಮಗನು ಅವರಿಂದ ತೆಗೆದುಕೊಂಡು ಹೋಗುವ ಕಾಲ ಬರುತ್ತದೆ. ಆಗ ಅವರು ಉಪವಾಸ ಮಾಡುವರು.
[21] “ಯಾರೂ ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತೇಪೆಯನ್ನು ಹಾಕುವುದಿಲ್ಲ. ಹಚ್ಚಿದರೆ, ಆ ತೇಪೆಯು ಬಟ್ಟೆಯನ್ನು ಹಿಂಜಿ ಹರಕನ್ನು ಇನ್ನೂ ದೊಡ್ಡದು ಮಾಡುತ್ತದೆ.
[22] ಯಾರೂ ಹೊಸ ದ್ರಾಕ್ಷಾರಸವನ್ನು ಹಳೆಯ ಚರ್ಮದ ಚೀಲಗಳಲ್ಲಿ ತುಂಬಿಡುವುದಿಲ್ಲ. ತುಂಬಿ ಇಟ್ಟರೆ, ಚರ್ಮದ ಚೀಲಗಳು ಹರಿದು, ದ್ರಾಕ್ಷಾರಸವು ಚೆಲ್ಲಿಹೋಗಿ ಚರ್ಮದ ಚೀಲಗಳು ಹಾಳಾಗುತ್ತವೆ. ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ತುಂಬಿಡುತ್ತಾರೆ,” ಎಂದು ಹೇಳಿದರು.
[23] ಒಂದು ಸಬ್ಬತ್ ದಿನದಂದು ಯೇಸು ಪೈರಿನ ಹೊಲಗಳನ್ನು ದಾಟಿಹೋಗುತ್ತಿದ್ದರು. ಯೇಸುವಿನ ಶಿಷ್ಯರು ನಡೆಯುತ್ತಾ ಹೋಗುವಾಗ ತೆನೆಗಳನ್ನು ಮುರಿದುಕೊಂಡರು.
[24] ಆಗ ಫರಿಸಾಯರು ಯೇಸುವಿಗೆ, “ಇಲ್ಲಿ ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಯಮಕ್ಕೆ ವಿರುದ್ಧವಾಗಿರುವದನ್ನು ಏಕೆ ಮಾಡುತ್ತಾರೆ?” ಎಂದು ಹೇಳಿದರು.
[25] ಯೇಸು ಅವರಿಗೆ, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗಲೂ ಅವಶ್ಯಕತೆಯಲ್ಲಿದ್ದಾಗಲೂ ಅವನು ಏನು ಮಾಡಿದನೆಂದು ನೀವು ಓದಲಿಲ್ಲವೋ?
[26] ಅವನು ಮಹಾಯಾಜಕನಾದ ಅಬಿಯಾತರನ ಕಾಲದಲ್ಲಿ, ದೇವರ ಆಲಯದೊಳಗೆ ಹೋಗಿ ಯಾಜಕರ ಹೊರತು ಬೇರೆಯವರು ತಿನ್ನುವುದಕ್ಕೆ ನಿಯಮ ಸಮ್ಮತವಲ್ಲದ ನೈವೇದ್ಯದ ರೊಟ್ಟಿಯನ್ನು ತೆಗೆದುಕೊಂಡು ತಿಂದು, ತನ್ನ ಸಂಗಡಿಗರಿಗೂ ಕೊಟ್ಟನು,” ಎಂದರು.
[27] ಅನಂತರ ಯೇಸು ಅವರಿಗೆ, “ಮನುಷ್ಯನು ಸಬ್ಬತ್ ದಿನಕ್ಕಾಗಲಿ ಅಲ್ಲ, ಸಬ್ಬತ್ ದಿನವು ಮನುಷ್ಯನಿಗಾಗಿ ಮಾಡಲಾಯಿತು.
[28] ಆದ್ದರಿಂದ ಮನುಷ್ಯಪುತ್ರನಾದ ನಾನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದೇನೆ,” ಎಂದು ಹೇಳಿದರು.