[1] ಯೇಸು ನಡೆದು ಹೋಗುತ್ತಿದ್ದಾಗ, ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡರು.
[2] ಯೇಸುವಿನ ಶಿಷ್ಯರು, “ಬೋಧಕರೇ, ಇವನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಈ ಮನುಷ್ಯನ ಪಾಪದಿಂದಲೋ ಇವನ ತಂದೆತಾಯಿಗಳ ಪಾಪದಿಂದಲೋ?” ಎಂದು ಅವರನ್ನು ಕೇಳಿದರು.
[3] ಯೇಸು, “ಈ ಮನುಷ್ಯನಾಗಲಿ ಇವನ ತಂದೆತಾಯಿಗಳಾಗಲಿ ಪಾಪಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ವ್ಯಕ್ತವಾಗುವಂತೆ ಹೀಗಾಯಿತು.
[4] ನನ್ನನ್ನು ಕಳುಹಿಸಿದ ತಂದೆಯ ಕೆಲಸಗಳನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬಂದಾಗ ಯಾರಿಗೂ ಕೆಲಸ ಮಾಡಲಾಗದು.
[5] ನಾನು ಈ ಲೋಕದಲ್ಲಿರುವಾಗ ಲೋಕದ ಬೆಳಕಾಗಿದ್ದೇನೆ,” ಎಂದರು.
[6] ಯೇಸು ಹೀಗೆ ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಮಣ್ಣಿನ ಲೇಪಮಾಡಿ ಆ ಲೇಪವನ್ನು ಅವನ ಕಣ್ಣುಗಳಿಗೆ ಹಚ್ಚಿದರು.
[7] ಅವನಿಗೆ, “ಹೋಗು, ಸಿಲೋವ ಕೊಳದಲ್ಲಿ ತೊಳೆದುಕೋ,” ಎಂದರು. ಸಿಲೋವ ಎಂದರೆ, “ಕಳುಹಿಸಲಾದವನು” ಎಂದರ್ಥ. ಕುರುಡನು ಹೋಗಿ ಕಣ್ಣು ತೊಳೆದುಕೊಂಡು ದೃಷ್ಟಿಹೊಂದಿದವನಾಗಿ ಬಂದನು.
[8] ಆಗ ನೆರೆಯವರು ಮತ್ತು ಮೊದಲು ಭಿಕ್ಷುಕನಾಗಿದ್ದಾಗ ಅವನನ್ನು ಕಂಡವರು, “ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದವನು ಇವನೇ ಅಲ್ಲವೇ?” ಎಂದರು.
[9] ಕೆಲವರು, “ಹೌದು, ಇವನೇ,” ಎಂದರು. ಇನ್ನೂ ಬೇರೆಯವರು, “ಇಲ್ಲಾ, ಇವನು ಅವನ ಹಾಗೆ ಇದ್ದಾನೆ,” ಎಂದರು. ಅವನಾದರೋ, “ನಾನೇ ಅವನು,” ಎಂದು ಹೇಳಿದನು.
[10] ಕೆಲವರು ಅವನಿಗೆ, “ಹಾಗಾದರೆ ನಿನಗೆ ದೃಷ್ಟಿ ಹೇಗೆ ಬಂತು?” ಎಂದು ಕೇಳಲು,
[11] ಅವನು, “ಯೇಸು ಎಂಬ ಹೆಸರುಳ್ಳ ಮನುಷ್ಯನು ಮಣ್ಣಿನ ಲೇಪಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ, ‘ಸಿಲೋವ ಕೊಳಕ್ಕೆ ಹೋಗಿ ತೊಳೆದುಕೋ,’ ಎಂದನು. ಅದರಂತೆ ನಾನು ಹೋಗಿ ತೊಳೆದುಕೊಂಡೆನು, ನನಗೆ ದೃಷ್ಟಿ ಬಂತು,” ಎಂದನು.
[12] ಅವರು ಅವನಿಗೆ, “ಆತನು ಎಲ್ಲಿದ್ದಾನೆ?” ಎಂದು ಕೇಳಲು, ಅವನು, “ನನಗೆ ಗೊತ್ತಿಲ್ಲ,” ಎಂದನು.
[13] ಜನರು ಮೊದಲು ಕುರುಡನಾಗಿದ್ದವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಬಂದರು.
[14] ಯೇಸು ಮಣ್ಣಿನ ಲೇಪಮಾಡಿ ಅವನಿಗೆ ದೃಷ್ಟಿಕೊಟ್ಟ ದಿನವು ಯೆಹೂದ್ಯರ ಸಬ್ಬತ್ ದಿನವಾಗಿತ್ತು.
[15] ಆದ್ದರಿಂದ ಫರಿಸಾಯರು ಅವನಿಗೆ, ಹೇಗೆ ದೃಷ್ಟಿ ಬಂತು ಎಂದು ತಿರುಗಿ ಅವನನ್ನು ಕೇಳಲು, ಅವನು ಅವರಿಗೆ, “ಯೇಸು ಮಣ್ಣಿನ ಲೇಪವನ್ನು ನನ್ನ ಕಣ್ಣುಗಳ ಮೇಲಿಡಲು ನಾನು ತೊಳೆದುಕೊಂಡೆನು. ಈಗ ನೋಡುತ್ತೇನೆ,” ಎಂದನು.
[16] ಫರಿಸಾಯರಲ್ಲಿ ಕೆಲವರು, “ಹೀಗೆ ಮಾಡಿದವನು ದೇವರಿಂದ ಬಂದವನಲ್ಲ. ಏಕೆಂದರೆ ಆತನು ಯೆಹೂದ್ಯರ ಸಬ್ಬತ್ ದಿನವನ್ನು ಕೈಗೊಳ್ಳುವುದಿಲ್ಲ,” ಎಂದರು. ಬೇರೆ ಕೆಲವರು, “ಹಾಗಾದರೆ ಪಾಪಿಯಾದ ಮನುಷ್ಯನು ಇಂಥ ಸೂಚಕಕಾರ್ಯಗಳನ್ನು ಮಾಡುವುದು ಹೇಗೆ?” ಎಂದರು. ಹೀಗೆ ಅವರಲ್ಲಿ ಭೇದ ಉಂಟಾಯಿತು.
[17] ಅವರು ತಿರುಗಿ, “ಆತನು ನಿನಗೆ ದೃಷ್ಟಿಕೊಟ್ಟದ್ದರಿಂದ ಆತನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದಾಗ, ಅವನು, “ಅವರು ಒಬ್ಬ ಪ್ರವಾದಿ,” ಎಂದನು.
[18] ದೃಷ್ಟಿಹೊಂದಿದವನ ತಂದೆತಾಯಿಗಳನ್ನು ಕರೆಯುವವರೆಗೆ ಯೆಹೂದ್ಯರು ಅವನ ವಿಷಯವಾಗಿ, ಅವನು ಕುರುಡನಾಗಿದ್ದು ದೃಷ್ಟಿಹೊಂದಿದನೆಂದು ನಂಬಲಿಲ್ಲ.
[19] ಅವರು, “ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವ ನಿಮ್ಮ ಮಗನು ಇವನೋ? ಹಾಗಾದರೆ ಈಗ ಇವನಿಗೆ ಕಣ್ಣು ಕಾಣುವುದು ಹೇಗೆ?” ಎಂದು ಅವರನ್ನು ಕೇಳಿದರು.
[20] ಅವನ ತಂದೆತಾಯಿಗಳು ಅವರಿಗೆ, “ಇವನು ನಮ್ಮ ಮಗನೆಂದೂ ಇವನು ಕುರುಡನಾಗಿ ಹುಟ್ಟಿದನೆಂದೂ ನಾವು ಬಲ್ಲೆವು.
[21] ಆದರೆ ಇವನಿಗೆ ಈಗ ಕಣ್ಣು ಕಾಣುವುದು ಹೇಗೆಂದು ನಮಗೆ ಗೊತ್ತಿಲ್ಲ. ಯಾರು ಇವನ ಕಣ್ಣುಗಳನ್ನು ತೆರೆದರೆಂದೂ ನಮಗೆ ಗೊತ್ತಿಲ್ಲ, ಇವನನ್ನೇ ಕೇಳಿರಿ; ಇವನು ಪ್ರಾಯದವನಾಗಿದ್ದಾನೆ. ಇವನೇ ತನ್ನ ವಿಷಯವಾಗಿ ಮಾತನಾಡುವನು,” ಎಂದು ಹೇಳಿದರು.
[22] ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಭಯಪಟ್ಟಿದ್ದರಿಂದ ಹೀಗೆ ಹೇಳಿದರು. ಏಕೆಂದರೆ ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡರೆ, ಅವರನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯ ನಾಯಕರು ಈ ಮೊದಲೇ ಗೊತ್ತುಮಾಡಿದ್ದರು.
[23] ಆದ್ದರಿಂದ ಅವನ ತಂದೆತಾಯಿಗಳು, “ಇವನು ಪ್ರಾಯದವನಾಗಿದ್ದಾನೆ, ಇವನನ್ನೇ ಕೇಳಿ,” ಎಂದು ಹೇಳಿದರು.
[24] ಅವರು ಕುರುಡನಾಗಿದ್ದವನನ್ನು ಮತ್ತೊಮ್ಮೆ ಕರೆದು ಅವನಿಗೆ, “ದೇವರಿಗೆ ಮಹಿಮೆಯನ್ನು ಸಲ್ಲಿಸು, ಆ ಮನುಷ್ಯ ಪಾಪಿ ಎಂದು ನಾವು ಬಲ್ಲೆವು,” ಎಂದರು.
[25] ಅದಕ್ಕೆ ಅವನು, “ಅವರು ಪಾಪಿಯೋ ಏನೋ ನನಗೆ ಗೊತ್ತಿಲ್ಲ. ಒಂದು ಮಾತ್ರ ಬಲ್ಲೆ, ನಾನು ಕುರುಡನಾಗಿದ್ದೆನು; ಈಗ ನನಗೆ ಕಾಣುತ್ತದೆ,” ಎಂದು ಉತ್ತರಕೊಟ್ಟನು.
[26] ಆದ್ದರಿಂದ ಅವರು ಅವನಿಗೆ, “ಆತನು ನಿನಗೆ ಏನು ಮಾಡಿದನು? ಆತನು ನಿನ್ನ ಕಣ್ಣುಗಳನ್ನು ಹೇಗೆ ತೆರೆದನು?” ಎಂದು ಕೇಳಿದ್ದಕ್ಕೆ,
[27] ಅವನು ಉತ್ತರವಾಗಿ, “ನಾನು ನಿಮಗೆ ಆಗಲೇ ಹೇಳಿದ್ದೇನಲ್ಲಾ. ಆದರೆ ನೀವು ಕೇಳಲಿಲ್ಲ, ನೀವು ತಿರುಗಿ ಏಕೆ ಕೇಳುತ್ತೀರಿ? ನೀವು ಸಹ ಅವರ ಶಿಷ್ಯರಾಗುವುದಕ್ಕೆ ಬಯಸುತ್ತೀರೋ?” ಎಂದನು.
[28] ಆಗ ಅವರು ಅವನನ್ನು ದೂಷಿಸಿ, “ನೀನು ಆತನ ಶಿಷ್ಯನು. ಆದರೆ ನಾವು ಮೋಶೆಯ ಶಿಷ್ಯರು.
[29] ಮೋಶೆಯ ಮೂಲಕ ದೇವರು ಮಾತನಾಡಿದನೆಂದು ನಾವು ಬಲ್ಲೆವು. ಆದರೆ ಈತನು ಎಲ್ಲಿಂದ ಬಂದನೋ ನಮಗೆ ಗೊತ್ತಿಲ್ಲ,” ಎಂದರು.
[30] ಅದಕ್ಕೆ ಅವನು ಅವರಿಗೆ, “ಏನಾಶ್ಚರ್ಯ! ಅವರು ನನ್ನ ಕಣ್ಣುಗಳನ್ನು ತೆರೆದರೂ ಅವರು ಎಲ್ಲಿಂದ ಬಂದವನೆಂದು ನಿಮಗೆ ತಿಳಿಯದೆ ಇರುವುದು.
[31] ದೇವರು ಪಾಪಿಗಳಿಗೆ ಕಿವಿಗೊಡುವುದಿಲ್ಲ; ಆದರೆ ಯಾರು ದೇವರಿಗೆ ಭಯಪಡುವವರಾಗಿದ್ದು ಅವರ ಚಿತ್ತದಂತೆ ನಡೆಯುತ್ತಾರೋ, ಅಂಥವರಿಗೆ ಕಿವಿಗೊಡುತ್ತಾರೆಂದು ನಾವು ಬಲ್ಲೆವು.
[32] ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾರಾದರೂ ತೆರೆದಿದ್ದನ್ನು ಎಂದಿಗೂ ಒಬ್ಬರೂ ಕೇಳಿಲ್ಲ.
[33] ಅವರು ದೇವರಿಂದ ಬಂದವರಲ್ಲದಿದ್ದರೆ ಅವರಿಂದ ಏನೂ ಮಾಡಲಾಗುತ್ತಿರಲಿಲ್ಲ,” ಎಂದನು.
[34] ಅದಕ್ಕೆ ಅವರು, “ನೀನು ಪಾಪದಲ್ಲಿಯೇ ಪೂರ್ಣವಾಗಿ ಹುಟ್ಟಿದವನು. ನೀನು ನಮಗೆ ಬೋಧಿಸುತ್ತೀಯಾ?” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
[35] ಯೆಹೂದಿ ನಾಯಕರು ಅವನನ್ನು ಸಭಾಮಂದಿರದಿಂದ ಹೊರಗೆ ಹಾಕಿದ್ದನ್ನು ಯೇಸು ಕೇಳಿ, ಅವನನ್ನು ಕಂಡು, “ನೀನು ಮನುಷ್ಯಪುತ್ರನನ್ನು ನಂಬುತ್ತೀಯಾ?” ಎಂದರು.
[36] ಅದಕ್ಕೆ ಅವನು, “ಸ್ವಾಮೀ, ನಾನು ಅವರನ್ನು ನಂಬುವಂತೆ ಅವರು ಯಾರೆಂದು ತಿಳಿಸಿರಿ,” ಎಂದನು.
[37] ಯೇಸು ಅವನಿಗೆ, “ನೀನು ಆತನನ್ನು ಕಂಡಿದ್ದೀ ಮತ್ತು ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು,” ಎಂದು ಹೇಳಿದರು.
[38] ಆಗ ಅವನು, “ಸ್ವಾಮೀ, ನಾನು ನಂಬುತ್ತೇನೆ,” ಎಂದು ಹೇಳಿ ಯೇಸುವಿಗೆ ಅಡ್ಡಬಿದ್ದನು.
[39] ಯೇಸು, “ಕುರುಡರು ನೋಡುವಂತೆಯೂ ನೋಡುವವರು ಕುರುಡರಾಗುವಂತೆಯೂ ನಾನು ನ್ಯಾಯತೀರ್ಪು ಮಾಡುವುದಕ್ಕಾಗಿ ಈ ಲೋಕಕ್ಕೆ ಬಂದಿದ್ದೇನೆ,” ಎಂದರು.
[40] ಯೇಸುವಿನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಈ ಮಾತುಗಳನ್ನು ಕೇಳಿ, “ನಾವು ಸಹ ಕುರುಡರೋ?” ಎಂದು ಯೇಸುವನ್ನು ಪ್ರಶ್ನಿಸಿದರು.
[41] ಅದಕ್ಕೆ ಯೇಸು ಅವರಿಗೆ, “ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ. ಆದರೆ, ‘ನಮಗೆ ಕಾಣುತ್ತದೆ,’ ಎಂದು ನೀವು ಹೇಳುವುದರಿಂದ ನಿಮ್ಮ ಪಾಪವು ನಿಮಗೆ ಉಳಿದಿದೆ,” ಎಂದರು.