Skip to content
Opens in a new window
Listen to this chapter • 6:45

[1] ಯೆಹೂದ್ಯರ ಆಡಳಿತ ಮಂಡಳಿಯ ಸದಸ್ಯನೂ ಫರಿಸಾಯನೂ ಆದ ನಿಕೊದೇಮನೆಂಬ ಮನುಷ್ಯನಿದ್ದನು.

[2] ಇವನು ಒಂದು ರಾತ್ರಿ ಯೇಸುವಿನ ಬಳಿಗೆ ಬಂದು, “ಗುರುವೇ, ನೀವು ದೇವರ ಬಳಿಯಿಂದ ಬಂದ ಬೋಧಕರೆಂದು ನಾವು ಬಲ್ಲೆವು. ಏಕೆಂದರೆ ದೇವರು ಒಬ್ಬನ ಸಂಗಡ ಇಲ್ಲದಿದ್ದರೆ ನೀವು ಮಾಡುವ ಸೂಚಕಕಾರ್ಯಗಳನ್ನು ಯಾವ ಮನುಷ್ಯನೂ ಮಾಡಲಾರನು,” ಎಂದನು.

[3] ಯೇಸು ಅವನಿಗೆ, “ಒಬ್ಬನು ಮತ್ತೊಮ್ಮೆ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು, ಎಂದು ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ.”

[4] ನಿಕೊದೇಮನು ಯೇಸುವಿಗೆ, “ಒಬ್ಬನು ವಯಸ್ಸಾದ ಮೇಲೆ ಮತ್ತೆ ಹುಟ್ಟುವುದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವುದಾದೀತೇ?” ಎಂದು ಕೇಳಿದನು.

[5] ಯೇಸು ಅವನಿಗೆ, “ಯಾರು ನೀರಿನಿಂದಲೂ ಆತ್ಮದಿಂದಲೂ ಹುಟ್ಟುವದಿಲ್ಲವೋ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು, ಎಂದು ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ.

[6] ಮಾಂಸದಿಂದ ಹುಟ್ಟಿದ್ದು ಮಾಂಸವೇ, ದೇವರಾತ್ಮದಿಂದ ಹುಟ್ಟಿದವರು ಆತ್ಮವೇ.

[7] ‘ನೀವು ಮತ್ತೆ ಹುಟ್ಟಬೇಕಾಗಿದೆ,’ ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ.

[8] ಗಾಳಿಯು ಅದರ ಇಷ್ಟ ಬಂದ ಕಡೆ ಬೀಸುತ್ತದೆ. ನೀನು ಅದರ ಶಬ್ದವನ್ನು ಕೇಳುತ್ತೀ, ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಅದರಂತೆಯೇ ಆತ್ಮದಿಂದ ಹುಟ್ಟಿದ ಪ್ರತಿಯೊಬ್ಬರೂ ಹೀಗೇ ಇದ್ದಾರೆ,” ಎಂದು ಉತ್ತರಕೊಟ್ಟರು.

[9] ನಿಕೊದೇಮನು ಯೇಸುವಿಗೆ, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.

[10] ಯೇಸು ಅವನಿಗೆ, “ಇಸ್ರಾಯೇಲರಿಗೆ ಬೋಧಕನಾಗಿರುವ ನಿನಗೆ ಇವುಗಳು ತಿಳಿಯುವುದಿಲ್ಲವೋ?

[11] ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನಾವು ತಿಳಿದಿರುವುದನ್ನು ಮಾತನಾಡುತ್ತೇವೆ ಮತ್ತು ಕಂಡಿದ್ದಕ್ಕೆ ಸಾಕ್ಷಿ ನೀಡುತ್ತೇವೆ. ನೀವಾದರೋ ನಮ್ಮ ಸಾಕ್ಷಿಯನ್ನು ಸ್ವೀಕರಿಸುವುದಿಲ್ಲ.

[12] ನಾನು ಭೂಲೋಕದ ಕಾರ್ಯಗಳನ್ನು ನಿಮಗೆ ಹೇಳುವಾಗಲೇ ನೀವು ನಂಬುವುದಿಲ್ಲ, ಪರಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ಹೇಗೆ ನಂಬುವಿರಿ?

[13] ಪರಲೋಕದಿಂದ ಇಳಿದು ಬಂದ ಮನುಷ್ಯಪುತ್ರನಾದ ನನ್ನನ್ನು ಹೊರತು ಯಾರೂ ಪರಲೋಕಕ್ಕೆ ಏರಿ ಹೋದವರಿಲ್ಲ.

[14] ಇದಲ್ಲದೆ ಮೋಶೆಯು ಅರಣ್ಯದಲ್ಲಿ ಸರ್ಪವನ್ನು ಮೇಲೆ ಎತ್ತಿದ ಹಾಗೆಯೇ ಮನುಷ್ಯಪುತ್ರನಾದ ನನ್ನನ್ನು ಸಹ ಮೇಲಕ್ಕೆ ಏರಿಸಬೇಕು.

[15] ಹೀಗೆ ಮನುಷ್ಯಪುತ್ರನಾದ ನನ್ನನ್ನು ನಂಬುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಪಡೆಯುವರು.”

[16] ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತಮ್ಮ ಏಕೈಕ ಪುತ್ರ ಆಗಿರುವ ಕ್ರಿಸ್ತ ಯೇಸುವನ್ನು ಕೊಟ್ಟರು. ಅದಕ್ಕಾಗಿಯೇ ಅವರನ್ನು ನಂಬುವ ಪ್ರತಿಯೊಬ್ಬರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕು.

[17] ದೇವರು ಲೋಕಕ್ಕೆ ತೀರ್ಪು ಮಾಡುವುದಕ್ಕಾಗಿ ಅಲ್ಲ, ತಮ್ಮ ಪುತ್ರನ ಮುಖಾಂತರ ಲೋಕದ ಜನರನ್ನು ರಕ್ಷಿಸುವುದಕ್ಕಾಗಿಯೇ ಅವರನ್ನು ಲೋಕಕ್ಕೆ ಕಳುಹಿಸಿದರು.

[18] ಮಗನನ್ನು ನಂಬುವವನಿಗೆ ತೀರ್ಪು ಆಗುವುದಿಲ್ಲ. ನಂಬದವನಿಗೆ ಆಗಲೇ ತೀರ್ಪಾಯಿತು. ಏಕೆಂದರೆ ಅವನು ದೇವರ ಒಬ್ಬನೇ ಪುತ್ರನ ಹೆಸರಿನ ಮೇಲೆ ನಂಬಿಕೆ ಇಡಲಿಲ್ಲ.

[19] ಆ ತೀರ್ಪು ಏನೆಂದರೆ: ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿ ಮಾಡಿದರು.

[20] ಕೇಡನ್ನು ಮಾಡುವವರು ಬೆಳಕನ್ನು ದ್ವೇಷಿಸುತ್ತಾರೆ ಮತ್ತು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವರು ಮಾಡಿರುವ ಕೆಟ್ಟ ಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ.

[21] ಆದರೆ ಸತ್ಯವನ್ನು ಅನುಸರಿಸುವವರು ನಡೆದಿರುವ ತಮ್ಮ ಕೃತ್ಯಗಳು ದೇವರಿಂದ ಆದವುಗಳೆಂದು ಪ್ರಕಟಿಸುವಂತೆ ಬೆಳಕಿಗೆ ಬರುತ್ತಾರೆ.

[22] ಇವುಗಳಾದ ಮೇಲೆ ಯೇಸುವೂ ಅವರ ಶಿಷ್ಯರೂ ಯೂದಾಯ ಪ್ರಾಂತಕ್ಕೆ ಬಂದರು. ಅಲ್ಲಿ ಯೇಸು ಅವರೊಂದಿಗೆ ಇದ್ದು ದೀಕ್ಷಾಸ್ನಾನ ಮಾಡಿಸುತ್ತಿದ್ದರು.

[23] ಇದಲ್ಲದೆ ಯೋಹಾನನು ಸಹ ಸಲೀಮ್ ಎಂಬ ಊರಿನ ಸಮೀಪದಲ್ಲಿದ್ದ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಏಕೆಂದರೆ ಅಲ್ಲಿ ಬಹಳ ನೀರು ಇತ್ತು. ಜನರು ಬಂದು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.

[24] ಆಗ ಯೋಹಾನನು ಇನ್ನೂ ಸೆರೆಯಲ್ಲಿ ಬಂಧಿತನಾಗಿರಲಿಲ್ಲ.

[25] ಯೋಹಾನನ ಶಿಷ್ಯರಿಗೂ ಒಬ್ಬ ಯೆಹೂದ್ಯನಿಗೂ ಶುದ್ಧಾಚಾರವನ್ನು ಕುರಿತು ವಿವಾದ ಉಂಟಾಯಿತು.

[26] ಅವರು ಯೋಹಾನನ ಬಳಿಗೆ ಬಂದು ಅವನಿಗೆ, “ಗುರುವೇ, ಯೊರ್ದನ್ ನದಿಯ ಆಚೆದಡದಲ್ಲಿ ನಿನ್ನೊಡನೆ ಇದ್ದ ಒಬ್ಬರ ಬಗ್ಗೆ ನೀನು ಸಾಕ್ಷಿ ಕೊಟ್ಟೆಯಲ್ಲಾ. ಇಗೋ, ಅವರು ದೀಕ್ಷಾಸ್ನಾನ ಮಾಡಿಸುತ್ತಿದ್ದಾರೆ ಮತ್ತು ಎಲ್ಲರೂ ಅವರ ಬಳಿಗೆ ಹೋಗುತ್ತಿದ್ದಾರೆ,” ಎಂದರು.

[27] ಅದಕ್ಕೆ ಯೋಹಾನನು, “ಪರಲೋಕದಿಂದ ಒಬ್ಬ ಮನುಷ್ಯನಿಗೆ ದಯಪಾಲಿಸದ ಹೊರತು ಅವನು ಯಾವುದನ್ನೂ ಹೊಂದಲಾರನು.

[28] ‘ನಾನು ಕ್ರಿಸ್ತನಲ್ಲ, ಆದರೆ ಅವರ ಮುಂದೂತನೆಂದು,’ ಹೇಳಿದ್ದಕ್ಕೆ ನೀವೇ ಸಾಕ್ಷಿ.

[29] ಮದುಮಗಳು ಮದುಮಗನಿಗೆ ಸೇರಿದವಳು. ಆದರೂ ಮದುಮಗನ ಸ್ನೇಹಿತನು ನಿಂತುಕೊಂಡು ಆತನ ಮಾತಿಗೆ ಕಿವಿಗೊಟ್ಟು, ಮದುಮಗನ ಸ್ವರ ಕೇಳಿ ಸಂತೋಷಪಡುತ್ತಾನೆ. ಆದಕಾರಣ ಈ ನನ್ನ ಸಂತೋಷವು ಪರಿಪೂರ್ಣವಾಯಿತು.

[30] ಆತನು ಹೆಚ್ಚಾಗಬೇಕು ನಾನು ಕಡಿಮೆಯಾಗಬೇಕು.

[31] “ಮೇಲಿನಿಂದ ಬರುವವರೇ ಎಲ್ಲರಿಗಿಂತಲೂ ಮೇಲಾದವರು, ಭೂಲೋಕದವನಾದರೋ ಭೂಮಿಗೆ ಸೇರಿದವನಾಗಿದ್ದು ಭೂಸಂಬಂಧವಾದವುಗಳನ್ನು ಮಾತನಾಡುತ್ತಾನೆ; ಪರಲೋಕದಿಂದ ಬರುವವರು ಎಲ್ಲವುಗಳಿಗಿಂತಲೂ ಮೇಲಾದವರು.

[32] ಅವರು ಯಾವುದನ್ನು ಕಂಡು ಕೇಳಿದರೋ ಅದಕ್ಕೆ ಸಾಕ್ಷಿಕೊಡುತ್ತಾರೆ. ಆದರೆ ಅವರ ಸಾಕ್ಷಿಯನ್ನು ಯಾರೂ ಸ್ವೀಕರಿಸುವುದಿಲ್ಲ.

[33] ಅವರ ಸಾಕ್ಷಿಯನ್ನು ಸ್ವೀಕರಿಸಿದವರು ದೇವರು ಸತ್ಯವಂತರೆಂದು ಮುದ್ರೆ ಹಾಕಿದ್ದಾರೆ.

[34] ದೇವರು ಕಳುಹಿಸಿದವರಾದರೋ ದೇವರ ಮಾತುಗಳನ್ನೇ ಆಡುತ್ತಾರೆ. ಏಕೆಂದರೆ ದೇವರು ಅವರಿಗೆ ಆತ್ಮವನ್ನು ಮಿತಿಯಿಲ್ಲದೆ ಕೊಟ್ಟಿದ್ದಾರೆ.

[35] ತಂದೆಯು ಪುತ್ರನನ್ನು ಪ್ರೀತಿಸಿ ಎಲ್ಲವನ್ನೂ ಅವರ ಕೈಯಲ್ಲಿ ಕೊಟ್ಟಿದ್ದಾರೆ.

[36] ಯಾರು ದೇವಪುತ್ರ ಆಗಿರುವವರನ್ನು ನಂಬುವರೋ ಅವರು ನಿತ್ಯಜೀವ ಪಡೆದಿರುತ್ತಾರೆ. ದೇವಪುತ್ರ ಆಗಿರುವವರನ್ನು ನಂಬದವರು ನಿತ್ಯಜೀವವನ್ನು ಕಾಣುವುದಿಲ್ಲ. ಆದರೆ ದೇವರ ಕೋಪಾಗ್ನಿಯು ಅವರ ಮೇಲೆ ನೆಲೆಗೊಂಡಿರುವುದು,” ಎಂದು ಹೇಳಿದನು.

ಯೋಹಾನ — Chapters