Skip to content
Opens in a new window
Listen to this chapter • 5:00

[1] ಯೇಸು ಇಷ್ಟೆಲ್ಲಾ ಮಾತನಾಡಿ ಆಕಾಶದ ಕಡೆಗೆ ಕಣ್ಣೆತ್ತಿ ನೋಡಿ, “ತಂದೆಯೇ, ಸಮಯ ಬಂದಿದೆ. ನಿಮ್ಮ ಪುತ್ರನು ನಿಮ್ಮನ್ನು ಮಹಿಮೆಪಡಿಸುವುದಕ್ಕಾಗುವಂತೆ ಆತನನ್ನು ಮಹಿಮೆಪಡಿಸಿರಿ.

[2] ನೀವು ಎಲ್ಲರಿಗೂ ನಿತ್ಯಜೀವವನ್ನು ಕೊಡಬೇಕೆಂದು ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿರುವಿರಿ.

[3] ಏಕೈಕ ಸತ್ಯ ದೇವರಾಗಿರುವ ನಿಮ್ಮನ್ನೂ ನೀವು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವ.

[4] ಮಾಡಬೇಕೆಂದು ನೀವು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ಭೂಮಿಯ ಮೇಲೆ ನಾನು ನಿಮ್ಮನ್ನು ಮಹಿಮೆಪಡಿಸಿದ್ದೇನೆ.

[5] ತಂದೆಯೇ, ಲೋಕವು ಉಂಟಾಗುವದಕ್ಕಿಂತ ಮುಂಚೆ ನಿಮ್ಮೊಡನೆ ನನಗಿದ್ದ ಮಹಿಮೆಯಿಂದ ಈಗ ನೀವು ನನ್ನನ್ನು ಮಹಿಮೆಪಡಿಸಿರಿ.

[6] “ಲೋಕದೊಳಗಿಂದ ನೀವು ನನಗೆ ಕೊಟ್ಟ ಈ ನನ್ನ ಶಿಷ್ಯರಿಗೆ ನಾನು ನಿಮ್ಮ ಹೆಸರನ್ನು ಪ್ರಕಟಪಡಿಸಿದ್ದೇನೆ. ಇವರು ನಿಮ್ಮವರಾಗಿದ್ದರು. ನೀವು ಇವರನ್ನು ನನಗೆ ಕೊಟ್ಟಿದ್ದೀರಿ. ಇವರು ನಿಮ್ಮ ವಾಕ್ಯವನ್ನು ಕೈಗೊಂಡಿದ್ದಾರೆ.

[7] ನೀವು ನನಗೆ ಕೊಟ್ಟಿದ್ದೆಲ್ಲವೂ ನಿಮ್ಮಿಂದಲೇ ಬಂದಿವೆ ಎಂದು ಈಗ ಇವರು ತಿಳಿದುಕೊಂಡಿದ್ದಾರೆ.

[8] ಏಕೆಂದರೆ ನೀವು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ, ಇವರು ಅಂಗೀಕರಿಸಿದ್ದಾರೆ ಮತ್ತು ನಾನು ನಿಮ್ಮ ಬಳಿಯಿಂದ ಬಂದವನೆಂದು ಇವರು ನಿಶ್ಚಯವಾಗಿ ತಿಳಿದು, ನೀವೇ ನನ್ನನ್ನು ಕಳುಹಿಸಿದ್ದೀರಿ, ಎಂದು ನಂಬಿದ್ದಾರೆ.

[9] ನಾನು ಇವರಿಗಾಗಿಯೇ ಬೇಡಿಕೊಳ್ಳುತ್ತೇನೆ. ನೀವು ನನಗೆ ಕೊಟ್ಟವರಿಗಾಗಿಯೇ ಹೊರತು ನಾನು ಲೋಕಕ್ಕಾಗಿ ಬೇಡಿಕೊಳ್ಳುವುದಿಲ್ಲ. ಏಕೆಂದರೆ ಇವರು ನಿಮ್ಮವರು.

[10] ನನ್ನದೆಲ್ಲವೂ ನಿಮ್ಮದೇ. ನಿಮ್ಮದೆಲ್ಲವೂ ನನ್ನದೇ. ಇವರಿಂದ ನನಗೆ ಮಹಿಮೆ ಉಂಟಾಗಿದೆ.

[11] ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ. ಇವರಾದರೋ ಲೋಕದಲ್ಲಿರುತ್ತಾರೆ. ನಾನು ನಿಮ್ಮ ಬಳಿಗೆ ಬರುತ್ತೇನೆ. ಪರಿಶುದ್ಧ ತಂದೆಯೇ, ನಾವು ಒಂದಾಗಿರುವಂತೆಯೇ ಇವರೂ ಒಂದಾಗಿರಬೇಕೆಂದು ನೀವು ನನಗೆ ಕೊಟ್ಟ ನಿಮ್ಮ ಹೆಸರಿನ ಶಕ್ತಿಯಿಂದ ಇವರನ್ನು ಕಾಪಾಡಿರಿ.

[12] ನಾನು ಇವರೊಡನೆ ಇದ್ದಾಗ ನೀವು ನನಗೆ ಕೊಟ್ಟ ನಿಮ್ಮ ಹೆಸರಿನಲ್ಲಿ ಇವರನ್ನು ಕಾಪಾಡಿ ಸಂರಕ್ಷಿಸಿದೆನು. ಪವಿತ್ರ ವಾಕ್ಯವು ನೆರವೇರುವಂತೆ ಆ ನಾಶದ ಮಗನೇ ಹೊರತು ಇವರಲ್ಲಿ ಒಬ್ಬನೂ ನಾಶವಾಗಲಿಲ್ಲ.

[13] “ಈಗ ನಾನು ನಿಮ್ಮ ಬಳಿಗೆ ಬರುತ್ತೇನೆ. ನನ್ನ ಆನಂದವು ಅವರಲ್ಲಿ ಪರಿಪೂರ್ಣವಾಗುವಂತೆ ನಾನು ಲೋಕದಲ್ಲಿ ಇದ್ದು ಇವೆಲ್ಲವನ್ನು ಮಾತನಾಡುತ್ತೇನೆ.

[14] ನಾನು ನಿಮ್ಮ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ. ಇವರು ನನ್ನಂತೆ ಲೋಕದವರಲ್ಲದ ಕಾರಣ ಲೋಕವು ಇವರನ್ನು ದ್ವೇಷಿಸುತ್ತದೆ.

[15] ನೀವು ಇವರನ್ನು ಲೋಕದಿಂದ ತೆಗೆಯಬೇಕೆಂದು ಬೇಡಿಕೊಳ್ಳದೆ ಇವರನ್ನು ಕೆಡುಕನಿಂದ ಕಾಪಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ.

[16] ನಾನು ಲೋಕದವನಲ್ಲದೆ ಇರುವಂತೆ ಇವರೂ ಲೋಕದವರಲ್ಲ.

[17] ನೀವು ಸತ್ಯದಿಂದ ಇವರನ್ನು ಸಮರ್ಪಿಸಿರಿ. ನಿಮ್ಮ ವಾಕ್ಯವೇ ಸತ್ಯವು.

[18] ನೀವು ನನ್ನನ್ನು ಲೋಕಕ್ಕೆ ಕಳುಹಿಸಿದಂತೆಯೇ ನಾನು ಸಹ ಇವರನ್ನು ಲೋಕಕ್ಕೆ ಕಳುಹಿಸಿದ್ದೇನೆ.

[19] ಇವರು ನಿಜವಾಗಿಯೂ ಸಮರ್ಪಿತರಾಗಬೇಕೆಂದು ನನ್ನನ್ನು ನಾನೇ ಇವರಿಗೋಸ್ಕರ ಸಮರ್ಪಿಸಿಕೊಳ್ಳುತ್ತೇನೆ.

[20] “ಆದರೆ ಇವರಿಗಾಗಿ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನಲ್ಲಿ ನಂಬುವವರಿಗಾಗಿಯೂ ಬೇಡಿಕೊಳ್ಳುತ್ತೇನೆ.

[21] ತಂದೆಯೇ, ನೀವು ನನ್ನನ್ನು ಕಳುಹಿಸಿದ್ದೀರಿ ಎಂದು ಲೋಕವು ನಂಬುವುದಕ್ಕಾಗಿ ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀವು ನನ್ನಲ್ಲಿಯೂ ನಾನು ನಿಮ್ಮಲ್ಲಿಯೂ ಇರುವ ಹಾಗೆಯೇ ಅವರು ಸಹ ನಮ್ಮಲ್ಲಿ ಒಂದಾಗಿರಬೇಕೆಂತಲೂ ಬೇಡಿಕೊಳ್ಳುತ್ತೇನೆ.

[22] ನಾವು ಒಂದಾಗಿರುವ ಹಾಗೆಯೇ ಇವರೂ ಒಂದಾಗಿರುವಂತೆ ನೀವು ನನಗೆ ಕೊಟ್ಟ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ.

[23] ಹೀಗೆ ನಾನು ಇವರಲ್ಲಿಯೂ ನೀವು ನನ್ನಲ್ಲಿಯೂ ಇರುವಂತೆ ಇವರೂ ಐಕ್ಯತೆಯಲ್ಲಿ ಪರಿಪೂರ್ಣವಾಗಿರಲಿ. ಆಗ ನೀವು ನನ್ನನ್ನು ಕಳುಹಿಸಿದ್ದೀರಿ ಎಂದೂ ನನ್ನನ್ನು ಪ್ರೀತಿಸಿದಂತೆ ಇವರನ್ನು ನೀವು ಪ್ರೀತಿಸಿದ್ದೀರಿ ಎಂದೂ ಲೋಕವು ತಿಳಿದುಕೊಳ್ಳುವುದು.

[24] “ತಂದೆಯೇ, ನೀವು ನನಗೆ ಕೊಟ್ಟವರು ನಾನಿರುವಲ್ಲಿಯೇ ನನ್ನೊಂದಿಗೆ ಇದ್ದುಕೊಂಡು ಜಗದುತ್ಪತ್ತಿಗೆ ಮುಂಚೆ ನೀವು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ಮಹಿಮೆಯನ್ನು ಇವರು ಕಾಣಬೇಕೆಂದು ನಾನು ಅಪೇಕ್ಷಿಸುತ್ತೇನೆ.

[25] “ನೀತಿಯುಳ್ಳ ತಂದೆಯೇ, ಲೋಕವು ನಿಜವಾಗಿಯೂ ನಿಮ್ಮನ್ನು ತಿಳಿಯಲಿಲ್ಲ. ಆದರೆ ನಾನು ನಿಮ್ಮನ್ನು ತಿಳಿದಿದ್ದೇನೆ ಮತ್ತು ನೀವೇ ನನ್ನನ್ನು ಕಳುಹಿಸಿದ್ದೀರಿ ಎಂದು ಇವರು ತಿಳಿದಿದ್ದಾರೆ.

[26] ನೀವು ನನ್ನನ್ನು ಪ್ರೀತಿಸಿದಂಥ ಪ್ರೀತಿಯು ಇವರಲ್ಲಿ ಇರಬೇಕೆಂತಲೂ ನಾನು ಅವರಲ್ಲಿ ಇರುವಂತೆಯೂ ನಾನು ಅವರಿಗೆ ನಿಮ್ಮ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು,” ಎಂದರು.

ಯೋಹಾನ — Chapters