[1] ಮರಿಯಳ ಮತ್ತು ಆಕೆಯ ಸಹೋದರಿಯಾದ ಮಾರ್ಥಳ ಊರಾದ ಬೇಥಾನ್ಯದಲ್ಲಿ ಲಾಜರನೆಂಬವನೊಬ್ಬನು ಅಸ್ವಸ್ಥನಾಗಿದ್ದನು.
[2] ಯೇಸುಸ್ವಾಮಿಯ ಪಾದಗಳಿಗೆ ತೈಲವನ್ನು ಹಚ್ಚಿ ತನ್ನ ತಲೆಕೂದಲಿನಿಂದ ಅವರ ಪಾದಗಳನ್ನು ಒರಸಿದ ಮರಿಯಳ ಸಹೋದರನಾದ ಲಾಜರನೇ ಅಸ್ವಸ್ಥನಾಗಿದ್ದನು.
[3] ಆದ್ದರಿಂದ ಅವನ ಸಹೋದರಿಯರು, “ಸ್ವಾಮೀ, ಇಗೋ, ನೀವು ಪ್ರೀತಿಸುವವನು ಅಸ್ವಸ್ಥನಾಗಿದ್ದಾನೆ,” ಎಂದು ಯೇಸುವಿಗೆ ಹೇಳಿ ಕಳುಹಿಸಿದರು.
[4] ಯೇಸು ಅದನ್ನು ಕೇಳಿ, “ಈ ಕಾಯಿಲೆಯು ಮರಣಕ್ಕಾಗಿಯಲ್ಲ. ದೇವರ ಮಹಿಮೆಗಾಗಿಯೇ ಬಂದದ್ದು. ಇದರಿಂದ ದೇವರ ಪುತ್ರನಿಗೆ ಮಹಿಮೆಯಾಗುವುದು,” ಎಂದು ಹೇಳಿದರು.
[5] ಮಾರ್ಥಳನ್ನು ಅವಳ ಸಹೋದರಿಯನ್ನು ಮತ್ತು ಲಾಜರನನ್ನು ಯೇಸು ಪ್ರೀತಿಸುತ್ತಿದ್ದರು.
[6] ಅವನು ಅಸ್ವಸ್ಥನಾಗಿದ್ದಾನೆಂದು ಯೇಸು ಕೇಳಿದ ಮೇಲೆಯೂ ಎರಡು ದಿವಸ ತಾನಿದ್ದ ಸ್ಥಳದಲ್ಲೇ ಉಳಿದುಕೊಂಡರು.
[7] ತರುವಾಯ ಯೇಸು ತಮ್ಮ ಶಿಷ್ಯರಿಗೆ, “ನಾವು ತಿರುಗಿ ಯೂದಾಯಕ್ಕೆ ಹೋಗೋಣ,” ಎಂದರು.
[8] ಯೇಸುವಿನ ಶಿಷ್ಯರು ಅವರಿಗೆ, “ಬೋಧಕರೇ, ಈಗ ಯೆಹೂದ್ಯರು ನಿಮ್ಮ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿದ್ದಾರೆ. ತಿರುಗಿ ನೀವು ಅಲ್ಲಿಗೆ ಹೋಗಬೇಕೆಂದಿರುವಿರಾ?” ಎಂದರು.
[9] ಯೇಸು, “ಹಗಲಿಗೆ ಹನ್ನೆರಡು ತಾಸುಗಳು ಇವೆಯಲ್ಲವೇ? ಯಾರಾದರೂ ಹಗಲಿನಲ್ಲಿ ನಡೆದರೆ ಎಡವುದಿಲ್ಲ ಏಕೆಂದರೆ ಈ ಲೋಕದ ಬೆಳಕು ಅವರಿಗೆ ಕಾಣಿಸುತ್ತದೆ.
[10] ಯಾರಾದರೂ ರಾತ್ರಿಯಲ್ಲಿ ನಡೆದರೆ ತಮ್ಮಲ್ಲಿ ಬೆಳಕಿಲ್ಲದಿರುವುದರಿಂದ ಅವರು ಎಡವುತ್ತಾರೆ,” ಎಂದು ಉತ್ತರಕೊಟ್ಟರು.
[11] ಇದನ್ನು ಹೇಳಿದ ತರುವಾಯ ಯೇಸು ಅವರಿಗೆ, “ನಮ್ಮ ಸ್ನೇಹಿತ ಲಾಜರನು ನಿದ್ರೆ ಮಾಡುತ್ತಿದ್ದಾನೆ. ಆದರೆ ನಾನು ಹೋಗಿ ಅವನನ್ನು ಎಬ್ಬಿಸಬೇಕು,” ಎಂದರು.
[12] ಯೇಸುವಿನ ಶಿಷ್ಯರು, “ಸ್ವಾಮೀ, ಅವನು ನಿದ್ರೆಮಾಡುತ್ತಿದ್ದರೆ ಸ್ವಸ್ಥನಾಗುವನು,” ಎಂದರು.
[13] ಯೇಸು ಅವನ ಮರಣವನ್ನು ಕುರಿತು ಹೇಳಿದ್ದರು. ಆದರೆ ಶಿಷ್ಯರು ನಿದ್ರೆಯ ವಿಶ್ರಾಂತಿಯನ್ನು ಕುರಿತು ಯೇಸು ಹೇಳಿದರೆಂದು ಯೋಚಿಸಿದರು.
[14] ಆಗ ಯೇಸು ಸ್ಪಷ್ಟವಾಗಿ ಅವರಿಗೆ, “ಲಾಜರನು ಸತ್ತುಹೋಗಿದ್ದಾನೆ.
[15] ಆದರೆ ನಾನು ಅಲ್ಲಿ ಇಲ್ಲದೆ ಹೋದದ್ದು ನಿಮ್ಮ ನಿಮಿತ್ತವಾಗಿ ಸಂತೋಷಪಡುತ್ತೇನೆ, ಯಾಕೆಂದರೆ ನಿಮಗೆ ನನ್ನಲ್ಲಿ ನಂಬಿಕೆ ಬರುವಂತೆ ಇದೆಲ್ಲಾ ನಡೆದಿದೆ. ಆದರೆ ಅವನ ಬಳಿಗೆ ಹೋಗೋಣ,” ಎಂದು ಹೇಳಿದರು.
[16] ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಸಹ ಗುರುವಿನೊಂದಿಗೆ ಸಾಯುವುದಕ್ಕೆ ಹೋಗೋಣ,” ಎಂದನು.
[17] ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ಆಗಲೇ ನಾಲ್ಕು ದಿವಸಗಳಾಗಿದ್ದವೆಂದು ತಿಳಿಯಿತು.
[18] ಬೇಥಾನ್ಯವು ಯೆರೂಸಲೇಮಿನಿಂದ ಸುಮಾರು ಮೂರು ಕಿಲೋಮೀಟರಿನಷ್ಟು ದೂರವಿತ್ತು.
[19] ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋದರನ ವಿಷಯವಾಗಿ ಸಂತೈಸುವುದಕ್ಕೆ ಬಂದಿದ್ದರು.
[20] ಯೇಸು ಬರುತ್ತಿದ್ದಾರೆಂದು ಮಾರ್ಥಳು ಕೇಳಿದಾಗ ಅವರನ್ನು ಎದುರುಗೊಳ್ಳಲು ಹೋದಳು. ಆದರೆ ಮರಿಯಳು ಮನೆಯಲ್ಲಿಯೇ ಕುಳಿತುಕೊಂಡಿದ್ದಳು.
[21] ಆಗ ಮಾರ್ಥಳು ಯೇಸುವಿಗೆ, “ಸ್ವಾಮೀ, ನೀವು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ.
[22] ಆದರೆ ಈಗಲೂ ನೀವು ದೇವರನ್ನು ಏನು ಕೇಳಿಕೊಂಡರೂ ದೇವರು ಅದನ್ನು ನಿಮಗೆ ಕೊಡುವರೆಂದು ನಾನು ಬಲ್ಲೆನು,” ಎಂದಳು.
[23] ಯೇಸು ಆಕೆಗೆ, “ನಿನ್ನ ಸಹೋದರನು ಪುನಃ ಜೀವಂತನಾಗಿ ಎದ್ದೇಳುವನು,” ಎಂದು ಹೇಳಿದರು.
[24] ಮಾರ್ಥಳು ಯೇಸುವಿಗೆ, “ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನು ಪುನಃ ಎದ್ದು ಬರುವನೆಂದು ನಾನು ಬಲ್ಲೆನು,” ಎಂದು ಹೇಳಿದಳು.
[25] ಯೇಸು ಆಕೆಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಸತ್ತರೂ ಬದುಕುವರು.
[26] ಜೀವಿಸುವ ಪ್ರತಿಯೊಬ್ಬರೂ ನನ್ನಲ್ಲಿ ನಂಬಿಕೆಯಿಟ್ಟರೆ, ಅವರು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯಾ?” ಎಂದು ಕೇಳಿದ್ದಕ್ಕೆ,
[27] ಆಕೆಯು ಯೇಸುವಿಗೆ, “ಹೌದು, ಸ್ವಾಮೀ, ಲೋಕಕ್ಕೆ ಬರಬೇಕಾಗಿದ್ದ ದೇವರ ಪುತ್ರನಾದ ಕ್ರಿಸ್ತನು ನೀವೇ ಎಂದು ನಾನು ನಂಬಿದ್ದೇನೆ,” ಎಂದಳು.
[28] ಇದನ್ನು ಹೇಳಿ ಆಕೆಯು ಹೊರಟುಹೋಗಿ ತನ್ನ ಸಹೋದರಿ ಮರಿಯಳನ್ನು ರಹಸ್ಯವಾಗಿ ಕರೆದು, “ಬೋಧಕರು ಇಲ್ಲಿದ್ದಾರೆ, ನಿನ್ನನ್ನು ಕರೆಯುತ್ತಾರೆ,” ಎಂದಳು.
[29] ಆಕೆಯು ಇದನ್ನು ಕೇಳಿದಾಗ ತಟ್ಟನೆ ಎದ್ದು ಯೇಸುವಿನ ಬಳಿಗೆ ಹೋದಳು.
[30] ಯೇಸು ಇನ್ನೂ ಊರೊಳಕ್ಕೆ ಬಾರದೆ ಮಾರ್ಥಳು ಅವರನ್ನು ಸಂಧಿಸಿದ ಸ್ಥಳದಲ್ಲಿಯೇ ಇದ್ದರು.
[31] ಮರಿಯಳೊಂದಿಗೆ ಮನೆಯಲ್ಲಿ ಆಕೆಯ ಜೊತೆಗಿದ್ದು ಆಕೆಯನ್ನು ಸಂತೈಸುತ್ತಿದ್ದ ಯೆಹೂದ್ಯರು ಆಕೆಯು ತಟ್ಟನೆ ಎದ್ದು ಹೊರಗೆ ಹೋಗುತ್ತಿರುವುದನ್ನು ಕಂಡು, ಆಕೆಯು ಅಳುವುದಕ್ಕಾಗಿ ಸಮಾಧಿಯ ಬಳಿಗೆ ಹೋಗುತ್ತಿದ್ದಾಳೆಂದು ಭಾವಿಸಿ ಆಕೆಯನ್ನು ಹಿಂಬಾಲಿಸಿದರು.
[32] ಯೇಸು ಇದ್ದ ಸ್ಥಳಕ್ಕೆ ಮರಿಯಳೂ ಬಂದು ಅವರನ್ನು ಕಂಡು ಅವರ ಪಾದಗಳಿಗೆ ಬಿದ್ದು, “ಸ್ವಾಮೀ, ನೀವು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ,” ಎಂದು ಹೇಳಿದಳು.
[33] ಆಕೆಯು ಅಳುವುದನ್ನು ಮತ್ತು ಆಕೆಯೊಂದಿಗೆ ಬಂದ ಯೆಹೂದ್ಯರು ಅಳುವುದನ್ನು ಯೇಸು ಕಂಡಾಗ ಆತ್ಮದಲ್ಲಿ ನೊಂದುಕೊಂಡು ಕಳವಳಗೊಂಡವರಾಗಿ,
[34] “ಅವನನ್ನು ಎಲ್ಲಿ ಸಮಾಧಿಮಾಡಿದ್ದೀರಿ?” ಎಂದು ಕೇಳಿದರು. ಅವರು ಯೇಸುವಿಗೆ, “ಸ್ವಾಮೀ, ಬಂದು ನೋಡಿರಿ,” ಎಂದರು.
[35] ಯೇಸು ಕಣ್ಣೀರಿಟ್ಟರು.
[36] ಆಗ ಯೆಹೂದ್ಯರು, “ನೋಡಿರಿ, ಈತನಿಗೆ ಲಾಜರನ ಮೇಲೆ ಎಷ್ಟು ಪ್ರೀತಿ,” ಎಂದರು.
[37] ಅವರಲ್ಲಿ ಕೆಲವರು, “ಆ ಕುರುಡನ ಕಣ್ಣುಗಳನ್ನು ತೆರೆದ ಈತನು ಲಾಜರನನ್ನೂ ಸಾಯದಂತೆ ಮಾಡಬಾರದಿತ್ತೆ?” ಎಂದರು.
[38] ಯೇಸು ತಿರುಗಿ ತಮ್ಮಲ್ಲಿ ನೊಂದುಕೊಳ್ಳುತ್ತಾ ಸಮಾಧಿಗೆ ಬಂದರು. ಅದು ಗವಿಯಾಗಿತ್ತು; ಒಂದು ಕಲ್ಲು ಅದರ ಬಾಗಿಲಿಗೆ ಮುಚ್ಚಲಾಗಿತ್ತು.
[39] ಯೇಸು, “ಆ ಕಲ್ಲನ್ನು ತೆಗೆದುಹಾಕಿರಿ,” ಎಂದರು. ಅದಕ್ಕೆ ಸತ್ತವನ ಸಹೋದರಿ ಮಾರ್ಥಳು ಯೇಸುವಿಗೆ, “ಸ್ವಾಮೀ, ಈಗ ದುರ್ವಾಸನೆ ಇರುವುದು. ಅವನು ಸತ್ತು ನಾಲ್ಕು ದಿನಗಳಾಗಿವೆ,” ಎಂದಳು.
[40] ಯೇಸು ಆಕೆಗೆ, “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ನಿನಗೆ ಹೇಳಲಿಲ್ಲವೇ?” ಎಂದರು.
[41] ಆಗ ಕೆಲವರು ಕಲ್ಲನ್ನು ತೆಗೆದುಹಾಕಿದರು. ಯೇಸು ಕಣ್ಣೆತ್ತಿ ಮೇಲೆ ನೋಡಿ, “ತಂದೆಯೇ, ನೀವು ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
[42] ನೀವು ನನಗೆ ಯಾವಾಗಲೂ ಕಿವಿಗೊಡುತ್ತೀರಿ ಎಂದು ನಾನು ಬಲ್ಲೆನು. ಆದರೆ ನನ್ನ ಸುತ್ತಲೂ ನಿಂತಿರುವ ಈ ಜನರು, ನೀವೇ ನನ್ನನ್ನು ಕಳುಹಿಸಿದ್ದೀರಿ ಎಂದು ನಂಬುವಂತೆ ನಾನು ಇದನ್ನು ಹೇಳಿದೆನು,” ಎಂದರು.
[43] ಯೇಸು ಹೀಗೆ ಹೇಳಿದ ಮೇಲೆ, “ಲಾಜರನೇ, ಹೊರಗೆ ಬಾ,” ಎಂದು ಗಟ್ಟಿಯಾದ ಸ್ವರದಿಂದ ಕೂಗಿದರು.
[44] ಆಗ ಸತ್ತಿದ್ದವನು ಹೊರಗೆ ಬಂದನು. ಅವನ ಕೈಕಾಲುಗಳು ಶವವಸ್ತ್ರದಿಂದ ಕಟ್ಟಿದ್ದವು, ಮುಖಕ್ಕೆ ವಸ್ತ್ರ ಸುತ್ತಲಾಗಿತ್ತು. ಯೇಸು ಅಲ್ಲಿದ್ದವರಿಗೆ, “ಕಟ್ಟುಗಳನ್ನು ಬಿಚ್ಚಿ ಅವನನ್ನು ಹೋಗಲು ಬಿಡಿ,” ಎಂದು ಹೇಳಿದರು.
[45] ಆದ್ದರಿಂದ ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಾರ್ಯಗಳನ್ನು ಕಂಡು ಅವರಲ್ಲಿ ನಂಬಿಕೆಯಿಟ್ಟರು.
[46] ಆದರೆ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ ಕೃತ್ಯಗಳನ್ನು ಅವರಿಗೆ ಹೇಳಿದರು.
[47] ಆಗ ಮುಖ್ಯಯಾಜಕರೂ ಫರಿಸಾಯರೂ ಆಲೋಚನಾ ಸಭೆಯನ್ನು ಕೂಡಿಸಿ, “ಈತನು ಅನೇಕ ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ, ನಾವು ಏನು ಮಾಡೋಣ?
[48] ನಾವು ಈತನನ್ನು ಹಾಗೆಯೇ ಬಿಟ್ಟರೆ ಎಲ್ಲರೂ ಆತನನ್ನೇ ನಂಬುವರು. ರೋಮನ್ನರು ಬಂದು ನಮ್ಮ ದೇವಾಲಯವನ್ನೂ ರಾಷ್ಟ್ರವನ್ನೂ ನಾಶಮಾಡುವರು,” ಎಂದರು.
[49] ಅವರಲ್ಲಿ ಆ ವರ್ಷದ ಮಹಾಯಾಜಕನಾದ ಕಾಯಫನೆಂಬವನು ಅವರಿಗೆ, “ನಿಮಗೆ ಏನೂ ತಿಳಿಯುವುದಿಲ್ಲ.
[50] ಇಡೀ ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಎಣಿಸುವುದೇ ಇಲ್ಲ,” ಎಂದನು.
[51] ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಅವನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದುದರಿಂದ ಯೇಸು ಆ ರಾಷ್ಟ್ರಕ್ಕಾಗಿ ಮಾತ್ರವಲ್ಲದೆ
[52] ಚದುರಿರುವ ದೇವರ ಮಕ್ಕಳನ್ನು ಒಂದಾಗಿ ಕೂಡಿಸುವುದಕ್ಕಾಗಿಯೂ ಯೇಸು ಸಾಯಬೇಕಾಗಿದೆ ಎಂದು ಅವನು ಪ್ರವಾದಿಸಿದನು.
[53] ಅವರು ಆ ದಿನದಿಂದ ಯೇಸುವನ್ನು ಕೊಲ್ಲಬೇಕೆಂಬ ಒಳಸಂಚು ಮಾಡಿಕೊಂಡರು.
[54] ಹೀಗಿರುವುದರಿಂದ ಯೇಸು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ತಿರುಗಾಡಲಿಲ್ಲ. ಆದರೆ ಅವರು ಅಲ್ಲಿಂದ ಅರಣ್ಯಕ್ಕೆ ಸಮೀಪದಲ್ಲಿದ್ದ ಎಫ್ರಾಯೀಮ್ ಎಂಬ ಊರಿಗೆ ಹೋಗಿ ಅಲ್ಲಿ ತಮ್ಮ ಶಿಷ್ಯರ ಸಂಗಡ ವಾಸಮಾಡಿದರು.
[55] ಆಗ ಯೆಹೂದ್ಯರ ಪಸ್ಕಹಬ್ಬವು ಹತ್ತಿರವಾಗಿತ್ತು. ಅನೇಕರು ತಮ್ಮನ್ನು ಶುದ್ಧಿ ಮಾಡಿಕೊಳ್ಳುವುದಕ್ಕಾಗಿ ಪಸ್ಕಕ್ಕೆ ಮುಂಚೆ ಹಳ್ಳಿಗಳಿಂದ ಯೆರೂಸಲೇಮಿಗೆ ಹೋದರು.
[56] ಅವರು ಯೇಸುವನ್ನು ಹುಡುಕುತ್ತಾ ದೇವಾಲಯದಲ್ಲಿ ನಿಂತುಕೊಂಡು, “ಆತನು ಹಬ್ಬಕ್ಕೆ ಬರುತ್ತಾನೋ ಇಲ್ಲವೋ? ನಿಮಗೆ ಹೇಗೆ ಕಾಣುತ್ತದೆ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
[57] ಆಗ ಮುಖ್ಯಯಾಜಕರೂ ಫರಿಸಾಯರೂ ಯೇಸುವನ್ನು ಬಂಧಿಸುವಂತೆ ಆತನ ಸುಳಿವು ಯಾರಿಗಾದರೂ ತಿಳಿದಿದ್ದರೆ ಅವರು ತಮಗೆ ತಿಳಿಸಬೇಕೆಂದು ಅಪ್ಪಣೆ ಕೊಟ್ಟಿದ್ದರು.