Skip to content
Opens in a new window
Listen to this chapter • 9:47

[1] ಪಸ್ಕಹಬ್ಬಕ್ಕೆ ಆರು ದಿನಗಳ ಮುಂಚೆ ಯೇಸು ಬೇಥಾನ್ಯಕ್ಕೆ ಬಂದರು. ಅಲ್ಲಿಯೇ ಯೇಸು ಮರಣದಿಂದ ಎಬ್ಬಿಸಿದ ಲಾಜರನು ಇದ್ದನು.

[2] ಅಲ್ಲಿ ಅವರು ಯೇಸುವಿಗಾಗಿ ಔತಣವನ್ನು ಏರ್ಪಡಿಸಿದ್ದರು. ಮಾರ್ಥಳು ಬಡಿಸುತ್ತಿದ್ದಳು. ಯೇಸುವಿನೊಂದಿಗೆ ಊಟಕ್ಕೆ ಕುಳಿತವರಲ್ಲಿ ಲಾಜರನೂ ಒಬ್ಬನಾಗಿದ್ದನು.

[3] ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ಮೂಲಿಕೆಯ ತೈಲವನ್ನು ಸುಮಾರು ಅರ್ಧ ಲೀಟರಿನಷ್ಟು ತಂದು ಯೇಸುವಿನ ಪಾದಕ್ಕೆ ಸುರಿದು ತನ್ನ ತಲೆಯ ಕೂದಲಿನಿಂದ ಅವರ ಪಾದಗಳನ್ನು ಒರೆಸಿದಳು. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತು.

[4] ಆಗ ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದ ಹಾಗೂ ಅವರನ್ನು ಹಿಡಿದುಕೊಡುವುದಕ್ಕಿದ್ದ ಯೂದ ಇಸ್ಕರಿಯೋತನು,

[5] “ಈ ತೈಲವನ್ನು ಏಕೆ ಮುನ್ನೂರು ಬೆಳ್ಳಿ ನಾಣ್ಯಗಳನ್ನು ಮಾರಿ ಬಡವರಿಗೆ ಕೊಡಲಿಲ್ಲ?” ಎಂದನು.

[6] ಅವನು ಬಡವರ ಹಿತಚಿಂತನೆಯಿಂದ ಹೀಗೆ ಹೇಳಲಿಲ್ಲ. ಆದರೆ ಅವನು ಕಳ್ಳನಾಗಿದ್ದು, ಹಣದ ಚೀಲವನ್ನು ಇಟ್ಟುಕೊಂಡು ಅದರಲ್ಲಿ ಹಾಕಿದ್ದನ್ನು ಕದ್ದುಕೊಳ್ಳುತ್ತಿದ್ದನು. ಆದ್ದರಿಂದಲೇ ಇದನ್ನು ಹೇಳಿದನು.

[7] ಆಗ ಯೇಸು, “ಮರಿಯಳನ್ನು ಬಿಟ್ಟುಬಿಡಿರಿ, ನನ್ನನ್ನು ಹೂಣಿಡುವ ದಿವಸಕ್ಕಾಗಿ ಈಕೆಯು ಇದನ್ನು ಇಟ್ಟುಕೊಳ್ಳಲಿ.

[8] ಏಕೆಂದರೆ ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ,” ಎಂದರು.

[9] ಯೇಸು ಅಲ್ಲಿರುವುದನ್ನು ಯೆಹೂದ್ಯರ ದೊಡ್ಡ ಗುಂಪು ತಿಳಿದು, ಅವರನ್ನು ಮಾತ್ರವಲ್ಲ, ಯೇಸು ಮರಣದಿಂದ ಎಬ್ಬಿಸಿದ ಲಾಜರನನ್ನೂ ಕಾಣಲು ಬಂದಿದ್ದರು.

[10] ಮುಖ್ಯಯಾಜಕರು ಲಾಜರನನ್ನು ಸಹ ಕೊಲ್ಲಬೇಕೆಂದು ಆಲೋಚಿಸಿದರು.

[11] ಏಕೆಂದರೆ ಅವನ ದೆಸೆಯಿಂದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಡೆಗೆ ಹೋಗಿ ನಂಬಿಕೆ ಇಟ್ಟಿದ್ದರು.

[12] ಮರುದಿನ ಹಬ್ಬಕ್ಕೆ ಬಂದ ದೊಡ್ಡ ಗುಂಪು ಯೇಸು ಯೆರೂಸಲೇಮಿಗೆ ಬರುತ್ತಿದ್ದಾರೆಂಬ ಸುದ್ದಿ ಕೇಳಿ,

[13] ಖರ್ಜೂರದ ಗರಿಗಳನ್ನು ತೆಗೆದುಕೊಂಡು ಅವರನ್ನು ಎದುರುಗೊಳ್ಳಲು ಹೊರಗೆ ಬಂದು, “ಹೊಸನ್ನ!” “ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!” “ಇಸ್ರಾಯೇಲಿನ ಅರಸನಿಗೆ ಶುಭವಾಗಲಿ!” ಎಂದು ಕೂಗಿದರು.

[14] ಯೇಸು ಕತ್ತೆಮರಿಯನ್ನು ಕಂಡು ಅದರ ಮೇಲೆ ಕುಳಿತುಕೊಂಡರು. ಪವಿತ್ರ ವೇದದಲ್ಲಿ ಬರೆದಿರುವಂತೆ:

[15] “ಚೀಯೋನ್ ಪುತ್ರಿಯೇ, ಭಯಪಡಬೇಡ, ಇಗೋ, ನಿನ್ನ ಅರಸ ಕತ್ತೆಮರಿಯ ಮೇಲೆ ಕೂತುಕೊಂಡು ಬರುತ್ತಾರೆ,” ಎಂಬ ಮಾತು ನೆರವೇರಿತು.

[16] ಇವುಗಳನ್ನು ಯೇಸುವಿನ ಶಿಷ್ಯರು ಮೊದಲು ತಿಳಿದಿರಲಿಲ್ಲ. ಆದರೆ ಯೇಸು ಮಹಿಮೆ ಹೊಂದಿದಾಗ ಪವಿತ್ರ ವೇದದಲ್ಲಿ ಅವರ ವಿಷಯವಾಗಿ ಬರೆದಿರುವಂತೆಯೇ, ಇವುಗಳನ್ನು ಜನರು ಅವರಿಗೆ ಮಾಡಿದರೆಂದು ಗ್ರಹಿಸಿದರು.

[17] ಯೇಸು ಲಾಜರನನ್ನು ಸಮಾಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾಗ ಅವರ ಸಂಗಡ ಇದ್ದ ಜನರೇ ಈ ವಿಷಯವನ್ನು ಸಾರುತ್ತಿದ್ದರು.

[18] ಯೇಸು ಈ ಸೂಚಕಕಾರ್ಯವನ್ನು ಮಾಡಿದರೆಂದು ಅನೇಕ ಜನರು ಕೇಳಿದ್ದರಿಂದ ಅವರು ಸಹ ಯೇಸುವನ್ನು ಸಂಧಿಸಲು ಬಂದರು.

[19] ಆದ್ದರಿಂದ ಫರಿಸಾಯರು ತಮ್ಮತಮ್ಮೊಳಗೆ, “ನೋಡಿದಿರಾ, ನಮಗೆ ಏನೂ ಪ್ರಯೋಜನವಾಗಲಿಲ್ಲ. ಲೋಕವೇ ಆತನ ಹಿಂದೆ ಹೋಗುತ್ತಿದೆ!” ಎಂದು ಮಾತನಾಡಿಕೊಂಡರು.

[20] ಹಬ್ಬದ ಆರಾಧನೆಗೆ ಗ್ರೀಕರಲ್ಲಿ ಕೆಲವರು ಬಂದಿದ್ದರು.

[21] ಇವರು ಗಲಿಲಾಯದ ಬೇತ್ಸಾಯಿದವನಾದ ಫಿಲಿಪ್ಪನ ಬಳಿಗೆ ಬಂದು, “ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆ,” ಎಂದರು.

[22] ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿದನು. ಅಂದ್ರೆಯನೂ ಫಿಲಿಪ್ಪನೂ ಬಂದು ಯೇಸುವಿಗೆ ತಿಳಿಸಿದರು.

[23] ಯೇಸು ಅವರಿಗೆ, “ಮನುಷ್ಯಪುತ್ರನು ಮಹಿಮೆಪಡುವ ಸಮಯ ಬಂದಿದೆ.

[24] ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋಧಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂಟಿಯಾಗಿ ಉಳಿಯುವುದು, ಆದರೆ ಅದು ಸತ್ತರೆ ಬಹಳ ಫಲಕೊಡುವುದು.

[25] ತಮ್ಮ ಪ್ರಾಣವನ್ನು ಪ್ರೀತಿಸುವವರು ಅದನ್ನು ಕಳೆದುಕೊಳ್ಳುವರು. ಈ ಲೋಕದಲ್ಲಿ ತಮ್ಮ ಪ್ರಾಣವನ್ನು ದ್ವೇಷಿಸುವವರು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವರು.

[26] ನನ್ನ ಸೇವೆ ಮಾಡಬೇಕೆಂದಿರುವವರು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕರೂ ಇರುವರು. ನನ್ನ ಸೇವೆ ಮಾಡುವವರನ್ನು ನನ್ನ ತಂದೆಯು ಸನ್ಮಾನಿಸುವರು.

[27] “ಈಗ ನನ್ನ ಪ್ರಾಣವು ತತ್ತರಿಸುತ್ತದೆ. ನಾನೇನು ಹೇಳಲಿ? ‘ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸಿರಿ’ ಎಂದು ಹೇಳಲೋ? ಇಲ್ಲ. ನಾನು ಈ ಗಳಿಗೆಗಾಗಿಯೇ ಬಂದಿದ್ದೇನಲ್ಲಾ?

[28] ತಂದೆಯೇ, ನಿಮ್ಮ ಹೆಸರನ್ನು ಮಹಿಮೆ ಪಡಿಸಿಕೊಳ್ಳಿರಿ,” ಎಂದರು. ಆಗ, “ಹೌದು, ನಾನು ಮಹಿಮೆಪಡಿಸಿದ್ದೇನೆ, ಪುನಃ ಮಹಿಮೆ ಪಡಿಸುವೆನು,” ಎಂಬ ಸ್ವರವು ಪರಲೋಕದಿಂದ ಕೇಳಿಸಿತು.

[29] ಆಗ ಅಲ್ಲಿ ನಿಂತಿದ್ದ ಜನರು ಅದನ್ನು ಕೇಳಿ, “ಗುಡುಗಿತು,” ಎಂದರು. ಬೇರೆಯವರು, “ದೇವದೂತನೊಬ್ಬನು ಈತನ ಸಂಗಡ ಮಾತನಾಡಿದನು,” ಎಂದರು.

[30] ಯೇಸು, “ಈ ಸ್ವರವು ನನಗಾಗಿ ಅಲ್ಲ, ನಿಮಗಾಗಿಯೇ ಬಂದಿದೆ.

[31] ಈಗ ಈ ಲೋಕಕ್ಕೆ ನ್ಯಾಯತೀರ್ಪು ಆಗುತ್ತದೆ. ಇಹಲೋಕದ ಅಧಿಪತಿಯನ್ನು ಈಗ ಹೊರಗೆ ಹಾಕಲಾಗುವುದು.

[32] ಆದರೆ ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ ಎಲ್ಲರನ್ನೂ ನನ್ನ ಬಳಿಗೆ ಸೆಳೆದುಕೊಳ್ಳುತ್ತೇನೆ,” ಎಂದರು.

[33] ತಾವು ಎಂಥಾ ಮರಣದಿಂದ ಸಾಯಬೇಕಾಗಿದೆ ಎಂದು ಸೂಚಿಸಿ ಇದನ್ನು ಹೇಳಿದರು.

[34] ಜನರು ಯೇಸುವಿಗೆ, “ಕ್ರಿಸ್ತ ಸದಾಕಾಲವೂ ಇರುತ್ತಾರೆ ಎಂದು ನಾವು ಮೋಶೆಯ ನಿಯಮದಿಂದ ಕೇಳಿದ್ದೇವೆ. ಹಾಗಾದರೆ ಮನುಷ್ಯಪುತ್ರನು ಮೇಲೇರಿಸಬೇಕಾಗಿದೆ ಎಂದು ನೀನು ಹೇಳುವುದು ಹೇಗೆ? ಈ ಮನುಷ್ಯಪುತ್ರನು ಯಾರು?” ಎಂದು ಕೇಳಿದರು.

[35] ಆಗ ಯೇಸು ಅವರಿಗೆ, “ಇನ್ನು ಸ್ವಲ್ಪ ಕಾಲವೇ ಬೆಳಕು ನಿಮ್ಮ ನಡುವೆ ಇರುತ್ತದೆ. ಕತ್ತಲು ನಿಮ್ಮನ್ನು ಕವಿಯುವುದಕ್ಕೆ ಮುಂಚೆ, ನಿಮಗೆ ಬೆಳಕಿರುವಾಗಲೇ ನಡೆಯಿರಿ. ಕತ್ತಲಿನಲ್ಲಿ ನಡೆಯುವವನು ತಾನು ಎಲ್ಲಿಗೆ ಹೋಗುತ್ತಾನೆಂದು ತಿಳಿಯದು.

[36] ನೀವು ಬೆಳಕಿನ ಪುತ್ರರಾಗುವಂತೆ ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ,” ಎಂದರು. ಯೇಸು ಇವುಗಳನ್ನು ಹೇಳಿ, ಅವರಿಂದ ಹೊರಟುಹೋಗಿ ಅಡಗಿಕೊಂಡರು.

[37] ಯೇಸು ಅನೇಕ ಸೂಚಕಕಾರ್ಯಗಳನ್ನು ಅವರ ಎದುರಿನಲ್ಲಿ ಮಾಡಿದರೂ ಜನರು ಅವರನ್ನು ನಂಬಲಿಲ್ಲ.

[38] ಇದರಿಂದ, “ಸ್ವಾಮೀ, ನಮ್ಮ ಸುದ್ದಿಯನ್ನು ಯಾರು ನಂಬಿದರು? ಕರ್ತ ಆಗಿರುವವರ ಬಾಹುವು ಯಾರಿಗೆ ಪ್ರಕಟವಾಯಿತು?” ಎಂದು ಪ್ರವಾದಿ ಯೆಶಾಯನು ನುಡಿದದ್ದು ನೆರವೇರಿತು.

[39] ಅವರು ನಂಬಲಾರದೆ ಹೋದದ್ದರಿಂದ ಯೆಶಾಯನು ಮತ್ತೊಂದು ಕಡೆ ಹೇಳಿದ್ದೇನೆಂದರೆ:

[40] “ಅವರು ಕಣ್ಣಿನಿಂದ ಕಾಣದೆ, ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ ದೇವರು ಅವರ ಕಣ್ಣುಗಳನ್ನು ಕುರುಡುಮಾಡಿ ಅವರ ಹೃದಯವನ್ನು ಕಠಿಣ ಮಾಡಿದರು.”

[41] ಯೆಶಾಯನು ಯೇಸುವಿನ ಮಹಿಮೆಯನ್ನು ಕಂಡಿದ್ದರಿಂದ ಅವರ ವಿಷಯವಾಗಿ ಇವುಗಳನ್ನು ಹೇಳಿದನು.

[42] ಆದರೂ ಅಧಿಕಾರಿಗಳಲ್ಲಿ ಅನೇಕರು ಆ ಸಮಯದಲ್ಲಿ ಯೇಸುವನ್ನು ನಂಬಿದರು. ಆದರೆ ಫರಿಸಾಯರ ನಿಮಿತ್ತ ತಾವು ಸಭಾಮಂದಿರದಿಂದ ಬಹಿಷ್ಕಾರ ಆಗಬಾರದೆಂದು ಅವರು ತಮ್ಮ ನಂಬಿಕೆಯನ್ನು ಬಹಿರಂಗವಾಗಿ ಅರಿಕೆ ಮಾಡಲಿಲ್ಲ.

[43] ಅವರು ದೇವರಿಂದ ಬರುವ ಹೊಗಳಿಕೆಗಿಂತ ಮನುಷ್ಯರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.

[44] ಯೇಸು, ಕೂಗಿ ಹೇಳಿದ್ದೇನೆಂದರೆ, “ನನ್ನನ್ನು ನಂಬುವವರು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿಕೊಟ್ಟ ತಂದೆಯಲ್ಲಿಯೇ ವಿಶ್ವಾಸವಿಡುತ್ತಾರೆ.

[45] ನನ್ನನ್ನು ನೋಡುವವರು ನನ್ನನ್ನು ಕಳುಹಿಸಿದ ತಂದೆಯನ್ನೇ ಕಾಣುತ್ತಾರೆ.

[46] ನನ್ನಲ್ಲಿ ನಂಬಿಕೆಯಿಡುವವರು ಕತ್ತಲೆಯಲ್ಲಿ ಉಳಿಯಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.

[47] “ಯಾರು ನನ್ನ ಮಾತುಗಳನ್ನು ಕೇಳಿಯೂ ಅವುಗಳನ್ನು ಕೈಕೊಂಡು ನಡೆಯದೆ ಹೋದರೆ ನಾನು ಅವರಿಗೆ ಈಗ ತೀರ್ಪು ಮಾಡುವುದಿಲ್ಲ. ಏಕೆಂದರೆ ಲೋಕಕ್ಕೆ ತೀರ್ಪು ಮಾಡುವುದಕ್ಕಾಗಿ ಅಲ್ಲ, ಲೋಕವನ್ನು ರಕ್ಷಿಸುವುದಕ್ಕಾಗಿಯೇ ನಾನು ಬಂದಿದ್ದೇನೆ.

[48] ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಸ್ವೀಕರಿಸದವರಿಗೆ ತೀರ್ಪು ಮಾಡುವಂಥದ್ದು ಒಂದು ಇದೆ. ಅದು ನಾನು ಮಾತನಾಡಿದ ವಾಕ್ಯವೇ, ಅದೇ ಕಡೇ ದಿನದಲ್ಲಿ ಅವರಿಗೆ ತೀರ್ಪು ಮಾಡುವುದು.

[49] ಏಕೆಂದರೆ ನನ್ನಷ್ಟಕ್ಕೆ ನಾನೇ ಮಾತನಾಡಲಿಲ್ಲ. ಆದರೆ ನಾನು ಏನು ಹೇಳಬೇಕು ಮತ್ತು ನಾನು ಏನು ಮಾತನಾಡಬೇಕು ಎಂದು ನನ್ನನ್ನು ಕಳುಹಿಸಿದ ತಂದೆಯೇ ನನಗೆ ಆಜ್ಞೆ ಕೊಟ್ಟಿದ್ದಾರೆ.

[50] ಅವರ ಆಜ್ಞೆಯು ನಿತ್ಯಜೀವಕ್ಕೆ ಮಾರ್ಗವಾಗಿದೆ ಎಂದು ನಾನು ಬಲ್ಲೆನು. ಆದ್ದರಿಂದ, ತಂದೆಯು ನನಗೆ ಹೇಳಿದಂತೆಯೇ ಮಾತನಾಡುತ್ತೇನೆ,” ಎಂದು ಹೇಳಿದರು.

ಯೋಹಾನ — Chapters