[1] ಅಂದು ಪಸ್ಕಹಬ್ಬದ ಹಿಂದಿನ ದಿನವಾಗಿತ್ತು. ಯೇಸು ತಾವು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಸಮಯ ಬಂತೆಂದು ತಿಳಿದು, ಈ ಲೋಕದಲ್ಲಿದ್ದ ತಮ್ಮವರನ್ನು ಪ್ರೀತಿಸುತ್ತಿದ್ದ ಆ ಪ್ರೀತಿಯ ಪರಿಪೂರ್ಣತೆಯನ್ನು ಈಗ ತೋರಿಸಲಿದ್ದರು.
[2] ಸಾಯಂಕಾಲ ಊಟದ ಸಮಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಯೋಚನೆಯನ್ನು, ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಹಾಕಿದ್ದನು.
[3] ತಂದೆಯು ತನ್ನ ಕೈಯಲ್ಲಿ ಎಲ್ಲವನ್ನೂ ಕೊಟ್ಟಿದ್ದಾರೆಂದೂ ತಾನು ದೇವರ ಬಳಿಯಿಂದ ಬಂದು ಮರಳಿ ದೇವರ ಬಳಿಗೆ ಹೋಗುತ್ತೇನೆಂದೂ ಯೇಸುವಿಗೆ ತಿಳಿದಿತ್ತು.
[4] ಯೇಸು ಊಟದಿಂದೆದ್ದು ತಮ್ಮ ಮೇಲು ಹೊದಿಕೆಯನ್ನು ತೆಗೆದಿಟ್ಟು ಅಂಗವಸ್ತ್ರವನ್ನು ತೆಗೆದುಕೊಂಡು ಸೊಂಟಕ್ಕೆ ಕಟ್ಟಿಕೊಂಡರು.
[5] ಅನಂತರ ಅವರು ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಪಾದಗಳನ್ನು ತೊಳೆಯುವುದಕ್ಕೂ ತಾವು ಸೊಂಟಕ್ಕೆ ಕಟ್ಟಿಕೊಂಡ ಅಂಗವಸ್ತ್ರದಿಂದ ಪಾದಗಳನ್ನು ಒರೆಸುವುದಕ್ಕೂ ಪ್ರಾರಂಭಿಸಿದರು.
[6] ಯೇಸು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಯೇಸುವಿಗೆ, “ಸ್ವಾಮೀ, ನೀವು ನನ್ನ ಪಾದಗಳನ್ನು ತೊಳೆಯುತ್ತೀರೋ?” ಎಂದು ಕೇಳಿದನು.
[7] ಯೇಸು ಅವನಿಗೆ, “ನಾನು ಮಾಡುವುದು ಏನೆಂದು ಈಗ ನಿನಗೆ ಅರ್ಥವಾಗುವುದಿಲ್ಲ. ಆದರೆ ಇನ್ನು ಮುಂದೆ ನಿನಗೆ ಅರ್ಥವಾಗುವುದು,” ಎಂದರು.
[8] ಪೇತ್ರನು ಯೇಸುವಿಗೆ, “ನೀವು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು,” ಎಂದನು. ಯೇಸು ಅವನಿಗೆ, “ನಾನು ನಿನ್ನ ಪಾದಗಳನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇಲ್ಲ,” ಎಂದು ಹೇಳಿದರು.
[9] ಅದಕ್ಕೆ ಸೀಮೋನ ಪೇತ್ರನು ಯೇಸುವಿಗೆ, “ಸ್ವಾಮೀ, ನನ್ನ ಪಾದಗಳನ್ನು ಮಾತ್ರವಲ್ಲದೆ, ನನ್ನ ಕೈಗಳನ್ನು ಮತ್ತು ತಲೆಯನ್ನು ಸಹ ತೊಳೆ,” ಎಂದನು.
[10] ಯೇಸು ಅವನಿಗೆ, “ಸ್ನಾನಮಾಡಿಕೊಂಡವರು ತಮ್ಮ ಪಾದಗಳನ್ನು ಮಾತ್ರ ತೊಳೆದುಕೊಂಡರೆ ಸಾಕು. ಅವರು ಸಂಪೂರ್ಣವಾಗಿ ಶುದ್ಧರಾಗಿದ್ದಾರೆ. ನೀವು ಸಹ ಶುದ್ಧರಾಗಿದ್ದೀರಿ. ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದರು.
[11] ತನ್ನನ್ನು ಹಿಡಿದುಕೊಡುವವನು ಯಾರೆಂದು ಯೇಸು ತಿಳಿದಿದ್ದರಿಂದ, “ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದು ಹೇಳಿದರು.
[12] ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತಮ್ಮ ಮೇಲು ಹೊದಿಕೆಯನ್ನು ಧರಿಸಿ, ತಮ್ಮ ಸ್ಥಳದಲ್ಲಿ ಕುಳಿತುಕೊಂಡು ಅವರಿಗೆ, “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೋ?
[13] ನೀವು ನನ್ನನ್ನು ‘ಬೋಧಕರೇ’ ಮತ್ತು ‘ಕರ್ತಾ’ ಎಂದು ಕರೆಯುತ್ತೀರಿ. ನೀವು ಹೇಳುವುದು ಸರಿ. ಹೌದು, ನಾನು ಅಂಥವನೇ ಆಗಿದ್ದೇನೆ.
[14] ಹಾಗಾದರೆ ನಿಮ್ಮ ಕರ್ತನೂ ಬೋಧಕನೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು.
[15] ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ಕೊಟ್ಟಿದ್ದೇನೆ.
[16] ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತನ್ನ ಧಣಿಗಿಂತ ಆಳು ದೊಡ್ಡವನಲ್ಲ, ಹಾಗೆಯೇ ಕಳುಹಿಸಲಾದವನು ಅವನನ್ನು ಕಳುಹಿಸಿದವನಿಗಿಂತ ದೊಡ್ಡವನಲ್ಲ.
[17] ನೀವು ಇವುಗಳನ್ನು ತಿಳಿದುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.
[18] “ನಾನು ನಿಮ್ಮೆಲ್ಲರನ್ನು ಕುರಿತು ಮಾತನಾಡುತ್ತಿಲ್ಲ. ನಾನು ಆರಿಸಿಕೊಂಡವರನ್ನು ನಾನು ಬಲ್ಲೆನು. ಆದರೆ ‘ನನ್ನ ಸಂಗಡ ರೊಟ್ಟಿಯನ್ನು ತಿಂದವನೇ, ನನಗೆ ದ್ರೋಹ ಬಗೆದನು,’ ಎಂಬ ಪವಿತ್ರ ವಾಕ್ಯವು ನೆರವೇರಬೇಕಾಗಿದೆ.
[19] “ಅದು ಆಗುವುದು, ‘ನಾನೇ ಆತನು’ ಎಂದು ನೀವು ನಂಬುವಂತೆ ಅದು ಸಂಭವಿಸುವುದಕ್ಕಿಂತ ಮುಂಚೆ ಈಗಲೇ ನಿಮಗೆ ಹೇಳುತ್ತಿದ್ದೇನೆ.
[20] ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ಕಳುಹಿಸಿದ ತಂದೆಯನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುತ್ತಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿದ ತಂದೆಯನ್ನೇ ಸ್ವೀಕರಿಸುತ್ತಾನೆ.”
[21] ಯೇಸು ಇವುಗಳನ್ನು ಹೇಳುತ್ತಾ ಆತ್ಮದಲ್ಲಿ ನೊಂದುಕೊಂಡವರಾಗಿ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಬಗೆಯುವನು,” ಎಂದು ಸ್ವಷ್ಟವಾಗಿ ಹೇಳಿದರು.
[22] ಆಗ ಶಿಷ್ಯರು ಗಲಿಬಿಲಿಗೊಂಡು, “ಯೇಸು ಯಾರನ್ನು ಕುರಿತು ಹೇಳಿದರು?” ಎಂದು ಒಬ್ಬರನ್ನೊಬ್ಬರು ನೋಡುವವರಾದರು.
[23] ಶಿಷ್ಯರಲ್ಲಿ ಯೇಸು ಪ್ರೀತಿಸಿದ ಒಬ್ಬನು ಅವರ ಎದೆಗೆ ಒರಗಿಕೊಂಡಿದ್ದನು.
[24] ಸೀಮೋನ ಪೇತ್ರನು ಅವನಿಗೆ ಸನ್ನೆಮಾಡಿ, “ಅವರು ಯಾರ ವಿಷಯವಾಗಿ ಮಾತನಾಡಿದರು ಕೇಳು,” ಎಂದು ಹೇಳಿದನು.
[25] ಅವನು ಯೇಸುವಿನ ಎದೆಗೆ ಒರಗಿಕೊಂಡವನಾಗಿ, “ಸ್ವಾಮೀ, ಅವನು ಯಾರು?” ಎಂದು ಯೇಸುವನ್ನು ಕೇಳಿದನು.
[26] ಅದಕ್ಕೆ ಯೇಸು, “ನಾನು ರೊಟ್ಟಿಯ ತುಂಡನ್ನು ಅದ್ದಿ ಯಾವನಿಗೆ ಕೊಡುತ್ತೇನೋ ಅವನೇ,” ಎಂದರು. ತರುವಾಯ, ಆ ರೊಟ್ಟಿಯ ತುಂಡನ್ನು ಅದ್ದಿ ಸೀಮೋನನ ಮಗನಾದ ಯೂದ ಇಸ್ಕರಿಯೋತನಿಗೆ ಕೊಟ್ಟರು.
[27] ಅವನು ರೊಟ್ಟಿಯ ತುಂಡನ್ನು ತೆಗೆದುಕೊಂಡು ತಿಂದನು. ಅನಂತರ ಸೈತಾನನು ಅವನೊಳಗೆ ಪ್ರವೇಶಿಸಿದನು. ಆಗ ಯೇಸು ಅವನಿಗೆ, “ನೀನು ಮಾಡುವುದನ್ನು ಬೇಗನೆ ಮಾಡು,” ಎಂದು ಹೇಳಿದರು.
[28] ಆದರೆ ಯೇಸು ಅವನಿಗೆ ಇದನ್ನು ಏಕೆ ಹೇಳಿದರೆಂದು ಕುಳಿತವರಲ್ಲಿ ಯಾರಿಗೂ ಗೊತ್ತಾಗಲಿಲ್ಲ.
[29] ಏಕೆಂದರೆ ಯೂದನು ಹಣದ ಚೀಲವನ್ನು ಇಟ್ಟುಕೊಂಡಿದ್ದರಿಂದ ಯೇಸು ಅವನಿಗೆ, ಹಬ್ಬಕ್ಕೆ ನಮಗೆ ಅವಶ್ಯವಾದವುಗಳನ್ನು ಕೊಂಡುಕೋ, ಎಂದೋ ಬಡವರಿಗೆ ಏನಾದರೂ ಕೊಡು ಎಂದೋ ಯೇಸು ಅವನಿಗೆ ಹೇಳಿದರೆಂದು ಅವರಲ್ಲಿ ಕೆಲವರು ಭಾವಿಸಿದರು.
[30] ಯೂದನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.
[31] ಅವನು ಹೊರಟುಹೋದ ಮೇಲೆ ಯೇಸು, “ಈಗ ಮನುಷ್ಯಪುತ್ರನಾದ ನಾನು ಮಹಿಮೆ ಹೊಂದಲಿದ್ದೇನೆ. ದೇವರೂ ನನ್ನಲ್ಲಿ ಮಹಿಮೆ ಹೊಂದುವರು.
[32] ದೇವರು ಮನುಷ್ಯಪುತ್ರನಾದ ನನ್ನಲ್ಲಿ ಮಹಿಮೆ ಪಟ್ಟರೆ, ದೇವರು ಸಹ ಮನುಷ್ಯಪುತ್ರನಾದ ನನ್ನನ್ನು ತಮ್ಮಲ್ಲಿ ಮಹಿಮೆಪಡಿಸುವರು ಮತ್ತು ತಕ್ಷಣವೇ ಮಹಿಮೆಪಡಿಸುವರು.
[33] “ನನ್ನ ಮಕ್ಕಳೇ, ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮೊಡನೆ ಇರುತ್ತೇನೆ. ‘ನೀವು ನನ್ನನ್ನು ಹುಡುಕುವಿರಿ, ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದಿ ನಾಯಕರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ.
[34] “ನಾನು ನಿಮಗೊಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು.
[35] ನಿಮಗೆ ಪರಸ್ಪರ ಪ್ರೀತಿಯಿದ್ದರೆ, ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳುವರು,” ಎಂದು ಹೇಳಿದರು.
[36] ಸೀಮೋನ ಪೇತ್ರನು ಯೇಸುವಿಗೆ, “ಸ್ವಾಮೀ, ನೀವು ಎಲ್ಲಿಗೆ ಹೋಗುತ್ತೀರಿ?” ಎಂದು ಕೇಳಿದ್ದಕ್ಕೆ, ಯೇಸು ಅವನಿಗೆ, “ನಾನು ಹೋಗುವ ಕಡೆಗೆ ಈಗ ನೀನು ನನ್ನನ್ನು ಹಿಂಬಾಲಿಸಲಾರೆ, ನಂತರ ಹಿಂಬಾಲಿಸುವೆ,” ಎಂದರು.
[37] ಪೇತ್ರನು ಯೇಸುವಿಗೆ, “ಕರ್ತದೇವರೇ, ನಾನು ಈಗ ನಿಮ್ಮನ್ನು ಏಕೆ ಹಿಂಬಾಲಿಸಲಾರೆನು? ನಿಮಗಾಗಿ ನನ್ನ ಪ್ರಾಣವನ್ನೇ ಕೊಡುವೆನು,” ಎಂದನು.
[38] ಯೇಸು ಅವನಿಗೆ, “ನೀನು ನನಗಾಗಿ ನಿನ್ನ ಪ್ರಾಣವನ್ನೇ ಕೊಡುವೆಯೋ? ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ನನ್ನನ್ನು ಮೂರು ಸಾರಿ ನಿರಾಕರಿಸುವ ತನಕ ಹುಂಜ ಕೂಗುವುದೇ ಇಲ್ಲ,” ಎಂದರು.