Skip to content
Opens in a new window
Listen to this chapter • 8:00

[1] ಯೇಸು ಪ್ರಾರ್ಥನೆಯನ್ನು ಮುಗಿಸಿದ ಮೇಲೆ ತಮ್ಮ ಶಿಷ್ಯರೊಂದಿಗೆ ಕೆದ್ರೋನ್ ಹಳ್ಳದ ಆಚೆಗೆ ಹೋದರು. ಮತ್ತೊಂದು ಕಡೆ ಇರುವ ತೋಟದೊಳಗೆ ಯೇಸು ಮತ್ತು ಅವರ ಶಿಷ್ಯರು ಪ್ರವೇಶಿಸಿದರು.

[2] ಅವರನ್ನು ಹಿಡಿದುಕೊಡಲಿದ್ದ ಯೂದನಿಗೂ ಆ ಸ್ಥಳವು ಗೊತ್ತಿತ್ತು. ಏಕೆಂದರೆ ಅನೇಕ ಸಾರಿ ಯೇಸು ತಮ್ಮ ಶಿಷ್ಯರೊಂದಿಗೆ ಅಲ್ಲಿ ಸೇರುತ್ತಿದ್ದರು.

[3] ಯೂದನು ಸೈನಿಕರ ತಂಡವನ್ನೂ ಮುಖ್ಯಯಾಜಕರಿಂದ ಮತ್ತು ಫರಿಸಾಯರಿಂದ ಕಾವಲಾಳುಗಳನ್ನೂ ಕರೆದುಕೊಂಡು ತೋಟಕ್ಕೆ ಬಂದನು. ಸೈನಿಕರು ಮತ್ತು ಕಾವಲಾಳುಗಳು ದೀಪಗಳನ್ನು, ಪಂಜುಗಳನ್ನು ಮತ್ತು ಆಯುಧಗಳನ್ನು ಹಿಡಿದುಕೊಂಡಿದ್ದರು.

[4] ಆಗ ಯೇಸು ತಮಗೆ ಸಂಭವಿಸುವುದನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ, “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು,

[5] ಅವರು ಯೇಸುವಿಗೆ, “ನಜರೇತಿನ ಯೇಸುವನ್ನು,” ಎಂದರು. ಅದಕ್ಕೆ ಯೇಸು ಅವರಿಗೆ, “ನಾನೇ ಆತನು,” ಎಂದರು. ಅವರನ್ನು ಹಿಡಿದುಕೊಡಲಿದ್ದ ಯೂದನು ಸಹ ಅವರೊಂದಿಗೆ ನಿಂತಿದ್ದನು.

[6] ಯೇಸು ಅವರಿಗೆ, “ನಾನೇ ಆತನು,” ಎಂದು ಹೇಳಿದಾಗ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು.

[7] ಆಗ ಯೇಸು ಅವರಿಗೆ ತಿರುಗಿ, “ನೀವು, ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು, ಅವರು, “ನಜರೇತಿನ ಯೇಸುವನ್ನು,” ಎಂದರು.

[8] ಅದಕ್ಕೆ ಯೇಸು, “ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ, ನೀವು ನನ್ನನ್ನೇ ಹುಡುಕುವುದಾದರೆ ಇವರನ್ನು ಬಿಟ್ಟುಬಿಡಿರಿ,” ಎಂದರು.

[9] ಹೀಗೆ, “ನೀನು ನನಗೆ ಕೊಟ್ಟವರಲ್ಲಿ ಯಾರನ್ನೂ ನಾನು ಕಳೆದುಕೊಳ್ಳಲಿಲ್ಲ,” ಎಂದು ತಾವೇ ಹೇಳಿದ ಮಾತು ನೆರವೇರಿತು.

[10] ಆಗ ಸೀಮೋನ ಪೇತ್ರನು ತನ್ನಲ್ಲಿದ್ದ ಕತ್ತಿಯನ್ನು ತೆಗೆದು ಮಹಾಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು. ಆ ಸೇವಕನ ಹೆಸರು ಮಲ್ಕ.

[11] ಆಗ ಯೇಸು ಪೇತ್ರನಿಗೆ, “ನಿನ್ನ ಕತ್ತಿಯನ್ನು ಒರೆಯಲ್ಲಿ ಹಾಕು! ನನ್ನ ತಂದೆಯು ನನಗೆ ಕೊಟ್ಟ ಪಾತ್ರೆಯಿಂದ ನಾನು ಕುಡಿಯಬಾರದೋ?” ಎಂದು ಹೇಳಿದರು.

[12] ತರುವಾಯ ಸೈನಿಕರೂ ಸೈನ್ಯಾಧಿಕಾರಿಯೂ ಯೆಹೂದ್ಯರ ಕಾವಲಾಳುಗಳೂ ಯೇಸುವನ್ನು ಹಿಡಿದು ಕಟ್ಟಿದರು.

[13] ಅವರನ್ನು ಮೊದಲು ಅನ್ನನ ಬಳಿಗೆ ಕರೆದುಕೊಂಡು ಹೋದರು. ಅವನು ಆ ವರ್ಷದ ಮಹಾಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು.

[14] “ಜನರಿಗೋಸ್ಕರ ಒಬ್ಬ ಮನುಷ್ಯನು ಸಾಯುವುದು ಹಿತ,” ಎಂದು ಯೆಹೂದ್ಯರಿಗೆ ಸಲಹೆ ಕೊಟ್ಟ ಕಾಯಫನು ಇವನೇ.

[15] ಸೀಮೋನ ಪೇತ್ರನು ಮತ್ತು ಇನ್ನೊಬ್ಬ ಶಿಷ್ಯನು ಯೇಸುವನ್ನು ಹಿಂಬಾಲಿಸಿದರು. ಆ ಶಿಷ್ಯನು ಮಹಾಯಾಜಕನಿಗೆ ಪರಿಚಯವಿದ್ದುದರಿಂದ ಯೇಸುವಿನ ಸಂಗಡ ಮಹಾಯಾಜಕನ ಅಂಗಳದೊಳಗೆ ಹೋದನು.

[16] ಆದರೆ ಪೇತ್ರನು ಬಾಗಿಲಿನ ಬಳಿಯಲ್ಲಿ ಹೊರಗೆ ನಿಂತಿದ್ದನು. ಮಹಾಯಾಜಕನಿಗೆ ಪರಿಚಯವಿದ್ದ ಆ ಇನ್ನೊಬ್ಬ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು.

[17] ಆಗ ದ್ವಾರಪಾಲಕಿಯು ಪೇತ್ರನಿಗೆ, “ನೀನು ಸಹ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಕೇಳಲು, ಅದಕ್ಕವನು, “ನಾನಲ್ಲ,” ಎಂದನು.

[18] ಆಗ ಚಳಿಯಿದ್ದುದರಿಂದ ಸೇವಕರೂ ಕಾವಲುಗಾರರೂ ಬೆಂಕಿಮಾಡಿ ಚಳಿ ಕಾಯಿಸಿಕೊಳ್ಳುತ್ತಿದ್ದರು. ಪೇತ್ರನೂ ಅವರೊಂದಿಗೆ ನಿಂತು ಚಳಿ ಕಾಯಿಸಿಕೊಳ್ಳುತ್ತಿದ್ದನು.

[19] ಆಗ ಮಹಾಯಾಜಕನು ಯೇಸುವನ್ನು ಅವರ ಶಿಷ್ಯರ ವಿಷಯವಾಗಿಯೂ ಅವರ ಬೋಧನೆಯ ವಿಷಯವಾಗಿಯೂ ಪ್ರಶ್ನಿಸಿದನು.

[20] ಯೇಸು ಅವನಿಗೆ, “ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ. ಯೆಹೂದ್ಯರೆಲ್ಲರು ಕೂಡಿಬರುವ ಸಭಾಮಂದಿರದಲ್ಲಿಯೂ ದೇವಾಲಯದಲ್ಲಿಯೂ ನಾನು ಯಾವಾಗಲೂ ಉಪದೇಶಿಸುತ್ತಿದ್ದೆನು. ನಾನು ಮುಚ್ಚುಮರೆಯಾಗಿ ಏನೂ ಮಾತನಾಡಲಿಲ್ಲ.

[21] ನೀನು ನನ್ನನ್ನು ಪ್ರಶ್ನಿಸುವುದೇಕೆ? ನಾನು ಅವರಿಗೆ ಏನು ಮಾತನಾಡಿದ್ದೇನೆಂದು ಕೇಳಿದವರನ್ನೇ ಪ್ರಶ್ನಿಸು, ನಾನು ಹೇಳಿದ್ದನ್ನು ಅವರು ತಿಳಿದಿದ್ದಾರೆ,” ಎಂದರು.

[22] ಯೇಸು ಇವುಗಳನ್ನು ಹೇಳಿದಾಗ, ಹತ್ತಿರ ನಿಂತಿದ್ದ ಕಾವಲಾಳುಗಳಲ್ಲಿ ಒಬ್ಬನು ಯೇಸುವಿನ ಕೆನ್ನೆಗೆ ಹೊಡೆದು, “ನೀನು ಮಹಾಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ?” ಎಂದನು.

[23] ಯೇಸು ಅವನಿಗೆ, “ನಾನು ಕೆಟ್ಟದ್ದನ್ನು ಮಾತನಾಡಿದ್ದರೆ ಕೆಟ್ಟದ್ದರ ವಿಷಯವಾಗಿ ಸಾಕ್ಷಿಕೊಡು; ಒಳ್ಳೆಯದನ್ನು ಮಾತನಾಡಿದ್ದರೆ ನೀನು ನನ್ನನ್ನು ಹೊಡೆಯುವುದೇಕೆ?” ಎಂದರು.

[24] ಆಗ ಅನ್ನನು ಯೇಸುವನ್ನು ಕಟ್ಟಿಸಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.

[25] ಇತ್ತ ಸೀಮೋನ ಪೇತ್ರನು ಚಳಿಕಾಯಿಸಿಕೊಳ್ಳುತ್ತಾ ನಿಂತಿರುವಾಗ, ಒಬ್ಬನು ಅವನಿಗೆ, “ನೀನು ಸಹ ಆತನ ಶಿಷ್ಯನಲ್ಲವೇ?” ಎಂದು ಕೇಳಿದರು. ಅದಕ್ಕೆ ಅವನು ಅದನ್ನು ನಿರಾಕರಿಸಿ, “ನಾನಲ್ಲ,” ಎಂದನು.

[26] ಮಹಾಯಾಜಕನ ಸೇವಕರಲ್ಲಿ ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು ಪೇತ್ರನಿಗೆ, “ನಾನು ನಿನ್ನನ್ನು ತೋಟದಲ್ಲಿ ಆತನ ಸಂಗಡ ಕಾಣಲಿಲ್ಲವೋ?” ಎಂದು ಕೇಳಿದ್ದಕ್ಕೆ,

[27] ಪೇತ್ರನು ತಿರುಗಿ ನಿರಾಕರಿಸಿದನು. ಆಗ ಕೂಡಲೇ ಹುಂಜ ಕೂಗತೊಡಗಿತು.

[28] ಆಮೇಲೆ ಅವರು ಯೇಸುವನ್ನು ಕಾಯಫನ ಬಳಿಯಿಂದ ರೋಮನ್ ರಾಜ್ಯಪಾಲನ ನಿವಾಸಕ್ಕೆ ಸಾಗಿಸಿಕೊಂಡು ಹೋದರು. ಆಗ ಮುಂಜಾನೆಯಾಗಿತ್ತು. ತಾವು ಅಶುದ್ಧವಾಗದಂತೆ ಪಸ್ಕದ ಊಟಮಾಡುವುದಕ್ಕೆ ಅಡ್ಡಿಯಾದೀತೆಂದು ಅವರು ರಾಜ್ಯಪಾಲನ ನಿವಾಸದ ಒಳಗೆ ಹೋಗಲಿಲ್ಲ.

[29] ಆಗ ಪಿಲಾತನೇ ಹೊರಗೆ ಅವರ ಬಳಿಗೆ ಬಂದು, “ನೀವು ಈತನ ಮೇಲೆ ಏನು ದೂರು ತಂದಿದ್ದೀರಿ?” ಎಂದು ಕೇಳಿದ್ದಕ್ಕೆ,

[30] ಯೆಹೂದಿ ನಾಯಕರು, “ಈತನು ದುಷ್ಕರ್ಮಿಯಲ್ಲದಿದ್ದರೆ ನಾವು ಈತನನ್ನು ನಿನಗೆ ಒಪ್ಪಿಸಿಕೊಡುತ್ತಿರಲಿಲ್ಲ,” ಎಂದು ಹೇಳಿದರು.

[31] ಆಗ ಪಿಲಾತನು ಅವರಿಗೆ, “ನೀವೇ ಆತನನ್ನು ತೆಗೆದುಕೊಂಡುಹೋಗಿ ನಿಮ್ಮ ನಿಯಮದ ಪ್ರಕಾರ ಆತನಿಗೆ ತೀರ್ಪು ಮಾಡಿರಿ,” ಎಂದನು. ಅದಕ್ಕೆ ಯೆಹೂದ್ಯರು ಅವನಿಗೆ, “ಮರಣದಂಡನೆ ವಿಧಿಸುವ ಅಧಿಕಾರ ನಮಗೆ ಇಲ್ಲ,” ಎಂದು ಹೇಳಿದರು.

[32] ಹೀಗೆ ಯೇಸು ತಾನು ಎಂಥಾ ಮರಣದಿಂದ ಸಾಯಲಿದ್ದೇನೆಂಬುದನ್ನು ಸೂಚಿಸಿ ಹೇಳಿದ ಮಾತು ನೆರವೇರಿತು.

[33] ಆದ್ದರಿಂದ ಪಿಲಾತನು ತಿರುಗಿ ತನ್ನ ನಿವಾಸದೊಳಗೆ ಪ್ರವೇಶಿಸಿ ಯೇಸುವನ್ನು ಕರೆದು ಅವರಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು.

[34] ಅದಕ್ಕೆ ಯೇಸು ಅವನಿಗೆ, “ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ ಇಲ್ಲವೆ ಬೇರೆಯವರು ನನ್ನನ್ನು ಕುರಿತು ನಿನಗೆ ಹೇಳಿದ್ದಾರೋ?” ಎಂದರು.

[35] ಪಿಲಾತನು, “ನಾನೇನು ಯೆಹೂದ್ಯನೋ? ನಿನ್ನ ಜನಾಂಗವೂ ಮುಖ್ಯಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ. ನೀನು ಏನು ಮಾಡಿದ್ದೀಯಾ?” ಎಂದು ಕೇಳಿದನು.

[36] ಯೇಸು, “ನನ್ನ ರಾಜ್ಯವು ಈ ಲೋಕದ್ದಲ್ಲ, ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನನ್ನನ್ನು ಯೆಹೂದ್ಯರಿಗೆ ಒಪ್ಪಿಸದಂತೆ ನನ್ನ ಸೇವಕರು ಹೋರಾಡುತ್ತಿದ್ದರು; ಆದರೆ ಈಗ ನನ್ನ ರಾಜ್ಯವು ಇಲ್ಲಿಯದಲ್ಲ,” ಎಂದು ಉತ್ತರಕೊಟ್ಟರು.

[37] ಪಿಲಾತನು ಯೇಸುವಿಗೆ, “ನೀನು ಅರಸನೋ?” ಎಂದು ಕೇಳಲು, ಯೇಸು, “ನಾನು ಅರಸನೆಂದು ನೀನೇ ಹೇಳುತ್ತೀ. ನಾನು ಸತ್ಯಕ್ಕೆ ಸಾಕ್ಷಿ ಕೊಡುವುದಕ್ಕಾಗಿ ಹುಟ್ಟಿ, ಇದಕ್ಕಾಗಿಯೇ ಲೋಕಕ್ಕೆ ಬಂದೆನು; ಸತ್ಯಕ್ಕೆ ಸೇರಿದ ಎಲ್ಲರೂ ನನ್ನ ಸ್ವರವನ್ನು ಕೇಳುತ್ತಾರೆ,” ಎಂದರು.

[38] ಪಿಲಾತನು ಯೇಸುವಿಗೆ, “ಸತ್ಯ ಎಂದರೇನು?” ಎಂದನು. ಅವನು ಇದನ್ನು ಕೇಳಿದ ಮೇಲೆ ತಿರುಗಿ ಯೆಹೂದ್ಯರ ಬಳಿಗೆ ಹೋಗಿ ಅವರಿಗೆ, “ನಾನು ಈತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ.

[39] ಆದರೆ ಪಸ್ಕಹಬ್ಬದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟುಕೊಡುವ ಪದ್ಧತಿಯಿದೆಯಷ್ಟೆ; ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟುಕೊಡುವುದು ನಿಮಗೆ ಇಷ್ಟವೋ?” ಎಂದು ಕೇಳಿದನು.

[40] ಅದಕ್ಕೆ ಅವರೆಲ್ಲರೂ ತಿರುಗಿ, “ಇವನು ಬೇಡ, ನಮಗೆ ಬರಬ್ಬನನ್ನು ಬಿಟ್ಟುಕೊಡು,” ಎಂದು ಕೂಗಿಕೊಂಡರು. ಆ ಬರಬ್ಬನು ದರೋಡೆಕೋರನಾಗಿದ್ದನು.

ಯೋಹಾನ — Chapters