Skip to content
Opens in a new window
Listen to this chapter • 11:32

[1] ಇವುಗಳಾದ ಮೇಲೆ ಯೇಸು ತಿಬೇರಿಯದ ಗಲಿಲಾಯ ಸರೋವರದ ಆಚೆಗೆ ಹೋದರು.

[2] ಯೇಸು ರೋಗಿಗಳಲ್ಲಿ ನಡೆಸಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದ ಜನರ ದೊಡ್ಡ ಗುಂಪು ಯೇಸುವನ್ನು ಹಿಂಬಾಲಿಸಿತು.

[3] ಯೇಸು ಬೆಟ್ಟವನ್ನೇರಿ ಅಲ್ಲಿ ತಮ್ಮ ಶಿಷ್ಯರೊಂದಿಗೆ ಕುಳಿತುಕೊಂಡರು.

[4] ಆಗ ಯೆಹೂದ್ಯರ ಪಸ್ಕಹಬ್ಬವು ಹತ್ತಿರವಾಗಿತ್ತು.

[5] ಯೇಸು ಕಣ್ಣೆತ್ತಿ ನೋಡಿ ಮತ್ತು ಜನರ ದೊಡ್ಡ ಗುಂಪು ಅವರ ಕಡೆಗೆ ಬರುವುದನ್ನು ಕಂಡು ಫಿಲಿಪ್ಪನಿಗೆ, “ಇವರು ಊಟ ಮಾಡಲು ನಾವು ರೊಟ್ಟಿಯನ್ನು ಎಲ್ಲಿಂದ ಕೊಂಡುಕೊಳ್ಳೋಣ?” ಎಂದರು.

[6] ಅವನನ್ನು ಪರೀಕ್ಷಿಸುವುದಕ್ಕಾಗಿ ಯೇಸು ಇದನ್ನು ಹೇಳಿದರು. ಏಕೆಂದರೆ ತಾನು ಮಾಡಲಿರುವುದು ಏನೆಂದು ಯೇಸುವಿಗೆ ತಿಳಿದಿತ್ತು.

[7] ಫಿಲಿಪ್ಪನು ಯೇಸುವಿಗೆ, “ಇವರಲ್ಲಿ ಪ್ರತಿಯೊಬ್ಬನು ಸ್ವಲ್ಪ ಸ್ವಲ್ಪ ತಿಂದರೂ ಆರು ತಿಂಗಳ ಕೂಲಿಯಷ್ಟು ರೊಟ್ಟಿಗಳೂ ಅವರಿಗೆ ಸಾಲುವುದಿಲ್ಲ,” ಎಂದನು.

[8] ಆಗ ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ ಪೇತ್ರನ ಸಹೋದರನಾದ ಅಂದ್ರೆಯನು

[9] ಯೇಸುವಿಗೆ, “ಇಲ್ಲಿ ಒಬ್ಬ ಹುಡುಗನ ಬಳಿ ಐದು ಜವೆಗೋಧಿಯ ರೊಟ್ಟಿಗಳೂ ಎರಡು ಮೀನುಗಳೂ ಇವೆ. ಆದರೆ ಅಷ್ಟೊಂದು ಜನರಿಗೆ ಇವು ಹೇಗೆ ಸಾಕಾಗುತ್ತವೆ?” ಎಂದನು.

[10] ಯೇಸು, “ಜನರನ್ನು ಊಟಕ್ಕೆ ಕುಳಿತುಕೊಳ್ಳಲು ಹೇಳಿರಿ,” ಎಂದರು. ಆ ಸ್ಥಳದಲ್ಲಿ ಬಹಳ ಹುಲ್ಲು ಇದ್ದುದರಿಂದ ಜನರೆಲ್ಲರೂ ಕುಳಿತುಕೊಂಡರು, ಗಂಡಸರೇ ಐದು ಸಾವಿರ ಮಂದಿ ಇದ್ದರು.

[11] ಆಮೇಲೆ ಯೇಸು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಕುಳಿತಿದ್ದವರಿಗೆ ಬೇಕಾದಷ್ಟು ಹಂಚಿದರು. ಅದೇ ರೀತಿಯಲ್ಲಿ ಮೀನುಗಳನ್ನು ಅವರಿಗೆ ಹಂಚಿದರು.

[12] ಅವರೆಲ್ಲರೂ ತಿಂದು ತೃಪ್ತಿಯಾದ ಮೇಲೆ ಯೇಸು ತಮ್ಮ ಶಿಷ್ಯರಿಗೆ, “ಏನೂ ನಷ್ಟವಾಗದಂತೆ ಉಳಿದ ತುಂಡುಗಳನ್ನು ಕೂಡಿಸಿರಿ,” ಎಂದರು.

[13] ಅದರಂತೆ ಅವರು ಐದು ಜವೆಗೋಧಿಯ ರೊಟ್ಟಿಗಳಲ್ಲಿ ತಿಂದವರಿಂದ ಉಳಿದ ತುಂಡುಗಳನ್ನು ಕೂಡಿಸಿ, ಹನ್ನೆರಡು ಬುಟ್ಟಿಗಳಲ್ಲಿ ತುಂಬಿದರು.

[14] ಆ ಜನರು ಯೇಸು ಮಾಡಿದ ಸೂಚಕಕಾರ್ಯವನ್ನು ಕಂಡು, “ಸತ್ಯವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿಯು ಇವರೇ,” ಎಂದರು.

[15] ಅವರು ಬಂದು ತನ್ನನ್ನು ಹಿಡಿದುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂದಿದ್ದಾರೆಂದು ಯೇಸು ತಿಳಿದು ತಾವೊಬ್ಬರೇ ಪುನಃ ಬೆಟ್ಟದ ಕಡೆಗೆ ಹೋದರು.

[16] ಸಂಜೆಯಾದಾಗ ಯೇಸುವಿನ ಶಿಷ್ಯರು ಸರೋವರಕ್ಕೆ ಹೋಗಿ,

[17] ದೋಣಿಯನ್ನು ಹತ್ತಿ ಸರೋವರ ಮಾರ್ಗವಾಗಿ ಕಪೆರ್ನೌಮಿಗೆ ಸಾಗಿದರು. ಆಗಲೇ ಕತ್ತಲಾಗಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ.

[18] ಆಗ ರಭಸವಾದ ಗಾಳಿಯು ಬೀಸಿದ್ದರಿಂದ ಸರೋವರವು ಅಲ್ಲೋಲಕಲ್ಲೋಲವಾಯಿತು.

[19] ಅವರು ದೋಣಿಯನ್ನು ನಡೆಸುತ್ತಾ ಸುಮಾರು ಐದಾರು ಕಿಲೋಮೀಟರಿನಷ್ಟು ದೂರ ಹೋದ ಮೇಲೆ ಯೇಸು ಸರೋವರದ ಮೇಲೆ ನಡೆದು ದೋಣಿಯ ಕಡೆಗೆ ಸಮೀಪಿಸುತ್ತಿರುವುದನ್ನು ಅವರು ಕಂಡು, ಭಯಪಟ್ಟರು.

[20] ಆದರೆ ಯೇಸು ಅವರಿಗೆ, “ನಾನೇ, ಭಯಪಡಬೇಡಿರಿ,” ಎಂದರು.

[21] ಆಗ ಶಿಷ್ಯರು ಯೇಸುವನ್ನು ದೋಣಿಯಲ್ಲಿ ಸೇರಿಸಿಕೊಳ್ಳಬೇಕೆಂದಿದ್ದರು. ಅಷ್ಟರಲ್ಲಿ ದೋಣಿಯು ಅವರು ಹೋಗಬೇಕಾಗಿದ್ದ ದಡಕ್ಕೆ ಸೇರಿತು.

[22] ಮರುದಿನ ಅಲ್ಲಿ ಒಂದೇ ದೋಣಿಯ ಹೊರತು ಬೇರೆ ಇರಲಿಲ್ಲವೆಂದೂ ಯೇಸುವಿನ ಶಿಷ್ಯರು ಮಾತ್ರ ಆ ದೋಣಿಯಲ್ಲಿ ಹೋದರೆಂದೂ ಯೇಸು ತಮ್ಮ ಶಿಷ್ಯರ ಸಂಗಡ ದೋಣಿಯಲ್ಲಿ ಹೋಗಲಿಲ್ಲವೆಂದೂ ಸರೋವರದ ಆಚೆಯಲ್ಲಿ ನಿಂತಿದ್ದ ಜನರು ಅರಿತುಕೊಂಡರು.

[23] ಬೇರೆ ದೋಣಿಗಳು ತಿಬೇರಿಯದಿಂದ ಹೊರಟು, ಕರ್ತ ಯೇಸು ಕೃತಜ್ಞತೆ ಸಲ್ಲಿಸಿ ಜನರಿಗೆ ರೊಟ್ಟಿಯನ್ನು ಊಟಮಾಡಿಸಿದ ಸ್ಥಳದ ಸಮೀಪಕ್ಕೆ ಬಂದವು.

[24] ಆಗ ಯೇಸು ಮತ್ತು ಅವರ ಶಿಷ್ಯರು ಅಲ್ಲಿ ಇಲ್ಲದಿರುವುದನ್ನು ಜನರು ನೋಡಿ, ದೋಣಿಗಳಲ್ಲಿ ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಬಂದರು.

[25] ಜನರು ಯೇಸುವನ್ನು ಸರೋವರದ ಆಚೆ ಕಡೆಯಲ್ಲಿ ಕಂಡು ಅವರಿಗೆ, “ಗುರುವೇ, ನೀವು ಇಲ್ಲಿಗೆ ಬಂದದ್ದು ಯಾವಾಗ?” ಎಂದರು.

[26] ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನನ್ನು ಹುಡುಕುವುದು ಸೂಚಕಕಾರ್ಯಗಳನ್ನು ನೋಡಿದ್ದರಿಂದಲ್ಲ, ರೊಟ್ಟಿಗಳನ್ನು ತಿಂದು ತೃಪ್ತಿ ಹೊಂದಿದ್ದರಿಂದಲೇ.

[27] ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿರಿ, ನೀವು ನಿತ್ಯಜೀವಕ್ಕೆ ಉಳಿಯುವ ಆಹಾರಕ್ಕಾಗಿಯೇ ದುಡಿಯಿರಿ. ಅದನ್ನು ಮನುಷ್ಯಪುತ್ರನಾದ ನಾನು ನಿಮಗೆ ಕೊಡುವೆನು. ಇದಕ್ಕಾಗಿ ತಂದೆ ದೇವರು ಮೆಚ್ಚುಗೆಯ ಮುದ್ರೆಯನ್ನು ನನ್ನ ಮೇಲೆ ಹಾಕಿದ್ದಾರೆ,” ಎಂದರು.

[28] ಆಗ ಅವರು ಯೇಸುವಿಗೆ, “ನಾವು ದೇವರ ಕಾರ್ಯವನ್ನು ಮಾಡಬೇಕಾದರೆ ಏನು ಮಾಡಬೇಕು?” ಎಂದು ಕೇಳಿದ್ದಕ್ಕೆ,

[29] ಯೇಸು ಅವರಿಗೆ, “ದೇವರು ಕಳುಹಿಸಿದ ನನ್ನನ್ನು ನೀವು ನಂಬುವುದೇ ದೇವರು ಮೆಚ್ಚುವ ಕಾರ್ಯ,” ಎಂದರು.

[30] ಅದಕ್ಕೆ ಅವರು ಯೇಸುವಿಗೆ, “ಹಾಗಾದರೆ ನಾವು ನೋಡಿ ನಿಮ್ಮನ್ನು ನಂಬುವಂತೆ ಯಾವ ಸೂಚಕಕಾರ್ಯವನ್ನು ಮಾಡುತ್ತೀರಿ?

[31] ‘ಅವರಿಗೆ ಪರಲೋಕದಿಂದ ರೊಟ್ಟಿ ಕೊಡಲಾಯಿತು’ ಎಂದು ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ ನಮ್ಮ ಪಿತೃಗಳು ಅರಣ್ಯದಲ್ಲಿ ಮನ್ನಾ ಎಂಬ ಆಹಾರವನ್ನು ತಿಂದರು,” ಎಂದು ಕೇಳಿದರು.

[32] ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನಿಮಗೆ ಪರಲೋಕದಿಂದ ರೊಟ್ಟಿಯನ್ನು ಮೋಶೆ ಕೊಡಲಿಲ್ಲ. ನನ್ನ ತಂದೆಯೇ ನಿಮಗೆ ನಿಜವಾದ ರೊಟ್ಟಿಯನ್ನು ಪರಲೋಕದಿಂದಲೇ ಕೊಡುತ್ತಾರೆ.

[33] ಪರಲೋಕದಿಂದ ಇಳಿದುಬಂದು ಲೋಕಕ್ಕೆ ಜೀವವನ್ನು ಕೊಡುವ ದೇವರ ರೊಟ್ಟಿಯು ನಾನೇ,” ಎಂದರು.

[34] ಅದಕ್ಕವರು ಯೇಸುವಿಗೆ, “ಸ್ವಾಮೀ, ಈ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡು,” ಎಂದರು.

[35] ಯೇಸು ಅವರಿಗೆ, “ನಾನೇ ಜೀವದ ರೊಟ್ಟಿ. ನನ್ನ ಬಳಿಗೆ ಬರುವವರಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವರಿಗೆ ಎಂದಿಗೂ ದಾಹವಾಗುವುದಿಲ್ಲ.

[36] ಆದರೆ, ‘ನೀವು ನನ್ನನ್ನು ಕಂಡಿದ್ದರೂ ನಂಬಲಿಲ್ಲ,’ ಎಂದು ನಾನು ನಿಮಗೆ ಹೇಳಿದೆನು.

[37] ತಂದೆಯು ನನಗೆಂದು ಕೊಟ್ಟಿರುವ ಪ್ರತಿಯೊಬ್ಬರೂ ನನ್ನ ಬಳಿಗೆ ಬರುವರು. ನನ್ನ ಬಳಿಗೆ ಬರುವವರನ್ನು ನಾನು ಎಂದಿಗೂ ತಳ್ಳಿಬಿಡುವುದೇ ಇಲ್ಲ.

[38] ನಾನು ನನ್ನ ಚಿತ್ತವನ್ನು ಮಾಡುವುದಕ್ಕಲ್ಲ. ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನೇ ಮಾಡುವುದಕ್ಕೆ ಪರಲೋಕದಿಂದ ಬಂದೆನು.

[39] ನನ್ನನ್ನು ಕಳುಹಿಸಿಕೊಟ್ಟ ತಂದೆಯ ಚಿತ್ತವೇನೆಂದರೆ: ಅವರು ನನಗೆ ಕೊಟ್ಟವರಲ್ಲಿ ನಾನು ಯಾರನ್ನೂ ಕಳೆದುಕೊಳ್ಳದೆ ಕಡೆಯ ದಿನದಲ್ಲಿ ಅವರನ್ನು ಎಬ್ಬಿಸುವುದೇ.

[40] ನನ್ನ ತಂದೆಯ ಚಿತ್ತವೇನೆಂದರೆ ನನ್ನನ್ನು ನೋಡಿ ನನ್ನಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಪಡೆಯುವುದೇ; ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು,” ಎಂದು ಹೇಳಿದರು.

[41] “ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ,” ಎಂದು ಯೇಸು ಹೇಳಿದ್ದಕ್ಕೆ ಯೆಹೂದ್ಯರು ಯೇಸುವಿನ ವಿಷಯವಾಗಿ ಗೊಣಗುಟ್ಟಿ,

[42] “ಈತನು ಯೋಸೇಫನ ಪುತ್ರ ಯೇಸು ಅಲ್ಲವೇ? ಈತನ ತಂದೆತಾಯಿ ನಮಗೆ ಗೊತ್ತಿಲ್ಲವೇ? ಹಾಗಾದರೆ, ‘ನಾನು ಪರಲೋಕದಿಂದ ಬಂದೆನು,’ ಎಂದು ಈತನು ಹೇಳುವುದು ಹೇಗೆ?” ಎಂದರು.

[43] ಯೇಸು ಅವರಿಗೆ, “ನಿಮ್ಮನಿಮ್ಮೊಳಗೆ ಗೊಣಗುಟ್ಟಬೇಡಿರಿ.

[44] ನನ್ನನ್ನು ಕಳುಹಿಸಿದ ತಂದೆ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬರಲಾರರು. ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು.

[45] ‘ಅವರೆಲ್ಲರೂ ದೇವರಿಂದಲೇ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬರೂ ನನ್ನ ಬಳಿಗೆ ಬರುತ್ತಾರೆ.

[46] ದೇವರಿಂದ ಬಂದಿರುವ ನಾನೇ ತಂದೆಯನ್ನು ನೋಡಿದ್ದೇನೆ, ಬೇರೆ ಯಾರೂ ತಂದೆಯನ್ನು ನೋಡಲಿಲ್ಲ.

[47] ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವರು ನಿತ್ಯಜೀವವನ್ನು ಹೊಂದಿದ್ದಾರೆ.

[48] ನಾನೇ ಜೀವದ ರೊಟ್ಟಿ.

[49] ನಿಮ್ಮ ಪಿತೃಗಳು ಅರಣ್ಯದಲ್ಲಿ ‘ಮನ್ನಾ’ ತಿಂದರೂ ಸತ್ತುಹೋದರು.

[50] ಯಾರು ತಿಂದರೂ ಸಾಯದೇ ಇರುವಂತೆ ಪರಲೋಕದಿಂದ ಇಳಿದು ಬಂದ ಜೀವದ ರೊಟ್ಟಿ ಇದೇ.

[51] ನಾನೇ ಪರಲೋಕದಿಂದ ಬಂದ ಜೀವದ ರೊಟ್ಟಿ. ಈ ರೊಟ್ಟಿಯನ್ನು ಯಾರು ತಿನ್ನುವರೋ ಅವರು ಸದಾಕಾಲವೂ ಬದುಕುವರು. ಲೋಕದ ಜೀವಕ್ಕಾಗಿ ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ,” ಎಂದರು.

[52] ಆದ್ದರಿಂದ ಯೆಹೂದ್ಯರು ಒಬ್ಬರಿಗೊಬ್ಬರು ಚರ್ಚೆಮಾಡುತ್ತಾ, “ಈ ಮನುಷ್ಯನು ತನ್ನ ಮಾಂಸವನ್ನು ತಿನ್ನುವುದಕ್ಕೆ ನಮಗೆ ಹೇಗೆ ಕೊಡುತ್ತಾನೆ?” ಎಂದರು.

[53] ಯೇಸು ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಪುತ್ರನಾದ ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯದೆ ಹೋದರೆ, ನಿಮ್ಮಲ್ಲಿ ಜೀವವಿರುವುದಿಲ್ಲ.

[54] ಯಾರು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾರೋ ಅವರು ನಿತ್ಯಜೀವವನ್ನು ಹೊಂದಿದ್ದಾರೆ, ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು.

[55] ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ.

[56] ಯಾರು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾರೋ ಅವರು ನನ್ನಲ್ಲಿ ನೆಲೆಸಿರುತ್ತಾರೆ. ನಾನು ಅವರಲ್ಲಿ ನೆಲೆಸಿರುತ್ತೇನೆ.

[57] ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿದ್ದಾರೆ. ನಾನು ತಂದೆಯ ನಿಮಿತ್ತವಾಗಿ ಜೀವಿಸುವಂತೆಯೇ ನನ್ನನ್ನು ತಿನ್ನುವವರು ನನ್ನ ನಿಮಿತ್ತವಾಗಿಯೇ ಜೀವಿಸುವರು.

[58] ಪರಲೋಕದಿಂದ ಬಂದ ರೊಟ್ಟಿಯು ಇದೇ. ನಿಮ್ಮ ಪಿತೃಗಳು ‘ಮನ್ನಾ’ ತಿಂದರೂ ಸತ್ತರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವರು ಸದಾಕಾಲಕ್ಕೂ ಜೀವಿಸುವರು,” ಎಂದರು.

[59] ಕಪೆರ್ನೌಮಿನ ಸಭಾಮಂದಿರದಲ್ಲಿ ಬೋಧಿಸುತ್ತಿರುವಾಗ ಯೇಸು ಈ ಮಾತುಗಳನ್ನು ಹೇಳಿದರು.

[60] ಯೇಸುವಿನ ಶಿಷ್ಯರಲ್ಲಿ ಅನೇಕರು ಈ ಮಾತುಗಳನ್ನು ಕೇಳಿ, “ಇದು ಕಠಿಣವಾದ ಮಾತು. ಇದನ್ನು ಯಾರು ಪಾಲಿಸುವರು?” ಎಂದರು.

[61] ತಮ್ಮ ಶಿಷ್ಯರು ಇದನ್ನು ಕುರಿತು ಗೊಣಗುಟ್ಟುತ್ತಾರೆಂದು ಯೇಸು ತಮ್ಮಲ್ಲಿ ತಿಳಿದುಕೊಂಡು ಅವರಿಗೆ, “ಇದು ನಿಮಗೆ ಬೇಸರವಾಯಿತೋ?

[62] ಹಾಗಾದರೆ ಮನುಷ್ಯಪುತ್ರನಾದ ನಾನು ಮೊದಲಿದ್ದ ಕಡೆಗೆ ಏರಿ ಹೋಗುವುದನ್ನು ನೀವು ನೋಡುವುದಾದರೆ ಏನನ್ನುವಿರಿ?

[63] ಬದುಕಿಸುವುದು ದೇವರ ಆತ್ಮವೇ, ನರಮಾಂಸವಾದರೋ ಯಾವುದಕ್ಕೂ ಪ್ರಯೋಜನವಾಗುವುದಿಲ್ಲ. ನಾನು ನಿಮಗೆ ನುಡಿದ ಮಾತುಗಳೇ ದೇವರಾತ್ಮವೂ ಜೀವವೂ ಆಗಿರುತ್ತವೆ.

[64] ಆದರೆ ನಂಬದ ಕೆಲವರು ನಿಮ್ಮಲ್ಲಿ ಇದ್ದಾರೆ,” ಎಂದರು. ನಂಬದವರು ಯಾರೆಂದೂ ತನ್ನನ್ನು ಹಿಡಿದುಕೊಡುವವನು ಯಾರೆಂದೂ ಯೇಸು ಮೊದಲಿನಿಂದಲೂ ತಿಳಿದಿದ್ದರು.

[65] ಯೇಸು ಮುಂದುವರಿಸಿ ಹೇಳಿದ್ದೇನೆಂದರೆ, “ಯಾರನ್ನಾದರೂ ನನ್ನ ತಂದೆಯು ನನಗೆ ಕೊಟ್ಟರಷ್ಟೇ ಅವರು ನನ್ನ ಬಳಿಗೆ ಬರಲು ಸಾಧ್ಯ, ಎಂದು ನಾನು ನಿಮಗೆ ಹೇಳಿದ್ದು ಇದಕ್ಕಾಗಿಯೇ.”

[66] ಅಂದಿನಿಂದ ಯೇಸುವಿನ ಶಿಷ್ಯರಲ್ಲಿ ಅನೇಕರು ಹಿಂದಕ್ಕೆ ಹೊರಟು ಹೋದರು ಮತ್ತು ಯೇಸುವಿನ ಸಂಗಡ ಸಂಚಾರ ಮಾಡಲಿಲ್ಲ.

[67] ಆದಕಾರಣ ಯೇಸು ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಸಹ ಹೋಗಬೇಕೆಂದು ಇದ್ದೀರಾ?” ಎಂದು ಕೇಳಲು,

[68] ಸೀಮೋನ್ ಪೇತ್ರನು ಯೇಸುವಿಗೆ, “ಸ್ವಾಮೀ, ನಾವು ಯಾರ ಬಳಿಗೆ ಹೋಗೋಣ? ನಿಮ್ಮಲ್ಲಿಯೇ ನಿತ್ಯಜೀವದ ವಾಕ್ಯಗಳಿವೆ.

[69] ನೀವು ದೇವರ ಪರಿಶುದ್ಧರು ಎಂದು ನಾವು ನಂಬಿ ತಿಳಿದಿದ್ದೇವೆ,” ಎಂದನು.

[70] ಅದಕ್ಕೆ ಯೇಸು ಅವರಿಗೆ, “ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿಕೊಂಡೆನಲ್ಲವೇ? ಆದರೆ ನಿಮ್ಮಲ್ಲಿಯೂ ಒಬ್ಬನು ಪಿಶಾಚನಾಗಿದ್ದಾನೆ,” ಎಂದರು.

[71] ಸೀಮೋನನ ಮಗ ಇಸ್ಕರಿಯೋತ ಯೂದನ ವಿಷಯವಾಗಿ ಯೇಸು ಹೀಗೆ ಹೇಳಿದರು. ಏಕೆಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದ ಇವನೇ ಯೇಸುವನ್ನು ಹಿಡಿದು ಕೊಡುವುದಕ್ಕಿದ್ದನು.

ಯೋಹಾನ — Chapters