[1] “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಬಾಗಿಲಿನಿಂದ ಕುರಿಹಟ್ಟಿಯೊಳಗೆ ಬಾರದೆ ಬೇರೆ ಎಲ್ಲಿಂದಾದರೂ ಒಳಗೆ ಬರುವವನು ಕಳ್ಳನೂ ದರೋಡೆಕೋರನೂ ಆಗಿದ್ದಾನೆ.
[2] ಆದರೆ ಬಾಗಿಲಿನ ಮೂಲಕ ಪ್ರವೇಶಿಸುವವನೇ ಆ ಕುರಿಗಳ ಕುರುಬನು.
[3] ಬಾಗಿಲು ಕಾಯುವವನು ಅವನಿಗೆ ಬಾಗಿಲನ್ನು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಅವುಗಳನ್ನು ಹೊರಗೆ ಬಿಡುತ್ತಾನೆ.
[4] ಅವನು ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ.
[5] ಆದರೆ ಅವು ಅಪರಿಚಿತನನ್ನು ಹಿಂಬಾಲಿಸದೇ ಅವನ ಬಳಿಯಿಂದ ಓಡಿಹೋಗುವವು. ಏಕೆಂದರೆ ಅವು ಅಪರಿಚಿತನ ಸ್ವರವನ್ನು ಗುರುತಿಸುವುದಿಲ್ಲ,” ಎಂದರು.
[6] ಯೇಸು ಈ ಸಾಮ್ಯವನ್ನು ಅವರಿಗೆ ಹೇಳಿದರು. ಆದರೂ ಯೇಸು ಅವರ ಸಂಗಡ ಮಾತನಾಡಿದ ವಿಷಯಗಳು ಏನಾಗಿದ್ದವು ಎಂದು ಫರಿಸಾಯರು ಗ್ರಹಿಸಲಿಲ್ಲ.
[7] ಯೇಸು ತಿರುಗಿ ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ.
[8] ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ ದರೋಡೆಕೋರರೂ ಆಗಿದ್ದಾರೆ. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
[9] ನಾನೇ ಬಾಗಿಲು; ನನ್ನ ಮೂಲಕವಾಗಿ ಯಾರು ಪ್ರವೇಶಿಸುವರೋ ಅವರೇ ಸುರಕ್ಷಿತವಾಗಿರುವರು. ಇದಲ್ಲದೆ ಅವರು ಒಳಗೆ ಹೋಗುವರು, ಹೊರಗೆ ಬರುವರು ಮತ್ತು ಮೇವನ್ನು ಕಂಡುಕೊಳ್ಳುವರು.
[10] ಕಳ್ಳನು ಕದಿಯಲು, ಕೊಯ್ಯಲು ಮತ್ತು ನಾಶಮಾಡಲು ಮಾತ್ರ ಬರುತ್ತಾನೆ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು.
[11] “ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.
[12] ಕೂಲಿಯಾಳು ಕುರಿಗಳ ಕುರುಬನಲ್ಲ; ಅವನು ತೋಳ ಬರುವುದನ್ನು ಕಂಡು ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ಆಗ ತೋಳವು ಕುರಿಗಳನ್ನು ಹಿಡಿದುಕೊಂಡು ಹಿಂಡನ್ನು ಚದರಿಸುತ್ತದೆ.
[13] ಅವನು ಕೇವಲ ಕೂಲಿಯಾಳು ಆಗಿರುವುದರಿಂದ ಅವನಿಗೆ ಕುರಿಗಳ ಚಿಂತೆಯಿಲ್ಲ.
[14] “ನಾನೇ ಒಳ್ಳೆಯ ಕುರುಬನು. ನನ್ನ ಕುರಿಗಳನ್ನು ನಾನು ತಿಳಿದಿದ್ದೇನೆ. ನನ್ನ ಕುರಿಗಳು ನನ್ನನ್ನು ತಿಳಿದಿವೆ.
[15] ತಂದೆಯು ನನ್ನನ್ನು ತಿಳಿದಿರುವಂತೆ ನಾನು ತಂದೆಯನ್ನು ತಿಳಿದಿರುತ್ತೇನೆ; ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ.
[16] ಈ ಹಿಂಡಿಗೆ ಸೇರದ ಬೇರೆ ಕುರಿಗಳು ನನಗಿವೆ. ಅವುಗಳನ್ನೂ ಸಹ ನಾನು ತರಬೇಕಾಗಿದೆ. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಹಿಂಡೂ ಒಬ್ಬನೇ ಕುರುಬನೂ ಆಗಿರುವುದು.
[17] ಮರಳಿ ಪಡೆಯುವಂತೆ ನನ್ನ ಪ್ರಾಣವನ್ನು ನಾನು ಕೊಡುವುದರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾರೆ.
[18] ಯಾರೂ ನನ್ನ ಪ್ರಾಣವನ್ನು ನನ್ನಿಂದ ತೆಗೆಯುವುದಿಲ್ಲ. ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುವೆನು. ನಾನು ಅದನ್ನು ಕೊಡುವುದಕ್ಕೆ ನನಗೆ ಅಧಿಕಾರವಿದೆ. ಅದನ್ನು ಪುನಃ ತೆಗೆದುಕೊಳ್ಳುವುದಕ್ಕೂ ನನಗೆ ಅಧಿಕಾರವಿದೆ. ಈ ಆಜ್ಞೆಯನ್ನು ನಾನು ನನ್ನ ತಂದೆಯಿಂದ ಪಡೆದಿದ್ದೇನೆ,” ಎಂದರು.
[19] ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ಮತ್ತೆ ಭೇದ ಉಂಟಾಯಿತು.
[20] ಅವರಲ್ಲಿ ಅನೇಕರು, “ಆತನಿಗೆ ದೆವ್ವ ಹಿಡಿದಿದೆ. ಆತನು ಹುಚ್ಚನಾಗಿದ್ದಾನೆ, ನೀವು ಏಕೆ ಆತನಿಗೆ ಕಿವಿಗೊಡುತ್ತೀರಿ?” ಎಂದರು.
[21] ಇನ್ನು ಕೆಲವರು, “ಇವು ದೆವ್ವ ಹಿಡಿದವನ ಮಾತುಗಳಲ್ಲ. ದೆವ್ವವು ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವೇ?” ಎಂದರು.
[22] ಆಗ ಯೆರೂಸಲೇಮಿನಲ್ಲಿ ದೇವಾಲಯದ ಪ್ರತಿಷ್ಠೆಯ ಹಬ್ಬವಿತ್ತು. ಅದು ಚಳಿಗಾಲವಾಗಿತ್ತು.
[23] ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಿದ್ದರು.
[24] ಆಗ ಯೆಹೂದ್ಯರು ಯೇಸುವನ್ನು ಸುತ್ತುವರೆದು, “ಇನ್ನೆಷ್ಟು ಕಾಲ ನಮ್ಮನ್ನು ಸಂಶಯದಲ್ಲಿರಿಸುವೆ? ನೀನು ಕ್ರಿಸ್ತನಾಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು,” ಎಂದರು.
[25] ಯೇಸು ಅವರಿಗೆ, “ನಾನು ನಿಮಗೆ ಹೇಳಿದೆನು. ಆದರೆ ನೀವು ನಂಬುತ್ತಾ ಇಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.
[26] ನೀವು ನನ್ನ ಕುರಿಗಳಲ್ಲ, ಆದ್ದರಿಂದಲೇ ನೀವು ನಂಬುವುದಿಲ್ಲ.
[27] ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.
[28] ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದಿಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು.
[29] ಅವುಗಳನ್ನು ನನಗೆ ಕೊಟ್ಟ ನನ್ನ ತಂದೆ ಎಲ್ಲರಿಗಿಂತಲೂ ಮಹೋನ್ನತರು. ನನ್ನ ತಂದೆಯ ಕೈಯಿಂದ ಅವುಗಳನ್ನು ಯಾರೂ ಕಸಿದುಕೊಳ್ಳಲಾರರು.
[30] ನಾನು ಮತ್ತು ನನ್ನ ತಂದೆ ಒಂದೇ ಆಗಿದ್ದೇವೆ,” ಎಂದು ಉತ್ತರಕೊಟ್ಟರು.
[31] ಆಗ ಯೆಹೂದಿ ನಾಯಕರು ಪುನಃ ಯೇಸುವಿನ ಮೇಲೆ ಕಲ್ಲೆಸೆಯಲು ಕಲ್ಲುಗಳನ್ನು ಎತ್ತಿಕೊಂಡರು.
[32] ಅದಕ್ಕೆ ಯೇಸು ಅವರಿಗೆ, “ನನ್ನ ತಂದೆಯಿಂದ ಅನೇಕ ಒಳ್ಳೆಯ ಕಾರ್ಯಗಳನ್ನು ನಾನು ನಿಮಗೆ ತೋರಿಸಿದ್ದೇನೆ. ಅವುಗಳಲ್ಲಿ ಯಾವ ಕಾರ್ಯಕ್ಕಾಗಿ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದು ಕೇಳಿದರು.
[33] ಅದಕ್ಕೆ ಯೆಹೂದ್ಯರು ಯೇಸುವಿಗೆ, “ಒಳ್ಳೆಯ ಕಾರ್ಯಗಳಿಗಾಗಿಯಲ್ಲ. ನೀನು ಮನುಷ್ಯನಾಗಿದ್ದು ನಿನ್ನನ್ನೇ ದೇವರನ್ನಾಗಿ ಮಾಡಿಕೊಂಡದ್ದಕ್ಕೂ ದೇವದೂಷಣೆ ಮಾಡುತ್ತಿರುವದಕ್ಕೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ,” ಎಂದು ಉತ್ತರಕೊಟ್ಟರು.
[34] ಅದಕ್ಕೆ ಯೇಸು, “ ‘ನೀವು ದೇವರುಗಳು,’ ಎಂದು ದೇವರೇ ಹೇಳಿರುವುದಾಗಿ ನಿಮ್ಮ ನಿಯಮದಲ್ಲಿ ಬರೆದಿಲ್ಲವೋ?
[35] ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಆತನು ಕರೆದಿರುವುದಾದರೆ, ಪವಿತ್ರ ವೇದವು ಸುಳ್ಳಾಗಲಾರದು.
[36] ಹೀಗಿರುವಾಗ ತಂದೆಯು ಪ್ರತಿಷ್ಠಿಸಿ ನನ್ನನ್ನು ಲೋಕಕ್ಕೆ ಕಳುಹಿಸಿಕೊಟ್ಟಿರುವ ನಾನು, ‘ದೇವರ ಪುತ್ರನಾಗಿದ್ದೇನೆ,’ ಎಂದು ಹೇಳಿದ್ದಕ್ಕೆ, ‘ನೀನು ದೇವದೂಷಣೆ ಮಾಡುತ್ತೀ,’ ಎಂದು ನೀವು ನನಗೆ ಹೇಳುತ್ತೀರಲ್ಲಾ?
[37] ನನ್ನ ತಂದೆಯ ಕಾರ್ಯಗಳನ್ನು ನಾನು ಮಾಡದಿದ್ದರೆ ನನ್ನನ್ನು ನಂಬಬೇಡಿರಿ.
[38] ನಾನು ಮಾಡಿದ್ದರಿಂದ ನೀವು ನನ್ನನ್ನು ನಂಬದಿದ್ದರೂ ಈ ಕಾರ್ಯಗಳನ್ನಾದರೂ ನಂಬಿರಿ. ಆಗ ತಂದೆಯು ನನ್ನಲ್ಲಿಯೂ ನಾನು ತಂದೆಯಲ್ಲಿಯೂ ಇರುವುದು ನಿಮಗೆ ಗೊತ್ತಾಗುವುದು ಹಾಗೂ ಮನದಟ್ಟಾಗುವುದು,” ಎಂದರು.
[39] ತಿರುಗಿ ಅವರು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡು ಹೋದರು.
[40] ಆಮೇಲೆ ಯೇಸು ಯೊರ್ದನ್ ನದಿಯನ್ನು ದಾಟಿ ಯೋಹಾನನು ಮೊದಲು ದೀಕ್ಷಾಸ್ನಾನ ಮಾಡಿಸುತ್ತಿದ್ದ ಸ್ಥಳಕ್ಕೆ ಬಂದು, ಅಲ್ಲಿಯೇ ವಾಸಮಾಡಿದರು.
[41] ಆಗ ಅನೇಕರು ಯೇಸುವಿನ ಬಳಿಗೆ ಬಂದು, “ಯೋಹಾನನು ಯಾವುದೇ ಸೂಚಕಕಾರ್ಯವನ್ನು ಮಾಡಲಿಲ್ಲ. ಆದರೆ ಇವರ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲವೂ ಸತ್ಯವಾಗಿದೆ,” ಎಂದರು.
[42] ಅಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು.