[1] “ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ನೀವು ದೇವರನ್ನು ನಂಬಿರಿ; ನನ್ನನ್ನೂ ನಂಬಿರಿ.
[2] ನನ್ನ ತಂದೆಯ ಮನೆಯಲ್ಲಿ ಅನೇಕ ವಾಸಸ್ಥಾನಗಳಿವೆ. ಇಲ್ಲದಿದ್ದರೆ ನಾನು ನಿಮಗೆ ಹೇಳುತ್ತಿದ್ದೆನು. ನಾನು ನಿಮಗಾಗಿ ಸ್ಥಳವನ್ನು ಸಿದ್ಧಮಾಡುವುದಕ್ಕೆ ಹೋಗುತ್ತೇನಲ್ಲಾ.
[3] ನಾನು ಹೋಗಿ ನಿಮಗಾಗಿ ಸ್ಥಳವನ್ನು ಸಿದ್ಧಮಾಡಿದ ಮೇಲೆ ಪುನಃ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು. ಆಗ ನಾನಿರುವಲ್ಲಿ ನೀವು ಸಹ ಇರುವಿರಿ.
[4] ನಾನು ಹೋಗುವ ಸ್ಥಳದ ಮಾರ್ಗವು ನಿಮಗೆ ತಿಳಿದಿದೆ,” ಎಂದರು.
[5] ಆಗ ತೋಮನು ಯೇಸುವಿಗೆ, “ಸ್ವಾಮೀ, ನೀವು ಎಲ್ಲಿಗೆ ಹೋಗುತ್ತೀರೋ ನಮಗೆ ತಿಳಿಯದು. ಆದ್ದರಿಂದ ನಮಗೆ ಮಾರ್ಗವು ಹೇಗೆ ತಿಳಿದೀತು?” ಎಂದನು.
[6] ಯೇಸು ಅವನಿಗೆ, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರಲಾರರು.
[7] ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನು ಸಹ ತಿಳಿಯುತ್ತಿದ್ದೀರಿ. ಈಗಿನಿಂದ ನೀವು ತಂದೆಯನ್ನು ತಿಳಿದಿದ್ದೀರಿ ಮತ್ತು ಅವರನ್ನು ಕಂಡಿದ್ದೀರಿ,” ಎಂದು ಹೇಳಿದರು.
[8] ಅದಕ್ಕೆ ಫಿಲಿಪ್ಪನು, “ಸ್ವಾಮೀ, ತಂದೆಯನ್ನು ನಮಗೆ ತೋರಿಸಿರಿ, ನಮಗೆ ಅಷ್ಟೇ ಸಾಕು,” ಎಂದನು.
[9] ಯೇಸು ಅವನಿಗೆ, “ಫಿಲಿಪ್ಪನೇ, ನಾನು ಇಷ್ಟುಕಾಲ ನಿಮ್ಮೊಂದಿಗೆ ಇದ್ದರೂ ನೀನು ನನ್ನನ್ನು ತಿಳಿಯಲಿಲ್ಲ. ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ. ಹಾಗಾದರೆ, ‘ತಂದೆಯನ್ನು ನಮಗೆ ತೋರಿಸಿರಿ’ ಎಂದು ನೀನು ಕೇಳುವುದು ಹೇಗೆ?
[10] ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾರೆ ಎಂದು ನೀನು ನಂಬುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಮಾತನಾಡುವುದಿಲ್ಲ; ನನ್ನಲ್ಲಿರುವ ತಂದೆಯೇ ತಮ್ಮ ಕ್ರಿಯೆಗಳನ್ನು ಮಾಡುತ್ತಾರೆ.
[11] ನಾನು ತಂದೆಯಲ್ಲಿಯೂ ತಂದೆಯು ನನ್ನಲ್ಲಿಯೂ ಇದ್ದಾರೆಂದು ಹೇಳುವಾಗ ನೀವು ನನ್ನನ್ನು ನಂಬಿರಿ, ಇಲ್ಲದಿದ್ದರೆ ಆ ಕ್ರಿಯೆಗಳನ್ನಾದರೂ ನೀವು ನಂಬಿರಿ.
[12] ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವರು ನಾನು ಮಾಡುವ ಕ್ರಿಯೆಗಳನ್ನು ತಾವು ಸಹ ಮಾಡುವರು. ಇವುಗಳಿಗಿಂತ ಮಹತ್ತಾದವುಗಳನ್ನು ಅವರು ಮಾಡುವರು. ಏಕೆಂದರೆ ನಾನು ನನ್ನ ತಂದೆಯ ಬಳಿಗೆ ಹೋಗುತ್ತೇನೆ.
[13] ನನ್ನ ಹೆಸರಿನಲ್ಲಿ ನೀವು ಏನೇನು ಕೇಳಿಕೊಳ್ಳುವಿರೋ ಅದನ್ನು ನಾನು ಮಾಡುವೆನು. ಹೀಗೆ ತಂದೆಗೆ ಪುತ್ರನಲ್ಲಿ ಮಹಿಮೆ ಉಂಟಾಗುವುದು.
[14] ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಕೇಳಿಕೊಂಡರೆ ನಾನು ಅದನ್ನು ಮಾಡುವೆನು.
[15] “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಅನುಸರಿಸುವಿರಿ.
[16] ನಾನು ತಂದೆಯನ್ನು ಕೇಳಿಕೊಳ್ಳುವೆನು. ಆಗ ತಂದೆ ನಿಮಗೆ ಬೇರೊಬ್ಬ ಸಹಾಯಕರನ್ನು ಸದಾಕಾಲವೂ ನಿಮ್ಮೊಂದಿಗೆ ಇರುವುದಕ್ಕೆ ಕೊಡುವರು.
[17] ಅವರೇ ಸತ್ಯದ ಆತ್ಮರಾಗಿದ್ದಾರೆ. ಲೋಕವು ಅವರನ್ನು ನೋಡದೆಯೂ ತಿಳಿಯದೆಯೂ ಇರುವುದರಿಂದ ಸತ್ಯದ ಆತ್ಮರಾಗಿರುವ ಅವರನ್ನು ಸ್ವೀಕರಿಸಲಾರದು. ನೀವು ಅವರನ್ನು ಬಲ್ಲಿರಿ. ಏಕೆಂದರೆ ಅವರು ನಿಮ್ಮೊಂದಿಗಿರುವರು ಮತ್ತು ನಿಮ್ಮೊಳಗೂ ನೆಲೆಸಿರುವರು.
[18] ನಾನು ನಿಮ್ಮನ್ನು ಅನಾಥರನ್ನಾಗಿ ಬಿಡುವುದಿಲ್ಲ. ನಿಮ್ಮ ಬಳಿಗೆ ನಾನು ಬರುತ್ತೇನೆ.
[19] ಇನ್ನು ಸ್ವಲ್ಪ ಕಾಲವಾದ ಮೇಲೆ ಲೋಕವು ನನ್ನನ್ನು ಕಾಣುವುದಿಲ್ಲ. ಆದರೆ ನೀವು ನನ್ನನ್ನು ಕಾಣುವಿರಿ. ಏಕೆಂದರೆ ನಾನು ಜೀವಿಸುವುದರಿಂದ ನೀವು ಸಹ ಜೀವಿಸುವಿರಿ.
[20] ನಾನು ನನ್ನ ತಂದೆಯಲ್ಲಿಯೂ ನೀವು ನನ್ನಲ್ಲಿಯೂ ನಾನು ನಿಮ್ಮಲ್ಲಿಯೂ ಇರುವುದನ್ನು ನೀವು ಆ ದಿನದಲ್ಲಿ ತಿಳಿದುಕೊಳ್ಳುವಿರಿ.
[21] ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಗೊಳ್ಳುವವರೇ ನನ್ನನ್ನು ಪ್ರೀತಿಸುವವರು. ನನ್ನನ್ನು ಪ್ರೀತಿಸುವವನು ತನ್ನ ತಂದೆಗೆ ಪ್ರಿಯನಾಗಿರುವನು. ನಾನು ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ಪ್ರಕಟಿಸಿಕೊಳ್ಳುವೆನು,” ಎಂದು ಹೇಳಿದರು.
[22] ಇಸ್ಕರಿಯೋತ ಅಲ್ಲದ ಮತ್ತೊಬ್ಬ ಯೂದನು, “ಸ್ವಾಮೀ, ನೀವು ಲೋಕಕ್ಕೆ ಪ್ರಕಟವಾಗದೆ ನಮಗೆ ಮಾತ್ರ ಪ್ರಕಟವಾಗುವುದು ಏಕೆ?” ಎಂದು ಕೇಳಿದನು.
[23] ಯೇಸು ಅವನಿಗೆ, “ಯಾವನಾದರೂ ನನ್ನನ್ನು ಪ್ರೀತಿಸುವುದಾದರೆ ಅವನು ನನ್ನ ವಾಕ್ಯವನ್ನು ಕೈಗೊಳ್ಳುವನು. ನನ್ನ ತಂದೆಯು ಅವನನ್ನು ಪ್ರೀತಿಸುವರು. ಇದಲ್ಲದೆ ನಾವು ಅವನ ಬಳಿಗೆ ಬಂದು ಅವನೊಂದಿಗೆ ನಿವಾಸಮಾಡಿಕೊಳ್ಳುವೆವು.
[24] ನನ್ನನ್ನು ಪ್ರೀತಿಸದವನು ನನ್ನ ವಾಕ್ಯಗಳನ್ನು ಕೈಗೊಳ್ಳುವುದಿಲ್ಲ. ನೀವು ಕೇಳಿದ ವಾಕ್ಯವು ನನ್ನ ವಾಕ್ಯಗಳಲ್ಲ. ಅವು ನನ್ನನ್ನು ಕಳುಹಿಸಿದ ನನ್ನ ತಂದೆಯ ವಾಕ್ಯಗಳಾಗಿವೆ.
[25] “ನಾನು ಇನ್ನೂ ನಿಮ್ಮೊಡನೆ ಇರುವಾಗಲೇ ಈ ಸಂಗತಿಗಳನ್ನು ನಿಮಗೆ ಹೇಳಿದ್ದೇನೆ.
[26] ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಸಹಾಯಕ ‘ಪವಿತ್ರಾತ್ಮರು’ ಎಲ್ಲವನ್ನೂ ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವರು.
[27] ನಾನು ಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ. ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ. ಲೋಕವು ಕೊಡುವಂತೆ ನಾನು ನಿಮಗೆ ಕೊಡುವುದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಅಂಜದಿರಲಿ.
[28] “ ‘ನಾನು ಹೋಗಿ ತಿರುಗಿ ನಿಮ್ಮ ಬಳಿಗೆ ಬರುತ್ತೇನೆ,’ ಎಂದು ನಾನು ನಿಮಗೆ ಹೇಳಿದ್ದನ್ನು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ತಂದೆಯ ಬಳಿಗೆ ಹೋಗುತ್ತೇನೆಂದು ಹೇಳಿದ್ದಕ್ಕೆ ಸಂತೋಷ ಪಡುತ್ತಿದ್ದಿರಿ. ಏಕೆಂದರೆ ತಂದೆಯು ನನಗಿಂತಲೂ ದೊಡ್ಡವರು.
[29] ಅದು ನಡೆಯುವಾಗ ನೀವು ನಂಬುವಂತೆ ಇದೆಲ್ಲಾ ನಡೆಯುವುದಕ್ಕಿಂತ ಮುಂಚೆಯೇ ಈಗ ನಾನು ನಿಮಗೆ ಹೇಳಿದ್ದೇನೆ.
[30] ಇನ್ನು ಮೇಲೆ ನಾನು ನಿಮ್ಮೊಂದಿಗೆ ಹೆಚ್ಚು ವಿಷಯಗಳನ್ನು ಮಾತನಾಡುವುದಿಲ್ಲ. ಏಕೆಂದರೆ ಇಹಲೋಕದ ಅಧಿಪತಿಯು ಬರಲಿದ್ದಾನೆ. ನನ್ನಲ್ಲಿ ಅವನಿಗೆ ಸೇರಿದ್ದು ಒಂದೂ ಇರುವುದಿಲ್ಲ.
[31] ಆದರೆ ನಾನು ತಂದೆಯನ್ನು ಪ್ರೀತಿಸುತ್ತೇನೆಂದು ಲೋಕವು ತಿಳಿಯುವಂತೆ ತಂದೆ ನನಗೆ ಆಜ್ಞಾಪಿಸಿದಂತೆಯೇ ನಾನು ಮಾಡುತ್ತೇನೆ. “ಏಳಿರಿ, ನಾವು ಇಲ್ಲಿಂದ ಹೋಗೋಣ,” ಎಂದರು.