Skip to content
Opens in a new window
Listen to this chapter • 4:32

[1] ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುವಿನ ತಾಯಿ ಅಲ್ಲಿ ಇದ್ದಳು.

[2] ಯೇಸು ಮತ್ತು ಅವರ ಶಿಷ್ಯರು ಮದುವೆಗೆ ಆಮಂತ್ರಿತರಾಗಿದ್ದರು.

[3] ಅಲ್ಲಿ ದ್ರಾಕ್ಷಾರಸವು ಮುಗಿದು ಹೋದಾಗ, ಯೇಸುವಿನ ತಾಯಿ, “ಅವರಲ್ಲಿ ದ್ರಾಕ್ಷಾರಸ ಮುಗಿದು ಹೋಗಿದೆ,” ಎಂದು ಯೇಸುವಿಗೆ ತಿಳಿಸಿದಳು.

[4] ಯೇಸು ಆಕೆಗೆ, “ಅಮ್ಮಾ, ನಾನು ನಿಮಗೆ ಏನು ಮಾಡಲು ಬಯಸುತ್ತೀರಿ? ನನ್ನ ಸಮಯವು ಇನ್ನೂ ಬಂದಿಲ್ಲ,” ಎಂದು ಹೇಳಿದರು.

[5] ಯೇಸುವಿನ ತಾಯಿಯು ಸೇವಕರಿಗೆ, “ಆತನು ನಿಮಗೆ ಹೇಳಿದಂತೆ ಮಾಡಿರಿ,” ಎಂದು ಹೇಳಿದಳು.

[6] ಯೆಹೂದ್ಯರ ಶುದ್ಧಾಚಾರದ ಪ್ರಕಾರ ಅಲ್ಲಿ ಕಲ್ಲಿನ ಆರು ಬಾನೆಗಳು ಇದ್ದವು. ಪ್ರತಿಯೊಂದು ಬಾನೆಯೂ ಎರಡು ಇಲ್ಲವೆ ಮೂರು ಕೊಡದ ಅಳತೆಯುಳ್ಳದ್ದಾಗಿತ್ತು.

[7] ಯೇಸು ಸೇವಕರಿಗೆ, “ಆ ಬಾನೆಗಳಲ್ಲಿ ನೀರು ತುಂಬಿರಿ,” ಎಂದರು. ಅವರು ಅವುಗಳನ್ನು ಕಂಠದವರೆಗೆ ತುಂಬಿದರು.

[8] ಅನಂತರ ಯೇಸು ಅವರಿಗೆ, “ಈಗ ಇದನ್ನು ತೆಗೆದುಕೊಂಡು ಔತಣದ ಮೇಲ್ವಿಚಾರಕನಿಗೆ ಕೊಡಿರಿ,” ಎಂದರು. ಸೇವಕರು ತೆಗೆದುಕೊಂಡು ಹೋದರು.

[9] ಔತಣದ ಮೇಲ್ವಿಚಾರಕನು ದ್ರಾಕ್ಷಾರಸವಾಗಿದ್ದ ನೀರನ್ನು ರುಚಿನೋಡಿದಾಗ, ಅದು ಎಲ್ಲಿಂದ ಬಂತೆಂದು ಅವನಿಗೆ ತಿಳಿದಿರಲಿಲ್ಲ. ಆದರೆ ನೀರನ್ನು ತಂದ ಸೇವಕರಿಗೆ ತಿಳಿದಿತ್ತು. ಔತಣದ ಮೇಲ್ವಿಚಾರಕನು ಮದುಮಗನನ್ನು ಕರೆದು,

[10] “ಪ್ರತಿಯೊಬ್ಬನು ಉತ್ತಮ ದ್ರಾಕ್ಷಾರಸವನ್ನು ಮೊದಲು ತಂದಿಟ್ಟು ಜನರು ತುಂಬಾ ಕುಡಿದ ಮೇಲೆ ಸಾಧಾರಣವಾದದ್ದನ್ನು ಕೊಡುತ್ತಾರೆ, ನೀನಾದರೋ ಉತ್ತಮ ದ್ರಾಕ್ಷಾರಸವನ್ನು ಇನ್ನೂ ಇಟ್ಟುಕೊಂಡಿರುವೆ,” ಎಂದನು.

[11] ಯೇಸು ಗಲಿಲಾಯದ ಕಾನಾದಲ್ಲಿ ಮಾಡಿದ ಸೂಚಕಕಾರ್ಯಗಳಲ್ಲಿ ಇದು ಮೊದಲನೆಯದಾಗಿತ್ತು. ಹೀಗೆ ಯೇಸು ತಮ್ಮ ಮಹಿಮೆಯನ್ನು ತೋರ್ಪಡಿಸಿದರು. ಯೇಸುವಿನ ಶಿಷ್ಯರು ಅವರಲ್ಲಿ ನಂಬಿಕೆಯಿಟ್ಟರು.

[12] ಇದಾದ ಮೇಲೆ ಯೇಸು ತಮ್ಮ ತಾಯಿ, ಸಹೋದರರು ಮತ್ತು ಶಿಷ್ಯರೊಡನೆ ಕಪೆರ್ನೌಮಿಗೆ ಹೋದರು. ಅಲ್ಲಿ ಅವರು ಕೆಲವು ದಿವಸ ಇದ್ದರು.

[13] ಯೆಹೂದ್ಯರ ಪಸ್ಕಹಬ್ಬವು ಹತ್ತಿರವಾದಾಗ ಯೇಸು ಯೆರೂಸಲೇಮಿಗೆ ಹೋದರು.

[14] ಅವರು ದೇವಾಲಯದ ಅಂಗಳದಲ್ಲಿ ದನ, ಕುರಿ ಹಾಗೂ ಪಾರಿವಾಳಗಳನ್ನು ಮಾರುವವರೂ ಹಣ ಬದಲಾಯಿಸುವವರೂ ಕುಳಿತಿರುವುದನ್ನು ಕಂಡರು.

[15] ಯೇಸು ಹಗ್ಗಗಳಿಂದ ಕೊರಡೆ ಮಾಡಿ ಕುರಿ, ದನ ಸಹಿತ ಎಲ್ಲರನ್ನೂ ದೇವಾಲಯದ ಹೊರಕ್ಕೆ ಅಟ್ಟಿ, ಹಣ ಬದಲಾಯಿಸುವವರ ನಾಣ್ಯಗಳನ್ನು ಮತ್ತು ಮೇಜುಗಳನ್ನು ಕೆಡವಿದರು.

[16] ಯೇಸು ಪಾರಿವಾಳ ಮಾರುವವರಿಗೆ, “ಇವುಗಳನ್ನು ತೆಗೆದುಕೊಂಡು ಹೋಗಿರಿ, ನನ್ನ ತಂದೆಯ ಮನೆಯನ್ನು ವ್ಯಾಪಾರದ ಮನೆಯನ್ನಾಗಿ ಮಾಡಬೇಡಿರಿ,” ಎಂದರು.

[17] ಯೇಸುವಿನ ಶಿಷ್ಯರು, “ನಿನ್ನ ಆಲಯದ ಮೇಲಿನ ಆಸಕ್ತಿಯು ನನ್ನನ್ನು ಬೆಂಕಿಯಂತೆ ದಹಿಸುತ್ತದೆ,” ಎಂದು ಪವಿತ್ರ ವೇದದಲ್ಲಿ ಬರೆದಿರುವುದನ್ನು ಜ್ಞಾಪಕಮಾಡಿಕೊಂಡರು.

[18] ಆಗ ಯೆಹೂದ್ಯರು ಯೇಸುವಿಗೆ, “ಇವುಗಳನ್ನು ಮಾಡುವ ಅಧಿಕಾರ ನಿನಗಿದೆ ಎಂಬುದಕ್ಕೆ ಯಾವ ಸೂಚಕಕಾರ್ಯವನ್ನು ತೋರಿಸುತ್ತೀ?” ಎಂದು ಕೇಳಿದರು.

[19] ಅದಕ್ಕೆ ಯೇಸು ಅವರಿಗೆ, “ಈ ದೇವಾಲಯವನ್ನು ಕೆಡವಿರಿ. ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು,” ಎಂದು ಉತ್ತರಕೊಟ್ಟರು.

[20] ಅದಕ್ಕೆ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟುವುದಕ್ಕೆ ನಲವತ್ತಾರು ವರ್ಷಗಳಾದವು. ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆಯೋ?” ಎಂದರು.

[21] ಆದರೆ ಯೇಸು ತಮ್ಮ ದೇಹವೆಂಬ ಆಲಯವನ್ನು ಕುರಿತು ಹೇಳಿದ್ದರು.

[22] ಆದ್ದರಿಂದ ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದಾಗ, ಅವರ ಶಿಷ್ಯರು ಅವರು ಹೇಳಿದ ಈ ಮಾತನ್ನು ನೆನಪು ಮಾಡಿಕೊಂಡು ಪವಿತ್ರ ವೇದವನ್ನೂ ಯೇಸು ತಮಗೆ ಹೇಳಿದ ಮಾತನ್ನೂ ನಂಬಿದರು.

[23] ಯೇಸು ಪಸ್ಕಹಬ್ಬದಂದು ಯೆರೂಸಲೇಮಿನಲ್ಲಿದ್ದಾಗ ಮಾಡಿದ ಸೂಚಕಕಾರ್ಯಗಳನ್ನು ಅನೇಕರು ಕಂಡು ಅವರ ಹೆಸರಿನಲ್ಲಿ ನಂಬಿಕೆ ಇಟ್ಟರು.

[24] ಆದರೆ ಯೇಸು ಎಲ್ಲರನ್ನೂ ಅರಿತವರಾದ್ದರಿಂದ ತಮ್ಮನ್ನು ಒಪ್ಪಿಸಿಕೊಡಲಿಲ್ಲ.

[25] ಯೇಸು ಮನುಷ್ಯರ ಅಂತರಂಗವನ್ನು ತಿಳಿದವರಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಅವರಿಗೆ ಸಾಕ್ಷಿ ಕೊಡಬೇಕಾದ ಅವಶ್ಯವಿರಲಿಲ್ಲ.

ಯೋಹಾನ — Chapters