[1] ಆದಿಯಲ್ಲಿ ವಾಕ್ಯವಿತ್ತು, ಆ ವಾಕ್ಯವು ದೇವರ ಬಳಿಯಲ್ಲಿತ್ತು, ಆ ವಾಕ್ಯವು ದೇವರಾಗಿತ್ತು.
[2] ಆ ವಾಕ್ಯವೆಂಬುವವರು ಆದಿಯಲ್ಲಿ ದೇವರ ಬಳಿಯಲ್ಲಿದ್ದರು.
[3] ಆ ವಾಕ್ಯವೆಂಬುವವರ ಮೂಲಕವಾಗಿಯೇ ಸಮಸ್ತವೂ ಸೃಷ್ಟಿಯಾಯಿತು. ಸೃಷ್ಟಿಯಾದವುಗಳಲ್ಲಿ ಯಾವುದೂ ಅವರಿಲ್ಲದೆ ಸೃಷ್ಟಿಯಾಗಲಿಲ್ಲ.
[4] ಅವರಲ್ಲಿ ಜೀವವಿತ್ತು. ಆ ಜೀವವು ಮಾನವರಿಗೆ ಬೆಳಕಾಗಿತ್ತು.
[5] ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲೆಯು ಆ ಬೆಳಕನ್ನು ಅಡಗಿಸಲಿಲ್ಲ.
[6] ದೇವರು ಕಳುಹಿಸಿದ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಯೋಹಾನನು.
[7] ತನ್ನ ಮೂಲಕ ಎಲ್ಲರು ವಿಶ್ವಾಸವಿಡುವಂತೆ ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡಲು ಯೋಹಾನನು ಸಾಕ್ಷಿಯಾಗಿ ಬಂದನು.
[8] ಅವನೇ ಆ ಬೆಳಕಾಗಿರಲಿಲ್ಲ. ಆ ಬೆಳಕಿನ ವಿಷಯದಲ್ಲಿ ಸಾಕ್ಷಿಯಾಗಿ ಬಂದನಷ್ಟೇ.
[9] ನಿಜ ಬೆಳಕು ಲೋಕಕ್ಕೆ ಬರುವುದಾಗಿತ್ತು. ಆ ಬೆಳಕೇ ಪ್ರತಿ ಮಾನವನಿಗೂ ಬೆಳಕನ್ನು ನೀಡುವುದಾಗಿತ್ತು.
[10] ಆ ವಾಕ್ಯವೆಂಬುವವರು ಲೋಕದಲ್ಲಿದ್ದರು ಮತ್ತು ಲೋಕವು ಅವರ ಮೂಲಕ ಉಂಟಾಯಿತು. ಆದರೂ ಲೋಕವು ಅವರ ಗುರುತು ಹಿಡಿಯಲಿಲ್ಲ.
[11] ಅವರು ತಮ್ಮ ಸ್ವಜನರ ಬಳಿಗೆ ಬಂದರು. ಆದರೆ ಸ್ವಜನರೇ ಅವರನ್ನು ಸ್ವೀಕರಿಸಲಿಲ್ಲ.
[12] ಆದರೂ ಯಾರಾರು ಅವರನ್ನು ಸ್ವೀಕರಿಸಿದರೋ, ಅಂದರೆ ಅವರ ಹೆಸರಿನಲ್ಲಿ ವಿಶ್ವಾಸವಿಟ್ಟರೋ ಅವರೆಲ್ಲರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಕೊಟ್ಟರು.
[13] ಇವರು ರಕ್ತಸಂಬಂಧದಿಂದಾಗಲಿ, ದೈಹಿಕ ಇಚ್ಛೆಯಿಂದಾಗಲಿ, ಪುರುಷನ ಇಚ್ಛೆಯಿಂದಾಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು.
[14] ವಾಕ್ಯವೆಂಬುವವರು ದೇಹಧಾರಿಯಾಗಿ ನಮ್ಮ ಮಧ್ಯದಲ್ಲಿ ವಾಸಿಸಿದರು. ನಾವು ಅವರ ಮಹಿಮೆಯನ್ನು ಕಂಡೆವು. ಆ ಮಹಿಮೆಯು ತಂದೆಯಿಂದ ಬಂದ ಏಕೈಕ ಪುತ್ರ ಆಗಿರುವವರಿಗೆ ಇರತಕ್ಕ ಮಹಿಮೆ. ಆ ವಾಕ್ಯವೆಂಬುವವರು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವರಾಗಿದ್ದರು.
[15] “ಅವರನ್ನು ಕುರಿತು ಯೋಹಾನನು ಸಾಕ್ಷಿ ಕೊಡುತ್ತಾ, ‘ನನ್ನ ಬಳಿಕ ಬರುವವರು ನನಗಿಂತ ಮೊದಲೇ ಇದ್ದುದರಿಂದ ಅವರು ನನಗಿಂತಲೂ ಶ್ರೇಷ್ಠರು’ ಎಂದು ನಾನು ಹೇಳಿದವರು ಇವರೇ,” ಎಂದು ಘೋಷಿಸಿದನು.
[16] ಅವರ ಪರಿಪೂರ್ಣತೆಯಿಂದ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಪಡೆದೆವು.
[17] ಏಕೆಂದರೆ ನಿಯಮವು ಮೋಶೆಯ ಮೂಲಕ ಕೊಡಲಾಯಿತು. ಕೃಪೆಯೂ ಸತ್ಯವೂ ಕ್ರಿಸ್ತ ಯೇಸುವಿನ ಮೂಲಕ ಬಂದವು.
[18] ದೇವರನ್ನು ಯಾರೂ ಎಂದೂ ಕಂಡಿಲ್ಲ; ತಂದೆ ದೇವರ ಹೃದಯಕ್ಕೆ ಹತ್ತಿರವಾಗಿರುವ ಏಕೈಕ ಪುತ್ರ ಆಗಿರುವವರೂ ಸ್ವತಃ ದೇವರೂ ಆಗಿರುವವರೂ ತಂದೆಯನ್ನು ಪ್ರಕಟಪಡಿಸಿದ್ದಾರೆ.
[19] ಯೆರೂಸಲೇಮಿನ ಯೆಹೂದ್ಯ ನಾಯಕರು, ಯಾಜಕರನ್ನು ಮತ್ತು ಲೇವಿಯರನ್ನು ಯೋಹಾನನ ಬಳಿಗೆ ಕಳುಹಿಸಿ, “ನೀನು ಯಾರು?” ಎಂದು ಕೇಳಿದರು.
[20] ಅದಕ್ಕೆ ಯೋಹಾನನು, “ನಾನು ಕ್ರಿಸ್ತನಲ್ಲ” ಎಂದು ಅರಿಕೆಮಾಡಿ ಸಾಕ್ಷಿಕೊಟ್ಟನು.
[21] ಅದಕ್ಕೆ ಅವರು, “ಹಾಗಾದರೆ ನೀನು ಎಲೀಯನೋ?” ಎಂದು ಕೇಳಿದರು. ಅದಕ್ಕೆ ಅವನು, “ನಾನು ಎಲೀಯನಲ್ಲ.” “ನೀನು ಆ ಪ್ರವಾದಿಯೋ?” ಎಂದು ಕೇಳಿದರು. ಅದಕ್ಕೆ ಅವನು, “ಅಲ್ಲ” ಎಂದನು.
[22] ಅವರು, “ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಕೊಡುವಂತೆ ನಿನ್ನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದು ಕೇಳಿದರು.
[23] ಅದಕ್ಕೆ ಯೋಹಾನನು, “ಪ್ರವಾದಿ ಯೆಶಾಯನು ಹೇಳಿದಂತೆ, ‘ಕರ್ತದೇವರ ಮಾರ್ಗವನ್ನು ಸಿದ್ಧಮಾಡಿರಿ,’ ಎಂದು ಅರಣ್ಯದಲ್ಲಿ ಕೂಗುವ ಸ್ವರವೇ ನಾನು,” ಎಂದು ಹೇಳಿದನು.
[24] ಬಂದಿದ್ದವರು ಫರಿಸಾಯರ ಕಡೆಯವರಾಗಿದ್ದರು.
[25] ಅವರು ಯೋಹಾನನಿಗೆ, “ನೀನು ಕ್ರಿಸ್ತ ಇಲ್ಲವೆ ಎಲೀಯನಾಗಲಿ, ಆ ಪ್ರವಾದಿಯಾಗಲಿ ಆಗಿರದಿದ್ದರೆ ನೀನು ದೀಕ್ಷಾಸ್ನಾನ ಕೊಡುವುದೇಕೆ?” ಎಂದು ಪ್ರಶ್ನಿಸಿದರು.
[26] ಅದಕ್ಕೆ ಯೋಹಾನನು, “ನಾನು ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನೀವು ಅರಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ.
[27] ಅವರೇ ನನ್ನ ಬಳಿಕ ಬರುವವರು. ಅವರ ಪಾದರಕ್ಷೆಗಳ ದಾರವನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,” ಎಂದು ಉತ್ತರಕೊಟ್ಟನು.
[28] ಇದೆಲ್ಲಾ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಿದ್ದ ಯೊರ್ದನ್ ನದಿಯ ಆಚೆಕಡೆಯಲ್ಲಿರುವ ಬೇಥಾನ್ಯದಲ್ಲಿ ನಡೆಯಿತು.
[29] ಮರುದಿನ ಯೇಸು ತನ್ನ ಕಡೆಗೆ ಬರುತ್ತಿರುವುದನ್ನು ಯೋಹಾನನು ಕಂಡು, “ಇಗೋ, ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ,
[30] ‘ನನ್ನ ತರುವಾಯ ಬರುವವರು ನನಗಿಂತ ಮೊದಲೇ ಇದ್ದುದರಿಂದ ಅವರು ನನಗಿಂತಲೂ ಶ್ರೇಷ್ಠರು,’ ಎಂದು ನಾನು ಹೇಳಿದವರು ಇವರೇ.
[31] ನನಗೂ ಇವರ ಗುರುತಿರಲಿಲ್ಲ. ಆದರೆ ಇವರನ್ನು ಇಸ್ರಾಯೇಲರಿಗೆ ಪ್ರಕಟಪಡಿಸುವುದಕ್ಕೊಸ್ಕರ ನಾನು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾ ಬಂದೆನು,” ಎಂದು ಹೇಳಿದನು.
[32] ಯೋಹಾನನು ಸಾಕ್ಷಿಕೊಟ್ಟು, “ಪವಿತ್ರಾತ್ಮರು ಪರಲೋಕದಿಂದ ಪಾರಿವಾಳದಂತೆ ಇಳಿದುಬಂದು ಯೇಸುವಿನ ಮೇಲೆ ನೆಲೆಗೊಂಡಿರುವುದನ್ನು ನಾನು ಕಂಡೆನು.
[33] ನನಗೂ ಅವರ ಗುರುತಿರಲಿಲ್ಲ. ಆದರೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಲು ನನ್ನನ್ನು ಕಳುಹಿಸಿದವರು, ‘ಯಾರ ಮೇಲೆ ಪವಿತ್ರಾತ್ಮರು ಇಳಿದುಬಂದು ನೆಲೆಸುವುದನ್ನು ನೀನು ನೋಡುವಿಯೋ ಅವರೇ ಪವಿತ್ರಾತ್ಮರಿಂದ ದೀಕ್ಷಾಸ್ನಾನ ಮಾಡಿಸುವವರು,’ ಎಂದು ತಿಳಿಸಿದರು.
[34] ಈಗ ನಾನು ಕಂಡು, ಇವರೇ ದೇವರ ಪುತ್ರರು ಎಂದು ಸಾಕ್ಷಿ ನೀಡುತ್ತಿದ್ದೇನೆ,” ಎಂದು ಹೇಳಿದನು.
[35] ಮರುದಿನ ಯೋಹಾನನು ಪುನಃ ತನ್ನ ಶಿಷ್ಯರಲ್ಲಿ ಇಬ್ಬರೊಂದಿಗೆ ನಿಂತುಕೊಂಡಿದ್ದನು.
[36] ಆಗ ಯೇಸು ಹೋಗುತ್ತಿರುವುದನ್ನು ಕಂಡು ಅವನು, “ಇಗೋ, ದೇವರ ಕುರಿಮರಿ,” ಎಂದು ಹೇಳಿದನು.
[37] ಆ ಇಬ್ಬರು ಶಿಷ್ಯರು ಅವನು ಹೇಳಿದ್ದನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು.
[38] ಯೇಸು ಹಿಂತಿರುಗಿ ತನ್ನನ್ನು ಹಿಂಬಾಲಿಸುತ್ತಿದ್ದ ಅವರನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಲು, ಅವರು, “ಬೋಧಕರೇ, ನೀವು ವಾಸಿಸುವುದು ಎಲ್ಲಿ?” ಎಂದು ಕೇಳಿದರು.
[39] ಯೇಸು ಅವರಿಗೆ, “ಬಂದು ನೋಡಿರಿ,” ಎಂದು ಹೇಳಲು, ಅವರು ಹೋಗಿ ಯೇಸು ವಾಸಿಸುತ್ತಿದ್ದ ಸ್ಥಳವನ್ನು ಕಂಡು ಆ ದಿವಸ ಅವರ ಸಂಗಡ ಇದ್ದರು. ಆಗ ಸಂಜೆ ಸುಮಾರು ನಾಲ್ಕು ಗಂಟೆಯಾಗಿತ್ತು.
[40] ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ ಇಬ್ಬರಲ್ಲಿ ಸೀಮೋನ್ ಪೇತ್ರನ ಸಹೋದರ ಅಂದ್ರೆಯನು ಒಬ್ಬನಾಗಿದ್ದನು.
[41] ಅಂದ್ರೆಯನು ಮೊದಲು ತನ್ನ ಸಹೋದರ ಸೀಮೋನನನ್ನು ಕಂಡು, “ನಾವು ಮೆಸ್ಸೀಯ ಆಗಿರುವವರನ್ನು ಕಂಡೆವು,” ಎಂದು ಹೇಳಿ,
[42] ಅವನನ್ನು ಯೇಸುವಿನ ಬಳಿಗೆ ಕರೆತಂದನು. “ಮೆಸ್ಸೀಯ” ಎಂದರೆ ಕ್ರಿಸ್ತ ಎಂದು ಅರ್ಥ. ಯೇಸು ಅವನನ್ನು ನೋಡಿ, “ನೀನು ಯೋಹಾನನ ಮಗ ಸೀಮೋನನು. ನಿನ್ನನ್ನು ‘ಕೇಫ’ ಎಂದು ಕರೆಯುವರು,” ಎಂದು ಹೇಳಿದರು. “ಕೇಫ” ಎಂದರೆ ಪೇತ್ರ ಇಲ್ಲವೆ ಬಂಡೆ ಎಂದರ್ಥ.
[43] ಯೇಸು ಮರುದಿನ ಗಲಿಲಾಯಕ್ಕೆ ಹೋಗಬೇಕೆಂದಿದ್ದಾಗ, ಅವರು ಫಿಲಿಪ್ಪನನ್ನು ಕಂಡು, “ನನ್ನನ್ನು ಹಿಂಬಾಲಿಸು,” ಎಂದರು.
[44] ಫಿಲಿಪ್ಪನು, ಅಂದ್ರೆಯ ಮತ್ತು ಪೇತ್ರನ ಪಟ್ಟಣವಾದ ಬೇತ್ಸಾಯಿದಕ್ಕೆ ಸೇರಿದವನು.
[45] ಫಿಲಿಪ್ಪನು ನತಾನಯೇಲನನ್ನು ಕಂಡು, “ಮೋಶೆಯ ನಿಯಮದಲ್ಲಿ ಸೂಚಿಸಿದವರೂ ಪ್ರವಾದಿಗಳೂ ಯಾರನ್ನು ಕುರಿತು ಬರೆದಿದ್ದಾರೋ ಅವರು ನಮಗೆ ಸಿಕ್ಕಿದ್ದಾರೆ. ಅವರೇ ಯೋಸೇಫನ ಪುತ್ರರಾಗಿರುವ ನಜರೇತಿನ ಯೇಸು,” ಎಂದನು.
[46] “ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರಲು ಸಾಧ್ಯವೋ?” ಎಂದು ನತಾನಯೇಲನು ಕೇಳಲು, “ಬಂದು ನೋಡು,” ಎಂದು ಫಿಲಿಪ್ಪನು ಹೇಳಿದನು.
[47] ನತಾನಯೇಲನು ತಮ್ಮ ಬಳಿಗೆ ಬರುವುದನ್ನು ಯೇಸು ಕಂಡು ಅವನ ವಿಷಯವಾಗಿ, “ಇವನು ನಿಜವಾದ ಇಸ್ರಾಯೇಲನು, ಇವನಲ್ಲಿ ಕಪಟವಿಲ್ಲ,” ಎಂದು ಹೇಳಿದರು.
[48] ಅದಕ್ಕೆ ನತಾನಯೇಲನು, “ನೀವು ನನ್ನನ್ನು ಹೇಗೆ ಬಲ್ಲಿರಿ?” ಎಂದು ಕೇಳಲು, ಯೇಸು ಅವನಿಗೆ, “ಫಿಲಿಪ್ಪನು ನಿನ್ನನ್ನು ಕರೆಯುವುದಕ್ಕಿಂತ ಮುಂಚೆಯೇ ನೀನು ಅಂಜೂರದ ಮರದ ಕೆಳಗಿರುವುದನ್ನು ನಾನು ಕಂಡೆನು,” ಎಂದು ಉತ್ತರಿಸಿದರು.
[49] ಅದಕ್ಕೆ ನತಾನಯೇಲನು, “ಗುರುವೇ, ನೀವು ದೇವಪುತ್ರ; ಇಸ್ರಾಯೇಲಿನ ಅರಸ ನೀವೇ,” ಎಂದನು.
[50] ಯೇಸು ಅವನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ಕಂಡಿದ್ದೆ ಎಂದು ನಾನು ಹೇಳಿದ್ದಕ್ಕೆ ನೀನು ನಂಬುತ್ತೀಯೋ? ನೀನು ಇವುಗಳಿಗಿಂತಲೂ ಮಹಾಕಾರ್ಯಗಳನ್ನು ಕಾಣುವೆ,” ಎಂದು ಉತ್ತರಿಸಿದರು.
[51] ಯೇಸು ಅವನಿಗೆ, “ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ನೀವು ಪರಲೋಕವು ತೆರೆದಿರುವುದನ್ನೂ ದೇವದೂತರು ಮನುಷ್ಯಪುತ್ರನಾದ ನನ್ನ ಮುಖಾಂತರ ಇಳಿಯುತ್ತಾ ಏರುತ್ತಾ ಇರುವುದನ್ನೂ ಕಾಣುವಿರಿ,” ಎಂದು ಹೇಳಿದರು.