[1] ಫರಿಸಾಯರಲ್ಲಿ ಯೋಹಾನನಿಗಿಂತಲೂ ಯೇಸು ಹೆಚ್ಚಿನ ಶಿಷ್ಯರನ್ನು ಹೊಂದಿದ್ದಾರೆ ಮತ್ತು ದೀಕ್ಷಾಸ್ನಾನ ಮಾಡಿಸುತ್ತಾರೆ ಎಂಬುವುದನ್ನು ಫರಿಸಾಯರು ಕೇಳಿಸಿಕೊಂಡರು.
[2] ಆದರೆ ಯೇಸು ತಾವೇ ದೀಕ್ಷಾಸ್ನಾನ ಮಾಡಿಸುತ್ತಿರಲಿಲ್ಲ. ಅವರ ಶಿಷ್ಯರು ಮಾಡಿಸುತ್ತಿದ್ದರು.
[3] ಫರಿಸಾಯರು ಕೇಳಿಸಿಕೊಂಡದ್ದನ್ನು ಯೇಸು ತಿಳಿದಾಗ, ಯೇಸು ಯೂದಾಯವನ್ನು ಬಿಟ್ಟು ಗಲಿಲಾಯಕ್ಕೆ ತಿರುಗಿ ಹೊರಟು ಹೋದರು.
[4] ಯೇಸು ಸಮಾರ್ಯದ ಮಾರ್ಗವಾಗಿ ಹೋಗಬೇಕಾಗಿತ್ತು.
[5] ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸಮೀಪದಲ್ಲಿರುವ ಸುಖರೆಂಬ ಸಮಾರ್ಯದ ಪಟ್ಟಣಕ್ಕೆ ಯೇಸು ಬಂದರು.
[6] ಅಲ್ಲಿ ಯಾಕೋಬನ ಬಾವಿ ಇತ್ತು. ಯೇಸು ಪ್ರಯಾಣಮಾಡಿದ್ದರಿಂದ ಆಯಾಸಗೊಂಡವರಾಗಿ ಆ ಬಾವಿಯ ಬಳಿಯಲ್ಲಿ ಕುಳಿತುಕೊಂಡರು. ಆಗ ಹೆಚ್ಚು ಕಡಿಮೆ ಮಧ್ಯಾಹ್ನವಾಗಿತ್ತು.
[7] ಆಗ ಸಮಾರ್ಯದವಳಾದ ಒಬ್ಬ ಸ್ತ್ರೀಯು ನೀರು ಸೇದುವುದಕ್ಕಾಗಿ ಬಂದಳು. ಯೇಸು ಆಕೆಗೆ, “ನನಗೆ ಕುಡಿಯುವುದಕ್ಕೆ ನೀರು ಕೊಡು,” ಎಂದರು.
[8] ಯೇಸುವಿನ ಶಿಷ್ಯರು ಆಹಾರವನ್ನು ಕೊಂಡುಕೊಳ್ಳಲು ಪಟ್ಟಣದೊಳಕ್ಕೆ ಹೋಗಿದ್ದರು.
[9] ಆದ್ದರಿಂದ ಆ ಸಮಾರ್ಯ ಸ್ತ್ರೀಯು ಯೇಸುವಿಗೆ, “ನೀನು ಯೆಹೂದ್ಯನಾಗಿದ್ದು ಸಮಾರ್ಯದ ಸ್ತ್ರೀಯಾದ ನನ್ನಿಂದ ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವುದು ಹೇಗೆ,” ಎಂದಳು. ಏಕೆಂದರೆ ಯೆಹೂದ್ಯರಿಗೂ ಸಮಾರ್ಯದವರಿಗೂ ಒಡನಾಟ ಇರಲಿಲ್ಲ.
[10] ಯೇಸು ಆಕೆಗೆ, “ದೇವರ ವರವನ್ನೂ, ‘ಕುಡಿಯುವುದಕ್ಕೆ ನೀರು ಕೊಡು,’ ಎಂದು ಕೇಳುವ ನಾನು ಯಾರೆಂಬುದನ್ನೂ ನೀನು ತಿಳಿದಿದ್ದರೆ ನೀನೇ ನನ್ನಿಂದ ನೀರನ್ನು ಕೇಳುತ್ತಿದ್ದೆ. ನಾನು ನಿನಗೆ ಜೀವಜಲವನ್ನು ಕೊಡುತ್ತಿದ್ದೆನು,” ಎಂದು ಹೇಳಿದರು.
[11] ಅದಕ್ಕೆ ಆ ಸ್ತ್ರೀಯು, “ಅಯ್ಯಾ, ನೀರು ಸೇದುವುದಕ್ಕೆ ನಿಮ್ಮ ಹತ್ತಿರ ಏನೂ ಇಲ್ಲವಲ್ಲಾ, ಬಾವಿಯೋ ಆಳವಾಗಿದೆ. ಹೀಗಿರುವಲ್ಲಿ ಜೀವಜಲವು ನಿನಗೆ ಎಲ್ಲಿಂದ ಬಂದೀತು?
[12] ಯಾಕೋಬನ ಮಕ್ಕಳು ಮತ್ತು ಪಶುಗಳು ಈ ಬಾವಿಯ ನೀರನ್ನು ಕುಡಿದರು. ಅದನ್ನು ನಮಗೆ ಕೊಟ್ಟ ನಮ್ಮ ತಂದೆ ಯಾಕೋಬನಿಗಿಂತ ನೀನು ದೊಡ್ಡವನೋ?” ಎಂದಳು.
[13] ಯೇಸು ಆಕೆಗೆ, “ಈ ನೀರನ್ನು ಕುಡಿಯುವ ಪ್ರತಿಯೊಬ್ಬರಿಗೆ ಪುನಃ ದಾಹವಾಗುವುದು.
[14] ಆದರೆ ನಾನು ಕೊಡುವ ನೀರನ್ನು ಕುಡಿಯುವವರಿಗೆ ಎಂದೆಂದಿಗೂ ದಾಹವಾಗದು. ನಾನು ಅವರಿಗೆ ಕೊಡುವ ನೀರು ಅವರಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬುಗ್ಗೆಯಾಗಿರುವುದು,” ಎಂದರು.
[15] ಅದಕ್ಕೆ ಆ ಸ್ತ್ರೀಯು, “ಅಯ್ಯಾ, ಆ ನೀರನ್ನೇ ನನಗೆ ಕೊಡು. ಆಗ ನನಗೆ ದಾಹವಾಗುವುದಿಲ್ಲ. ಇನ್ನು ಮುಂದೆ ನಾನು ನೀರು ಸೇದುವುದಕ್ಕೆ ಇಲ್ಲಿಗೆ ಬರುವ ಅವಶ್ಯವಿರುವುದಿಲ್ಲ,” ಎಂದಳು.
[16] ಯೇಸು ಆಕೆಗೆ, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ,” ಎಂದರು.
[17] ಅದಕ್ಕೆ ಆ ಸ್ತ್ರೀಯು, “ನನಗೆ ಗಂಡನಿಲ್ಲ,” ಎಂದಳು. ಯೇಸು ಆಕೆಗೆ, “ನನಗೆ ಗಂಡನಿಲ್ಲ, ಎಂದು ನೀನು ಹೇಳಿದ್ದು ಸರಿಯೇ.
[18] ನಿನಗೆ ಐದು ಮಂದಿ ಗಂಡಂದಿರು ಇದ್ದರು. ಈಗ ನಿನಗಿರುವವನು ನಿನ್ನ ಗಂಡನಲ್ಲ, ನೀನು ಹೇಳಿದ್ದು ಸರಿಯೇ,” ಎಂದರು.
[19] ಆಗ ಆ ಸ್ತ್ರೀಯು ಯೇಸುವಿಗೆ, “ಅಯ್ಯಾ, ನೀವು ಒಬ್ಬ ಪ್ರವಾದಿಯೆಂದು ನನಗೆ ಕಾಣುತ್ತದೆ.
[20] ನಮ್ಮ ಪಿತೃಗಳು ಈ ಬೆಟ್ಟದ ಮೇಲೆ ದೇವರನ್ನು ಆರಾಧಿಸಿದರು. ಆದರೆ, ‘ಆರಾಧಿಸತಕ್ಕ ಸ್ಥಳವು ಯೆರೂಸಲೇಮಿನಲ್ಲಿಯೇ’ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲಾ,” ಎಂದಳು.
[21] ಯೇಸು ಆಕೆಗೆ, “ಅಮ್ಮಾ, ನನ್ನನ್ನು ನಂಬು, ಈ ಬೆಟ್ಟದಲ್ಲಿಯಾಗಲಿ ಯೆರೂಸಲೇಮಿನಲ್ಲಾಗಲಿ ನೀವು ತಂದೆಯನ್ನು ಆರಾಧಿಸದೆ ಇರುವ ಕಾಲ ಬರುತ್ತದೆ.
[22] ನೀವು ಸಮಾರ್ಯದವರು ಅರಿಯದೆ ಇರುವುದನ್ನು ಆರಾಧಿಸುತ್ತೀರಿ. ನಾವು ಅರಿತಿರುವುದನ್ನೇ ಆರಾಧಿಸುವವರು. ಏಕೆಂದರೆ ರಕ್ಷಣೆಯು ಯೆಹೂದ್ಯರಿಂದಲೇ.
[23] ಆದರೆ ನಿಜವಾದ ಆರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ. ಏಕೆಂದರೆ ತಂದೆಯು ನಿಜವಾಗಿಯೂ ಈ ರೀತಿ ಆರಾಧಿಸುವವರನ್ನೇ ಹುಡುಕುತ್ತಾರೆ.
[24] ದೇವರು ಆತ್ಮರಾಗಿದ್ದಾರೆ. ಅವರನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು,” ಎಂದರು.
[25] ಆ ಸ್ತ್ರೀಯು ಯೇಸುವಿಗೆ, “ಕ್ರಿಸ್ತ ಎಂದು ಕರೆಯಲಾಗುವ ಮೆಸ್ಸೀಯ ಬರುತ್ತಾರೆಂದು ನಾನು ಬಲ್ಲೆನು. ಅವರು ಬಂದಾಗ ನಮಗೆ ಎಲ್ಲವನ್ನೂ ತಿಳಿಸುವರು,” ಎಂದಳು.
[26] ಯೇಸು ಆಕೆಗೆ, “ನಿನ್ನೊಂದಿಗೆ ಮಾತನಾಡುವ ನಾನೇ ಆತನು!” ಎಂದರು.
[27] ಅಷ್ಟರೊಳಗೆ ಅವರ ಶಿಷ್ಯರು ಬಂದು ಯೇಸು ಆ ಸ್ತ್ರೀಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೂ, “ನಿಮಗೆ ಏನು ಬೇಕು? ಆಕೆಯೊಂದಿಗೆ ಏಕೆ ಮಾತನಾಡುತ್ತಿರುವಿರಿ?” ಎಂದು ಒಬ್ಬನಾದರೂ ಕೇಳಲಿಲ್ಲ.
[28] ಆ ಸ್ತ್ರೀಯು ತನ್ನ ನೀರಿನ ಕೊಡವನ್ನು ಅಲ್ಲಿಯೇ ಬಿಟ್ಟು ಪಟ್ಟಣದೊಳಕ್ಕೆ ಹೊರಟುಹೋಗಿ ಜನರಿಗೆ,
[29] “ಬನ್ನಿರಿ, ನಾನು ಮಾಡಿದವುಗಳನ್ನೆಲ್ಲಾ ನನಗೆ ತಿಳಿಸಿದ ವ್ಯಕ್ತಿಯನ್ನು ಕಾಣಿರಿ, ಬರತಕ್ಕ ಕ್ರಿಸ್ತ ಇವರೇ ಆಗಿರಬಹುದು?” ಎಂದಳು.
[30] ಆಗ ಅವರು ಪಟ್ಟಣದಿಂದ ಯೇಸುವಿನ ಬಳಿಗೆ ಬಂದರು.
[31] ಆ ಸಮಯದಲ್ಲಿ ಶಿಷ್ಯರು, “ಗುರುವೇ ಊಟಮಾಡಿರಿ,” ಎಂದು ಯೇಸುವನ್ನು ಕೇಳಿಕೊಂಡರು.
[32] ಆದರೆ ಯೇಸು ಅವರಿಗೆ, “ನಿಮಗೆ ತಿಳಿಯದಿರುವ ಆಹಾರವು ನನ್ನಲ್ಲಿದೆ,” ಎಂದರು.
[33] ಶಿಷ್ಯರು, “ಯಾರಾದರೂ ಅವರಿಗೆ ಏನಾದರೂ ತಿನ್ನುವುದಕ್ಕೆ ತಂದು ಕೊಟ್ಟರೋ?” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
[34] ಯೇಸು ಅವರಿಗೆ, “ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನು ಮಾಡಿ ಅವರ ಕೆಲಸವನ್ನು ಪೂರೈಸುವುದೇ ನನ್ನ ಆಹಾರ.
[35] ನೀವು, ‘ಇನ್ನೂ ನಾಲ್ಕು ತಿಂಗಳುಗಳಾದ ಮೇಲೆ ಸುಗ್ಗಿಯು ಬರುತ್ತದೆ’ ಎಂದು ಹೇಳುವುದಿಲ್ಲವೇ? ಮತ್ತು ಇಗೋ, ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ. ಏಕೆಂದರೆ ಅವು ಈಗಾಗಲೇ ಸುಗ್ಗಿಗೆ ಸಿದ್ಧವಾಗಿವೆ.
[36] ಕೊಯ್ಯುವವನು ಕೂಲಿಯನ್ನು ಪಡೆದು ನಿತ್ಯಜೀವಕ್ಕಾಗಿ ಫಲವನ್ನು ಕೂಡಿಸಿಕೊಳ್ಳುತ್ತಾನೆ; ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಿಗೆ ಸಂತೋಷಿಸುವರು.
[37] ‘ಬಿತ್ತುವವನೊಬ್ಬನು, ಕೊಯ್ಯುವವನು ಬೇರೊಬ್ಬನು,’ ಎಂದು ಹೇಳುವ ಮಾತು ಇದರಲ್ಲಿ ಸತ್ಯವಾಗಿದೆ.
[38] ನೀವು ಪ್ರಯಾಸ ಪಡದಂಥದ್ದನ್ನು ಕೊಯ್ಯುವುದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು. ಇತರರು ಪ್ರಯಾಸಪಟ್ಟರು. ನೀವು ಅವರ ಪ್ರಯಾಸದ ಫಲವನ್ನು ಪಡೆದಿದ್ದೀರಿ,” ಎಂದರು.
[39] ಆಗ, “ನಾನು ಮಾಡಿದ್ದೆಲ್ಲವನ್ನು ಆತನು ನನಗೆ ತಿಳಿಸಿದನು” ಎಂದು ಸಾಕ್ಷಿಕೊಟ್ಟ ಆ ಸ್ತ್ರೀಯ ಮಾತಿನಿಂದ ಆ ಪಟ್ಟಣದ ಅನೇಕ ಸಮಾರ್ಯದವರು ಯೇಸುವಿನಲ್ಲಿ ನಂಬಿಕೆ ಇಟ್ಟರು.
[40] ಆ ಸಮಾರ್ಯದವರು ಯೇಸುವಿನ ಬಳಿಗೆ ಬಂದು ತಮ್ಮೊಂದಿಗೆ ಇರಬೇಕೆಂದು ಅವರನ್ನು ಬೇಡಿಕೊಂಡರು. ಹೀಗೆ ಯೇಸು ಎರಡು ದಿವಸ ಅಲ್ಲಿಯೇ ಉಳಿದರು.
[41] ಇನ್ನೂ ಹೆಚ್ಚು ಜನರು ಯೇಸುವಿನ ವಾಕ್ಯದ ದೆಸೆಯಿಂದ ನಂಬಿದರು.
[42] ಜನರು ಆ ಸ್ತ್ರೀಗೆ, “ನಾವು ಇನ್ನು ಮುಂದೆ ನಂಬುವುದು ನಿನ್ನ ಮಾತಿನಿಂದಲ್ಲ. ಏಕೆಂದರೆ ನಾವೇ ಸ್ವತಃ ಕೇಳಿದ್ದೇವೆ. ಈತನು ನಿಜವಾಗಿಯೂ ಲೋಕ ರಕ್ಷಕನೆಂದು ತಿಳಿದಿದ್ದೇವೆ,” ಎಂದರು.
[43] ಎರಡು ದಿವಸಗಳಾದ ಮೇಲೆ ಯೇಸು ಅಲ್ಲಿಂದ ಹೊರಟು ಗಲಿಲಾಯಕ್ಕೆ ಹೋದರು.
[44] ಪ್ರವಾದಿಗೆ ತನ್ನ ಸ್ವದೇಶದಲ್ಲಿ ಮರ್ಯಾದೆ ಇಲ್ಲವೆಂದು ಯೇಸು ತಾವೇ ಹೇಳಿದ್ದರು.
[45] ಯೇಸು ಗಲಿಲಾಯವನ್ನು ತಲುಪಿದಾಗ ಗಲಿಲಾಯದವರು ಅವರನ್ನು ಸ್ವಾಗತಿಸಿದರು. ಪಸ್ಕಹಬ್ಬದ ಸಮಯದಲ್ಲಿ ಯೇಸು ಯೆರೂಸಲೇಮಿನಲ್ಲಿ ಮಾಡಿದವುಗಳನ್ನೆಲ್ಲಾ ಕಂಡಿದ್ದರು.
[46] ಯೇಸು ತಾನು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಗಲಿಲಾಯದ ಕಾನಾ ಊರಿಗೆ ತಿರುಗಿ ಬಂದರು. ಆಗ ಕಪೆರ್ನೌಮಿನಲ್ಲಿದ್ದ ಒಬ್ಬ ಅಧಿಕಾರಿಯ ಮಗನು ಅಸ್ವಸ್ಥನಾಗಿದ್ದನು.
[47] ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಿರುವುದನ್ನು ಅವನು ಕೇಳಿದಾಗ ಅವರ ಬಳಿಗೆ ಹೋಗಿ, ಯೇಸು ಬಂದು ತನ್ನ ಮಗನನ್ನು ಸ್ವಸ್ಥಪಡಿಸಬೇಕೆಂದು ಬೇಡಿಕೊಂಡನು. ಏಕೆಂದರೆ ಅವನ ಮಗನು ಸಾಯುವ ಸ್ಥಿತಿಯಲ್ಲಿದ್ದನು.
[48] ಯೇಸು ಅವನಿಗೆ, “ನೀವು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಕಾಣದ ಹೊರತು ನಂಬುವುದೇ ಇಲ್ಲ,” ಎಂದರು.
[49] ಆಗ ಆ ಅಧಿಕಾರಿಯು ಯೇಸುವಿಗೆ, “ಅಯ್ಯಾ, ನನ್ನ ಮಗನು ಸಾಯುವ ಮೊದಲೇ ಬನ್ನಿರಿ,” ಎಂದನು.
[50] ಯೇಸು ಅವನಿಗೆ, “ಹೋಗು, ನಿನ್ನ ಮಗನು ಬದುಕುವನು,” ಎಂದರು. ಆ ಮನುಷ್ಯನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟುಹೋದನು.
[51] ಹೀಗೆ ಅವನು ಇಳಿದು ಹೋಗುತ್ತಿರುವಾಗಲೇ ಸೇವಕರು ಅವನನ್ನು ಸಂಧಿಸಿ, ಅವನ ಮಗನು ಬದುಕಿರುವುದಾಗಿ ಅವನಿಗೆ ಹೇಳಿದರು.
[52] ಅವನು, “ಯಾವ ಸಮಯದಲ್ಲಿ ಮಗನು ಚೇತರಿಸಿಕೊಂಡನು?” ಎಂದು ಅವರನ್ನು ವಿಚಾರಿಸಿದಾಗ ಅವರು, “ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ಜ್ವರವು ಬಿಟ್ಟಿತು,” ಎಂದು ಸೇವಕರು ಅವನಿಗೆ ಹೇಳಿದರು.
[53] ಹೀಗೆ, “ನಿನ್ನ ಮಗನು ಬದುಕುವನು” ಎಂದು ಯೇಸು ತನಗೆ ಹೇಳಿದ ಸಮಯದಯಲ್ಲಿಯೇ ಅದು ಆಯಿತೆಂದು ತಂದೆಯು ತಿಳಿದುಕೊಂಡು, ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ನಂಬಿದರು.
[54] ಇದು ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯ.