Skip to content
Opens in a new window
Listen to this chapter • 9:03

[1] ಇವುಗಳಾದ ಮೇಲೆ ಯೇಸು ಗಲಿಲಾಯದ ಪ್ರಾಂತದಲ್ಲಿ ಸಂಚಾರ ಮಾಡಿದರು. ಯೆಹೂದ್ಯರು ಯೇಸುವನ್ನು ಕೊಲ್ಲುವುದಕ್ಕೆ ಹುಡುಕುತ್ತಿದ್ದುದರಿಂದ ಯೂದಾಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ.

[2] ಆಗ ಯೆಹೂದ್ಯರ ಗುಡಾರಗಳ ಹಬ್ಬವು ಹತ್ತಿರವಾಗಿತ್ತು.

[3] ಆದ್ದರಿಂದ ಯೇಸುವಿನ ಸಹೋದರರು, “ನೀನು ಮಾಡುವ ಕ್ರಿಯೆಗಳನ್ನು ನಿನ್ನ ಶಿಷ್ಯರು ಸಹ ನೋಡುವಂತೆ ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು.

[4] ಏಕೆಂದರೆ ಪ್ರಖ್ಯಾತನಾಗಲು ಬಯಸುವ ಯಾರೂ ರಹಸ್ಯವಾಗಿ ಯಾವುದನ್ನೂ ಮಾಡುವುದಿಲ್ಲ. ನೀನು ಇವುಗಳನ್ನು ಮಾಡುವುದಾದರೆ, ಲೋಕಕ್ಕೆ ನಿನ್ನನ್ನು ನೀನೇ ತೋರ್ಪಡಿಸಿಕೋ,” ಎಂದು ಯೇಸುವಿಗೆ ಹೇಳಿದರು.

[5] ಏಕೆಂದರೆ ಯೇಸುವಿನ ಸಹೋದರರು ಸಹ ಅವರನ್ನು ನಂಬಲಿಲ್ಲ.

[6] ಅದಕ್ಕೆ ಯೇಸು ಅವರಿಗೆ, “ನನ್ನ ಸಮಯವು ಇನ್ನೂ ಬಂದಿಲ್ಲ. ನಿಮ್ಮ ಸಮಯವು ಯಾವಾಗಲೂ ಸಿದ್ಧವಾಗಿದೆ.

[7] ಲೋಕವು ನಿಮ್ಮನ್ನು ದ್ವೇಷಿಸಲಾರದು. ಲೋಕದ ಕ್ರಿಯೆಗಳು ಕೆಟ್ಟವುಗಳಾಗಿವೆ ಎಂದು ಅದರ ವಿಷಯದಲ್ಲಿ ನಾನು ಸಾಕ್ಷಿ ಹೇಳುವುದರಿಂದ, ಅದು ನನ್ನನ್ನು ದ್ವೇಷಿಸುತ್ತದೆ.

[8] ನೀವು ಈ ಹಬ್ಬಕ್ಕೆ ಹೋಗಿರಿ. ನಾನು ಈ ಹಬ್ಬಕ್ಕೆ ಹೋಗುವುದಿಲ್ಲ. ಏಕೆಂದರೆ ನನ್ನ ಸಮಯವು ಇನ್ನೂ ಪೂರ್ಣವಾಗಿ ಬರಲಿಲ್ಲ,” ಎಂದರು.

[9] ಯೇಸು ಈ ಮಾತುಗಳನ್ನು ಅವರಿಗೆ ಹೇಳಿದ ಮೇಲೆ ಗಲಿಲಾಯದಲ್ಲಿಯೇ ಉಳಿದರು.

[10] ಆದರೆ ಯೇಸುವಿನ ಸಹೋದರರು ಹಬ್ಬಕ್ಕೆ ಹೋದರು. ಯೇಸು ಸಹ ಬಹಿರಂಗವಾಗಿ ಹೋಗದೆ ರಹಸ್ಯವಾಗಿ ಅಲ್ಲಿಗೆ ಹೋದರು.

[11] ಯೆಹೂದ್ಯರು ಆ ಹಬ್ಬದಲ್ಲಿ, “ಆ ಮನುಷ್ಯನು ಎಲ್ಲಿ?” ಎಂದು ಹುಡುಕುತ್ತಿದ್ದರು.

[12] ಜನರ ಗುಂಪುಗಳಲ್ಲಿ ಯೇಸುವಿನ ವಿಷಯವಾಗಿ ಬಹಳ ಗೊಣಗುಟ್ಟುವಿಕೆ ಇತ್ತು. ಏಕೆಂದರೆ ಕೆಲವರು, “ಆತ ಒಳ್ಳೆಯ ಮನುಷ್ಯ,” ಎಂದರು. ಬೇರೆ ಕೆಲವರು, “ಇಲ್ಲ ಆತ ಜನರಿಗೆ ಮೋಸಮಾಡುತ್ತಾನೆ,” ಎಂದರು.

[13] ಆದರೂ ಯೆಹೂದ್ಯರ ಭಯದ ನಿಮಿತ್ತ ಯೇಸುವಿನ ವಿಷಯದಲ್ಲಿ ಯಾರೂ ಬಹಿರಂಗವಾಗಿ ಮಾತನಾಡಲಿಲ್ಲ.

[14] ಯೇಸು ಆ ಹಬ್ಬದ ಮಧ್ಯದಲ್ಲಿ ದೇವಾಲಯಕ್ಕೆ ಹೋಗಿ ಬೋಧಿಸಿದರು.

[15] ಯೆಹೂದ್ಯರು ಆಶ್ಚರ್ಯಪಟ್ಟು, “ಏನನ್ನೂ ಕಲಿಯದಿರುವ ಈ ಮನುಷ್ಯನಿಗೆ ಇಷ್ಟೆಲ್ಲಾ ಜ್ಞಾನ ತಿಳಿದಿರುವುದು ಹೇಗೆ?” ಎಂದರು.

[16] ಅದಕ್ಕೆ ಯೇಸು ಅವರಿಗೆ, “ನನ್ನ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದ ತಂದೆಯದೇ ಆಗಿದೆ.

[17] ಯಾರಾದರೂ ದೇವರ ಚಿತ್ತವನ್ನು ಮಾಡಬಯಸುವುದಾದರೆ ಈ ಬೋಧನೆಯು ದೇವರದೋ ಅಥವಾ ನನ್ನಷ್ಟಕ್ಕೆ ನಾನೇ ಮಾತನಾಡುತ್ತೇನೋ ಎಂಬುದು ಅವರಿಗೆ ತಿಳಿಯುವುದು.

[18] ತಮ್ಮಷ್ಟಕ್ಕೆ ತಾವೇ ಮಾತನಾಡುವವರು ತಮ್ಮ ಸ್ವಂತ ಮಹಿಮೆಯನ್ನು ಹುಡುಕುತ್ತಾರೆ. ಆದರೆ ತನ್ನನ್ನು ಕಳುಹಿಸಿದ ತಂದೆಯ ಮಹಿಮೆಯನ್ನು ಹುಡುಕುವ ಮನುಷ್ಯನು ಸತ್ಯವಂತನು; ಆತನಲ್ಲಿ ಅನೀತಿಯಿಲ್ಲ.

[19] ಮೋಶೆಯು ನಿಮಗೆ ನಿಯಮವನ್ನು ಕೊಡಲಿಲ್ಲವೇ? ಆದರೂ ನಿಮ್ಮಲ್ಲಿ ಯಾರೂ ಆ ನಿಯಮದಂತೆ ನಡೆಯುವುದಿಲ್ಲ. ನೀವು ನನ್ನನ್ನು ಕೊಲ್ಲಲು ಹುಡುಕುವುದೇಕೆ?” ಎಂದು ಕೇಳಿದರು.

[20] ಅದಕ್ಕೆ ಜನರು, “ನಿನಗೆ ದೆವ್ವ ಹಿಡಿದಿದೆ. ನಿನ್ನನ್ನು ಕೊಲ್ಲುವುದಕ್ಕೆ ಹುಡುಕುವವರು ಯಾರು?” ಎಂದರು.

[21] ಯೇಸು ಅವರಿಗೆ, “ನಾನು ಒಂದು ಕ್ರಿಯೆಯನ್ನು ಮಾಡಿದೆನು. ಅದಕ್ಕೆ ನೀವೆಲ್ಲರೂ ಆಶ್ವರ್ಯಪಡುತ್ತೀರಿ.

[22] ಮೋಶೆ ನಿಮಗೆ ಸುನ್ನತಿಯನ್ನು ಇದಕ್ಕಾಗಿಯೇ ಕೊಟ್ಟನು. ಅದು ಮೋಶೆಯಿಂದಾಗಿರದೆ ನಿಮ್ಮ ಪಿತೃಗಳಿಂದಾದದ್ದು. ಆದರೆ ನೀವು ಸಬ್ಬತ್ ದಿನದಲ್ಲಿಯೂ ಸುನ್ನತಿ ಮಾಡುತ್ತೀರಿ.

[23] ಮೋಶೆಯ ನಿಯಮವನ್ನು ಉಲ್ಲಂಘಿಸದೆ ನೀವು ಸಬ್ಬತ್ ದಿನದಲ್ಲಿ ಒಬ್ಬನಿಗೆ ಸುನ್ನತಿಯನ್ನು ಮಾಡುವುದಾದರೆ ನಾನು ಒಬ್ಬ ಮನುಷ್ಯನನ್ನು ಸಬ್ಬತ್ ದಿನದಲ್ಲಿ ಸಂಪೂರ್ಣವಾಗಿ ಸ್ವಸ್ಥಮಾಡಿದ್ದಕ್ಕೆ ನನ್ನ ಮೇಲೆ ನೀವು ಏಕೆ ಕೋಪಗೊಳ್ಳುತ್ತೀರಿ?

[24] ತೋರಿಕೆಗೆ ಅನುಸಾರವಾಗಿ ತೀರ್ಪುಮಾಡಬೇಡಿರಿ. ಆದರೆ ನೀತಿಯ ತೀರ್ಪನ್ನು ಮಾಡಿರಿ,” ಎಂದರು.

[25] ಆಮೇಲೆ ಯೆರೂಸಲೇಮಿನ ಕೆಲವರು, “ಅವರು ಕೊಲ್ಲಬೇಕೆಂದು ಹುಡುಕುವುದು ಈತನನ್ನೇ ಅಲ್ಲವೇ?

[26] ಇಗೋ, ಈತನು ಬಹಿರಂಗವಾಗಿ ಮಾತನಾಡುತ್ತಿದ್ದಾನೆ. ಆದರೆ ಅವರು ಈತನಿಗೆ ಏನೂ ಹೇಳುವುದಿಲ್ಲ. ಬಹುಶಃ ಈತನೇ ನಿಜವಾದ ಕ್ರಿಸ್ತ ಎಂದು ಅಧಿಕಾರಿಗಳು ತಿಳಿದುಕೊಂಡಿದ್ದಾರೋ?

[27] ಆದರೆ ಈತನು ಎಲ್ಲಿಂದ ಬಂದವನೆಂದು ನಾವು ಬಲ್ಲೆವು. ಆದರೂ ಕ್ರಿಸ್ತನು ಬಂದಾಗ ಆತನು ಎಲ್ಲಿಂದ ಬಂದವನೆಂದು ಯಾರಿಗೂ ತಿಳಿಯದು,” ಎಂದರು.

[28] ದೇವಾಲಯದಲ್ಲಿ ಬೋಧಿಸುತ್ತಿದ್ದ ಯೇಸು, “ನೀವು ನನ್ನನ್ನು ಬಲ್ಲಿರಿ, ನಾನು ಎಲ್ಲಿಂದ ಬಂದವನೆಂದೂ ನೀವು ಬಲ್ಲಿರಿ. ನಾನು ನನ್ನಷ್ಟಕ್ಕೆ ನಾನೇ ಬಂದವನಲ್ಲ. ನನ್ನನ್ನು ಕಳುಹಿಸಿದ ತಂದೆಯು ಸತ್ಯವಂತರು. ತಂದೆಯನ್ನು ನೀವು ಅರಿತವರಲ್ಲ.

[29] ನಾನಾದರೋ ಅವರನ್ನು ಅರಿತಿದ್ದೇನೆ. ಏಕೆಂದರೆ ನಾನು ಅವರ ಕಡೆಯಿಂದ ಬಂದವನು. ಅವರೇ ನನ್ನನ್ನು ಕಳುಹಿಸಿಕೊಟ್ಟಿದ್ದಾರೆ,” ಎಂದು ಗಟ್ಟಿಯಾಗಿ ಕೂಗಿ ಹೇಳಿದರು.

[30] ಆಗ ಅವರು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಸಮಯ ಇನ್ನೂ ಬಾರದೆ ಇದ್ದುದರಿಂದ ಅವರ ಮೇಲೆ ಯಾರೂ ಕೈಹಾಕಲಿಲ್ಲ.

[31] ಜನರಲ್ಲಿ ಅನೇಕರು ಯೇಸುವನ್ನು ನಂಬಿ, “ಕ್ರಿಸ್ತನು ಬಂದಾಗ ಈತನು ಮಾಡಿದ್ದಕ್ಕಿಂತ ಹೆಚ್ಚು ಸೂಚಕಕಾರ್ಯಗಳನ್ನು ಮಾಡುವನೋ?” ಎಂದರು.

[32] ಯೇಸುವಿನ ವಿಷಯವಾಗಿ ಜನರು ತಮ್ಮತಮ್ಮೊಳಗೆ ಮಾತನಾಡುವುದನ್ನು ಫರಿಸಾಯರು ಕೇಳಿದರು. ಫರಿಸಾಯರು ಮತ್ತು ಮುಖ್ಯಯಾಜಕರು ಯೇಸುವನ್ನು ಬಂಧಿಸಲು ಕಾವಲುಗಾರರನ್ನು ಕಳುಹಿಸಿದರು.

[33] ಯೇಸು ಅವರಿಗೆ, “ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿದ್ದು ಅನಂತರ ನನ್ನನ್ನು ಕಳುಹಿಸಿದ ತಂದೆಯ ಬಳಿಗೆ ಹೋಗುತ್ತೇನೆ.

[34] ನೀವು ನನ್ನನ್ನು ಹುಡುಕುವಿರಿ. ಆದರೆ ನನ್ನನ್ನು ಕಾಣುವುದಿಲ್ಲ; ನಾನಿರುವಲ್ಲಿಗೆ ನೀವು ಬರಲಾರಿರಿ,” ಎಂದರು.

[35] ಆಗ ಯೆಹೂದಿ ನಾಯಕರು, “ನಾವು ಈತನನ್ನು ಕಾಣದ ಹಾಗೆ ಈತ ಎಲ್ಲಿಗೆ ಹೋಗಲಿದ್ದಾನೆ? ಗ್ರೀಕರ ನಡುವೆ ಚದರಿ ಹೋದವರ ಬಳಿಗೆ ಹೋಗಿ ಗ್ರೀಕರಿಗೆ ಬೋಧಿಸುವನೋ?

[36] ಈತನು, ‘ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಾಣುವುದಿಲ್ಲ ಮತ್ತು ನಾನಿರುವಲ್ಲಿಗೆ ನೀವು ಬರಲಾರಿರಿ,’ ಎಂದು ಹೇಳಿದ ಮಾತು ಏನಾಗಿರಬಹುದು?” ಎಂದು ತಮ್ಮೊಳಗೆ ಮಾತನಾಡಿಕೊಂಡರು.

[37] ಹಬ್ಬದ ಆ ಮಹಾದಿವಸವಾದ ಕಡೆಯ ದಿನದಲ್ಲಿ ಯೇಸು ನಿಂತುಕೊಂಡು, “ಯಾರಿಗಾದರೂ ಬಾಯಾರಿಕೆಯಾಗಿದ್ದರೆ ಅವರು ನನ್ನ ಬಳಿಗೆ ಬಂದು ಕುಡಿಯಲಿ.

[38] ಪವಿತ್ರ ವೇದವು ಹೇಳಿದ ಪ್ರಕಾರ ನನ್ನಲ್ಲಿ ನಂಬಿಕೆಯಿಡುವವರ ಅಂತರಂಗದಿಂದ ಜೀವಜಲದ ಹೊಳೆಗಳು ಹರಿಯುವವು,” ಎಂದು ಕೂಗಿ ಹೇಳಿದರು.

[39] ಆದರೆ ಯೇಸು ತಮ್ಮಲ್ಲಿ ನಂಬಿಕೆಯಿಡುವವರು ಹೊಂದಲಿರುವ ಪವಿತ್ರಾತ್ಮರನ್ನು ಕುರಿತು ಹೀಗೆ ಹೇಳಿದರು. ಯೇಸು ಇನ್ನೂ ಮಹಿಮೆ ಹೊಂದಿರಲಿಲ್ಲ. ಈ ಕಾರಣದಿಂದ ಪವಿತ್ರ ಆತ್ಮ ಇನ್ನೂ ಬಂದಿರಲಿಲ್ಲ.

[40] ಆದ್ದರಿಂದ ಜನರಲ್ಲಿ ಕೆಲವರು ಈ ಮಾತನ್ನು ಕೇಳಿದಾಗ, “ಈತನು ನಿಜವಾಗಿಯೂ ಪ್ರವಾದಿಯಾಗಿದ್ದಾನೆ,” ಎಂದರು.

[41] ಬೇರೆಯವರು, “ಈತನೇ ಕ್ರಿಸ್ತನು,” ಎಂದರು. ಆದರೆ ಇನ್ನೂ ಕೆಲವರು, “ಕ್ರಿಸ್ತನು ಗಲಿಲಾಯದಿಂದ ಬರುವುದು ಹೇಗೆ?

[42] ‘ಕ್ರಿಸ್ತನು ದಾವೀದನ ಸಂತಾನದಿಂದಲೂ ದಾವೀದನಿದ್ದ ಬೇತ್ಲೆಹೇಮೆಂಬ ಊರಿನಿಂದಲೂ ಬರುವನು,’ ಎಂದು ಪವಿತ್ರ ವೇದವು ಹೇಳುತ್ತದಲ್ಲವೇ?” ಎಂದರು.

[43] ಹೀಗೆ ಯೇಸುವಿನ ನಿಮಿತ್ತವಾಗಿ ಜನರಲ್ಲಿ ಭೇದ ಉಂಟಾಯಿತು.

[44] ಅವರಲ್ಲಿ ಕೆಲವರು ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಯಾರೂ ಯೇಸುವಿನ ಮೇಲೆ ಕೈಹಾಕಲಿಲ್ಲ.

[45] ಬಳಿಕ ಕಾವಲುಗಾರರು, ಮುಖ್ಯಯಾಜಕರ ಹಾಗೂ ಫರಿಸಾಯರ ಬಳಿಗೆ ಬಂದಾಗ ಅವರು, “ನೀವು ಏಕೆ ಆತನನ್ನು ಹಿಡಿದು ತರಲಿಲ್ಲ?” ಎಂದು ಕೇಳಿದರು.

[46] ಅದಕ್ಕೆ ಕಾವಲುಗಾರರು, “ಯಾವ ಮನುಷ್ಯನೂ ಎಂದೂ ಈತನು ಮಾತನಾಡುವಂತೆ ಮಾತನಾಡಿದ್ದಿಲ್ಲ,” ಎಂದರು.

[47] ಆಗ ಫರಿಸಾಯರು ಅವರಿಗೆ, “ನೀವು ಸಹ ಮರುಳಾದೀರಾ?

[48] ಅಧಿಕಾರಿಗಳಲ್ಲಿಯೂ ಫರಿಸಾಯರಲ್ಲಿಯೂ ಯಾರಾದರೂ ಯೇಸುವನ್ನು ನಂಬಿದ್ದುಂಟೇ?

[49] ಆದರೆ ಮೋಶೆಯ ನಿಯಮವನ್ನು ಅರಿಯದ ಈ ಜನರು ಶಾಪಗ್ರಸ್ತರೇ,” ಎಂದು ಹೇಳಿದರು.

[50] ಯೇಸುವಿನ ಬಳಿಗೆ ಒಮ್ಮೆ ಬಂದಿದ್ದ ನಿಕೊದೇಮನು ಅವರಲ್ಲಿ ಒಬ್ಬನಾಗಿದ್ದನು. ಅವನು ಅವರಿಗೆ,

[51] “ಒಬ್ಬ ಮನುಷ್ಯನನ್ನು ಮೊದಲು ವಿಚಾರಿಸಿ, ಅವನು ಮಾಡುವುದೇನೆಂದು ತಿಳಿದುಕೊಳ್ಳದೆ ನಮ್ಮ ನಿಯಮವು ಅವನಿಗೆ ತೀರ್ಪುಮಾಡುವುದುಂಟೇ?” ಎಂದನು.

[52] ಅವರು ಅವನಿಗೆ, “ನೀನು ಸಹ ಗಲಿಲಾಯದವನೋ? ಗಲಿಲಾಯದಿಂದ ಒಬ್ಬ ಪ್ರವಾದಿಯೂ ಏಳುವುದಿಲ್ಲ, ನೀನೇ ಪರಿಶೋಧಿಸಿ ನೋಡು,” ಎಂದರು.

[53] ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು.

ಯೋಹಾನ — Chapters