[1] “ ‘ಯೆಹೋವ ದೇವರು ಹೇಳುವುದೇನೆಂದರೆ, ಆ ಕಾಲದಲ್ಲಿ ಅವರು ಯೆಹೂದದ ಅರಸರ ಎಲುಬುಗಳನ್ನೂ, ಅದರ ಪ್ರಧಾನರ ಎಲುಬುಗಳನ್ನೂ, ಯಾಜಕರ ಎಲುಬುಗಳನ್ನೂ, ಪ್ರವಾದಿಗಳ ಎಲುಬುಗಳನ್ನೂ, ಯೆರೂಸಲೇಮಿನ ನಿವಾಸಿಗಳ ಎಲುಬುಗಳನ್ನೂ ಅವರ ಸಮಾಧಿಗಳೊಳಗಿಂದ ಹೊರಗೆ ತರುವರು.
[2] ಅವರು ಪ್ರೀತಿ ಮಾಡಿದಂಥ, ಸೇವಿಸಿದಂಥ, ಹಿಂಬಾಲಿಸಿದಂಥ, ಹುಡುಕಿದಂಥ, ಆರಾಧಿಸಿದಂಥ, ಸೂರ್ಯನ ಮುಂದೆಯೂ, ಚಂದ್ರನ ಮುಂದೆಯೂ, ಸಮಸ್ತ ಆಕಾಶ ಸೈನ್ಯದ ಮುಂದೆಯೂ ಅವುಗಳನ್ನು ತೆರೆದಿಡುವರು; ಹೌದು, ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರವಾಗುವುವು.
[3] ಈ ಕೆಟ್ಟ ಮನೆತನದವರನ್ನು ನಾನು ಯಾವಾವ ಸ್ಥಳಗಳಿಗೆ ಅಟ್ಟಿಬಿಡುವೆನೋ, ಅಲ್ಲೆಲ್ಲಾ ಇವರಲ್ಲಿ ಅಳಿದುಳಿದವರು ಜೀವಿಸುವುದಕ್ಕಿಂತ ಸಾವೇ ಲೇಸೆಂದು ಬಯಸುವರು ಎಂದು ಸೇನಾಧೀಶ್ವರ ಯೆಹೋವ ದೇವರು ನುಡಿಯುತ್ತಾರೆ.’
[4] “ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಅವರು ಬಿದ್ದು ಮತ್ತೆ ಏಳರೋ? ಹಿಂದಿರುಗಿದವನು ಮತ್ತೆ ಬರುವುದಿಲ್ಲವೋ?
[5] ಹಾಗಾದರೆ ಈ ಯೆರೂಸಲೇಮಿನ ಜನರು ಎಂದಿಗೂ ಹಿಂದಿರುಗದಂತೆ ಏಕೆ ಬಿಟ್ಟು ಹೋಗಿದ್ದಾರೆ? ಮೋಸವನ್ನು ಬಿಗಿಯಾಗಿ ಹಿಡಿಯುತ್ತಾರೆ, ಹಿಂದಿರುಗುವುದಕ್ಕೆ ನಿರಾಕರಿಸುತ್ತಾರೆ.
[6] ನಾನು ಕಿವಿಗೊಟ್ಟು ಕೇಳಿದೆನು. ಆದರೆ ಅವರು ಯಥಾರ್ಥವಾಗಿ ಮಾತನಾಡಲಿಲ್ಲ. ಯಾವನಾದರೂ, “ನಾನು ಎಂಥಾ ಕೆಲಸ ಮಾಡಿದ್ದೇನೆ,” ಎಂದುಕೊಂಡು ತನ್ನ ಕೆಟ್ಟತನದ ನಿಮಿತ್ತ ಪಶ್ಚಾತ್ತಾಪ ಪಡಲಿಲ್ಲ. ಕುದುರೆ ಯುದ್ಧಕ್ಕೆ ರಭಸವಾಗಿ ಓಡುವ ಪ್ರಕಾರ, ಪ್ರತಿಯೊಬ್ಬನೂ ತನ್ನ ದಾರಿಗೆ ತಿರುಗಿದ್ದಾನೆ.
[7] ಹೌದು, ಆಕಾಶದಲ್ಲಿಯ ಬಕಪಕ್ಷಿಯು ತನ್ನ ನಿಯಮಿತ ಕಾಲಗಳನ್ನು ತಿಳಿಯುತ್ತದೆ. ಪಾರಿವಾಳವೂ, ಬಾನಕ್ಕಿಯೂ, ಕೊಕ್ಕರೆಯೂ ತಮ್ಮ ಗಮನಾಗಮನದ ಸಮಯವನ್ನು ಗಮನಿಸುತ್ತವೆ. ಆದರೆ ನನ್ನ ಜನರು ಯೆಹೋವ ದೇವರು ಅಪೇಕ್ಷಿಸುವುದನ್ನು ಅರಿಯರು.
[8] “ ‘ “ನಾವು ಜ್ಞಾನಿಗಳು, ಯೆಹೋವ ದೇವರ ನಿಯಮವು ನಮ್ಮ ಸಂಗಡ ಇದೆ,” ಎಂದು ನೀವು ಹೇಳುವುದು ಹೇಗೆ? ಇಗೋ, ನಿಶ್ಚಯವಾಗಿ ಆತನು ಅದನ್ನು ವ್ಯರ್ಥವಾಗಿ ಮಾಡಿದ್ದಾನೆ. ನಿಯಮಶಾಸ್ತ್ರಿಗಳ ಲೇಖನಿಯು ಮೋಸಕರವಾಗಿದೆ.
[9] ಜ್ಞಾನಿಗಳು ನಾಚಿಕೊಂಡಿದ್ದಾರೆ. ದಿಗಿಲುಪಟ್ಟು ಸಿಕ್ಕಿಕೊಂಡಿದ್ದಾರೆ. ಇಗೋ, ಯೆಹೋವ ದೇವರ ವಾಕ್ಯವನ್ನು ನಿರಾಕರಿಸಿದ್ದಾರೆ. ಹಾಗಾದರೆ ಅವರಲ್ಲಿ ಯಾವ ಜ್ಞಾನವಿದೆ.
[10] ಆದ್ದರಿಂದ ಅವರ ಹೆಂಡತಿಯರನ್ನು ಬೇರೊಬ್ಬರಿಗೂ, ಅವರ ಹೊಲಗಳನ್ನು ಹೊಸ ಮಾಲಿಕನಿಗೆ ನಾನು ಕೊಟ್ಟುಬಿಡುವೆನು. ಏಕೆಂದರೆ, ಚಿಕ್ಕವನು ಮೊದಲುಗೊಂಡು ದೊಡ್ಡವರತನಕ ಅವರೆಲ್ಲರೂ ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕರವರೆಗೆ ಪ್ರತಿಯೊಬ್ಬನೂ ಮೋಸದಿಂದ ನಡೆದುಕೊಳ್ಳುತ್ತಾನೆ.
[11] ಏಕೆಂದರೆ, ಅವರು ನನ್ನ ಜನರ ಗಾಯವನ್ನು ಹಗುರವಾಗಿ ಸ್ವಸ್ಥಮಾಡಿದ್ದಾರೆ. ಸಮಾಧಾನವಿಲ್ಲದಿರುವಾಗ, “ಸಮಾಧಾನ, ಸಮಾಧಾನ,” ಎಂದು ಹೇಳುತ್ತಾರೆ.
[12] ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ? ಇಲ್ಲ, ಸ್ವಲ್ಪವಾದರೂ ನಾಚಿಕೆ ಪಡಲಿಲ್ಲ, ಲಜ್ಜೆಯನ್ನೇ ಅರಿಯರು. ಆದ್ದರಿಂದ ಬೀಳುವವರೊಳಗೆ ಅವರು ಬೀಳುವರು. ನಾನು ಅವರನ್ನು ದಂಡಿಸುವ ಕಾಲದಲ್ಲಿ, ಅವರು ಕೆಳಗೆ ಬೀಳುವರು, ಎಂದು ಯೆಹೋವ ದೇವರು ಹೇಳುತ್ತಾರೆ.
[13] “ ‘ನಾನು ಅವರ ಫಸಲನ್ನು ನಿರ್ಮೂಲ ಮಾಡಿಬಿಡುವೆನು, ಎಂದು ಯೆಹೋವ ದೇವರು ಹೇಳುತ್ತಾರೆ. ದ್ರಾಕ್ಷಿ ಗಿಡದಲ್ಲಿ ದ್ರಾಕ್ಷಿ ಹಣ್ಣುಗಳು ಇರುವುದಿಲ್ಲ. ಅಂಜೂರ ಮರದಲ್ಲಿ ಅಂಜೂರ ಹಣ್ಣುಗಳು ಇರುವುದಿಲ್ಲ. ಎಲೆಯು ಬಾಡುವುದು. ನಾನು ಅವರಿಗೆ ಕೊಟ್ಟವುಗಳು ಅವರನ್ನು ಬಿಟ್ಟು ಹೋಗುವುವು.’ ”
[14] ನಾವು ಏಕೆ ಸುಮ್ಮನೆ ಕೂತುಕೊಳ್ಳುತ್ತೇವೆ? ನೀವು ಕೂಡಿಕೊಳ್ಳಿರಿ, ಕೋಟೆಯುಳ್ಳ ಪಟ್ಟಣಗಳಲ್ಲಿ ಪ್ರವೇಶಿಸೋಣ, ಅಲ್ಲಿ ನಾಶವಾಗೋಣ. ಏಕೆಂದರೆ, ನಾವು ನಮ್ಮ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ ಕಾರಣ, ನಮ್ಮ ದೇವರಾದ ಯೆಹೋವ ದೇವರು ನಮ್ಮನ್ನು ನಾಶಮಾಡಿ, ನಮಗೆ ವಿಷದ ನೀರನ್ನು ಕುಡಿಯಲು ಕೊಟ್ಟಿದ್ದಾರೆ.
[15] ಸಮಾಧಾನಕ್ಕೆ ಕಾದುಕೊಂಡೆವು, ಆದರೆ ಒಳ್ಳೆಯದೇನೂ ಬರಲಿಲ್ಲ. ಆರೋಗ್ಯದ ಸಮಯಕ್ಕೆ ಕಾದಿದ್ದೆವು. ಆದರೆ ಇಗೋ, ಆತಂಕವನ್ನು ನೋಡುತ್ತೇವೆ.
[16] ಅವನ ಕುದುರೆಗಳ ಶ್ವಾಸವು ದಾನಿನಿಂದ ಕೇಳಿಸಿತು. ಅವನ ಬಲವಾದವುಗಳ ಕೆನೆತದ ಶಬ್ದದಿಂದ ದೇಶವೆಲ್ಲಾ ನಡುಗುತ್ತದೆ. ಏಕೆಂದರೆ, ಅವರು ದೇಶವನ್ನೂ, ಅದರಲ್ಲಿರುವುದೆಲ್ಲವನ್ನೂ, ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ನುಂಗಲು ಬಂದಿದ್ದಾರೆ.
[17] “ನಾನು ನಿಮ್ಮಲ್ಲಿ ವಿಷಸರ್ಪಗಳನ್ನು ಮಂತ್ರಕ್ಕೆ ಅಧೀನವಾಗದ ನಾಗಗಳನ್ನೂ ಕಳುಹಿಸುತ್ತೇನೆ. ಅವು ನಿಮ್ಮನ್ನು ಕಚ್ಚುವವು,” ಎಂದು ಯೆಹೋವ ದೇವರು ಹೇಳುತ್ತಾರೆ.
[18] ದುಃಖದ ನಿಮಿತ್ತ ನನ್ನನ್ನು ಆಧರಿಸಿ ಕೊಳ್ಳಲು ನಾನು ಮನಸ್ಸು ಮಾಡಿದಾಗ, ನನ್ನ ಹೃದಯವು ನನ್ನಲ್ಲಿ ಕುಂದಿಹೋಗಿದೆ.
[19] ದೂರದೇಶದಿಂದ ನನ್ನ ಜನರು ಕೂಗುವ ಮೊರೆಯಿದು: “ಯೆಹೋವ ದೇವರು ಚೀಯೋನಿನಲ್ಲಿ ಇಲ್ಲವೋ? ಅವಳ ಅರಸನು ಅವಳಲ್ಲಿ ಇಲ್ಲವೋ?” ಎಂಬುದೇ ಆದರೂ ಅವರು ತಮ್ಮ ವಿಗ್ರಹಗಳಿಂದಲೂ, ವಿಚಿತ್ರವಾದ ವ್ಯರ್ಥತ್ವಗಳಿಂದಲೂ ನನಗೆ ಕೋಪವನ್ನೆಬ್ಬಿಸಿದ್ದು ಏಕೆ?
[20] “ಸುಗ್ಗಿ ಮುಗಿಯಿತು. ಬೇಸಿಗೆ ಕಾಲ ತೀರಿತು. ನಾವಾದರೋ ರಕ್ಷಣೆ ಹೊಂದಲಿಲ್ಲ.”
[21] ನನ್ನ ಜನರು ತುಳಿತಕ್ಕೆ ಒಳಗಾದದ್ದರಿಂದ ನಾನೂ ತುಳಿತಕ್ಕೆ ಒಳಗಾದೆನು. ದುಃಖಿಸಿದೆನು. ಭಯವು ನನ್ನನ್ನು ಹಿಡಿಯಿತು.
[22] ಗಿಲ್ಯಾದಿನಲ್ಲಿ ಮುಲಾಮು ಇಲ್ಲವೋ? ಅಲ್ಲಿ ವೈದ್ಯನಿಲ್ಲವೋ? ಹಾಗಾದರೆ ನನ್ನ ಜನರ ಗಾಯಕ್ಕೆ ಏಕೆ ಸ್ವಸ್ಥತೆ ಇಲ್ಲ?