[1] ಪ್ರವಾದಿಯಾದ ಯೆರೆಮೀಯನು ಸೆರೆಯಲ್ಲಿರುವ ಹಿರಿಯರಲ್ಲಿ ಉಳಿದವರಿಗೂ ಯಾಜಕರಿಗೂ ಪ್ರವಾದಿಗಳಿಗೂ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ಬಾಬಿಲೋನಿಗೆ ಒಯ್ದ ಜನರೆಲ್ಲರಿಗೂ
[2] ಅರಸನಾದ ಯೆಕೊನ್ಯನೂ ರಾಜಮಾತೆಯೂ ಕಂಚುಕಿಗಳೂ ಯೆಹೂದದ ಯೆರೂಸಲೇಮಿನ ಪ್ರಧಾನರೂ ಬಡಿಗೆಯವರೂ ಕಮ್ಮಾರರೂ ಯೆರೂಸಲೇಮನ್ನು ಬಿಟ್ಟುಹೋದ ಮೇಲೆ ಈ ಪತ್ರವನ್ನು ಬರೆದನು.
[3] ಯೆಹೂದದ ಅರಸನಾದ ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಕಳುಹಿಸಿದ ಶಾಫಾನನ ಮಗ ಎಲ್ಲಾಸನ ಕೈಯಿಂದಲೂ ಹಿಲ್ಕೀಯನ ಮಗನಾದ ಗೆಮರೀಯನ ಕೈಯಿಂದಲೂ ಕಳುಹಿಸಿದ ಪತ್ರ:
[4] ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಯೆರೂಸಲೇಮಿನಿಂದ ಬಾಬಿಲೋನಿಗೆ ನಾನು ಕರೆದೊಯ್ದ ಸೆರೆಯವರೆಲ್ಲರಿಗೆ ಹೇಳುವುದೇನೆಂದರೆ:
[5] “ಮನೆಗಳನ್ನು ಕಟ್ಟಿ ವಾಸಮಾಡಿರಿ. ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ತಿನ್ನಿರಿ.
[6] ಮದುವೆಮಾಡಿಕೊಂಡು, ಪುತ್ರಪುತ್ರಿಯರನ್ನು ಪಡೆಯಿರಿ. ನಿಮ್ಮ ಪುತ್ರರಿಗೆ ಹೆಂಡತಿಯರನ್ನು ಹುಡುಕಿರಿ. ನಿಮ್ಮ ಪುತ್ರಿಯರನ್ನು ಮದುವೆಮಾಡಿಕೊಡಿರಿ; ಅವರು ಪುತ್ರಪುತ್ರಿಯರನ್ನು ಹೆರಲಿ. ಹೀಗೆ ನೀವು ಕಡಿಮೆಯಾಗದೆ, ಅಲ್ಲಿ ಹೆಚ್ಚಿರಿ.
[7] ನಾನು ನಿಮ್ಮನ್ನು ಸೆರೆಯಾಗಿ ಒಯ್ದ ಪಟ್ಟಣದ ಸಮಾಧಾನ ಮತ್ತು ಸಮೃದ್ಧಿಯನ್ನು ಹುಡುಕಿರಿ. ಅದಕ್ಕೋಸ್ಕರ ಯೆಹೋವ ದೇವರಿಗೆ ಪ್ರಾರ್ಥನೆಮಾಡಿರಿ. ಏಕೆಂದರೆ ಅದರ ಸಮಾಧಾನದಿಂದ ನಿಮಗೆ ಸಮಾಧಾನವಾಗುವುದು.”
[8] ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳೂ ನಿಮ್ಮ ಶಕುನದವರೂ ನಿಮಗೆ ಮೋಸಮಾಡದಿರಲಿ. ನೀವು ಕೇಳುವ ನಿಮ್ಮ ಕನಸುಗಳಿಗೆ ಕಿವಿಗೊಡಬೇಡಿರಿ.
[9] ಏಕೆಂದರೆ ಅವರು ನಿಮಗೆ ನನ್ನ ಹೆಸರಿನಲ್ಲಿ ಸುಳ್ಳಾಗಿ ಪ್ರವಾದಿಸುತ್ತಾರೆ. ನಾನು ಅವರನ್ನು ಕಳುಹಿಸಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
[10] ಯೆಹೋವ ದೇವರು ಹೀಗೆ ಹೇಳುತ್ತಾರೆ: “ಬಾಬಿಲೋನಿನಲ್ಲಿ ಎಪ್ಪತ್ತು ವರ್ಷ ತುಂಬಿದ ಮೇಲೆ ನಿಮ್ಮನ್ನು ಪರಾಮರಿಸುವೆನು. ನನ್ನ ಒಳ್ಳೆಯ ವಾಕ್ಯವನ್ನು ನಿಮ್ಮ ವಿಷಯದಲ್ಲಿ ಸ್ಥಾಪಿಸಿ, ನಿಮ್ಮನ್ನು ತಿರುಗಿ ಈ ಸ್ಥಳಕ್ಕೆ ಬರಮಾಡುವೆನು.
[11] ನಾನು ನಿಮ್ಮನ್ನು ಕುರಿತು ಮಾಡುವ ಯೋಜನೆಗಳನ್ನು ಬಲ್ಲೆನು. ಅವು ಕೇಡಿಗಲ್ಲ, ಹಿತಕ್ಕಾಗಿರುವ ಯೋಜನೆಗಳು. ನಿಮಗೆ ಭವಿಷ್ಯವನ್ನೂ, ನಿರೀಕ್ಷೆಯನ್ನೂ ಕೊಡುವುದಕ್ಕಿವೆ.
[12] ಆಗ ನನ್ನನ್ನು ಕರೆಯುವಿರಿ. ಹೋಗಿ ನನಗೆ ಪ್ರಾರ್ಥನೆ ಮಾಡುವಿರಿ. ನಾನು ನಿಮಗೆ ಕಿವಿಗೊಡುವೆನು.
[13] ನನ್ನನ್ನು ಹುಡುಕುವಿರಿ. ಪೂರ್ಣಹೃದಯದಿಂದ ನನ್ನನ್ನು ಹುಡುಕುವಾಗ, ನನ್ನನ್ನು ಕಂಡುಕೊಳ್ಳುವಿರಿ.
[14] ನಿಮಗೆ ದೊರೆಯುವೆನು. ನಿಮ್ಮ ಸೆರೆಯನ್ನು ತಿರುಗಿಸಿ ನಾನು ನಿಮ್ಮನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಿಂದಲೂ, ಎಲ್ಲಾ ಸ್ಥಳಗಳಿಂದಲೂ ನಿಮ್ಮನ್ನು ಕೂಡಿಸುವೆನು. ನಾನು ಯಾವ ಸ್ಥಳದಿಂದ ನಿಮ್ಮನ್ನು ಸೆರೆಯಾಗಿ ಕಳುಹಿಸಿದೆನೋ, ಆ ಸ್ಥಳಕ್ಕೆ ನಿಮ್ಮನ್ನು ತಿರುಗಿ ಬರಮಾಡುವೆನು.”
[15] ಆದರೆ, “ಯೆಹೋವ ದೇವರು ನಮಗೆ ಬಾಬಿಲೋನಿನಲ್ಲಿ ಪ್ರವಾದಿಗಳನ್ನು ಎಬ್ಬಿಸಿದ್ದಾನೆ,” ಎಂದು ನೀವು ಹೇಳಿದ್ದರಿಂದ,
[16] ದಾವೀದನ ಸಿಂಹಾಸನದಲ್ಲಿ ಕೂತುಕೊಳ್ಳುವ ಅರಸನನ್ನು ಕುರಿತು, ನಿಮ್ಮ ಸಂಗಡ ಸೆರೆಗೆ ಹೊರಡದೆ, ಈ ಪಟ್ಟಣದಲ್ಲಿ ವಾಸವಾಗಿರುವ ನಿಮ್ಮ ಸಹೋದರರಾದ ಜನರೆಲ್ಲರನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ
[17] ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ನಾನು ಅವರಲ್ಲಿ ಖಡ್ಗವನ್ನೂ ಕ್ಷಾಮವನ್ನೂ ವ್ಯಾಧಿಯನ್ನೂ ಕಳುಹಿಸಿ, ಅವರನ್ನು ಕೆಟ್ಟವರನ್ನಾಗಿ ಮಾಡಿರುವುದರಿಂದ, ತಿನ್ನಕೂಡದ ಅಸಹ್ಯವಾದ ಅಂಜೂರಗಳ ಹಾಗೆ ಮಾಡುವೆನು.
[18] ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಅವರನ್ನು ಹಿಂಸಿಸಿ, ನಾನು ಅವರನ್ನು ಓಡಿಸಿಬಿಟ್ಟ ಎಲ್ಲಾ ಜನಾಂಗಗಳಲ್ಲಿ ಶಾಪಕ್ಕೂ ಭಯಕ್ಕೂ ಪರಿಹಾಸ್ಯಕ್ಕೂ ನಿಂದೆಗೂ ಗುರಿಯಾಗುವ ಹಾಗೆ ಒಪ್ಪಿಸಿಬಿಡುವೆನು.
[19] ಏಕೆಂದರೆ ಅವರು ನನ್ನ ವಾಕ್ಯಗಳನ್ನು ಕೇಳಲಿಲ್ಲ. ನಾನು ಅವರಿಗೆ ನನ್ನ ಸೇವಕರಾದ ಪ್ರವಾದಿಗಳನ್ನು ಬೆಳಿಗ್ಗೆ ಪುನಃ ಕಳುಹಿಸಿದೆನು. ಆದರೆ ಅವರು ಕೇಳಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
[20] ಆದ್ದರಿಂದ ನಾನು ಯೆರೂಸಲೇಮಿನಿಂದ ಬಾಬಿಲೋನಿಗೆ ಕಳುಹಿಸಿದ ಸೆರೆಯವರೆಲ್ಲರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ,
[21] ನನ್ನ ಹೆಸರಿನಲ್ಲಿ ನಿಮಗೆ ಸುಳ್ಳನ್ನು ಪ್ರವಾದಿಸುವ ಕೊಲಾಯನ ಮಗ ಅಹಾಬನ ವಿಷಯವೂ, ಮಾಸೇಯನ ಮಗ ಚಿದ್ಕೀಯನ ವಿಷಯವೂ, ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಅವರನ್ನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿ ಒಪ್ಪಿಸುತ್ತೇನೆ. ಅವನು ಅವರನ್ನು ನಿಮ್ಮ ಕಣ್ಣುಗಳ ಮುಂದೆ ಕೊಂದುಹಾಕುವನು.
[22] ಬಾಬಿಲೋನಿನಲ್ಲಿರುವ ಯೆಹೂದದ ಸೆರೆಯವರೆಲ್ಲರು ಅವರಿಂದ ಶಾಪವನ್ನು ತೆಗೆದುಕೊಂಡು, ‘ಬಾಬಿಲೋನಿನ ಅರಸನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಹಾಗೆಯೂ, ಅಹಾಬನ ಹಾಗೆಯೂ ಯೆಹೋವ ದೇವರು ನಿನಗೆ ಮಾಡಲಿ,’ ಎಂದು ಹೇಳುವರು.
[23] ಏಕೆಂದರೆ ಅವರು ತಮ್ಮ ನೆರೆಯವರ ಹೆಂಡರ ಸಂಗಡ ವ್ಯಭಿಚಾರ ಮಾಡಿ, ನನ್ನ ಹೆಸರಿನಲ್ಲಿ ಸುಳ್ಳಾಗಿ ನಾನು ಅವರಿಗೆ ಆಜ್ಞಾಪಿಸದೆ ಇದ್ದ ಮಾತುಗಳನ್ನಾಡಿ, ಇಸ್ರಾಯೇಲಿನಲ್ಲಿ ನೀಚತನವನ್ನು ನಡೆಸಿದರು. ನಾನೇ ಅದನ್ನು ತಿಳಿದು ಸಾಕ್ಷಿಯಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.
[24] ನೆಹೆಲಾಮ್ಯನಾದ ಶೆಮಾಯನಿಗೆ ನೀನು ಹೀಗೆ ಹೇಳು:
[25] “ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀನು ನಿನ್ನ ಹೆಸರಿನಲ್ಲಿ ಯೆರೂಸಲೇಮಿನವರೆಲ್ಲರಿಗೂ, ಮಾಸೇಯನ ಮಗ ಯಾಜಕನಾದ ಚೆಫನ್ಯನಿಗೂ ಯಾಜಕರೆಲ್ಲರಿಗೂ ಪತ್ರಗಳನ್ನು ಕಳುಹಿಸಿದೆಯಲ್ಲಾ?
[26] ‘ಏಕೆಂದರೆ, ಹುಚ್ಚನಾದ ತನ್ನನ್ನು ಪ್ರವಾದಿಯಾಗಿ ಮಾಡಿಕೊಳ್ಳುವಂಥ ಪ್ರತಿ ಮನುಷ್ಯನಿಗೆ ಯೆಹೋವ ದೇವರ ಆಲಯದಲ್ಲಿ ಅಧಿಕಾರಿಗಳು ಇರುವ ಹಾಗೆಯೂ, ನೀನು ಅಂಥವರನ್ನು ಕೋಳದಲ್ಲಿಯೂ, ಸೆರೆಯಲ್ಲಿಯೂ ಇಡುವ ಹಾಗೆಯೂ, ಯೆಹೋವ ದೇವರು ಯಾಜಕನಾದ ಯೆಹೋಯಾದನಿಗೆ ಬದಲಾಗಿ ನಿನ್ನನ್ನು ಯಾಜಕನಾಗಿ ಇಟ್ಟಿದ್ದಾರೆ.
[27] ಹೀಗಿರಲಾಗಿ ನಿಮಗೆ ತನ್ನನ್ನು ಪ್ರವಾದಿಯಾಗಿ ಮಾಡಿಕೊಳ್ಳುವ ಅನಾತೋತಿನವನಾದ ಯೆರೆಮೀಯನನ್ನು ನೀನು ಏಕೆ ಗದರಿಸಲಿಲ್ಲ?
[28] ಏಕೆಂದರೆ, ಅವನು ಸೆರೆಯು ಬಹಳ ದೀರ್ಘವಾಗುವುದು, ಮನೆಗಳನ್ನು ಕಟ್ಟಿ ವಾಸಮಾಡಿರಿ; ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ತಿನ್ನಿರಿ; ಎಂದು ನಮಗೆ ಬಾಬಿಲೋನಿಗೆ ಹೇಳಿ ಕಳುಹಿಸಿದ್ದಾನೆ.’ ”
[29] ಆಗ ಯಾಜಕನಾದ ಚೆಫನ್ಯನು ಈ ಪತ್ರವನ್ನು ಪ್ರವಾದಿಯಾದ ಯೆರೆಮೀಯನಿಗೆ ಓದಿ ಹೇಳಿದನು.
[30] ಆಗ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂದಿತು:
[31] “ನೀನು ಸೆರೆಯವರೆಲ್ಲರಿಗೆ ಹೇಳಿ ಕಳುಹಿಸಬೇಕಾದದ್ದೇನೆಂದರೆ, ‘ಯೆಹೋವ ದೇವರು ನೆಹೆಲಾಮ್ಯನಾದ ಶೆಮಾಯನ ವಿಷಯವಾಗಿ ಹೀಗೆ ಹೇಳುತ್ತಾರೆ. ಶೆಮಾಯನು, ನಾನು ಅವನನ್ನು ಕಳುಹಿಸದೆ ಇರುವಾಗ, ನಿಮಗೆ ಪ್ರವಾದಿಸಿ, ನಿಮ್ಮನ್ನು ಸುಳ್ಳಿನಲ್ಲಿ ನಂಬಿಕೆ ಇಡಮಾಡಿದ ಕಾರಣ,
[32] ಯೆಹೋವ ದೇವರು ಹೀಗೆ ಹೇಳುತ್ತಾರೆ, ಇಗೋ, ನಾನು ನೆಹೆಲಾಮ್ಯನಾದ ಶೆಮಾಯನನ್ನೂ, ಅವನ ಸಂತಾನವನ್ನೂ ದಂಡಿಸುತ್ತೇನೆ. ಈ ಜನರೊಳಗೆ ವಾಸಿಸುವುದಕ್ಕೆ ಅವನಿಗೆ ಒಬ್ಬನೂ ಇರುವುದಿಲ್ಲ. ನಾನು ನನ್ನ ಜನರಿಗೆ ಮಾಡುವ ಒಳ್ಳೆಯದನ್ನು ಅವನು ನೋಡುವುದಿಲ್ಲವೆಂದು ಯೆಹೋವ ದೇವರು ಹೇಳುತ್ತಾರೆ. ಏಕೆಂದರೆ ಅವನು ಯೆಹೋವ ದೇವರಿಗೆ ವಿರೋಧವಾಗಿ ಬೋಧಿಸಿದ್ದಾನೆ.’ ”