Skip to content
Opens in a new window
Listen to this chapter • 6:35

[1] ಯೆಹೋವ ದೇವರು ಹೀಗೆ ಹೇಳುತ್ತಾನೆ: “ಯೆಹೂದದ ಅರಸನ ಮನೆಗೆ ಇಳಿದು ಹೋಗಿ, ಅಲ್ಲಿ ಈ ವಾಕ್ಯವನ್ನು ಹೇಳು:

[2] ‘ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಯೆಹೂದದ ಅರಸನೇ, ನೀನೂ, ನಿನ್ನ ಸೇವಕರೂ ಈ ಬಾಗಿಲುಗಳಿಂದ ಪ್ರವೇಶಿಸುವ ನಿನ್ನ ಜನರೂ ಸಹಿತವಾಗಿ ಯೆಹೋವ ದೇವರ ವಾಕ್ಯವನ್ನು ಕೇಳಿರಿ.

[3] ಯೆಹೋವ ದೇವರು ಹೇಳುವುದೇನೆಂದರೆ: ನ್ಯಾಯವನ್ನೂ, ನೀತಿಯನ್ನೂ ನಡೆಸಿರಿ. ಸುಲಿಗೆಯಾದವನನ್ನು ಬಲಾತ್ಕಾರಿಯ ಕೈಯೊಳಗಿಂದ ತಪ್ಪಿಸಿರಿ. ಪರದೇಶಸ್ಥನಿಗೆ, ದಿಕ್ಕಿಲ್ಲದವನಿಗೆ ಮತ್ತು ವಿಧವೆಗೆ ಉಪದ್ರವವನ್ನಾದರೂ, ಬಲಾತ್ಕಾರವನ್ನಾದರೂ ಮಾಡಬೇಡಿರಿ. ಈ ಸ್ಥಳದಲ್ಲಿ ನಿರಪರಾಧದ ರಕ್ತವನ್ನು ಚೆಲ್ಲಬೇಡಿರಿ.

[4] ನೀವು ನಿಶ್ಚಯವಾಗಿ ಈ ಕಾರ್ಯವನ್ನು ಮಾಡಿದರೆ, ಆಗ ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವರೂ, ರಥಗಳಲ್ಲಿಯೂ, ಕುದುರೆಗಳ ಮೇಲೆಯೂ ಸವಾರಿ ಮಾಡುವ ಅರಸರು ತಮ್ಮ ಸೇವಕರ ಮತ್ತು ತಮ್ಮ ಜನರಸಹಿತವಾಗಿ ಈ ಅರಮನೆಯ ಬಾಗಿಲುಗಳಿಂದ ಪ್ರವೇಶಿಸಿದರು.

[5] ಆದರೆ ನೀವು ಈ ವಾಕ್ಯಗಳನ್ನು ಕೇಳದೆ ಹೋದರೆ, ಈ ಅರಮನೆ ಹಾಳಾಗುವುದು ಎಂದು ನನ್ನ ಮೇಲೆ ಆಣೆ ಇಡುತ್ತೇನೆಂದು ಯೆಹೋವ ದೇವರು ಹೇಳುತ್ತಾರೆ.’ ”

[6] ಯೆಹೋವ ದೇವರು ಯೆಹೂದದ ಅರಸನ ಅರಮನೆಗೆ ಹೀಗೆ ಹೇಳುತ್ತಾರೆ: “ನೀನು ನನಗೆ ಗಿಲ್ಯಾದೂ, ಲೆಬನೋನಿನ ಗಿರಿಶೃಂಗ ಆಗಿದ್ದೀ. ಆದರೂ ನಿಶ್ಚಯವಾಗಿ ನಿನ್ನನ್ನು ಮರುಭೂಮಿಯಾಗಿಯೂ, ನಿವಾಸಿಗಳಿಲ್ಲದ ಪಟ್ಟಣಗಳನ್ನಾಗಿಯೂ ಮಾಡುವೆನು.

[7] ನಿನಗೆ ವಿರೋಧವಾಗಿ ತಮ್ಮ ತಮ್ಮ ಆಯುಧಗಳಿಂದ ನಾಶಮಾಡುವವರನ್ನು ಸಿದ್ಧಮಾಡುತ್ತೇನೆ. ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.

[8] “ಅನೇಕ ಜನಾಂಗಗಳು ಈ ಪಟ್ಟಣವನ್ನು ಹಾದುಹೋಗುವರು. ‘ಯೆಹೋವ ದೇವರು ಈ ದೊಡ್ಡ ಪಟ್ಟಣಕ್ಕೆ ಏಕೆ ಈ ಪ್ರಕಾರ ಮಾಡಿದ್ದಾರೆ?’ ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳುವರು.

[9] ‘ಆಗ ಅವರು ತಮ್ಮ ದೇವರಾದ ಯೆಹೋವ ದೇವರ ಒಡಂಬಡಿಕೆಯನ್ನು ಬಿಟ್ಟು, ಬೇರೆ ದೇವರುಗಳಿಗೆ ನಮಸ್ಕರಿಸಿ ಸೇವಿಸಿದ್ದರಿಂದಲೇ,’ ಎಂದು ಅವರು ಉತ್ತರಕೊಡುವರು.”

[10] ಮರಣ ಹೊಂದಿದ ಅರಸನಿಗಾಗಿ ಅಳಬೇಡಿರಿ. ಅವನಿಗಾಗಿ ಗೋಳಾಡಬೇಡಿರಿ. ಹೊರಟು ಹೋದವನಿಗಾಗಿ ಬಹಳವಾಗಿ ಅಳಿರಿ. ಏಕೆಂದರೆ ಅವನು ತಿರುಗಿ ಬರುವುದೇ ಇಲ್ಲ. ತಾನು ಹುಟ್ಟಿದ ದೇಶವನ್ನು ಇನ್ನು ನೋಡುವುದೇ ಇಲ್ಲ.

[11] ಯೆಹೂದದ ಅರಸನಾದ ಯೋಷೀಯನ ಮಗನು ತನ್ನ ತಂದೆಯಾದ ಯೋಷೀಯನಿಗೆ ಬದಲಾಗಿ ಆಳಿದವನೂ, ಈ ಸ್ಥಳದಿಂದ ಸೆರೆಯಾಗಿ ಹೋದವನೂ ಆದ ಶಲ್ಲೂಮನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: “ಅವನು ಇಲ್ಲಿಗೆ ಇನ್ನು ಹಿಂದಿರುಗಿ ಬರುವುದೇ ಇಲ್ಲ.

[12] ಅವರು ಅವನನ್ನು ಸೆರೆಯಾಗಿ ಒಯ್ದ ಸ್ಥಳದಲ್ಲಿಯೇ ಸಾಯುವನು. ಅವನು ಈ ದೇಶವನ್ನು ಇನ್ನು ನೋಡುವುದಿಲ್ಲ.”

[13] “ಅನೀತಿಯಿಂದ ತನ್ನ ಅರಮನೆಯನ್ನು ಅನ್ಯಾಯದಿಂದ ತನ್ನ ಕೊಠಡಿಗಳನ್ನು ಕಟ್ಟಿಸಿಕೊಳ್ಳುವವನಿಗೂ, ಕೂಲಿಕೊಡದೆ ತನ್ನ ನೆರೆಯವನ ಕೈಯಿಂದ ಸುಮ್ಮನೆ ಕೆಲಸ ತೆಗೆದುಕೊಳ್ಳುವವನೂ ಕಷ್ಟ!

[14] ಅವನು, ‘ನಾನು ವಿಸ್ತಾರವಾದ ಅರಮನೆಯನ್ನೂ, ವಿಶಾಲವಾದ ಕೊಠಡಿಗಳನ್ನೂ ಕಟ್ಟಿಸಿಕೊಳ್ಳುವೆನೆಂದು ಹೇಳಿ.’ ಕಿಟಕಿಗಳನ್ನು ಕೊರೆದು, ದೇವದಾರಿನ ಹಲಗೆಗಳನ್ನು ಹಾಕಿ, ಕೆಂಪು ಬಣ್ಣವನ್ನು ಹಚ್ಚುವವನಿಗೂ ಕಷ್ಟ!

[15] “ಹೆಚ್ಚು ಹೆಚ್ಚು ದೇವದಾರುಗಳನ್ನು ಹೊಂದಲು ಅದು ನಿಮ್ಮನ್ನು ರಾಜನನ್ನಾಗಿಸುತ್ತದೆಯೇ? ನಿನ್ನ ತಂದೆ ಉಂಡು, ಕುಡಿದು ನ್ಯಾಯವನ್ನೂ, ನೀತಿಯನ್ನೂ ಮಾಡಲಿಲ್ಲವೋ? ಆಗ ಅವನಿಗೆ ಒಳ್ಳೆಯದಾಗಲಿಲ್ಲವೋ?

[16] ಬಡವನ ಮತ್ತು ದರಿದ್ರನ ನ್ಯಾಯವನ್ನು ತೀರಿಸಿದನು. ಆಗ ಅವನಿಗೆ ಒಳ್ಳೆಯದಾಯಿತು. ನನ್ನನ್ನು ತಿಳಿದುಕೊಳ್ಳುವುದು ಇದೇ ಅಲ್ಲವೋ?” ಎಂದು ಯೆಹೋವ ದೇವರು ಹೇಳುತ್ತಾರೆ.

[17] “ಆದರೆ ನಿನ್ನ ಕಣ್ಣುಗಳು, ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ ಅಪರಾಧವಿಲ್ಲದವನ ರಕ್ತ ಚೆಲ್ಲುವುದರ ಮೇಲೆ ಮತ್ತು ಪೀಡೆಯನ್ನೂ, ಬಲಾತ್ಕಾರವನ್ನೂ ಮಾಡುವುದರ ಮೇಲೆಯೇ ಹೊರತು, ಮತ್ಯಾವುದರ ಮೇಲೆಯೂ ಇರುವುದಿಲ್ಲ.”

[18] ಆದ್ದರಿಂದ ಯೋಷೀಯನ ಮಗ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಯೆಹೋವ ದೇವರು ಹೀಗೆ ಹೇಳುತ್ತಾರೆ: “ಅವರು ಅವನನ್ನು ಕುರಿತು ಗೋಳಾಡಿ, ‘ಅಯ್ಯೋ, ನನ್ನ ಸಹೋದರನೇ, ಅಯ್ಯೋ, ನನ್ನ ಸಹೋದರಿಯೇ,’ ಎಂದು ಅನ್ನುವುದಿಲ್ಲ. ‘ಅಯ್ಯೋ, ದೊರೆಯೇ, ಅಯ್ಯೋ, ಅವನ ವೈಭವವೇ,’ ಎಂದು ಅವನನ್ನು ಕುರಿತು ಗೋಳಾಡುವುದಿಲ್ಲ.

[19] ಕತ್ತೆಯನ್ನು ಹೂಳಿಡುವ ಪ್ರಕಾರ ಅವನನ್ನು ಹೂಳಿಡುವರು. ಅವನನ್ನು ಎಳೆದುಕೊಂಡು ಹೋಗಿ, ಯೆರೂಸಲೇಮಿನ ಬಾಗಿಲುಗಳ ಆಚೆಗೆ ಬಿಸಾಡುವರು.”

[20] “ಲೆಬನೋನಿಗೆ ಹೋಗಿ ಕೂಗು, ಬಾಷಾನಿನಲ್ಲಿ ನಿನ್ನ ಸ್ವರವನ್ನೆತ್ತು, ಅಬಾರೀಮಿನಲ್ಲಿ ಮೊರೆಯಿಡು; ಏಕೆಂದರೆ ನಿನ್ನ ಜೊತೆಗಾರರು ನಾಶವಾಗಿದ್ದಾರೆ.

[21] ನಿನ್ನ ಏಳಿಗೆಗೆ ನಿನ್ನ ಸಂಗಡ ಮಾತನಾಡಿದೆನು. ಆದರೆ ನೀನು, ‘ನಾನು ಕೇಳುವುದಿಲ್ಲ,’ ಎಂದೆ. ನನ್ನ ಮಾತಿಗೆ ಕಿವಿಗೊಡದೆ ಇರುವುದೇ ನಿನ್ನ ಯೌವನದ ರೀತಿಯಾಗಿದೆ.

[22] ನಿನ್ನ ಕುರುಬರನ್ನೆಲ್ಲಾ ಗಾಳಿ ಅಟ್ಟಿಸಿಕೊಂಡು ಹೋಗುವುದು. ನಿನ್ನ ಜೊತೆಗಾರರು ಸೆರೆಗೆ ಹೋಗುವರು. ನಿಶ್ಚಯವಾಗಿ ಆಗ ನಿನ್ನ ಎಲ್ಲಾ ಕೆಟ್ಟತನದ ನಿಮಿತ್ತ ನಿನಗೆ ನಾಚಿಕೆಯೂ, ಅವಮಾನವೂ ಆಗುವುದು.

[23] ಓ, ‘ಲೆಬನೋನಿನಲ್ಲಿ’ ವಾಸಮಾಡುವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡವಳೇ, ನಿನ್ನ ಮೇಲೆ ಬೇನೆಗಳೂ, ಹೆರುವವಳಂತಿರುವ ವೇದನೆಯೂ ಬರುವಾಗ ಎಷ್ಟೋ ದುಃಖಕರವಾಗಿರುವೆ.

[24] “ನನ್ನ ಜೀವದಾಣೆ, ಯೆಹೋಯಾಕೀಮನ ಮಗ ಯೆಹೂದದ ಅರಸನಾದ ಕೊನ್ಯನು ನನ್ನ ಬಲಗೈಯ ಮುದ್ರೆ ಉಂಗುರವಾಗಿದ್ದರೂ, ನಿನ್ನನ್ನು ಅಲ್ಲಿಂದ ಕಿತ್ತುಹಾಕಿ,

[25] ನಿನ್ನ ಪ್ರಾಣವನ್ನು ಹುಡುಕುವವರ ಕೈಗೂ, ನೀನು ಹೆದರಿಕೊಂಡವರ ಕೈಗೂ ಅಂದರೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಗೆ ಹಾಗೂ ಬಾಬಿಲೋನಿಯ ಕೈಗೆ ಒಪ್ಪಿಸಿ ಬಿಡುತ್ತೇನೆ.

[26] ನಿನ್ನನ್ನೂ, ನಿನ್ನ ಹೆತ್ತ ತಾಯಿಯನ್ನೂ ನೀವು ಹುಟ್ಟದಿರುವ ಬೇರೆ ದೇಶದಲ್ಲಿ ಹಾಕಿಬಿಡುವೆನು. ನೀವು ಅಲ್ಲೇ ಸಾಯುವಿರಿ.

[27] ಆದರೆ ಅವರು ತಿರುಗಿ ಬರುವುದಕ್ಕೆ ಮನಸ್ಸು ಮಾಡುವ ದೇಶಕ್ಕೆ ಹಿಂದಿರುಗಲಾರರು,” ಎಂದು ಯೆಹೋವ ದೇವರು ಹೇಳುತ್ತಾರೆ.

[28] ಕೊನ್ಯನೆಂಬ ಈ ಮನುಷ್ಯನು ಹೀನವಾಗಿ ಒಡೆದುಹೋದ ಮಡಿಕೆಯೆ? ಮೆಚ್ಚುಗೆ ಇಲ್ಲದ ಪಾತ್ರೆಯೆ? ಏಕೆ ಕೊನ್ಯನೂ, ಅವನ ಸಂತಾನವೂ ಬೀದಿಪಾಲಾಗಿದ್ದಾರೆ, ತಮಗೆ ತಿಳಿಯದ ದೇಶಕ್ಕೆ ಗಡಿಪಾರಾಗಿದ್ದಾರೆ?

[29] ಓ ದೇಶವೇ, ದೇಶವೇ, ದೇಶವೇ, ಯೆಹೋವ ದೇವರ ವಾಕ್ಯವನ್ನು ಕೇಳು.

[30] ಯೆಹೋವ ದೇವರು ಹೀಗೆ ಹೇಳುತ್ತಾರೆ: “ಈ ಮನುಷ್ಯನನ್ನು ಮಕ್ಕಳಿಲ್ಲದವನೆಂದೂ, ತನ್ನ ದಿನಗಳಲ್ಲಿ ವೃದ್ಧಿಯಾಗುವ ಪುರುಷನಲ್ಲವೆಂದೂ ಬರೆಯಿರಿ. ಏಕೆಂದರೆ ಅವನ ಸಂತಾನದಲ್ಲಿ ಒಬ್ಬನಾದರೂ ದಾವೀದನ ಸಿಂಹಾಸನದಲ್ಲಿ ಕುಳಿತುಕೊಂಡು ಯೆಹೂದದಲ್ಲಿ ಆಳುವ ಹಾಗೆ ಬಾಳುವುದಿಲ್ಲ.”

ಯೆರೆಮೀಯ — Chapters