Skip to content
Opens in a new window
Listen to this chapter • 3:17

[1] ಯೆರೆಮೀಯನು ಜನರೆಲ್ಲರಿಗೆ ಅವರ ದೇವರಾದ ಯೆಹೋವ ದೇವರು ಯಾವ ವಿಷಯವಾಗಿ ಅವನನ್ನು ಅವರ ಬಳಿಗೆ ಕಳುಹಿಸಿದ್ದರೋ, ಆ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದಾಗ,

[2] ಹೋಷಾಯನ ಮಗನಾದ ಅಜರ್ಯನೂ, ಕಾರೇಹನ ಮಗನಾದ ಯೋಹಾನಾನನೂ, ಗರ್ವಿಷ್ಠ ಮನುಷ್ಯರೆಲ್ಲರೂ ಮಾತನಾಡಿ ಯೆರೆಮೀಯನಿಗೆ, “ನೀನು ಸುಳ್ಳು ಹೇಳುತ್ತೀ, ಅಲ್ಲಿ ಪ್ರವಾಸಿಯಾಗಿರುವುದಕ್ಕೆ ಈಜಿಪ್ಟಿಗೆ ಹೋಗಬಾರದೆಂದು ಹೇಳುವುದಕ್ಕೆ ನಮ್ಮ ದೇವರಾದ ಯೆಹೋವ ದೇವರು ನಿನ್ನನ್ನು ಕಳುಹಿಸಲಿಲ್ಲ.

[3] ಆದರೆ ಅವರು ನಮ್ಮನ್ನು ಕೊಂದುಹಾಕುವ ಹಾಗೆಯೂ, ನಮ್ಮನ್ನು ಬಾಬಿಲೋನಿಗೆ ಸೆರೆ ಒಯ್ಯುವ ಹಾಗೆಯೂ, ನಮ್ಮನ್ನು ಬಾಬಿಲೋನಿಯರ ಕೈಯಲ್ಲಿ ಒಪ್ಪಿಸಬೇಕೆಂದು ನೇರೀಯನ ಮಗನಾದ ಬಾರೂಕನು ನಿನ್ನನ್ನು ನಮಗೆ ವಿರೋಧವಾಗಿ ಪ್ರೇರೇಪಿಸಿದ್ದಾನೆ,” ಎಂದರು.

[4] ಈ ಪ್ರಕಾರ ಕಾರೇಹನ ಮಗ ಯೋಹಾನಾನನೂ, ಸೈನ್ಯಾಧಿಪತಿಗಳೆಲ್ಲರೂ, ಜನರೆಲ್ಲರೂ ಯೆಹೂದ ದೇಶದಲ್ಲಿ ವಾಸಮಾಡುವ ಹಾಗೆ, ಯೆಹೋವ ದೇವರ ಮಾತಿಗೆ ಕಿವಿಗೊಡಲಿಲ್ಲ.

[5] ಆದರೆ ಕಾರೇಹನ ಮಗ ಯೋಹಾನಾನನೂ, ಸೈನ್ಯಾಧಿಪತಿಗಳೆಲ್ಲರೂ ತಾವು ಅಟ್ಟಿಬಿಟ್ಟಿದ್ದ ಎಲ್ಲಾ ಜನಾಂಗಗಳಿಂದ ಯೆಹೂದ ದೇಶದಲ್ಲಿ ವಾಸಮಾಡುವುದಕ್ಕೆ ತಿರುಗಿ ಬಂದ ಯೆಹೂದದಲ್ಲಿ ಉಳಿದವರನ್ನು,

[6] ಅಂದರೆ ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ, ಅರಸನ ಪುತ್ರಿಯರನ್ನೂ, ಕಾವಲಿನವರ ಅಧಿಪತಿಯಾದ ನೆಬೂಜರದಾನನು ಶಾಫಾನನ ಮೊಮ್ಮಗ ಅಹೀಕಾಮನ ಮಗ ಗೆದಲ್ಯನ ಸಂಗಡ ಬಿಟ್ಟವರೆಲ್ಲರನ್ನೂ, ಪ್ರವಾದಿಯಾದ ಯೆರೆಮೀಯನನ್ನೂ, ನೇರೀಯನ ಮಗ ಬಾರೂಕನನ್ನೂ ತೆಗೆದುಕೊಂಡು ಈಜಿಪ್ಟ್ ದೇಶಕ್ಕೆ ಹೋದರು.

[7] ಏಕೆಂದರೆ ಅವರು ಯೆಹೋವ ದೇವರ ಮಾತಿಗೆ ಕಿವಿಗೊಡಲಿಲ್ಲ. ಹೀಗೆ ಅವರು ಈಜಿಪ್ಟಿಗೆ ಹೋಗಿ ತಹಪನೇಸಿಗೆ ಬಂದರು.

[8] ಆಗ ತಹಪನೇಸಿನಲ್ಲಿ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂದಿತು.

[9] “ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದು ತಹಪನೇಸಿನಲ್ಲಿರುವ ಫರೋಹನ ಮನೆಯ ಪ್ರವೇಶದಲ್ಲಿರುವ ಇಟ್ಟಿಗೆ ಭಟ್ಟಿಯ ಮಣ್ಣಿನಲ್ಲಿ ಯೆಹೂದ್ಯರ ಮುಂದೆ ಬಚ್ಚಿಟ್ಟು, ಅವರಿಗೆ ಹೇಳತಕ್ಕದ್ದೇನೆಂದರೆ:

[10] ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಕಳುಹಿಸಿ ನನ್ನ ಸೇವಕನಾದ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನನ್ನು ಕರೆಯಿಸಿ, ನಾನು ಬಚ್ಚಿಟ್ಟಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಇಡುವೆನು. ಅವನು ತನ್ನ ಮೇಲ್ಕಟ್ಟನ್ನು ಅವುಗಳ ಮೇಲೆ ಹಾಸುವನು.

[11] ಅವನು ಬಂದು ಈಜಿಪ್ಟ್ ದೇಶವನ್ನು ಹೊಡೆದು, ಮರಣಕ್ಕೆ ಇರುವವರನ್ನು ಮರಣಕ್ಕೂ, ಸೆರೆಗೆ ಇರುವವರನ್ನು ಸೆರೆಗೂ, ಖಡ್ಗಕ್ಕೆ ಇರುವವರನ್ನು ಖಡ್ಗಕ್ಕೂ ಒಪ್ಪಿಸುವನು.

[12] ನಾನು ಈಜಿಪ್ಟ್ ದೇವರುಗಳ ಆಲಯಗಳಲ್ಲಿ ಬೆಂಕಿ ಹಚ್ಚುವೆನು. ಅವನು ಅವರನ್ನು ಸುಟ್ಟುಬಿಟ್ಟು, ಸೆರೆಯಾಗಿ ಒಯ್ಯುವನು. ಕುರುಬನು ತನ್ನ ಉಡುಪನ್ನು ಹೇನುಗಳಿಂದ ಶುದ್ಧೀಕರಿಸುವಂತೆ ಅವನು ಈಜಿಪ್ಟ್ ದೇಶವನ್ನು ಶುದ್ಧವಾಗಿಸಿಕೊಂಡು ಅಲ್ಲಿಂದ ಸಮಾಧಾನವಾಗಿ ಹೊರಟು ಹೋಗುತ್ತಾನೆ.

[13] ಇದಲ್ಲದೆ ಈಜಿಪ್ಟಿನ ದೇಶದಲ್ಲಿರುವ ಸೂರ್ಯ ದೇವಾಲಯವನ್ನು ಒಡೆದುಹಾಕಿ, ಈಜಿಪ್ಟ್ ದೇವರುಗಳ ಆಲಯಗಳನ್ನು ಬೆಂಕಿಯಿಂದ ಸುಡುವನು.’ ”

ಯೆರೆಮೀಯ — Chapters