[1] ಯೋಷೀಯನ ಮಗನೂ, ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಅಂದರೆ, ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ, ಪ್ರವಾದಿ ಯೆರೆಮೀಯನಿಗೆ ಯೆಹೂದ್ಯರೆಲ್ಲರ ವಿಷಯವಾಗಿ ದೈವೋಕ್ತಿಯೊಂದು ಉಂಟಾಯಿತು.
[2] ಪ್ರವಾದಿಯಾದ ಯೆರೆಮೀಯನು ಯೆಹೂದದ ಸಮಸ್ತ ಜನರಿಗೂ, ಯೆರೂಸಲೇಮಿನ ಎಲ್ಲಾ ನಿವಾಸಿಗಳಿಗೂ ತಿಳಿಸಿದ್ದು ಏನೆಂದರೆ:
[3] ಆಮೋನನ ಮಗನೂ, ಯೆಹೂದದ ಅರಸನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಿಂದ ಈ ದಿವಸದವರೆಗೆ ಅಂದರೆ, ಕಳೆದ ಇಪ್ಪತ್ತಮೂರು ವರ್ಷಗಳಿಂದ ಯೆಹೋವ ದೇವರು ತಮ್ಮ ವಾಕ್ಯವನ್ನು ನನಗೆ ತಿಳಿಸಿದ್ದಾರೆ. ಅದನ್ನು ನಾನು ನಿಮಗೆ ತಡಮಾಡದೆ ಪ್ರಕಟಿಸುತ್ತಾ ಬಂದಿದ್ದೇನೆ. ಆದರೆ ನೀವು ಅದಕ್ಕೆ ಕಿವಿಗೊಡಲಿಲ್ಲ.
[4] ಇದಲ್ಲದೆ ಯೆಹೋವ ದೇವರು ತಮ್ಮ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ಕಳುಹಿಸಿದ್ದಾರೆ. ಬೆಳಿಗ್ಗೆ ಎದ್ದು ಕಳುಹಿಸಿದ್ದಾರೆ. ಆದರೆ ನೀವು ಕೇಳಲಿಲ್ಲ. ಕೇಳುವುದಕ್ಕೆ ನಿಮ್ಮ ಕಿವಿ ಕೊಡಲಿಲ್ಲ.
[5] ಅವರು ಹೇಳಿದ್ದೇನೆಂದರೆ: “ನಿಮ್ಮ ನಿಮ್ಮ ಕೆಟ್ಟ ಮಾರ್ಗವನ್ನೂ, ನಿಮ್ಮ ಕೆಟ್ಟ ದೃಶ್ಯಗಳ ಕೆಟ್ಟತನವನ್ನೂ ಬಿಟ್ಟು ಮತ್ತೆ ತಿರುಗಿಕೊಳ್ಳಿರಿ. ಆಗ ಯೆಹೋವ ದೇವರು ನಿಮಗೂ, ನಿಮ್ಮ ತಂದೆಗಳಿಗೂ ಕೊಟ್ಟ ದೇಶದಲ್ಲಿ ಎಂದೆಂದಿಗೂ ವಾಸಿಸುವಿರಿ.
[6] ಬೇರೆ ದೇವರುಗಳನ್ನು ಸೇವಿಸುವುದಕ್ಕೂ, ಆರಾಧಿಸುವುದಕ್ಕೂ ಹಿಂಬಾಲಿಸಬೇಡಿರಿ. ನಿಮ್ಮ ಕೈಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸಬೇಡಿರಿ. ಆಗ ನಿಮಗೆ ಯಾವ ಕೇಡೂ ಮಾಡೆನು.”
[7] “ಆದರೂ ನೀವು ನನಗೆ ಕಿವಿಗೊಡದೆ, ನಿಮಗೆ ಕೇಡು ಬರುವ ಹಾಗೆ ನಿಮ್ಮ ಕೈಕೆಲಸಗಳಿಂದ ನನಗೆ ಕೋಪವನ್ನೆಬ್ಬಿಸಿದ್ದೀರಿ,” ಎಂದು ಯೆಹೋವ ದೇವರು ಹೇಳುತ್ತಾರೆ.
[8] ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀವು ನನ್ನ ಮಾತುಗಳನ್ನು ಕೇಳದ ಕಾರಣ
[9] ಇಗೋ, ನಾನು ಕಳುಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ, ನನ್ನ ಸೇವಕನಾದ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನನ್ನೂ ತೆಗೆದುಕೊಂಡು, ಈ ದೇಶಕ್ಕೆ ವಿರೋಧವಾಗಿಯೂ, ಅವರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ತರಿಸಿ, ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ಭಯಕ್ಕೂ, ಪರಿಹಾಸ್ಯಕ್ಕೂ ಗುರಿಮಾಡಿ ನಿತ್ಯ ನಾಶಮಾಡುವೆನು.
[10] ನಾನು ಈ ದೇಶಗಳಿಂದ ಸಂತೋಷದ ಶಬ್ದ ಮತ್ತು ಸಂತೋಷದ ಶಬ್ದವನ್ನು ಮಾತ್ರ ತೆಗೆದುಹಾಕುತ್ತೇನೆ, ವಧು ಅಥವಾ ವಧುವಿನ ಧ್ವನಿ ಅಲ್ಲಿ ಕೇಳಿಸುವುದಿಲ್ಲ, ಬೀಸುಕಲ್ಲಿನ ಸದ್ದನ್ನು ಅಡಗಿಸುವೆನು. ದೀಪಕ್ಕೆ ಎಣ್ಣೆ ಇಲ್ಲದಂತೆ ಮಾಡುವೆನು.
[11] ಈ ದೇಶವೆಲ್ಲಾ ಹಾಳಾಗಿ ಭಯಕ್ಕೆ ಗುರಿಯಾಗುವುದು. ಈ ಜನಾಂಗಗಳು ಬಾಬಿಲೋನಿನ ಅರಸನನ್ನು ಎಪ್ಪತ್ತು ವರ್ಷ ಸೇವಿಸುವರು.
[12] “ಎಪ್ಪತ್ತು ವರ್ಷ ತುಂಬಿದ ಮೇಲೆ ನಾನು ಬಾಬಿಲೋನಿನ ಅರಸನನ್ನೂ, ಆ ಜನಾಂಗವನ್ನೂ, ಕಸ್ದೀಯರ ದೇಶವನ್ನೂ ಅವರ ಅಕ್ರಮಕ್ಕಾಗಿ ವಿಚಾರಿಸಿ ದಂಡಿಸುವೆನು. ಅದನ್ನು ನಿತ್ಯವಾಗಿ ಹಾಳುಮಾಡುವೆನು.
[13] ನಿಶ್ಚಯವಾಗಿ ಆ ದೇಶದ ಮೇಲೆ ನಾನು ಅದಕ್ಕೆ ವಿರೋಧವಾಗಿ ಹೇಳಿದ ನನ್ನ ಎಲ್ಲಾ ವಾಕ್ಯಗಳನ್ನೂ, ಯೆರೆಮೀಯನು ಜನಾಂಗಗಳಿಗೆ ವಿರೋಧವಾಗಿ ಪ್ರವಾದಿಸಿ, ಈ ಪುಸ್ತಕದಲ್ಲಿ ಬರೆದಿರುವ ಎಲ್ಲವನ್ನೂ ಅವರ ಮೇಲೆ ಬರಮಾಡುವೆನು.
[14] ಅನೇಕ ಜನಾಂಗಗಳೂ, ದೊಡ್ಡ ಅರಸರೂ ಅವರಿಂದ ಸೇವೆ ಮಾಡಿಸಿಕೊಳ್ಳುವರು. ಅವರ ಕ್ರಿಯೆಗಳ ಪ್ರಕಾರವೂ, ಅವರ ಕೈಕೆಲಸದ ಪ್ರಕಾರವೂ ನಾನು ಅವರಿಗೆ ಪ್ರತಿಫಲ ಕೊಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
[15] ಇಸ್ರಾಯೇಲಿನ ದೇವರಾದ ಯೆಹೋವ ದೇವರು ನನಗೆ ಹೀಗೆಂದರು: “ಈ ರೌದ್ರದ ದ್ರಾಕ್ಷಾರಸದ ಪಾತ್ರೆಯನ್ನು, ನಾನು ನಿನ್ನನ್ನು ಕಳುಹಿಸುವ ಎಲ್ಲಾ ಜನಾಂಗಗಳು ಅದನ್ನು ಕುಡಿಯುವಂತೆ ನನ್ನ ಕೈಯಿಂದ ತೆಗೆದುಕೋ.
[16] ಆಗ ಅವರು ಕುಡಿದು ನಾನು ಅವರ ಮಧ್ಯದಲ್ಲಿ ಕಳುಹಿಸುವ ಖಡ್ಗದ ನಿಮಿತ್ತ ಕದಲಿ ಓಲಾಡುವರು.”
[17] ಆಗ ನಾನು ಪಾತ್ರೆಯನ್ನು ಯೆಹೋವ ದೇವರ ಕೈಯಿಂದ ತೆಗೆದುಕೊಂಡು, ಯೆಹೋವ ದೇವರು ನನ್ನನ್ನು ಕಳುಹಿಸಿದ ಎಲ್ಲಾ ಜನಾಂಗಗಳಿಗೆ ಕುಡಿಸಿದೆನು.
[18] ಯೆರೂಸಲೇಮಿಗೂ, ಯೆಹೂದದ ಪಟ್ಟಣಗಳಿಗೂ, ಅದರ ಅರಸುಗಳಿಗೂ, ಅಧಿಕಾರಿಗಳಿಗೂ ಅವರನ್ನು ಇಂದಿನ ಪ್ರಕಾರ ಹಾಳು ಮಾಡಿ, ಭಯಕ್ಕೂ, ಪರಿಹಾಸ್ಯಕ್ಕೂ, ಶಾಪಕ್ಕೂ ಗುರಿ ಮಾಡುವ ಹಾಗೆ ಕುಡಿಸಿದೆನು.
[19] ಈಜಿಪ್ಟಿನ ಅರಸನಾದ ಫರೋಹನಿಗೂ, ಅವನ ಸೇವಕರಿಗೂ, ಅವನ ಅಧಿಕಾರಿಗಳಿಗೂ, ಅವನ ಎಲ್ಲಾ ಜನರಿಗೂ,
[20] ವಿದೇಶೀಯ ಜನರೆಲ್ಲರಿಗೂ, ಊಚ್ ದೇಶದ ಅರಸರೆಲ್ಲರಿಗೂ, ಫಿಲಿಷ್ಟಿಯ ದೇಶದ ಅರಸರಾದ, ಅಷ್ಕೆಲೋನಿಗೂ, ಗಾಜಕ್ಕೂ, ಎಕ್ರೋನಿಗೂ, ಅಷ್ಡೋದಿನ ಉಳಿದವರಿಗೂ,
[21] ಎದೋಮಿಗೂ, ಮೋವಾಬಿಗೂ, ಅಮ್ಮೋನ್ಯರಿಗೂ,
[22] ಟೈರಿನ ಅರಸರೆಲ್ಲರಿಗೂ, ಸೀದೋನಿನ ಅರಸರೆಲ್ಲರಿಗೂ, ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ,
[23] ದೆದಾನಿಗೂ, ತೇಮಾಕ್ಕೂ, ಬೂಜಿಗೂ, ಕಟ್ಟಕಡೆಯ ಮೂಲೆಯವರೆಗೂ,
[24] ಅರೇಬಿಯದ ಅರಸರೆಲ್ಲರಿಗೂ, ಮರುಭೂಮಿಯಲ್ಲಿ ವಾಸಿಸುವ ಮಿಶ್ರವಾದ ಜನರ ಅರಸರೆಲ್ಲರಿಗೂ,
[25] ಜಿಮ್ರಿಯ ಅರಸರೆಲ್ಲರಿಗೂ, ಏಲಾಮಿನ ಅರಸರೆಲ್ಲರಿಗೂ, ಮೇದ್ಯದ ಅರಸರೆಲ್ಲರಿಗೂ,
[26] ಹತ್ತಿರದಲ್ಲಿಯೂ, ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿರುವ ಉತ್ತರ ದಿಕ್ಕಿನ ಅರಸರೆಲ್ಲರಿಗೂ, ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯಗಳಿಗೂ ಕುಡಿಸಿದೆನು. ಶೇಷಕಿನ ಅರಸನು ಅವರ ತರುವಾಯ ಕುಡಿಯುವನು.
[27] “ಆದ್ದರಿಂದ ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ನಾನು ನಿಮ್ಮ ಮಧ್ಯದಲ್ಲಿ ಕಳುಹಿಸುವ ಖಡ್ಗದ ನಿಮಿತ್ತವೇ ಕುಡಿಯಿರಿ, ಮತ್ತರಾಗಿರಿ, ಕಾರಿರಿ, ಬೀಳಿರಿ, ಇನ್ನು ಮೇಲೆ ತಿರುಗಿ ಏಳದಿರಿ.’
[28] ಅವರು ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಂಡು ಕುಡಿಯಲು ತಿರಸ್ಕರಿಸಿದರೆ, ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ನೀವು ನಿಶ್ಚಯವಾಗಿ ಕುಡಿಯಬೇಕು.
[29] ಏಕೆಂದರೆ ಇಗೋ, ನನ್ನ ಹೆಸರಿನಿಂದ ಕರೆಯಲಾಗಿರುವ ಪಟ್ಟಣದ ಮೇಲೆ ನಾನು ಕೇಡನ್ನು ತರಿಸುವುದಕ್ಕೆ ಆರಂಭ ಮಾಡುತ್ತೇನೆ. ಹಾಗಾದರೆ ನೀವು ಸಂಪೂರ್ಣ ದಂಡನೆಗೆ ತಪ್ಪಿಸಿಕೊಂಡೀರೋ? ತಪ್ಪಿಸಿಕೊಳ್ಳುವುದಿಲ್ಲ. ಏಕೆಂದರೆ ನಾನು ಭೂನಿವಾಸಿಗಳೆಲ್ಲರ ಮೇಲೆ ಖಡ್ಗವನ್ನು ಕರೆಯುತ್ತೇನೆಂದು ಸೇನಾಧೀಶ್ವರ ಯೆಹೋವ ದೇವರು ನುಡಿಯುತ್ತಾರೆ.’
[30] “ಆದ್ದರಿಂದ ನೀನು ಅವರಿಗೆ ವಿರೋಧವಾಗಿ ಈ ವಾಕ್ಯಗಳನ್ನೆಲ್ಲಾ ಪ್ರವಾದಿಸಿ, ಅವರಿಗೆ ಹೇಳತಕ್ಕದ್ದೇನೆಂದರೆ, “ ‘ಯೆಹೋವ ದೇವರು ಉನ್ನತದಿಂದ ಗರ್ಜಿಸಿ, ತಮ್ಮ ಪರಿಶುದ್ಧ ನಿವಾಸದೊಳಗಿಂದ ತಮ್ಮ ಶಬ್ದವನ್ನು ಕೊಡುವರು. ತಮ್ಮ ನಿವಾಸದ ಮೇಲೆ ಗಟ್ಟಿಯಾಗಿ ಗರ್ಜಿಸಿ, ದ್ರಾಕ್ಷಿ ತುಳಿಯುವವರ ಹಾಗೆ ಆರ್ಭಟವನ್ನು ಭೂನಿವಾಸಿಗಳೆಲ್ಲರಿಗೆ ವಿರೋಧವಾಗಿ ಎತ್ತುವರು.
[31] ಭೂಮಿಯ ಅಂತ್ಯಗಳವರೆಗೆ ಘೋಷವು ಬರುವುದು. ಯೆಹೋವ ದೇವರಿಗೆ ಜನಾಂಗಗಳ ಸಂಗಡ ವ್ಯಾಜ್ಯವಿದೆ. ಅವರು ಎಲ್ಲಾ ಮನುಷ್ಯರ ಸಂಗಡ ನ್ಯಾಯಕ್ಕೆ ನಿಲ್ಲುವರು. ದುಷ್ಟರನ್ನು ಖಡ್ಗಕ್ಕೆ ಒಪ್ಪಿಸುವರು,’ ” ಎಂದು ಯೆಹೋವ ದೇವರು ಹೇಳುತ್ತಾರೆ.
[32] ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಜನಾಂಗದಿಂದ ಜನಾಂಗಕ್ಕೆ ಕೇಡು ಹೊರಡುವುದು. ಭೂಮಿಯ ಮೇರೆಗಳಿಂದ ಮಹಾ ಬಿರುಗಾಳಿ ಏಳುವುದು.”
[33] ಆ ದಿವಸದಲ್ಲಿ ಭೂಮಿಯ ಈ ಮೇರೆಯಿಂದ ಭೂಮಿಯ ಆ ಮೇರೆಯವರೆಗೆ ಯೆಹೋವ ದೇವರಿಂದ ಹತರಾದವರು ಇರುವರು. ಅವರಿಗೋಸ್ಕರ ಗೋಳಾಡುವುದಿಲ್ಲ. ಅವರನ್ನು ಕೂಡಿಸುವುದಿಲ್ಲ. ಅವರನ್ನು ಹೂಳಿಡುವುದಿಲ್ಲ. ಅವರು ಭೂಮಿಯ ಮೇಲೆ ಗೊಬ್ಬರದಂತಿರುವರು.
[34] ಕುರುಬರೇ, ಗೋಳಿಟ್ಟು ಕೂಗಿರಿ. ಮಂದೆಯಲ್ಲಿನ ಪ್ರಮುಖರೇ, ಧೂಳಿನಲ್ಲಿ ಹೊರಳಾಡಿರಿ. ಏಕೆಂದರೆ ನಿಮ್ಮನ್ನು ಕೊಲ್ಲುವುದಕ್ಕೂ, ಚದರಿಸುವುದಕ್ಕೂ ದಿನಗಳು ತುಂಬಿ ಇವೆ. ಆಗ ನೀವು ಒಡೆದುಹೋದ ಅಂದವಾದ ಪಾತ್ರೆಯಂತೆ ಬೀಳುವಿರಿ.
[35] ಆಗ ಕುರುಬರಿಗೆ ಓಡಿ ಹೋಗುವುದಕ್ಕೂ, ಮಂದೆಯ ಪ್ರಮುಖರಿಗೆ ತಪ್ಪಿಸಿಕೊಳ್ಳುವುದಕ್ಕೂ ಮಾರ್ಗವಿಲ್ಲದೆ ಹೋಗುವುದು.
[36] ಕುರುಬರ ಕೂಗಿನ ಶಬ್ದವು, ಮಂದೆಯ ಗೋಳಾಡುವಿಕೆಯೂ ಪ್ರಮುಖರಿಗೆ ಕೇಳಿಸುತ್ತಿದೆ. ಏಕೆಂದರೆ ಯೆಹೋವ ದೇವರು ಅವರ ಮೇವಿನ ಸ್ಥಳವನ್ನು ಹಾಳು ಮಾಡಿದ್ದಾರೆ.
[37] ಸಮಾಧಾನವುಳ್ಳ ಗೋಮಾಳಗಳು ಯೆಹೋವ ದೇವರ ಕೋಪದ ದೆಸೆಯಿಂದ ಕೆಡವಿಬಿದ್ದವು.
[38] ಅವರು ಸಿಂಹದಂತೆ ತಮ್ಮ ಗವಿಯನ್ನು ತೊರೆದುಬಿಟ್ಟಿದ್ದಾರೆ. ಏಕೆಂದರೆ ಉಪದ್ರವ ಪಡಿಸುವವನ ಉರಿಯ ನಿಮಿತ್ತವೂ, ಅವರ ಕೋಪದ ಉರಿಯ ನಿಮಿತ್ತವೂ ಅವರ ದೇಶವು ಹಾಳಾಯಿತು.