[1] ಬೆನ್ಯಾಮೀನ್ ಸೀಮೆಗೆ ಸೇರಿ ಅನಾತೋತ್ ಊರಿನ ಯಾಜಕ ವರ್ಗದವನೂ, ಹಿಲ್ಕೀಯನ ಮಗನೂ ಆದ ಯೆರೆಮೀಯನ ಪ್ರವಾದನೆಗಳು.
[2] ಯೆಹೂದದ ಅರಸನೂ ಆಮೋನನ ಮಗನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಲ್ಲಿ ಯೆಹೋವ ದೇವರ ವಾಕ್ಯವು ಇವನಿಗೆ ಕೇಳಿಬಂತು.
[3] ಅಲ್ಲದೆ ಯೆಹೂದದ ಅರಸನೂ ಯೋಷೀಯನ ಮಗನೂ ಆದ ಯೆಹೋಯಾಕೀಮನ ಕಾಲದಿಂದ ಯೆಹೂದದ ಅರಸನೂ ಯೋಷೀಯನ ಮಗನೂ ಆದ ಚಿದ್ಕೀಯನ ಕಾಲದ ಆಳ್ವಿಕೆಯ ಹನ್ನೊಂದನೆಯ ವರ್ಷದ ಐದನೆಯ ತಿಂಗಳಿನಲ್ಲಿ ಯೆರೂಸಲೇಮಿನವರು ಸೆರೆ ಹೋಗುವ ತನಕ ಯೆಹೋವ ದೇವರ ವಾಕ್ಯವು ಒದಗುತ್ತಿತ್ತು.
[4] ಯೆಹೋವ ದೇವರು ಈ ವಾಕ್ಯವನ್ನು ನನಗೆ ದಯಪಾಲಿಸಿದರು,
[5] “ನಾನು ನಿನ್ನನ್ನು ತಾಯಿಯ ಗರ್ಭದಲ್ಲಿ ನಿರ್ಮಿಸುವುದಕ್ಕಿಂತ ಮುಂಚೆಯೇ ನಿನ್ನನ್ನು ತಿಳಿದಿದ್ದೆನು. ನೀನು ಹುಟ್ಟುವುದಕ್ಕಿಂತ ಮುಂಚೆ ನಿನ್ನನ್ನು ಪ್ರತಿಷ್ಠಿಸಿದ್ದೆನು; ನಿನ್ನನ್ನು ಜನಾಂಗಗಳಿಗೆ ಪ್ರವಾದಿಯಾಗಿ ನೇಮಿಸಿದ್ದೇನೆ.”
[6] ಆಗ ನಾನು, “ಹಾ, ಸಾರ್ವಭೌಮ ಯೆಹೋವ ದೇವರೇ, ಇಗೋ ನಾನು ಮಾತು ಬಲ್ಲವನಲ್ಲ, ನಾನು ಚಿಕ್ಕವನು,” ಎಂದೆನು.
[7] ಆಗ ಯೆಹೋವ ದೇವರು ನನಗೆ, “ ‘ನಾನು ಚಿಕ್ಕವನೆಂದು ಹೇಳಬೇಡ.’ ಏಕೆಂದರೆ ನಾನು ನಿನ್ನನ್ನು ಕಳುಹಿಸುವವರೆಲ್ಲರ ಬಳಿಗೆ ನೀನು ಹೋಗಬೇಕು. ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಮಾತನಾಡಬೇಕು.
[8] ಅವರಿಗೆ ಭಯಪಡಬೇಡ. ಏಕೆಂದರೆ ನಿನ್ನನ್ನು ತಪ್ಪಿಸುವುದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ,” ಎಂದು ಯೆಹೋವ ದೇವರಾದ ನಾನು ಹೇಳುತ್ತೇನೆ.
[9] ಆಗ ಯೆಹೋವ ದೇವರು ಕೈಚಾಚಿ, ನನ್ನ ಬಾಯಿಯನ್ನು ಮುಟ್ಟಿ ನನಗೆ, “ಇಗೋ, ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿ ಇಟ್ಟಿದ್ದೇನೆ.
[10] ನೋಡು, ಈ ಹೊತ್ತು ನೀನು ಕೀಳುವುದಕ್ಕೂ, ಕೆಳಗೆ ಹಾಕಿಬಿಡುವುದಕ್ಕೂ, ನಾಶಮಾಡುವುದಕ್ಕೂ, ಕೆಡವಿ ಹಾಕುವುದಕ್ಕೂ, ಕಟ್ಟುವುದಕ್ಕೂ, ನೆಡುವುದಕ್ಕೂ ನಾನು ನಿನ್ನನ್ನು ಜನಾಂಗಗಳ ಮೇಲೆಯೂ ರಾಜ್ಯಗಳ ಮೇಲೆಯೂ ನಿನ್ನನ್ನು ನೇಮಿಸಿದ್ದೇನೆ,” ಎಂದರು.
[11] ಇದಲ್ಲದೆ ಯೆಹೋವ ದೇವರ ವಾಕ್ಯವು ನನಗೆ, “ಯೆರೆಮೀಯನೇ, ನೀನು ಏನು ಕಾಣುತ್ತೀ?” ಎಂದು ಕೇಳಿದರು. ಅದಕ್ಕೆ ನಾನು, “ಬಾದಾಮಿ ಮರದ ಕೊಂಬೆಯನ್ನು ನೋಡುತ್ತೇನೆ,” ಎಂದೆನು.
[12] ಆಗ ಯೆಹೋವ ದೇವರು ನನಗೆ, “ನೀನು ಚೆನ್ನಾಗಿ ನೋಡಿದ್ದೀ. ಏಕೆಂದರೆ ನನ್ನ ವಾಕ್ಯವನ್ನು ನೆರವೇರಿಸಲು ಎಚ್ಚರಗೊಂಡಿದ್ದೇನೆಂದು, ತಿಳಿದುಕೊ” ಎಂದರು.
[13] ಎರಡನೆಯ ಸಾರಿ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ, “ನೀನು ಏನು ನೋಡುತ್ತೀ?” ಎಂದು ಕೇಳಿದ್ದಕ್ಕೆ, ನಾನು, “ಬೇಯುವ ಮಡಕೆಯನ್ನು ನೋಡುತ್ತೇನೆ, ಅದರ ಬಾಯಿ ಉತ್ತರದ ಕಡೆಗೆ ಇದೆ,” ಎಂದೆನು.
[14] ಆಗ ಯೆಹೋವ ದೇವರು ನನಗೆ, “ಉತ್ತರ ಕಡೆಯಿಂದ ದೇಶದ ನಿವಾಸಿಗಳೆಲ್ಲರ ಮೇಲೆ ಕೇಡು ಹೊರಟು ಬರುವುದು.
[15] ಏಕೆಂದರೆ ನಾನು ಉತ್ತರದಲ್ಲಿರುವ ರಾಜ್ಯಗಳ ಕುಲಗಳನ್ನೆಲ್ಲಾ ಕರೆಯುತ್ತೇನೆ. “ಅವರು ಬಂದು ತಮ್ಮ ತಮ್ಮ ಸಿಂಹಾಸನಗಳನ್ನು ಯೆರೂಸಲೇಮಿನ ಬಾಗಿಲುಗಳ ಪ್ರವೇಶದಲ್ಲಿಯೂ, ಅದರ ಸುತ್ತಲಾಗಿರುವ ಗೋಡೆಗಳಿಗೆ ಎದುರಾಗಿಯೂ ಯೆಹೂದದ ಎಲ್ಲಾ ಪಟ್ಟಣಗಳಿಗೆ ಎದುರಾಗಿಯೂ ಇರಿಸುವರು.
[16] ನನ್ನನ್ನು ಬಿಟ್ಟು ಬೇರೆ ದೇವರುಗಳಿಗೆ ಧೂಪವನ್ನರ್ಪಿಸಿ ತಮ್ಮ ಸ್ವಂತ ಕೈಕೆಲಸಗಳಿಗೆ ಅಡ್ಡಬಿದ್ದಿದ್ದಾರೆ. ಅವರ ಎಲ್ಲಾ ಕೆಟ್ಟತನದ ನಿಮಿತ್ತ ಅವರಿಗೆ ವಿರೋಧವಾಗಿ ನನ್ನ ನ್ಯಾಯತೀರ್ಪುಗಳನ್ನು ನುಡಿಯುವೆನು.
[17] “ಆದ್ದರಿಂದ ಈಗ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು, ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಅವರ ಸಂಗಡ ಮಾತನಾಡು. ನಾನು ನಿನ್ನನ್ನು ಅವರ ಮುಂದೆ ದಿಗಿಲುಪಡಿಸದ ಹಾಗೆ ನೀನು ಅವರಿಗೆ ಭಯಪಡಬೇಡ.
[18] ಸಮಸ್ತ ದೇಶಕ್ಕೆ ವಿರೋಧವಾಗಿ ಯೆಹೂದದ ಅರಸರಿಗೆ ವಿರೋಧವಾಗಿಯೂ, ಅದರ ಪ್ರಧಾನರಿಗೆ ವಿರೋಧವಾಗಿಯೂ, ಅದರ ಯಾಜಕರಿಗೆ ವಿರೋಧವಾಗಿಯೂ, ದೇಶದ ಜನರಿಗೆ ವಿರೋಧವಾಗಿಯೂ ನಾನೇ ಈ ಹೊತ್ತು ನಿನ್ನನ್ನು ಕೋಟೆಯುಳ್ಳ ಪಟ್ಟಣವಾಗಿಯೂ, ಕಬ್ಬಿಣದ ಸ್ತಂಭವಾಗಿಯೂ, ಕಂಚಿನ ಗೋಡೆಗಳಾಗಿಯೂ ಮಾಡಿದ್ದೇನೆ.
[19] ಅವರು ನಿನಗೆ ವಿರೋಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಗೆಲ್ಲುವುದಿಲ್ಲ. ಏಕೆಂದರೆ ನಿನ್ನನ್ನು ತಪ್ಪಿಸುವುದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ,” ಇದು ಯೆಹೋವ ದೇವರ ನುಡಿ.