[1] ಇತರ ಜನಾಂಗಗಳಿಗೆ ವಿರೋಧವಾಗಿ ಪ್ರವಾದಿಯಾದ ಯೆರೆಮೀಯನಿಗೆ ಬಂದ ಯೆಹೋವ ದೇವರ ವಾಕ್ಯವು:
[2] ಈಜಿಪ್ಟನ್ನು ಕುರಿತದ್ದು: ಯೆಹೂದದ ಅರಸನೂ ಯೋಷೀಯನ ಮಗನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ, ಈಜಿಪ್ಟಿನ ಅರಸನಾದ ಫರೋಹ ನೆಕೋವಿನ ಸೈನ್ಯವು ಯೂಫ್ರೇಟೀಸ್ ನದಿಯ ಬಳಿಯಿರುವ ಕರ್ಕೆಮೀಷಿನಲ್ಲಿ ಇರುವಾಗ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು, ಆ ಸೈನ್ಯದ ಮೇಲೆ ದಾಳಿಮಾಡಿದ್ದರ ವಿಷಯ:
[3] “ಗುರಾಣಿಯನ್ನೂ, ಖೇಡ್ಯವನ್ನೂ ಸಿದ್ಧಮಾಡಿರಿ; ಯುದ್ಧಕ್ಕೆ ಸಮೀಪಿಸಿರಿ;
[4] ರಾಹುತರೇ, ಕುದುರೆಗಳನ್ನು ಕಟ್ಟಿರಿ; ವಾಹನಾಶ್ವಗಳನ್ನು ಹತ್ತಿರಿ. ಎದ್ದು ಶಿರಸ್ತ್ರಾಣಗಳನ್ನು ಹಾಕಿಕೊಂಡು ಯುದ್ಧಕ್ಕೆ ನಿಂತುಕೊಳ್ಳಿರಿ; ಈಟಿಗಳನ್ನು ಮೆರುಗು ಮಾಡಿರಿ; ಕವಚಗಳನ್ನು ತೊಟ್ಟುಕೊಳ್ಳಿರಿ.
[5] ಆಹಾ, ನಾನು ಕಂಡದ್ದೇನು? ಅವರು ದಿಗಿಲುಪಟ್ಟು ಹಿಂದಿರುಗಿದ್ದನ್ನು, ಅವರ ಪರಾಕ್ರಮಶಾಲಿಗಳು ಪೆಟ್ಟುತಿಂದಿದ್ದಾರೆ. ಹಿಂದೆ ನೋಡದೆ ಓಡಿಹೋಗುತ್ತಾರೆ, ಏಕೆಂದರೆ ಸುತ್ತಲು ದಿಗಿಲು ಕವಿದಿದೆ,” ಎಂದು ಯೆಹೋವ ದೇವರು ಹೇಳುತ್ತಾರೆ.
[6] “ವೇಗಶಾಲಿಗಳು ಓಡಿ ಹೋಗದಿರಲಿ; ಪರಾಕ್ರಮಶಾಲಿಯು ತಪ್ಪಿಸಿಕೊಳ್ಳದಿರಲಿ; ಉತ್ತರದಲ್ಲಿ ಯೂಫ್ರೇಟೀಸ್ ನದಿಯ ತೀರದಲ್ಲಿ ಅವರು ಎಡವಿಬೀಳುವರು.
[7] “ನೈಲ್ ನದಿಯಂತೆ ಕದಲುವ ನೀರುಗಳಂತಿದ್ದು ಪ್ರಳಯದ ಹಾಗೆ ಬರುವವನು ಯಾರು?
[8] ಈಜಿಪ್ಟ್ ನೈಲ್ ನದಿಯ ಪ್ರಳಯದ ಹಾಗೆ ಏರುತ್ತದೆ; ಅದರ ನೀರು ನದಿಗಳ ಹಾಗೆ ಕದಲುತ್ತವೆ; ‘ನಾನು ಏರುತ್ತೇನೆ, ಭೂಮಿಯನ್ನು ಮುಚ್ಚುತ್ತೇನೆ; ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ನಾಶಮಾಡುತ್ತೇನೆ,’ ಎಂದು ಅವಳು ಹೇಳುತ್ತಾಳೆ.
[9] ಕುದುರೆಗಳೇ ಬನ್ನಿರಿ; ಸಾರಥಿಗಳೇ ಓಡಾಡಿರಿ; ಪರಾಕ್ರಮಶಾಲಿಗಳು ಹೊರಗೆ ಬರಲಿ; ಗುರಾಣಿಯನ್ನು ಹಿಡಿಯುವ ಕೂಷ್ಯರೂ, ಪೂಟ್ಯರೂ, ಬಿಲ್ಲನ್ನು ಹಿಡಿದು ಬಗ್ಗಿಸುವ ಲೂದ್ಯರೂ ಹೊರಗೆ ಬರಲಿ.
[10] ಏಕೆಂದರೆ ಇದು ಸೇನಾಧೀಶ್ವರ ಯೆಹೋವನಾದ ದೇವರ ದಿವಸವೇ. ಆತನು ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ದಿವಸವು, ಖಡ್ಗವು ಸಂಹರಿಸಿ ಅವರ ರಕ್ತದಿಂದ ತೃಪ್ತಿಯಾಗಿ ಮತ್ತವಾಗುವುದು. ಏಕೆಂದರೆ ಉತ್ತರ ದೇಶದಲ್ಲಿ ಯೂಫ್ರೇಟೀಸ್ ನದಿಯ ಬಳಿಯಲ್ಲಿ ಸೇನಾಧೀಶ್ವರ ಯೆಹೋವರಾದ ದೇವರಿಗೆ ಬಲಿ ಆಗುತ್ತದೆ.
[11] “ಈಜಿಪ್ಟಿನ ಮಗಳಾದ ಕನ್ನಿಕೆಯೇ, ಗಿಲ್ಯಾದಿಗೆ ಹೋಗಿ ತೈಲವನ್ನು ತೆಗೆದುಕೋ. ನೀನು ಬಹಳ ಔಷಧವನ್ನು ತೆಗೆದುಕೊಳ್ಳುವುದು ವ್ಯರ್ಥವಾಗಿದೆ. ಏಕೆಂದರೆ ನಿನಗೆ ಗುಣವಾಗುವುದಿಲ್ಲ!
[12] ಜನಾಂಗಗಳು ನಿನ್ನ ಮಾನಭಂಗವನ್ನು ಕುರಿತು ಕೇಳಿವೆ; ನಿನ್ನ ಕೂಗು ದೇಶವನ್ನು ತುಂಬಿಸಿದೆ. ಏಕೆಂದರೆ ಪರಾಕ್ರಮಶಾಲಿಯು ಪರಾಕ್ರಮಶಾಲಿಯ ಮೇಲೆ ವಿರೋಧವಾಗಿ ಎಡವಿದ್ದಾರೆ. ಇಬ್ಬರೂ ಬಿದ್ದು ಹೋಗಿದ್ದಾರೆ.”
[13] ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಬಂದು ಈಜಿಪ್ಟ್ ದೇಶವನ್ನು ಹೇಗೆ ಹೊಡೆಯುವನೆಂಬುದರ ವಿಷಯವಾಗಿ ಯೆಹೋವ ದೇವರು ಪ್ರವಾದಿಯಾದ ಯೆರೆಮೀಯನಿಗೆ ಹೇಳಿದ ವಾಕ್ಯವು:
[14] “ಈಜಿಪ್ಟಿನಲ್ಲಿ ತಿಳಿಸಿರಿ, ಮಿಗ್ದೋಲಿನಲ್ಲಿ ಪ್ರಕಟಿಸಿ, ನೋಫಿನಲ್ಲಿಯೂ, ತಹಪನೇಸಿನಲ್ಲಿಯೂ ಪ್ರಕಟಿಸಿ, ‘ನಿಮ್ಮ ಸ್ಥಾನಗಳನ್ನು ತೆಗೆದುಕೊಳ್ಳಿ ಮತ್ತು ಸಿದ್ಧರಾಗಿ, ಏಕೆಂದರೆ ಖಡ್ಗವು ನಿನ್ನ ಸುತ್ತಲೂ ಸಂಹರಿಸುವುದು,’ ಎಂದು ಹೇಳಿರಿ.
[15] ನಿನ್ನ ಬಲಿಷ್ಠರು ಏಕೆ ಬಡಕೊಂಡು ಹೋಗಿದ್ದಾರೆ? ಯೆಹೋವ ದೇವರು ಅವರನ್ನು ಓಡಿಸಿದ್ದರಿಂದ ಅವರು ನಿಲ್ಲಲಿಲ್ಲ.
[16] ಅವರು ಪದೇಪದೇ ಎಡವುತ್ತಾರೆ. ಹೌದು, ಒಬ್ಬರ ಮೇಲೊಬ್ಬರು ಬಿದ್ದರು. ‘ಅವರು ಉಪದ್ರವ ಪಡಿಸುವವರ ಖಡ್ಗವನ್ನು ಬಿಟ್ಟು, ಸ್ವಂತ ಜನರ ಬಳಿಗೂ, ನಾವು ಹುಟ್ಟಿದ ದೇಶದ ಬಳಿಗೂ ತಿರುಗಿ ಹೋಗೋಣ,’ ಎಂದು ಹೇಳಿದರು.
[17] ಈಜಿಪ್ಟಿನ ಅರಸನಾದ ಫರೋಹನು ನಾಶವಾದನು; ಸಮಯವನ್ನು ತಪ್ಪಿಸಿದ್ದಾನೆಂದು ಅಲ್ಲಿ ಕೂಗುತ್ತಾರೆ.
[18] “ಸೇನಾಧೀಶ್ವರ ಯೆಹೋವ ದೇವರೆಂದು ಹೆಸರುಳ್ಳ ಅರಸನು ಹೇಳುವುದೇನೆಂದರೆ, ‘ನನ್ನ ಜೀವದಾಣೆ,’ ಬೆಟ್ಟಗಳಲ್ಲಿ ತಾಬೋರಿನಂತೆಯೂ, ಸಮುದ್ರದ ಬಳಿಯಲ್ಲಿ ಕರ್ಮೆಲಿನಂತೆಯೂ ನಿಶ್ಚಯವಾಗಿ ಬರುವನು.
[19] ಈಜಿಪ್ಟಿನ ಯುವತಿಯಾದ ನಿವಾಸಿಯೇ, ಸೆರೆಯ ಸಾಮಾನುಗಳನ್ನು ಸಜ್ಜುಗೊಳಿಸಿಕೋ; ಏಕೆಂದರೆ ನೋಫ್ ಪಟ್ಟಣವು ಹಾಳಾಗುವುದು; ನಿವಾಸಿಗಳಿಲ್ಲದ ಬೀಡಾಗುವುದು.
[20] “ಈಜಿಪ್ಟ್ ದೇಶವು ಬಹಳ ಅಂದವಾದ ಕಡಸಾಗಿದೆ; ಆದರೆ ಉತ್ತರದಿಂದ ತೊಣಚೆಯು ಬಂದೇ ಬರುತ್ತದೆ.
[21] ಅದರೊಳಗಿರುವ ಅದರ ಸಂಬಳದವರು ಕೊಬ್ಬಿದ ಕರುಗಳಂತಿದ್ದಾರೆ; ಅವರು ಸಹ ಹಿಂದಕ್ಕೆ ತಿರುಗಿಕೊಂಡು ಏಕವಾಗಿ ಓಡಿಹೋಗುತ್ತಾರೆ; ಅವರು ನಿಲ್ಲಲಿಲ್ಲ; ಏಕೆಂದರೆ ಅವರ ಆಪತ್ತಿನ ದಿವಸವೂ, ಅವರ ವಿಚಾರಣೆಯ ಕಾಲವೂ ಅವರ ಮೇಲೆ ಬಂತು.
[22] ಅದರ ಶಬ್ದವು ಸರ್ಪದಂತೆ ಹೊರಡುವುದು; ಏಕೆಂದರೆ ಅವರು ದಂಡಿನ ಸಂಗಡ ಸಂಚರಿಸಿ, ಕಟ್ಟಿಗೆ ಕಡಿಯುವವರ ಹಾಗೆ ಕೊಡಲಿಗಳ ಸಂಗಡ ಅದಕ್ಕೆ ವಿರೋಧವಾಗಿ ಬರುವರು.
[23] ಆದರೆ ಅಡವಿಯನ್ನು ಅದು ಶೋಧಿಸಕೂಡದ್ದಾಗಿದ್ದರೂ, ಕಡಿದುಹಾಕುವರು,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ಅವರು ಮಿಡತೆಗಳಿಗಿಂತ ಹೆಚ್ಚಾಗಿ ಲೆಕ್ಕವಿಲ್ಲದೆ ಇದ್ದಾರೆ.
[24] ಈಜಿಪ್ಟಿನ ಮಗಳು ನಾಚಿಕೆಪಡುವಳು. ಉತ್ತರದ ಜನರ ಕೈಗೆ ಸಿಕ್ಕಿಬೀಳುವಳು.”
[25] ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ನಾನು ತೆಬೆಸ್ ನಗರದಲ್ಲಿನ ಆಮೋನ್ ದೇವತೆಯನ್ನೂ, ಫರೋಹನನ್ನೂ, ಈಜಿಪ್ಟನ್ನೂ, ಅದರ ದೇವರುಗಳನ್ನೂ, ಅದರ ಅರಸರನ್ನೂ, ಅಂತೂ ಫರೋಹನನ್ನೂ, ಅವನಲ್ಲಿ ನಂಬಿಕೆ ಇಡುವ ಎಲ್ಲರನ್ನೂ ದಂಡಿಸುವೆನು.
[26] ಅವರ ಪ್ರಾಣವನ್ನೂ ಹುಡುಕುವವರ ಕೈಯಲ್ಲಿಯೂ, ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ, ಅವನ ಸೇವಕರ ಕೈಯಲ್ಲಿಯೂ ಅವರನ್ನು ನಾನು ಒಪ್ಪಿಸಿಬಿಡುವೆನು. ಅದರ ತರುವಾಯ ಅದು ಪೂರ್ವದ ಕಾಲಗಳಂತೆ ನಿವಾಸವಾಗುವುದೆಂದು ಯೆಹೋವ ದೇವರು ಹೇಳುತ್ತಾರೆ.
[27] “ಆದರೆ ನೀನು, ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡಬೇಡ; ಇಸ್ರಾಯೇಲೇ, ದಿಗ್ಭ್ರಮೆಗೊಳ್ಳಬೇಡ; ಏಕೆಂದರೆ ಇಗೋ, ನಾನು ನಿನ್ನನ್ನು ದೂರದಿಂದಲೂ, ನಿನ್ನ ಸಂತಾನವನ್ನು ಅವರು ಸೆರೆಯಾಗಿ ಹೋದ ದೇಶದಿಂದಲೂ ರಕ್ಷಿಸುವೆನು; ಅವನನ್ನು ಭಯಪಡಿಸುವುದಕ್ಕೆ ಯಾರು ಇರುವುದಿಲ್ಲ.
[28] ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡಬೇಡ,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿ ಓಡಿಸಿದೆನೋ, ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ಮುಗಿಸಿಬಿಡುತ್ತೇನೆ; ಆದರೆ ನಿನ್ನನ್ನು ಸಂಪೂರ್ಣವಾಗಿ ಮುಗಿಸಿಬಿಡುವುದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದರೂ ನಿನ್ನನ್ನು ಶಿಕ್ಷಿಸದೆ ಬಿಡುವುದಿಲ್ಲ.”