Skip to content
Opens in a new window
Listen to this chapter • 1:51

[1] ಫರೋಹನು ಗಾಜಾ ಪಟ್ಟಣವನ್ನು ಮುತ್ತಿಗೆ ಹಾಕುವ ಮೊದಲು, ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆಮೀಯನಿಗೆ ಬಂದ ಯೆಹೋವ ದೇವರ ವಾಕ್ಯವು:

[2] ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಪ್ರವಾಹಗಳು ಉತ್ತರದಿಂದ ಬರುತ್ತವೆ, ಅದು ತುಂಬಿ ತುಳುಕುವ ಪ್ರಳಯವಾಗುವುದು; ದೇಶವನ್ನೂ ಅದರಲ್ಲಿರುವ ಸಮಸ್ತ ಪಟ್ಟಣವನ್ನೂ, ಅದರ ನಿವಾಸಿಗಳನ್ನೂ ಆಕ್ರಮಿಸುವುವು; ಆಗ ಮನುಷ್ಯರು ಕೂಗುವರು; ದೇಶದ ನಿವಾಸಿಗಳೆಲ್ಲರು ಗೋಳಾಡುವರು.

[3] ಅವನ ಬಲವಾದ ಕುದುರೆಗಳ ಗೊರಸುಗಳ ತುಳಿಯುವಿಕೆಯ ಶಬ್ದದಿಂದಲೂ ಅವನ ರಥಗಳ ಘೋಷದಿಂದಲೂ ಅವನ ಚಕ್ರಗಳ ಧ್ವನಿಯಿಂದಲೂ ತಂದೆಗಳು ಕೈ ಬಲಹೀನತೆಯಿಂದಾಗಿ ತಮ್ಮ ಮಕ್ಕಳ ಕಡೆಗೆ ಹಿಂದಿರುಗಿ ನೋಡರು.

[4] ಏಕೆಂದರೆ ಫಿಲಿಷ್ಟಿಯರೆಲ್ಲರನ್ನು ಸೂರೆ ಮಾಡುವುದಕ್ಕೂ ಟೈರಿನಿಂದಲೂ ಸೀದೋನಿನಿಂದಲೂ ಉಳಿದವರನ್ನು ಕಡಿದುಬಿಡುವುದಕ್ಕೂ ಆ ದಿವಸ ಬಂತು. ಏಕೆಂದರೆ ಯೆಹೋವ ದೇವರು ಫಿಲಿಷ್ಟಿಯರನ್ನು ಕಫ್ತೋರಿನ ದೇಶದ ಉಳಿದವರನ್ನೂ ಸೂರೆಮಾಡುವನು.

[5] ಗಾಜಾ ಊರು ಬೋಳಿಸಿಕೊಂಡಿದೆ. ಅಷ್ಕೆಲೋನ್ ನಾಶನ ಹೊಂದಿದೆ. ಫಿಲಿಷ್ಟಿಯದ ಬಯಲುಸೀಮೆಯಲ್ಲಿ ಉಳಿದ ಪಟ್ಟಣವೇ ನಿನ್ನನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿ?

[6] “ಅಯ್ಯೋ, ಯೆಹೋವ ದೇವರ ಖಡ್ಗವೇ, ಎಷ್ಟರವರೆಗೆ ವಿಶ್ರಮಿಸಿಕೊಳ್ಳದೇ ಇರುವಿ? ನಿನ್ನ ಒರೆಯಲ್ಲಿ ಅಡಗಿಕೋ; ವಿಶ್ರಮಿಸಿಕೋ, ಸುಮ್ಮನಿರು.

[7] ಅದು ಹೇಗೆ ಸುಮ್ಮನಿರುವುದು? ಅಷ್ಕೆಲೋನಿಗೆ ವಿರೋಧವಾಗಿ ಮತ್ತು ಸಮುದ್ರ ತೀರಕ್ಕೆ ವಿರೋಧವಾಗಿ ಯೆಹೋವ ದೇವರೇ ಅದಕ್ಕೆ ಆಜ್ಞಾಪಿಸಿದ್ದಾರಲ್ಲಾ? ಅಲ್ಲಿ ಅದನ್ನು ನೇಮಿಸಿದ್ದಾನೆ.”

ಯೆರೆಮೀಯ — Chapters