[1] ಇಸ್ರಾಯೇಲಿನ ವಂಶದವರೇ, ಯೆಹೋವ ದೇವರು ನಿಮಗೆ ಹೇಳುವ ವಾಕ್ಯವನ್ನು ಕೇಳಿರಿ.
[2] ಯೆಹೋವ ದೇವರು ಹೀಗೆ ಹೇಳುತ್ತಾರೆ: ಬೇರೆ ಜನಾಂಗಗಳ ಆಚರಣೆಗಳನ್ನು ಅನುಸರಿಸಬೇಡಿರಿ. ಅವರು ಆಕಾಶದ ಗುರುತುಗಳಿಗೆ ಹೆದರುತ್ತಾರೆ. ನೀವು ಅವುಗಳಿಗೆ ಹೆದರಬೇಡಿರಿ.
[3] ಜನಾಂಗಗಳ ಪದ್ಧತಿಗಳು ವ್ಯರ್ಥವಾಗಿವೆ. ಹೇಗೆಂದರೆ, ಅಡವಿಯಲ್ಲಿ ಒಬ್ಬನು ಮರವನ್ನು ಕಡಿಯುತ್ತಾನೆ. ಅದು ಕೊಡಲಿಯಿಂದ ಕಡಿದ ಬಡಿಗೆಯವನ ಕೈಕೆಲಸವೇ.
[4] ಬೆಳ್ಳಿಯಿಂದಲೂ ಬಂಗಾರದಿಂದಲೂ ಅದನ್ನು ಅಲಂಕರಿಸುತ್ತಾರೆ. ಮೊಳೆಗಳಿಂದಲೂ ಸುತ್ತಿಗೆಗಳಿಂದಲೂ ಚಲಿಸದ ಹಾಗೆ ಅದನ್ನು ಬಿಗಿಸುತ್ತಾರೆ.
[5] ಇಂಥಾ ಬೊಂಬೆಗಳು ಸೌತೆಕಾಯಿ ತೋಟದ ಬೆದರುಗಂಬದಂತಿವೆ, ಅವರ ವಿಗ್ರಹಗಳು ಮಾತನಾಡುವುದಿಲ್ಲ. ಅವುಗಳನ್ನು ಹೊತ್ತುಕೊಳ್ಳತಕ್ಕದ್ದು, ಏಕೆಂದರೆ ಅವು ನಡೆಯಲಾರವು. ಅವುಗಳಿಗೆ ಭಯಪಡಬೇಡಿರಿ. ಏಕೆಂದರೆ, ಅವು ಕೆಟ್ಟದ್ದನ್ನು ಮಾಡಲಾರವು. ಒಳ್ಳೆಯದನ್ನು ಮಾಡುವುದೂ ಸಹ ಅವುಗಳಲ್ಲಿ ಇಲ್ಲ.
[6] ಓ ಯೆಹೋವ ದೇವರೇ, ನಿಮ್ಮ ಹಾಗೆ ಯಾರೂ ಇಲ್ಲ. ನೀವು ಮಹೋತ್ತಮರು, ನಿಮ್ಮ ಹೆಸರು ಪರಾಕ್ರಮದಲ್ಲಿ ಮಹತ್ತರವಾದದ್ದು.
[7] ಓ ಜನಾಂಗಗಳ ಅರಸರಾದವರೇ, ನಿಮಗೆ ಭಯಪಡದವನ್ಯಾರು? ಏಕೆಂದರೆ, ನಿಮಗೆ ಅದು ಸಲ್ಲತಕ್ಕದ್ದು. ಏಕೆಂದರೆ, ಜನಾಂಗಗಳ ಎಲ್ಲಾ ಜ್ಞಾನಿಗಳಲ್ಲಿಯೂ, ಅವುಗಳ ಎಲ್ಲಾ ರಾಜ್ಯಗಳಲ್ಲಿಯೂ ನಿಮ್ಮ ಹಾಗೆ ಯಾರೂ ಇಲ್ಲ.
[8] ಆದರೆ ಅವರು ಮಂದರೂ ಮೂರ್ಖರೂ ಆಗಿದ್ದಾರೆ. ಅವರಿಗೆ ವ್ಯರ್ಥವಾದ ಮರ, ಬೊಂಬೆಗಳಿಂದ ಬೋಧನೆಯಾಗಿವೆ.
[9] ಬೆಳ್ಳಿಯ ತಗಡುಗಳನ್ನು ತಾರ್ಷೀಷಿನಿಂದಲೂ, ಬಂಗಾರವನ್ನು ಊಫಜಿನಿಂದ ತರುತ್ತಾರೆ. ಅದು ಕೆತ್ತನೆಯವನ ಕೆಲಸವು ಮತ್ತು ಎರಕ ಹೊಯ್ಯುವವನ ಕೈಯಿಂದ ಉಂಟಾದವುಗಳೂ ಆಗಿವೆ. ನೀಲಿಯೂ ಧೂಮ್ರ ವರ್ಣವೂ ಅವುಗಳ ವಸ್ತ್ರವಾಗಿದೆ. ಅವುಗಳೆಲ್ಲಾ ಕೌಶಲ್ಯಗಾರರ ಕೈಕೆಲಸವೇ.
[10] ಆದರೆ ಯೆಹೋವ ದೇವರು ನಿಜವಾದ ದೇವರಾಗಿದ್ದಾರೆ. ಅವರು ಜೀವಸ್ವರೂಪರಾದ ದೇವರೂ, ನಿತ್ಯನಾದ ಅರಸರೂ ಆಗಿದ್ದಾರೆ. ಅವರ ರೌದ್ರದಿಂದ ಭೂಮಿ ಕಂಪಿಸುವುದು. ಅವರ ಉಗ್ರತೆಯನ್ನು ಜನಾಂಗಗಳು ತಾಳಲಾರವು.
[11] “ನೀವು ಅವರಿಗೆ ಹೀಗೆ ಹೇಳಬೇಕು: ‘ಆಕಾಶಗಳನ್ನೂ ಭೂಮಿಯನ್ನೂ ಉಂಟು ಮಾಡದ ದೇವರುಗಳು, ಭೂಮಿಯ ಮೇಲಿನಿಂದಲೂ ಈ ಆಕಾಶದ ಕೆಳಗಿನಿಂದಲೂ ನಾಶವಾಗುವುವು.’ ”
[12] ಆದರೆ ದೇವರು ತಮ್ಮ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿ, ತಮ್ಮ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ, ತಮ್ಮ ವಿವೇಕದಿಂದ ಆಕಾಶವನ್ನು ವಿಸ್ತರಿಸಿದ್ದಾರೆ.
[13] ಅವರ ಗರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ, ಅವರು ಭೂಮಿಯ ಕಟ್ಟಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಗೋಸ್ಕರ ಮಿಂಚನ್ನು ಉಂಟುಮಾಡುತ್ತಾರೆ. ತಮ್ಮ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾರೆ.
[14] ಪ್ರತಿ ಮನುಷ್ಯನು ತಿಳುವಳಿಕೆ ಇಲ್ಲದವನೂ ಬುದ್ಧಿಹೀನನೂ ಆಗಿದ್ದಾನೆ. ತಾನು ಕೆತ್ತಿದ ವಿಗ್ರಹಕ್ಕೋಸ್ಕರ ಪ್ರತಿಯೊಬ್ಬ ಅಕ್ಕಸಾಲಿಗನೂ ನಾಚಿಕೆಪಡುತ್ತಾನೆ. ಏಕೆಂದರೆ ಅವರ ಎರಕದ ವಿಗ್ರಹಗಳು ಸುಳ್ಳೇ, ಅವುಗಳಲ್ಲಿ ಉಸಿರೇ ಇಲ್ಲ.
[15] ಅವು ವ್ಯರ್ಥ, ಹಾಸ್ಯಾಸ್ಪದದ ಕೆಲಸ. ಅವುಗಳ ದಂಡನೆಯ ಕಾಲದಲ್ಲಿ ಅವು ನಾಶವಾಗುವುವು.
[16] ಯಾಕೋಬ್ಯರ ಪಾಲಾಗಿರುವವರು ಇವುಗಳ ಹಾಗಲ್ಲ. ಏಕೆಂದರೆ ಅವರು ಎಲ್ಲವನ್ನು ರೂಪಿಸಿದವರೇ, ಇಸ್ರಾಯೇಲ್ ಅವರ ಸ್ವಾಸ್ತ್ಯವಾದ ವಂಶ. ಅವರ ಹೆಸರು ಸೇನಾಧೀಶ್ವರ ಯೆಹೋವ ದೇವರೇ.
[17] ಮುತ್ತಿಗೆಗೆ ಒಳಗಾದವರೇ, ನಿಮ್ಮ ದೇಶ ಬಿಡಲು ನಿಮ್ಮ ಸೊತ್ತುಗಳನ್ನು ಕೂಡಿಸಿರಿ.
[18] ಏಕೆಂದರೆ, ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಈ ಒಂದೇ ಸಾರಿ ದೇಶದ ನಿವಾಸಿಗಳನ್ನು ಕವಣೆಯಿಂದ ಎಸೆದುಬಿಡುತ್ತೇನೆ. ಅವರಿಗೆ ತಗಲುವ ಹಾಗೆ ಅವರನ್ನು ಸಂಕಟಪಡಿಸುತ್ತೇನೆ.”
[19] ನನ್ನ ನೋವಿನ ನಿಮಿತ್ತ ನನಗೆ ಅಯ್ಯೋ, ನನ್ನ ಗಾಯವು ವಾಸಿಪಡಿಸಲಾಗದು. ಆದರೆ ನಾನು ನಿಶ್ಚಯವಾಗಿ, “ಇದು ನನ್ನ ರೋಗ, ಇದನ್ನು ನಾನು ಸಹಿಸಲೇಬೇಕಾಗಿದೆ,” ಎಂದೆನು.
[20] ನನ್ನ ಗುಡಾರವು ಸೂರೆಯಾಯಿತು; ನನ್ನ ಹಗ್ಗಗಳೆಲ್ಲಾ ಹರಿದಿವೆ. ನನ್ನ ಮಕ್ಕಳು ನನ್ನನ್ನು ಬಿಟ್ಟು ಹೋಗಿದ್ದಾರೆ; ಅವರು ಇಲ್ಲ. ಇನ್ನು ಮೇಲೆ ನನ್ನ ಡೇರೆಯನ್ನು ಹರಡುವುದಕ್ಕೂ, ನನ್ನ ಪರದೆಗಳನ್ನು ನಿಲ್ಲಿಸುವುದಕ್ಕೂ ಒಬ್ಬನೂ ಇಲ್ಲ.
[21] ಏಕೆಂದರೆ, ಕುರುಬರು ಪಶುಗಳಂತಾದರು. ಅವರು ಯೆಹೋವ ದೇವರನ್ನು ಹುಡುಕಲಿಲ್ಲ. ಆದ್ದರಿಂದ ಅವರು ಸಫಲವಾಗುವುದಿಲ್ಲ. ಅವರ ಮಂದೆಗಳೆಲ್ಲಾ ಚದರಿಸಲಾಗುವುವು.
[22] ಇಗೋ, ಯೆಹೂದದ ಪಟ್ಟಣಗಳನ್ನು ಹಾಳು ಮಾಡುವುದಕ್ಕೂ, ನರಿಗಳ ಹಕ್ಕೆಯನ್ನಾಗಿ ಮಾಡುವುದಕ್ಕೂ, ಸುದ್ದಿಯ ಶಬ್ದವೂ, ಉತ್ತರ ದೇಶದಿಂದ ಮಹಾ ಗಲಭೆಯೂ ಬರುತ್ತದೆ.
[23] ಓ ಯೆಹೋವ ದೇವರೇ, ಮನುಷ್ಯನ ಮಾರ್ಗವು ತನ್ನಲ್ಲಿಲ್ಲವೆಂದೂ, ತನ್ನ ಹೆಜ್ಜೆ ನೆಟ್ಟಗೆ ಮಾಡುವುದು ನಡೆಯುವ ಮನುಷ್ಯನದ್ದಲ್ಲವೆಂದೂ ಬಲ್ಲೆನು.
[24] ಓ ಯೆಹೋವ ದೇವರೇ, ನನ್ನನ್ನು ಶಿಸ್ತುಪಡಿಸಿರಿ. ಆದರೆ ಮಿತಿಮೀರಿ ದಂಡಿಸಬೇಡಿರಿ, ನಿಮ್ಮ ಕೋಪದಲ್ಲಿ ಅಲ್ಲ. ಇಲ್ಲವಾದರೆ ನಾನು ಇಲ್ಲದೆಹೋಗುವೆನು.
[25] ನಿಮ್ಮನ್ನು ತಿಳಿಯದವರ ಮೇಲೆಯೂ, ನಿಮ್ಮ ಹೆಸರನ್ನು ಅರಿಯದ ದೇಶಗಳ ಮೇಲೆಯೂ, ನಿಮ್ಮ ಕೋಪವನ್ನು ಸುರಿದುಬಿಡಿರಿ. ಏಕೆಂದರೆ, ಅವರು ಯಾಕೋಬ್ಯರನ್ನು ನುಂಗಿಬಿಟ್ಟಿದ್ದಾರೆ. ಹೌದು, ಅವರನ್ನು ನುಂಗಿದ್ದಲ್ಲದೆ, ಅವರ ಸ್ವದೇಶವನ್ನು ಸಹ ನಾಶಮಾಡಿದ್ದಾರೆ.