Skip to content
Opens in a new window
Listen to this chapter • 12:09

[1] ಬಾಬಿಲೋನಿಯರ ದೇಶವಾದ ಬಾಬಿಲೋನಿಯದ ಕುರಿತು ಪ್ರವಾದಿ ಯೆರೆಮೀಯನಿಂದ ಯೆಹೋವ ದೇವರು ನುಡಿಸಿದ ವಾಕ್ಯ ಇದು:

[2] “ಜನಾಂಗಗಳಲ್ಲಿ ಪ್ರಚುರಪಡಿಸಿರಿ, ಧ್ವಜವನ್ನೆತ್ತಿ ಪ್ರಕಟಿಸಿರಿ; ಮರೆಮಾಡದೇ ಹೀಗೆ ಸಾರಿರಿ, ‘ಬಾಬಿಲೋನ್ ಶತ್ರುವಶವಾಯಿತು; ಬೇಲ್ ದೇವತೆಗೆ ನಾಚಿಕೆಯಾಯಿತು; ಮೆರೋದಾಕ್ ತುಂಡುತುಂಡಾಗಿ ಮುರಿದು ಹೋದನು. ಅವಳ ವಿಗ್ರಹಗಳಿಗೆ ನಾಚಿಕೆಯಾಯಿತು. ಮತ್ತು ಅವಳ ವಿಗ್ರಹಗಳು ಭಯದಿಂದ ತುಂಬಿವೆ.’

[3] ಏಕೆಂದರೆ ಉತ್ತರದಿಂದ ಅವಳ ವಿರೋಧವಾಗಿ ಜನಾಂಗವು ಬರುತ್ತದೆ; ಅದು ಅವಳ ದೇಶವನ್ನು ಹಾಳುಮಾಡಿಬಿಡುವುದು; ಅವಳಲ್ಲಿ ಯಾರೂ ವಾಸಿಸುವುದಿಲ್ಲ; ಮನುಷ್ಯರೂ, ಮೃಗಗಳೂ ಒಟ್ಟಾಗಿ ತೊಲಗಿಬಿಡುತ್ತಾರೆ, ಓಡಿಹೋಗುತ್ತಾರೆ.

[4] “ಆ ದಿವಸಗಳಲ್ಲಿಯೂ ಆ ಕಾಲದಲ್ಲಿಯೂ ಇಸ್ರಾಯೇಲರು ಬರುವರು; ಅವರೂ, ಯೆಹೂದ್ಯರೂ ಒಟ್ಟಾಗಿ ಕೂಡಿಕೊಳ್ಳುವರು,” ಎಂದು ಯೆಹೋವ ದೇವರು ಹೇಳುತ್ತಾರೆ. “ಅವರು ಅಳುತ್ತಾ ಹೋಗಿ, ತಮ್ಮ ದೇವರಾದ ಯೆಹೋವ ದೇವರನ್ನು ಹುಡುಕುವರು.

[5] ಚೀಯೋನಿನ ಕಡೆಗೆ ಅಭಿಮುಖರಾಗಿ ಅದರ ಮಾರ್ಗವನ್ನು ವಿಚಾರಿಸಿ ಬನ್ನಿ; ಮರೆತು ಹೋಗದ ನಿತ್ಯವಾದ ಒಡಂಬಡಿಕೆಯಿಂದ ಯೆಹೋವ ದೇವರನ್ನು ಸೇರಿಕೊಳ್ಳೋಣ, ಅನ್ನುವರು.

[6] “ನನ್ನ ಜನರು ಕಳೆದುಹೋದ ಕುರಿಗಳಾಗಿದ್ದಾರೆ; ಅವರ ಕುರುಬರು ಅವರನ್ನು ತಪ್ಪಿಹೋಗುವಂತೆ ಮಾಡಿದರು; ಅವರನ್ನು ಬೆಟ್ಟಗಳ ಮೇಲೆ ತಿರುಗಿಸಿ ಅಡ್ಡಾಡಿಸಿದರು; ಅವರು ಬೆಟ್ಟದಿಂದ ಗುಡ್ಡಕ್ಕೆ ಹೋದರು; ಮಲಗುವ ಸ್ಥಳವನ್ನು ಮರೆತುಬಿಟ್ಟರು.

[7] ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟಿದ್ದಾರೆ; ಅವರ ಎದುರಾಳಿಗಳು, ‘ನಾವು ಅವರನ್ನು ನುಂಗಿದ್ದು ದೋಷವಲ್ಲ; ಏಕೆಂದರೆ ನೀತಿಯ ನಿವಾಸವಾದ ಯೆಹೋವ ದೇವರಿಗೆ, ಹೌದು, ಅವರ ಪೂರ್ವಜರ ನಿರೀಕ್ಷೆಯಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದಾರೆ,’ ಎಂದುಕೊಂಡರು.

[8] “ಬಾಬಿಲೋನಿನೊಳಗಿಂದ ಓಡಿಹೋಗಿರಿ; ಬಾಬಿಲೋನಿನ ಸೀಮೆಯಿಂದ ಹೊರಡಿರಿ; ಮಂದೆಯ ಮುಂದೆ ಹೋತಗಳ ಹಾಗೆ ಇರಿ.

[9] ಏಕೆಂದರೆ ಇಗೋ, ನಾನು ಉತ್ತರ ದೇಶದಿಂದ ದೊಡ್ಡ ಜನಾಂಗಗಳ ಸಭೆ ಸೇರಿಸಿ, ಬಾಬಿಲೋನಿಗೆ ವಿರೋಧವಾಗಿ ಏಳುವಂತೆ ಮಾಡುತ್ತೇನೆ. ಅವರು ಅದಕ್ಕೆ ವಿರೋಧವಾಗಿ ಯುದ್ಧ ಸಿದ್ಧಮಾಡುವರು. ಅಲ್ಲಿಂದ ಅದು ಹಿಡಿಯಲಾಗುವುದು. ಅವರ ಬಾಣಗಳು ಬಲಿಷ್ಠನಾದ ಪ್ರವೀಣ ಶೂರನಂತಿರುವುವು. ಯಾವುದೂ ವ್ಯರ್ಥವಾಗಿ ತಿರುಗದು.

[10] ಬಾಬಿಲೋನಿನ ದೇಶವು ಸುಲಿಗೆಯಾಗುವುದು; ಅದನ್ನು ಸುಲಿದುಕೊಳ್ಳುವವರೆಲ್ಲರಿಗೆ ತೃಪ್ತಿಯಾಗುವುದು, ಎಂದು ಯೆಹೋವ ದೇವರು ಹೇಳುತ್ತಾರೆ.

[11] “ಏಕೆಂದರೆ ನನ್ನ ಸೊತ್ತನ್ನು ನಾಶಮಾಡಿದವರೇ, ನೀವು ಸಂತೋಷಿಸಿದ್ದರಿಂದಲೂ, ನೀವು ಉಲ್ಲಾಸಿಸಿದ್ದರಿಂದಲೂ, ಕೊಬ್ಬಿದ ಕಡಸಿನ ಹಾಗೆ ಗರ್ವ ಪಟ್ಟದ್ದರಿಂದಲೂ, ಗಂಡು ಕುದುರೆಗಳ ಹಾಗೆ ಹೂಂಕರಿಸಿದ್ದರಿಂದಲೂ,

[12] ನಿಮ್ಮ ತಾಯಿ ಬಹಳವಾಗಿ ನಾಚಿಕೆಪಡುವಳು; ನಿಮ್ಮನ್ನು ಹೆತ್ತವಳು ಲಜ್ಜೆ ಹೊಂದುವಳು; ಇಗೋ, ಜನಾಂಗಗಳಲ್ಲಿ ಅಂತ್ಯವಾದದ್ದು ಕಾಡೂ, ಒಣ ಭೂಮಿಯೂ, ಮರುಭೂಮಿಯೂ ಆಗುವುದು.

[13] ಯೆಹೋವ ದೇವರ ರೌದ್ರದ ನಿಮಿತ್ತ ಅದರಲ್ಲಿ ಯಾರೂ ವಾಸಮಾಡುವುದಿಲ್ಲ; ಸಂಪೂರ್ಣ ಹಾಳಾಗುವುದು; ಬಾಬಿಲೋನನ್ನು ಹಾದುಹೋಗುವವರೆಲ್ಲರು ಅದರ ಎಲ್ಲಾ ಗಾಯಗಳ ವಿಷಯ ವಿಸ್ಮಯಪಟ್ಟು ಸಿಳ್ಳುಹಾಕುವರು.

[14] “ಬಿಲ್ಲನ್ನು ಬಗ್ಗಿಸುವವರೇ, ಬಾಬಿಲೋನಿಗೆ ವಿರೋಧವಾಗಿ ಸುತ್ತಲೂ ಯುದ್ಧ ಸಿದ್ಧಮಾಡಿರಿ; ಅದಕ್ಕೆ ಎಸೆಯಿರಿ; ಬಾಣಗಳನ್ನು ಕಡಿಮೆ ಮಾಡಬೇಡಿರಿ; ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿತಲ್ಲಾ.

[15] ಸುತ್ತಲೂ ಅದಕ್ಕೆ ವಿರೋಧವಾಗಿ ಆರ್ಭಟಿಸಿರಿ; ಅದರ ಬುರುಜುಗಳು ಬಿದ್ದು ಹೋದವು; ಅದರ ಪೌಳಿಗೋಡೆಯನ್ನು ಕೆಡವಲಾಯಿತು. ಅದು ಯೆಹೋವ ದೇವರ ಪ್ರತಿದಂಡನೆ; ಆದ್ದರಿಂದ ನೀವೂ ಅದಕ್ಕೆ ಮುಯ್ಯಿತೀರಿಸಿರಿ. ಅದು ಇತರರಿಗೆ ಮಾಡಿದ ಹಾಗೆಯೇ ಅದಕ್ಕೆ ಮಾಡಿರಿ.

[16] ಬಿತ್ತುವವನನ್ನೂ, ಸುಗ್ಗಿಕಾಲದಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬಿಲೋನಿನೊಳಗಿಂದ ಕಡಿದುಬಿಡಿರಿ; ಕಷ್ಟಪಡುವ ಖಡ್ಗದ ಭಯದಿಂದ ಅವರು ತಮ್ಮ ತಮ್ಮ ಜನರ ಬಳಿಗೆ ತಿರುಗಿಕೊಳ್ಳುವರು; ತಮ್ಮ ತಮ್ಮ ದೇಶಗಳಿಗೆ ಓಡಿಹೋಗುವರು.

[17] “ಇಸ್ರಾಯೇಲನು ಚದರಿಹೋದ ಕುರಿಯಾಗಿದ್ದನು; ಸಿಂಹಗಳು ಅವನನ್ನು ಓಡಿಸಿಬಿಟ್ಟವು; ಮೊದಲು ಅಸ್ಸೀರಿಯನ ಅರಸನು ಅವನನ್ನು ತಿಂದುಬಿಟ್ಟನು. ಕಡೆಯಲ್ಲಿ ಬಾಬಿಲೋನಿನ ಅರಸನಾದ ಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ.”

[18] ಆದ್ದರಿಂದ ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಅಸ್ಸೀರಿನ ಅರಸನನ್ನು ಶಿಕ್ಷಿಸಿದ ಹಾಗೆ ಬಾಬಿಲೋನಿನ ಅರಸನನ್ನೂ, ಅವನ ದೇಶವನ್ನೂ ಶಿಕ್ಷಿಸುತ್ತೇನೆ.

[19] ಇಸ್ರಾಯೇಲನನ್ನು ಅವನ ನಿವಾಸಕ್ಕೆ ತಿರುಗಿ ಬರಮಾಡುತ್ತೇನೆ; ಅವನು ಕರ್ಮೆಲಿನಲ್ಲಿಯೂ, ಬಾಷಾನಿನಲ್ಲಿಯೂ ಮೇಯುವನು; ಅವನ ಪ್ರಾಣವು ಎಫ್ರಾಯೀಮ್ ಬೆಟ್ಟದಲ್ಲಿಯೂ, ಗಿಲ್ಯಾದಿನಲ್ಲಿಯೂ ತೃಪ್ತಿ ಹೊಂದುವುದು.”

[20] ಯೆಹೋವ ದೇವರು ಹೇಳುತ್ತಾರೆ, “ಆ ದಿವಸಗಳಲ್ಲಿಯೂ, ಆ ಕಾಲದಲ್ಲಿಯೂ ಇಸ್ರಾಯೇಲಿನ ಅಕ್ರಮವನ್ನು ಹುಡುಕಿದರೂ, ಅಲ್ಲಿ ಏನೂ ಇರದು; ಯೆಹೂದದ ಪಾಪಗಳನ್ನು ಹುಡುಕಿದರೂ ಅವು ಸಿಕ್ಕುವುದಿಲ್ಲ. ಏಕೆಂದರೆ ನಾನು ಉಳಿಸುವವರನ್ನು ಮನ್ನಿಸುತ್ತೇನೆ.

[21] “ಮೆರಾಥಯಿಮ್ ದೇಶಕ್ಕೆ ವಿರೋಧವಾಗಿ, ಪೆಕೋದಿನ ನಿವಾಸಿಗಳಿಗೆ ವಿರೋಧವಾಗಿಯೂ ದಂಡೆತ್ತಿ ಹೋಗು; ಅವರನ್ನು ಹಿಂದಟ್ಟಿ ಸಂಹರಿಸು. ಸಂಪೂರ್ಣ ನಾಶಮಾಡು.” “ನಾನು ನಿನಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಮಾಡು, ಎಂದು ಯೆಹೋವ ದೇವರು ಹೇಳುತ್ತಾರೆ.

[22] ಯುದ್ಧದ ಶಬ್ದವೂ, ದೊಡ್ಡ ನಾಶನವೂ ದೇಶದಲ್ಲಿ ಇರುವುದು.

[23] ಇಗೋ, ಲೋಕವನ್ನೆಲ್ಲಾ ಹೊಡೆದ ಸುತ್ತಿಗೆಯು ಮುರಿದು ತುಂಡುತುಂಡಾಯಿತು! ಹೇಗೆ ಬಾಬೆಲ್ ರಾಜ್ಯವು ಜನಾಂಗಗಳ ನಡುವೆ ಹಾಳಾಯಿತಲ್ಲಾ!

[24] ನಾನು ಬೋನನ್ನು ಇಟ್ಟೆನು; ಹೌದು, ಬಾಬಿಲೋನೇ ನೀನು ಸಿಕ್ಕಿಕೊಂಡೆ. ಆದರೆ ನಿನಗೆ ತಿಳಿಯದೆ ಇತ್ತು. ನೀನು ಯೆಹೋವ ದೇವರಿಗೆ ವಿರೋಧವಾಗಿ ಜಗಳವಾಡಿದ್ದರಿಂದಲೇ ಸಿಕ್ಕಿಕೊಂಡೆ ಮತ್ತು ವಶವಾದೆ.

[25] ಯೆಹೋವ ದೇವರು ತನ್ನ ಆಯುಧ ಶಾಲೆಯನ್ನು ತೆರೆದು, ತನ್ನ ರೋಷದ ಆಯುಧಗಳನ್ನು ಹೊರಗೆ ತಂದಿದ್ದಾರೆ. ಏಕೆಂದರೆ ಬಾಬಿಲೋನಿನ ದೇಶದಲ್ಲಿ ಸಾರ್ವಭೌಮ ಸೇನಾಧೀಶ್ವರ ಯೆಹೋವ ದೇವರಿಗೆ ಕೆಲಸವಿದೆ.

[26] ಕಟ್ಟಕಡೆಯ ಮೇರೆಯಿಂದ ಅದಕ್ಕೆ ವಿರೋಧವಾಗಿ ಬನ್ನಿ. ಅದರ ಕಣಜಗಳನ್ನು ತೆರೆಯಿರಿ. ಅದನ್ನು ದಿಬ್ಬಗಳಂತೆ ತುಳಿಯಿರಿ. ಸಂಪೂರ್ಣವಾಗಿ ನಾಶಮಾಡಿರಿ. ಅದಕ್ಕೆ ಒಂದೂ ಉಳಿಯದಿರಲಿ.

[27] ಅದರ ಹೋರಿಗಳನ್ನೆಲ್ಲಾ ಕೊಲ್ಲಿರಿ, ಅವು ವಧ್ಯಸ್ಥಾನಕ್ಕೆ ಹೋಗಲಿ, ಅವುಗಳ ಗತಿಯನ್ನು ಏನೆಂದು ಹೇಳಲಿ! ಅವುಗಳಿಗೆ ವಿಪತ್ಕಾಲವು ಒದಗಿದೆ. ದಂಡನೆಯ ದಿನವು ಸಂಭವಿಸಿದೆ.

[28] ಅವರು ಚೀಯೋನಿನಲ್ಲಿ ನಮ್ಮ ದೇವರಾದ ಯೆಹೋವ ದೇವರ ಪ್ರತಿದಂಡನೆಯನ್ನೂ, ಆತನ ಆಲಯದ ಪ್ರತಿದಂಡನೆಯನ್ನೂ ತಿಳಿಸುತ್ತಾ, ಬಾಬಿಲೋನಿನ ದೇಶದಿಂದ ತಪ್ಪಿಸಿಕೊಂಡು ಓಡಿ ಹೋಗುವವರ ಸ್ವರವನ್ನು ಕೇಳಿರಿ.

[29] “ಬಾಬಿಲೋನಿಗೆ ವಿರೋಧವಾಗಿ ಬಿಲ್ಲುಬಾಣಗಾರರನ್ನೆಲ್ಲ ಒಟ್ಟಾಗಿ ಕರೆಯಿರಿ; ಅದರ ಸುತ್ತಲು ದಂಡಿಳಿಸಿರಿ ಅದರ ನಿವಾಸಿಗಳಲ್ಲಿ ಯಾರೂ ತಪ್ಪಿಸಿಕೊಳ್ಳದ ಹಾಗಿರಲಿ. ಅದರ ಕೃತ್ಯಕ್ಕೆ ತಕ್ಕಂತೆ ಮುಯ್ಯಿತೀರಿಸಿರಿ ಅದು ಮಾಡಿದಂತೆಯೇ ಅದಕ್ಕೆ ಮಾಡಿ. ಏಕೆಂದರೆ ಅದು ಅಹಂಕಾರದಿಂದ ಇಸ್ರಾಯೇಲರ ಪರಿಶುದ್ಧ ಯೆಹೋವ ದೇವರನ್ನು ಅಸಡ್ಡೆಮಾಡಿತು.

[30] ಆದ್ದರಿಂದ ಅದರ ಯೌವನಸ್ಥರು ಬೀದಿಗಳಲ್ಲಿ ಬೀಳುವರು; ಅದರ ಸೈನಿಕರೆಲ್ಲಾ ಆ ದಿವಸದಲ್ಲಿ ಸುಮ್ಮನಾಗುವರು,” ಎಂದು ಯೆಹೋವ ದೇವರು ಹೇಳುತ್ತಾರೆ.

[31] “ಅತಿ ಗರ್ವಿಷ್ಠನೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ,” ಎಂದು ಸೈನ್ಯಗಳ ದೇವರಾದ ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನಿನ್ನ ದಿವಸವೂ, ನಿನ್ನ ಶಿಕ್ಷೆಯ ಕಾಲವೂ ಬಂತು.

[32] ಅಹಂಕಾರದಿಂದ ಕೂಡಿದ ರಾಜ್ಯ ಎಡವಿ ಬೀಳುವುದು. ಅದನ್ನು ಯಾರೂ ಎತ್ತರು. ಅದರ ನಗರಗಳಿಗೆ ಬೆಂಕಿ ಹೊತ್ತಿಸುವೆನು. ಅದು ಸುತ್ತಮುತ್ತಣದನ್ನೆಲ್ಲ ನುಂಗಿಬಿಡುವುದು.”

[33] ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇಸ್ರಾಯೇಲರೂ, ಯೆಹೂದ್ಯರೂ ಕೂಡ ಹಿಂಸೆಗೆ ಗುರಿಯಾಗಿದ್ದಾರೆ; ಅವರನ್ನು ಸೆರೆಗೆ ಒಯ್ಯುವವರೆಲ್ಲರು ಅವರನ್ನು ಬಿಟ್ಟುಬಿಡುವುದಿಲ್ಲವೆಂದು, ಬಲವಾಗಿ ಪಟ್ಟುಹಿಡಿದಿದ್ದಾರೆ.

[34] ಅವರ ವಿಮೋಚಕನು ಬಲಿಷ್ಠನೇ, ಸೇನಾಧೀಶ್ವರ ಯೆಹೋವ ದೇವರೆಂಬುದೇ ಅವರ ಹೆಸರು; ಅವರು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ, ಬಾಬಿಲೋನಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ, ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವರು.

[35] “ಬಾಬಿಲೋನಿಯರ ಮೇಲೆ ಬೀಳಲಿದೆ ಖಡ್ಗ,” ಎಂದು ಯೆಹೋವ ದೇವರು ಹೇಳುತ್ತಾರೆ. “ಅದರ ಜನಸಾಮಾನ್ಯರನ್ನು, ಪ್ರಧಾನರನ್ನು, ಪಂಡಿತರನ್ನು ಇವರೆಲ್ಲರನ್ನು ಹತಿಸಲಿದೆ ಖಡ್ಗ,

[36] ಸುಳ್ಳು ಪ್ರವಾದಿಗಳ ವಿರೋಧವಾಗಿ ಖಡ್ಗ ಉಂಟು; ಅವರು ಮೂರ್ಖರಾಗುವರು; ಅದರ ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಭಯಭ್ರಾಂತಿ ಪಡುವರು.

[37] ಅದರ ಕುದುರೆಗಳಿಗೆ ವಿರೋಧವಾಗಿಯೂ, ಅವರ ರಥಗಳಿಗೆ ವಿರೋಧವಾಗಿಯೂ, ಅವರೊಳಗಿರುವ ಎಲ್ಲಾ ಸಕಲ ಜನರಿಗೆ ವಿರೋಧವಾಗಿಯೂ ಖಡ್ಗ ಉಂಟು; ಅವರ ಹೆಂಗಸರಂತೆ ಅಶಕ್ತರಾಗುವರು; ಅದರ ಬೊಕ್ಕಸಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವು ಕೊಳ್ಳೆಯಾಗುವುವು.

[38] ಬೇಗೆಯು ಅವರ ನೀರನ್ನೆಲ್ಲಾ ಹೀರಲಿ; ಅದು ಬತ್ತಿಹೋಗುವುದು; ಏಕೆಂದರೆ ಅದು ವಿಗ್ರಹಗಳ ದೇಶವೇ, ಅವರು ಭಯಂಕರವಾದ ವಿಗ್ರಹಗಳಿಂದ ಹುಚ್ಚರಾದರು.

[39] “ಆದ್ದರಿಂದ ಅರಣ್ಯದ ಕಾಡುಮೃಗಗಳು, ನರಿಗಳು ಕೂಡ ಅಲ್ಲಿ ವಾಸಮಾಡುವುವು; ಉಷ್ಟ್ರಪಕ್ಷಿಗಳೂ ಸಹ ಅದರಲ್ಲಿ ವಾಸಮಾಡುವುವು; ತಲತಲಾಂತರಗಳವರೆಗೂ ಯಾರೂ ಅದರಲ್ಲಿ ತಂಗುವುದಿಲ್ಲ.

[40] ನಾನು ಕೆಡವಿದ ಸೊದೋಮ್ ಗೊಮೋರ ಪಟ್ಟಣಗಳಲ್ಲಿಯೂ ಅವುಗಳ ಸುತ್ತಣ ಪಟ್ಟಣಗಳಲ್ಲಿಯೂ ಹೇಗೋ ಹಾಗೆಯೇ, ಎದೋಮಿನಲ್ಲಿಯೂ ಯಾರೂ ವಾಸಮಾಡುವುದಿಲ್ಲ; ಅದರಲ್ಲಿ ಯಾವ ನರಪ್ರಾಣಿಯೂ ತಂಗುವುದಿಲ್ಲ” ಎಂದು ಯೆಹೋವ ದೇವರು ಅನ್ನುತ್ತಾರೆ.

[41] “ಇಗೋ, ಒಂದು ಜನಾಂಗವು ಉತ್ತರ ದಿಕ್ಕಿನಿಂದ ಬರುವುದು ಅನೇಕ ಅರಸರು ಎಚ್ಚರಗೊಳ್ಳುವರು. ಅವರು ಲೋಕದ ಕಟ್ಟಕಡೆಯಿಂದ ಬರುತ್ತಾರೆ.

[42] ಅವರು ಬಿಲ್ಲನ್ನೂ, ಭಲ್ಲೆಯನ್ನೂ ಹಿಡಿದುಕೊಂಡಿದ್ದಾರೆ. ಅವರು ಕ್ರೂರರು, ಕನಿಕರ ತೋರಿಸುವುದಿಲ್ಲ. ಅವರ ಶಬ್ದವು ಸಮುದ್ರದ ಹಾಗೆ ಭೋರ್ಗರೆಯುತ್ತದೆ. ಬಾಬಿಲೋನಿನ ಮಗಳೇ, ನಿನಗೆ ವಿರೋಧವಾಗಿಯೇ ಯುದ್ಧಮಾಡುವುದಕ್ಕೆ ಸಿದ್ಧವಾಗಿರುವ ಶೂರರಂತೆ ಕುದುರೆಗಳನ್ನು ಹತ್ತಿಕೊಂಡು ಬರುತ್ತಿದ್ದಾರೆ.

[43] ಬಾಬಿಲೋನಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ; ಅವನ ಕೈಗಳು ನಿತ್ರಾಣವಾದವು; ಸಂಕಟವೂ, ಹೆರುವ ಸ್ತ್ರೀಯ ಹಾಗೆ ನೋವೂ ಅವನನ್ನು ಹಿಡಿದವು.

[44] ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ದಟ್ಟ ಅಡವಿಯಿಂದ ಬಲವಾದ ಗೋಮಾಳಕ್ಕೆ ವಿರೋಧವಾಗಿ ಏರಿ ಬರುವನು; ಆದರೆ ನಾನು ಕ್ಷಣಮಾತ್ರದಲ್ಲಿ ಆ ಬಾಬಿಲೋನಿಯರನ್ನು ಅಲ್ಲಿಂದ ದೂರವಾಗಿ ಓಡಿಸಿಬಿಡುವೆನು; ಅದನ್ನು ಕಾಯುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಕರೆಯುವವನು ಯಾರು? ನನಗೆ ಎದುರಾಗಿ ನಿಲ್ಲತಕ್ಕ ಕುರುಬನು ಯಾರು?”

[45] ಆದ್ದರಿಂದ ಯೆಹೋವ ದೇವರು ಬಾಬಿಲೋನಿಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೂ, ಅವರು ಬಾಬಿಲೋನಿಯರ ದೇಶಕ್ಕೆ ವಿರೋಧವಾಗಿ ಮಾಡಿದ ಯೋಜನೆಗಳನ್ನೂ ಕೇಳಿರಿ; ಕಾಡುಮೃಗಗಳು ನಿಶ್ಚಯವಾಗಿ, ಹಿಂಡಿನ ಮರಿಗಳನ್ನು ಎಳೆದುಕೊಂಡು ಹೋಗುವವು; ಖಂಡಿತವಾಗಿ, ಅವುಗಳ ಹುಲ್ಲುಗಾವಲು ಅವುಗಳ ನಾಶನಕ್ಕಾಗಿ ಬೆದರುವುದು.

[46] ಬಾಬಿಲೋನು ಶತ್ರುವಶ ಆಯಿತೆಂಬ ಕೋಲಾಹಲಕ್ಕೆ ಭೂಮಿಯು ಕಂಪಿಸುವುದು; ಅದರ ಕೂಗು ಜನಾಂಗಗಳೊಳಗೆ ಕೇಳಬಂತು.

ಯೆರೆಮೀಯ — Chapters