Skip to content
Opens in a new window
Listen to this chapter • 4:08

[1] ಅದೇ ವರ್ಷದಲ್ಲಿ ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಪ್ರಾರಂಭದಲ್ಲಿ ನಾಲ್ಕನೆಯ ವರ್ಷದ ಐದನೆಯ ತಿಂಗಳಲ್ಲಿ ಗಿಬ್ಯೋನಿನವನಾದ ಅಜ್ಜೂರನ ಮಗನಾದ ಹನನ್ಯನೆಂಬ ಪ್ರವಾದಿಯು ಯೆಹೋವ ದೇವರ ಆಲಯದಲ್ಲಿ ಯಾಜಕರ ಮುಂದೆಯೂ, ಜನರೆಲ್ಲರ ಮುಂದೆಯೂ ನನಗೆ ಹೇಳಿದ್ದೇನೆಂದರೆ,

[2] “ಇಸ್ರಾಯೇಲಿನ ದೇವರೂ ಸೇನಾಧೀಶ್ವರ ಯೆಹೋವ ದೇವರೂ ಹೀಗೆ ಹೇಳುತ್ತಾರೆ: ‘ನಾನು ಬಾಬಿಲೋನಿನ ಅರಸನ ನೊಗವನ್ನು ಮುರಿದಿದ್ದೇನೆ.

[3] ಎರಡು ವರ್ಷದೊಳಗಾಗಿ ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಈ ಸ್ಥಳದಿಂದ ತೆಗೆದುಕೊಂಡು, ಬಾಬಿಲೋನಿಗೆ ಒಯ್ದ ಯೆಹೋವ ದೇವರ ಆಲಯದ ಪಾತ್ರೆಗಳನ್ನೆಲ್ಲಾ ತಿರುಗಿಸುವೆನು.

[4] ಯೆಹೂದದ ಅರಸನಾದ ಯೆಹೋಯಾಕೀಮನ ಮಗ ಯೆಕೊನ್ಯನನ್ನು ಬಾಬಿಲೋನಿಗೆ ಹೋದ ಯೆಹೂದದ ಸೆರೆಯವರೆಲ್ಲರನ್ನೂ ನಾನು ತಿರುಗಿ ಈ ಸ್ಥಳಕ್ಕೆ ಬರಮಾಡುವೆನು,’ ಎಂದು ಯೆಹೋವ ದೇವರು ಹೇಳುತ್ತಾರೆ. ಏಕೆಂದರೆ ಬಾಬಿಲೋನಿನ ಅರಸನ ನೊಗವನ್ನು ಮುರಿದುಬಿಡುವೆನು.”

[5] ಆಗ ಪ್ರವಾದಿಯಾದ ಯೆರೆಮೀಯನು ಯಾಜಕರ ಮುಂದೆಯೂ, ಯೆಹೋವ ದೇವರ ಆಲಯದಲ್ಲಿ ನಿಂತಿರುವ ಜನರೆಲ್ಲರ ಮುಂದೆಯೂ ಪ್ರವಾದಿಯಾದ ಹನನ್ಯನಿಗೆ,

[6] “ಆಮೆನ್, ಯೆಹೋವ ದೇವರು ಹಾಗೆಯೇ ಮಾಡಲಿ; ನೀನು ಪ್ರವಾದಿಸಿದೆ; ನಿನ್ನ ವಾಕ್ಯಗಳನ್ನು ಯೆಹೋವ ದೇವರು ನೆರವೇರಿಸಿ, ಯೆಹೋವ ದೇವರ ಆಲಯದ ಪಾತ್ರೆಗಳನ್ನೂ, ಸೆರೆಯವರೆಲ್ಲರನ್ನೂ ಬಾಬಿಲೋನಿನಿಂದ ತಿರುಗಿ ಈ ಸ್ಥಳಕ್ಕೆ ಬರಮಾಡಲಿ.

[7] ಆದರೂ ನಾನು ನಿನಗೂ, ಜನರ ಕಿವಿಗಳಿಗೂ ಬೀಳುವಂತೆ ಹೇಳುವ ಈ ವಾಕ್ಯವನ್ನು ಕೇಳು.

[8] ನನಗೆ ಮುಂಚೆಯೂ, ನಿನಗೆ ಮುಂಚೆಯೂ ಇದ್ದ ಹಿಂದಿನ ಪ್ರವಾದಿಗಳು ಅನೇಕ ದೇಶಗಳಿಗೂ, ದೊಡ್ಡ ರಾಜ್ಯಗಳಿಗೂ ವಿರೋಧವಾಗಿ ಯುದ್ಧವನ್ನು ಕೇಡನ್ನೂ, ವ್ಯಾಧಿಯನ್ನೂ ಕುರಿತು ಪ್ರವಾದಿಸಿದರು.

[9] ಸಮಾಧಾನವನ್ನು ಕುರಿತು ಪ್ರವಾದಿಸುವ ಪ್ರವಾದಿಯಾದರೆ, ಆ ಪ್ರವಾದಿಯ ವಾಕ್ಯವು ಉಂಟಾಗುವಾಗ, ಅವನು ಯೆಹೋವ ದೇವರಿಂದ ನಿಜವಾಗಿ ಕಳುಹಿಸಲಾದ ಪ್ರವಾದಿ, ಎಂದು ತಿಳಿಯತಕ್ಕದ್ದು,” ಎಂದನು.

[10] ಆಗ ಪ್ರವಾದಿಯಾದ ಹನನ್ಯನು ಪ್ರವಾದಿಯಾದ ಯೆರೆಮೀಯನ ಕುತ್ತಿಗೆಯಿಂದ ನೊಗವನ್ನು ತೆಗೆದು, ಅದನ್ನು ಮುರಿದುಬಿಟ್ಟನು.

[11] ಹನನ್ಯನು ಜನರೆಲ್ಲರ ಮುಂದೆ ಹೇಳಿದ್ದೇನೆಂದರೆ, “ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಇದೇ ಪ್ರಕಾರ ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ನೊಗವನ್ನು ಎರಡು ವರ್ಷದೊಳಗಾಗಿ ಎಲ್ಲಾ ಜನಾಂಗಗಳ ಕುತ್ತಿಗೆಯ ಮೇಲಿನಿಂದ ಮುರಿದು ಹಾಕುವೆನು,’ ” ಎಂದನು. ಆಗ ಪ್ರವಾದಿಯಾದ ಯೆರೆಮೀಯನು ತನ್ನ ಮಾರ್ಗವಾಗಿ ಹೊರಟುಹೋದನು.

[12] ಆಗ ಪ್ರವಾದಿಯಾದ ಹನನ್ಯನು ಆ ನೊಗವನ್ನು ಪ್ರವಾದಿಯಾದ ಯೆರೆಮೀಯನ ಕುತ್ತಿಗೆಯ ಮೇಲಿನಿಂದ ಮುರಿದು ಹಾಕಿದ ಮೇಲೆ, ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಉಂಟಾಗಿ,

[13] “ನೀನು ಹೋಗಿ ಹನನ್ಯನಿಗೆ ಹೀಗೆ ಹೇಳು: ‘ನೀವು ಮರದ ನೊಗಗಳನ್ನು ಮುರಿದಿದ್ದೀ; ಆದರೆ ಅವಕ್ಕೆ ಬದಲಾಗಿ ನಿನ್ನ ಮೇಲೆ ಕಬ್ಬಿಣದ ನೊಗಗಳನ್ನು ಉಂಟುಮಾಡು,’ ಎಂದು ಯೆಹೋವ ದೇವರು ಹೇಳುತ್ತಾರೆ.

[14] ಇಸ್ರಾಯೇಲರ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಾನು ಈ ಎಲ್ಲಾ ಜನಾಂಗಗಳ ಕುತ್ತಿಗೆಗಳ ಮೇಲೆ ಅವರು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ಸೇವೆ ಮಾಡುವ ಹಾಗೆ ಕಬ್ಬಿಣದ ನೊಗವನ್ನು ಇಡುವೆನು. ಅವರು ಅವನಿಗೆ ಸೇವೆಮಾಡುವರು; ಕಾಡುಮೃಗಗಳನ್ನು ಸಹ ಅವನಿಗೆ ಕೊಡುವೆನು.’ ”

[15] ಆಗ ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ ಹೇಳಿದ್ದೇನೆಂದರೆ, “ಹನನೀಯನೇ, ಕೇಳು. ಯೆಹೋವ ದೇವರು ನಿನ್ನನ್ನು ಕಳುಹಿಸಲಿಲ್ಲ. ಆದರೆ ನೀನು ಈ ಜನರನ್ನು ಸುಳ್ಳಿನಲ್ಲಿ ಭರವಸೆ ಇಡುವಂತೆ ಮಾಡುತ್ತೀ.

[16] ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಇಗೋ, ನಾನು ನಿನ್ನನ್ನು ಭೂಮಿಯ ಮೇಲಿನಿಂದ ಬಿಸಾಡಿಬಿಡುತ್ತೇನೆ. ಈ ವರ್ಷವೇ ನೀನು ಸಾಯುವೆ. ಏಕೆಂದರೆ ನೀನು ಯೆಹೋವ ದೇವರಿಗೆ ವಿರೋಧವಾಗಿ ದ್ರೋಹ ಬಗೆದಿದ್ದೀ,’ ” ಎಂದನು.

[17] ಹಾಗೆಯೇ ಪ್ರವಾದಿಯಾದ ಹನನ್ಯನು ಅದೇ ವರ್ಷದಲ್ಲಿ ಏಳನೆಯ ತಿಂಗಳಲ್ಲಿ ಸತ್ತನು.

ಯೆರೆಮೀಯ — Chapters