Skip to content
Opens in a new window
Listen to this chapter • 10:22

[1] ಅಮ್ಮೋನ್ಯರನ್ನು ಕುರಿತದ್ದು: ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಸ್ರಾಯೇಲಿಗೆ ಪುತ್ರರಿಲ್ಲವೋ? ಅವನಿಗೆ ಬಾಧ್ಯಸ್ಥನಿಲ್ಲವೋ? ಮಲ್ಕಾಮ್ ದೇವತೆಯು ಗಾದನ್ನು ಬಾಧ್ಯವಾಗಿ ತೆಗೆದುಕೊಳ್ಳುವುದು ಏಕೆ? ಅವನ ಜನರು ಅದರ ಪಟ್ಟಣಗಳಲ್ಲಿ ವಾಸಮಾಡುವುದು ಏಕೆ?

[2] ಆದ್ದರಿಂದ ಇಗೋ, ದಿನಗಳು ಬರುವುವು,” ಎಂದು ಯೆಹೋವ ದೇವರು ಹೇಳುತ್ತಾರೆ. “ಆಗ ನಾನು ಅಮ್ಮೋನನ ಮಕ್ಕಳು ರಬ್ಬಾದಲ್ಲಿ ಯುದ್ಧದ ಆರ್ಭಟವನ್ನು ಕೇಳುವಂತೆ ಮಾಡುವೆನು; ಅದು ಹಾಳು ದಿಬ್ಬವಾಗುವುದು; ಅದಕ್ಕೆ ಸೇರಿದ ಗ್ರಾಮಗಳು ಬೆಂಕಿಯಿಂದ ಸುಟ್ಟುಹೋಗುವುವು. ಆಗ ಇಸ್ರಾಯೇಲು ತನ್ನ ಬಾಧ್ಯಸ್ಥರ ಬಾಧ್ಯವನ್ನು ಹೊಂದುವುದು,” ಎಂದು ಯೆಹೋವ ದೇವರು ಹೇಳುತ್ತಾರೆ.

[3] “ಹೆಷ್ಬೋನೇ ಗೋಳಾಡು; ಏಕೆಂದರೆ ಆಯಿ ಎಂಬ ನಗರ ಹಾಳಾಯಿತು; ರಬ್ಬಾದ ನಿವಾಸಿಗಳೇ ಗೋಳಾಡಿರಿ; ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಬೇಲಿಗಳ ಬಳಿಯಲ್ಲಿ ಅತ್ತಿತ್ತ ಓಡಾಡಿರಿ; ಏಕೆಂದರೆ ಮಲ್ಕಾಮ್ ದೇವತೆ, ಅವನ ಯಾಜಕರು, ಅವನ ಪ್ರಧಾನರು ಒಟ್ಟಾಗಿ ಸೆರೆಗೆ ಹೋಗುವರು.

[4] ಹಿಂದಿರುಗು, ಹಿಂಜರಿದು ಹೋದ ಮಗಳೇ, ನನ್ನ ಬಳಿಗೆ ಬರುವವರು ಯಾರೆಂದು ಹೇಳಿ, ನಿನ್ನ ಬೊಕ್ಕಸಗಳಲ್ಲಿ ನಂಬಿಕೆ ಇಟ್ಟವಳೇ, ನಿನ್ನ ತಗ್ಗು ಹರಿದು ಹೋಗುತ್ತದಲ್ಲಾ? ತಗ್ಗುಗಳ ವಿಷಯವಾಗಿ ಏಕೆ ಹೆಚ್ಚಳ ಪಡುತ್ತೀ?

[5] ಇಗೋ, ನಾನು ನಿನ್ನ ಸುತ್ತಲಿರುವವರೆಲ್ಲರಿಂದ ನಿನ್ನ ಮೇಲೆ ಭಯವನ್ನು ಬರಮಾಡುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಅನ್ನುತ್ತಾರೆ. “ಆಗ ನಿಮ್ಮಲ್ಲಿ ಪ್ರತಿಯೊಬ್ಬನನ್ನೂ ಅಟ್ಟಲಾಗುವುದು; ಓಡಿಹೋದವರನ್ನು ಕೂಡಿಸುವವನು ಒಬ್ಬನೂ ಇರುವುದಿಲ್ಲ.

[6] “ತರುವಾಯ ಅಮ್ಮೋನನ ಮಕ್ಕಳನ್ನು ಸೆರೆಯಿಂದ ತಿರುಗಿ ತರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.

[7] ಎದೋಮ್ಯರನ್ನು ಕುರಿತದ್ದು: ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ. “ತೇಮಾನ್‌ನಲ್ಲಿ ಇನ್ನು ಮೇಲೆ ಜ್ಞಾನವಿರುವುದಿಲ್ಲವೋ? ವಿವೇಕಿಗಳಿಂದ ಆಲೋಚನೆಯು ನಾಶವಾಯಿತೋ? ಅವರ ಜ್ಞಾನವು ಕ್ಷೀಣಿಸಿದೆಯೇ?

[8] ದೇದಾನಿನ ನಿವಾಸಿಗಳೇ, ಓಡಿಹೋಗಿರಿ; ತಿರುಗಿಕೊಳ್ಳಿರಿ; ಆಳವಾದ ಗುಹೆಯಲ್ಲಿ ವಾಸಮಾಡಿರಿ; ಏಕೆಂದರೆ ಏಸಾವನ ಆಪತ್ತನ್ನೂ, ನಾನು ಅವನನ್ನು ಶಿಕ್ಷಿಸುವ ಕಾಲವನ್ನೂ ಅವನ ಮೇಲೆ ಬರಮಾಡುತ್ತೇನೆ.

[9] ದ್ರಾಕ್ಷಿ ಕೀಳುವವರು ನಿಮ್ಮ ಬಳಿಗೆ ಬಂದರೆ ಸ್ವಲ್ಪ ದ್ರಾಕ್ಷಿಯನ್ನು ಬಿಡುವುದಿಲ್ಲವೇ? ಕಳ್ಳರು ರಾತ್ರಿ ವೇಳೆಯಲ್ಲಿ ನುಗ್ಗಿದರೆ ತಮಗೆ ಸಾಕಾಗುವವರೆಗೂ ಕದಿಯುವುದಿಲ್ಲವೇ?

[10] ಆದರೆ ನಾನು ಏಸಾವನನ್ನು ಬರಿದು ಮಾಡಿದ್ದೇನೆ; ಅದರ ರಹಸ್ಯ ಸ್ಥಳಗಳನ್ನು ತೆರೆದಿದ್ದೇನೆ; ಅವನು ತನ್ನನ್ನು ತಾನೇ ಅಡಗಿಸಿಕೊಳ್ಳಲಾರನು; ಅವನ ಸಂತಾನವು ಹಾಳಾಯಿತು; ಅವನ ಸಹೋದರರೂ, ಅವನ ನೆರೆಯವರೂ, ಅವನೂ ಇಲ್ಲವಾದರು.

[11] ನಿನ್ನ ದಿಕ್ಕಿಲ್ಲದ ಮಕ್ಕಳನ್ನು ಬಿಡು. ನಾನೇ ರಕ್ಷಿಸುವೆನು. ನಿನ್ನ ವಿಧವೆಯರು ನನ್ನಲ್ಲಿ ನಂಬಿಕೆ ಇಡಲಿ.”

[12] ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಪಾತ್ರೆಯಲ್ಲಿ ಕುಡಿಯುವುದಕ್ಕೆ ಯಾರಿಗೆ ನ್ಯಾಯ ತೀರ್ವಿಕೆ ಆಗಲಿಲ್ಲವೋ, ಅವರು ಸಹ ಕುಡಿದಿದ್ದಾರೆ; ಹಾಗಾದರೆ ನೀನು ಶುದ್ಧವಾಗಿ ಶಿಕ್ಷಿಸದೆ ಹೋಗಬೇಕು? ನೀವು ಶಿಕ್ಷಿಸದೆ ಹೋಗುವುದಿಲ್ಲ, ನಿಶ್ಚಯವಾಗಿ ಕುಡಿಯುವೆ.

[13] ಏಕೆಂದರೆ ಬೊಚ್ರವು ಹಾಳೂ ನಿಂದೆಯೂ ಅಡವಿಯೂ ಶಾಪವೂ ಆಗುವುದೆಂದೂ ಅದರ ಪಟ್ಟಣಗಳೆಲ್ಲಾ ಎಂದೆಂದಿಗೂ ಅಡವಿ ಸ್ಥಳಗಳಾಗುವುವೆಂದೂ, ನನ್ನ ಮೇಲೆ ಪ್ರಮಾಣ ಮಾಡಿಕೊಂಡಿದ್ದೇನೆ,” ಎಂದು ಯೆಹೋವ ದೇವರು ಅನ್ನುತ್ತಾರೆ.

[14] ಯೆಹೋವ ದೇವರಿಂದ ನಾನು ಸುದ್ದಿಯನ್ನು ಕೇಳಿದ್ದೇನೆ. ಅವರು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿ ಕಳುಹಿಸಿದ್ದಾರೆ; “ನೀವು ಒಟ್ಟುಗೂಡಿಕೊಂಡು ಅದಕ್ಕೆ ವಿರೋಧವಾಗಿ ಬನ್ನಿರಿ, ಯುದ್ಧಕ್ಕಾಗಿ ಏಳಿರಿ!”

[15] “ಏಕೆಂದರೆ ಇಗೋ, ನಿನ್ನನ್ನು ಜನಾಂಗಗಳಲ್ಲಿ ಅತ್ಯಲ್ಪನನ್ನಾಗಿಯೂ, ಜನರ ತಿರಸ್ಕಾರಕ್ಕೆ ಈಡಾಗುವಂತೆಯೂ ಮಾಡುವೆನು.

[16] ಬಂಡೆಯ ಬಿರುಕುಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸಮಾಡಿಕೊಂಡವನೇ, ನಿನ್ನ ಭಯಂಕರವೂ ನಿನ್ನ ಹೃದಯದ ಗರ್ವವೂ ನಿನ್ನನ್ನು ಮೋಸಗೊಳಿಸಿದೆ. ನೀನು ಹದ್ದಿನಂತೆ ನಿನ್ನ ಗೂಡನ್ನು ಎತ್ತರ ಸ್ಥಳದಲ್ಲಿ ಕಟ್ಟಿದರೂ, ಅಲ್ಲಿಂದ ನಿನ್ನನ್ನು ಇಳಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.

[17] “ಎದೋಮು ಸಹ ಹಾಳಾಗುವುದು; ಅದರ ಬಳಿಯಲ್ಲಿ ಹಾದುಹೋಗುವವರೆಲ್ಲರು ಅದರ ಎಲ್ಲಾ ಬಾಧೆಗಳ ನಿಮಿತ್ತ ವಿಸ್ಮಯಪಟ್ಟು, ಅಪಹಾಸ್ಯ ಮಾಡುವರು.

[18] ನಾನು ಕೆಡವಿದ ಸೊದೋಮ್ ಗೊಮೋರ ಪಟ್ಟಣಗಳಲ್ಲಿಯೂ, ಅವುಗಳ ಸುತ್ತಣ ಪಟ್ಟಣಗಳಲ್ಲಿಯೂ ಹೇಗೋ ಹಾಗೆಯೇ, ಎದೋಮಿನಲ್ಲಿಯೂ ಯಾರೂ ವಾಸಮಾಡುವುದಿಲ್ಲ; ಅದರಲ್ಲಿ ಯಾವ ನರಪ್ರಾಣಿಯೂ ತಂಗುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.

[19] “ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ದಟ್ಟ ಅಡವಿಯಿಂದ ಬಲವಾದ ಗೋಮಾಳಕ್ಕೆ ವಿರೋಧವಾಗಿ ಏರಿ ಬರುವನು; ಆದರೆ ನಾನು ಕ್ಷಣಮಾತ್ರದಲ್ಲಿ ಅವರನ್ನು ಅಲ್ಲಿಂದ ದೂರವಾಗಿ ಓಡಿಸಿಬಿಡುವೆನು. ಅದನ್ನು ಕಾಯುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಕರೆಯುವವನು ಯಾರು? ನನಗೆ ಎದುರಾಗಿ ನಿಲ್ಲತಕ್ಕ ಕುರುಬನು ಯಾರು?”

[20] ಆದ್ದರಿಂದ ಯೆಹೋವ ದೇವರು ಎದೋಮಿಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೂ, ತೇಮಾನಿನ ನಿವಾಸಿಗಳಿಗೆ ವಿರೋಧವಾಗಿ ಮಾಡಿದ ಯೋಜನೆಗಳನ್ನೂ ಕೇಳಿರಿ. ಕಾಡುಮೃಗಗಳು ನಿಶ್ಚಯವಾಗಿ, ಹಿಂಡಿನ ಮರಿಗಳನ್ನು ಎಳೆದುಕೊಂಡು ಹೋಗುವುವು. ಖಂಡಿತವಾಗಿ, ಹುಲ್ಲುಗಾವಲು ಅವುಗಳ ನಾಶನಕ್ಕಾಗಿ ಬೆದರುವುದು.

[21] ಎದೋಮ್ಯರು ತಟ್ಟನೆ ಬೀಳುವ ಶಬ್ದದಿಂದ ಭೂಮಿಯು ಕಂಪಿಸುವುದು. ಆಗ ಉಂಟಾಗುವ ಗೋಳು ಕೆಂಪು ಸಮುದ್ರದವರೆಗೂ ಪ್ರತಿಧ್ವನಿಸುವುದು.

[22] ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮಶಾಲಿಗಳು ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವುದು.

[23] ದಮಸ್ಕದ ವಿಷಯವಾಗಿ: “ಹಮಾತ್ ಮತ್ತು ಅರ್ಪಾದ್ ನಗರಗಳು ಆಶಾಭಂಗಗೊಂಡಿವೆ, ಅವು ಕೆಟ್ಟ ಸುದ್ದಿಯನ್ನು ಕೇಳಿ ಅಧೈರ್ಯಪಟ್ಟಿವೆ; ಸಮುದ್ರದಂತೆ ಕಳವಳಪಡುತ್ತದೆ; ಅದು ಸುಮ್ಮನಿರಲಾರದು.

[24] ದಮಸ್ಕವು ನಿತ್ರಾಣವಾಯಿತು; ಓಡಿಹೋಗುವುದಕ್ಕೆ ತಿರುಗಿಕೊಳ್ಳುತ್ತದೆ; ಭಯವು ಅದನ್ನು ಹಿಡಿದುಕೊಂಡಿದೆ; ಹೆರುವ ಸ್ತ್ರೀಯ ಹಾಗೆ ಸಂಕಟವೂ, ವೇದನೆಗಳೂ ಅದನ್ನು ಹಿಡಿದಿವೆ.

[25] ಹೊಗಳಿಕೆಯ ಪಟ್ಟಣವೂ ನನ್ನ ಸಂತೋಷದ ಪಟ್ಟಣವೂ ಬಿಡಲಾಗಿದೆ ಅಲ್ಲವೋ?

[26] ಆದ್ದರಿಂದ ಅದರ ಯೌವನಸ್ಥರು ಅದರ ಚೌಕಗಳಲ್ಲಿ ಬೀಳುವರು; ಯುದ್ಧಭಟರೆಲ್ಲರೂ ಆ ದಿವಸದಲ್ಲಿ ಕಡಿದುಹಾಕಲಾಗುವರು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.

[27] “ಏಕೆಂದರೆ ನಾನು ದಮಸ್ಕದ ಗೋಡೆಯಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ತಿಂದುಬಿಡುವುದು.”

[28] ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ದಾಳಿಮಾಡಿದ ಕೇದಾರ್ ಹಾಗೂ ಹಾಚೋರ್ ರಾಜ್ಯಗಳನ್ನು ಕುರಿತದ್ದು: ಯೆಹೋವ ದೇವರು ಹೀಗೆ ಹೇಳುತ್ತಾರೆ, “ಏಳಿರಿ, ಕೇದಾರಿನ ಬಳಿಗೆ ಏರಿ ಹೋಗಿರಿ. ಪೂರ್ವದಿಕ್ಕಿನ ಮನುಷ್ಯರನ್ನು ಸುಲಿದುಕೊಳ್ಳಿರಿ.

[29] ಅವರ ಗುಡಾರಗಳನ್ನೂ, ಅವರ ಮಂದೆಗಳನ್ನೂ ತೆಗೆದುಕೊಳ್ಳುವರು. ಅವರ ಗುಡಾರದ ಪರದೆಗಳನ್ನೂ, ಅವರ ಎಲ್ಲಾ ಸಾಮಾನುಗಳನ್ನೂ, ಅವರ ಒಂಟೆಗಳನ್ನೂ ವಶಮಾಡಿಕೊಳ್ಳುವರು; ಸುತ್ತಲೂ ಭಯ, ಎಂದು ಅವರಿಗೆ ಕೂಗುವರು.

[30] “ಹಾಚೋರಿನ ನಿವಾಸಿಗಳೇ, ಓಡಿಹೋಗಿರಿ, ದೂರಕ್ಕೆ ಹೋಗಿ ಬಿಡಿರಿ, ಆಳವಾದ ಗುಹೆಯಲ್ಲಿ ವಾಸವಾಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. ಏಕೆಂದರೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ನಿಮಗೆ ವಿರೋಧವಾಗಿ ಒಳಸಂಚು ಮಾಡಿದ್ದಾನೆ; ನಿಮಗೆ ವಿರೋಧವಾಗಿ ಯೋಜನೆಯನ್ನು ಮಾಡಿದ್ದಾನೆ.

[31] “ಏಳಿರಿ, ಭದ್ರವಾಗಿ ವಾಸಿಸುವ ಸುಖವುಳ್ಳ ಜನಾಂಗದ ಬಳಿಗೆ ಹೋಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ. “ಅದಕ್ಕೆ ಬಾಗಿಲುಗಳು ಇಲ್ಲ; ಅಗುಳಿಗಳು ಇಲ್ಲ; ಅದರ ಜನರು ಅಪಾಯದಿಂದ ದೂರ ವಾಸಿಸುತ್ತಾರೆ.

[32] ಅವರ ಒಂಟೆಗಳು ಕೊಳ್ಳೆಯಾಗುವುವು; ಅವರ ದನಗಳ ಸಮೂಹವು ಸುಲಿಗೆಯಾಗುವುದು; ಕಟ್ಟಕಡೆಯ ಮೂಲೆಗಳಲ್ಲಿ ಇರುವವರನ್ನು ಎಲ್ಲಾ ದಿಕ್ಕುಗಳಿಗೂ ಚದರಿಸುತ್ತೇನೆ; ಸರ್ವಕಡೆಯಿಂದ ಅವರ ಮೇಲೆ ಆಪತ್ತನ್ನು ತರಿಸುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.

[33] ಹಾಚೋರು ನರಿಗಳ ನಿವಾಸವೂ, ಎಂದೆಂದಿಗೂ ಹಾಳಾದ ಸ್ಥಳವೂ ಆಗುವುದು. ಅಲ್ಲಿ ಯಾವನಾದರೂ ವಾಸಮಾಡುವುದಿಲ್ಲ. ಯಾವ ನರಪುತ್ರನಾದರೂ ಅಲ್ಲಿ ತಂಗುವುದಿಲ್ಲ.

[34] ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಆರಂಭದಲ್ಲಿ ಪ್ರವಾದಿಯಾದ ಯೆರೆಮೀಯನಿಗೆ ಯೆಹೋವ ದೇವರಿಂದ ಏಲಾಮಿಗೆ ವಿರೋಧವಾಗಿ ಉಂಟಾದ ವಾಕ್ಯವು:

[35] ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇಗೋ, ನಾನು ಏಲಾಮಿನ ಬಿಲ್ಲನ್ನೂ, ಅವರ ಪರಾಕ್ರಮವನ್ನೂ, ಶ್ರೇಷ್ಠತ್ವವನ್ನೂ ಮುರಿಯುತ್ತೇನೆ

[36] ಆಕಾಶದ ನಾಲ್ಕು ದಿಕ್ಕುಗಳಿಂದ ಏಲಾಮಿನ ಮೇಲೆ ನಾಲ್ಕು ಗಾಳಿಗಳನ್ನು ತಂದು, ಅವರನ್ನು ಆ ಎಲ್ಲಾ ದಿಕ್ಕುಗಳ ಕಡೆಗೆ ಚದರಿಸುವೆನು; ಏಲಾಮಿನಿಂದ ಓಡಿಸಲಾದವರು ಸೇರದ ಜನಾಂಗವು ಇರುವುದಿಲ್ಲ.

[37] ಏಕೆಂದರೆ ಏಲಾಮನ್ನು ಅವರ ಶತ್ರುಗಳ ಮುಂದೆಯೂ, ಅವರ ಪ್ರಾಣವನ್ನು ಹುಡುಕುವವರ ಮುಂದೆಯೂ ಹೆದರುವಂತೆ ಮಾಡುವೆನು; ಅವರ ಮೇಲೆ ಕೇಡನ್ನೂ, ನನ್ನ ಕೋಪದ ಉಗ್ರವನ್ನೂ ಬರಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಅವನನ್ನು ಮುಗಿಸಿಬಿಡುವವರೆಗೆ ಖಡ್ಗವನ್ನು ಅವರ ಹಿಂದೆ ಕಳುಹಿಸುವೆನು.

[38] ಇದಲ್ಲದೆ ಏಲಾಮಿನಲ್ಲಿ ನನ್ನ ಸಿಂಹಾಸನವನ್ನಿಟ್ಟು, ಅದರೊಳಗಿಂದ ಅರಸನನ್ನೂ, ಪ್ರಧಾನರನ್ನೂ ನಾಶಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.

[39] “ಆದಾಗ್ಯೂ ಅಂತ್ಯ ದಿವಸಗಳಲ್ಲಿ ಆಗುವುದೇನೆಂದರೆ, ನಾನು ಏಲಾಮಿನ ಸಮೃದ್ಧಿಯನ್ನು ತಿರುಗಿ ತರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.

ಯೆರೆಮೀಯ — Chapters