Skip to content
Opens in a new window
Listen to this chapter • 5:41

[1] ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ,

[2] “ಒಡಂಬಡಿಕೆಯ ಈ ವಚನಗಳನ್ನು ಕೇಳಿ, ಯೆಹೂದ್ಯರಿಗೂ ಯೆರೂಸಲೇಮಿನ ನಿವಾಸಿಗಳಿಗೂ ಸಾರು.

[3] ನೀನು ಅವರಿಗೆ ಹೇಳಬೇಕಾದುದು: ಇಸ್ರಾಯೇಲ್ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನಾನು ಅವರಿಗೆ ವಿಧಿಸಿದ ನಿಬಂಧನ ವಾಕ್ಯಗಳಿಗೆ ಕಿವಿಗೊಡದವನು ಶಾಪಗ್ರಸ್ತನಾಗಲಿ.

[4] ಕಬ್ಬಿಣ ಕರಗಿಸುವ ಕುಲುಮೆಯಂತಿದ್ದ ಈಜಿಪ್ಟ್ ದೇಶದಿಂದ ನಿಮ್ಮ ಪೂರ್ವಜರನ್ನು ನಾನು ಬರಮಾಡಿದಾಗ, ನೀವು ನನ್ನ ಮಾತನ್ನು ಕೇಳಿ, ನಾನು ನಿಮಗೆ ಆಜ್ಞಾಪಿಸಿರುವ ವಿಧಿಗಳನ್ನೆಲ್ಲಾ ಕೈಗೊಂಡರೆ, ನನ್ನ ಪ್ರಜೆಯಾಗುವಿರಿ; ನಾನು ನಿಮ್ಮ ದೇವರಾಗಿರುವೆನು.

[5] ಹಾಲು ಜೇನು ಹರಿಯುವ ನಾಡನ್ನು, ಎಂದರೆ ಇಂದು ನೀವಿರುವ ನಾಡನ್ನು ಕೊಡುವುದಾಗಿ ನಿಮ್ಮ ಮೂಲ ಪಿತೃಗಳಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು,’ ಎಂದು ಹೇಳಿದ್ದೆ. ಈ ಒಡಂಬಡಿಕೆಯ ವಚನಗಳಿಗೆ ಕಿವಿಗೊಡದವನು ಶಾಪಗ್ರಸ್ತನು. ಇದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವ ಮಾತು.” “ಓ ಯೆಹೋವ ದೇವರೇ, ಹಾಗೆಯೇ ಆಗಲಿ,” ಎಂದೆನು.

[6] ತರುವಾಯ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಈ ಮಾತುಗಳನ್ನೆಲ್ಲಾ ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸಲೇಮಿನಲ್ಲಿಯ ಬೀದಿಗಳಲ್ಲಿಯೂ ಸಾರಿ ಹೇಳು. ‘ಹೇಗೆಂದರೆ, ಈ ಒಡಂಬಡಿಕೆಯ ಮಾತುಗಳನ್ನು ಕೇಳಿ, ಅವುಗಳನ್ನು ಮಾಡಿರಿ.

[7] ಏಕೆಂದರೆ ನಾನು ನಿಮ್ಮ ತಂದೆಗಳಿಗೆ, “ನನ್ನ ಮಾತನ್ನು ಕೇಳಿ,” ಎಂದು ಖಂಡಿತವಾಗಿ ಹೇಳಿದೆನು. ಅವರನ್ನು ಈಜಿಪ್ಟ್ ದೇಶದೊಳಗಿಂದ ಮೇಲೆ ಬರಮಾಡಿದ ದಿವಸ ಮೊದಲುಗೊಂಡು ಇಂದಿನವರೆಗೂ ಆಜ್ಞಾಪಿಸುತ್ತಾ ಬಂದಿದ್ದೇನೆ.

[8] ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ. ತಮ್ಮ ಕೆಟ್ಟ ಹೃದಯದ ಕಲ್ಪನೆಯಂತೆ ನಡೆದುಕೊಂಡರು. ಆದ್ದರಿಂದ ಅವರು ಮಾಡಬೇಕೆಂದು ನಾನು ಆಜ್ಞಾಪಿಸಿದಂಥ, ಅವರು ಮಾಡುವಂಥ, ಈ ಒಡಂಬಡಿಕೆಯ ಶಾಪಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು.’ ”

[9] ತರುವಾಯ, ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ, “ಯೆಹೂದದ ಮನುಷ್ಯರಲ್ಲಿಯೂ ಯೆರೂಸಲೇಮಿನ ನಿವಾಸಿಗಳಲ್ಲಿಯೂ ಒಳಸಂಚು ಕಂಡುಬಂದಿದೆ.

[10] ನನ್ನ ಮಾತುಗಳನ್ನು ಕೇಳಲೊಲ್ಲದ ತಮ್ಮ ಪಿತೃಗಳ ಅಕ್ರಮಗಳಿಗೆ ತಿರುಗಿಕೊಂಡಿದ್ದಾರೆ. ಬೇರೆ ದೇವರುಗಳನ್ನು ಸೇವಿಸುವುದಕ್ಕೆ ಅವುಗಳ ಹಿಂದೆ ಹೋಗಿದ್ದಾರೆ. ಇಸ್ರಾಯೇಲಿನ ವಂಶದವರೂ ಯೆಹೂದದ ವಂಶದವರೂ ನಾನು ಅವರ ತಂದೆಗಳ ಸಂಗಡ ಮಾಡಿದ ಒಡಂಬಡಿಕೆಗಳನ್ನು ಮೀರಿದ್ದಾರೆ.

[11] ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಇಗೋ, ಅವರು ತಪ್ಪಿಸಿಕೊಳ್ಳಲಾಗದ ಕೇಡನ್ನು ಅವರ ಮೇಲೆ ತರುವೆನು. ಅವರು ನನಗೆ ಕೂಗಿದರೂ ನಾನು ಅವರನ್ನು ಕೇಳುವುದಿಲ್ಲ.

[12] ಆಗ ಯೆಹೂದದ ಪಟ್ಟಣಗಳೂ ಯೆರೂಸಲೇಮಿನ ನಿವಾಸಿಗಳೂ ಹೋಗಿ ತಾವು ಧೂಪವನ್ನರ್ಪಿಸುವ ದೇವರುಗಳಿಗೆ ಕೂಗುವರು. ಆದರೆ ಇವು ಅವರ ಕೇಡಿನ ಕಾಲದಲ್ಲಿ ಅವರನ್ನು ರಕ್ಷಿಸುವುದೇ ಇಲ್ಲ.

[13] ಓ ಯೆಹೂದವೇ, ನಿನ್ನ ಪಟ್ಟಣಗಳಷ್ಟು ನಿನ್ನ ದೇವರುಗಳು ಇದ್ದವು. ಯೆರೂಸಲೇಮಿಗೆ ಎಷ್ಟು ಬೀದಿಗಳೋ, ಅಷ್ಟು ಬಲಿಪೀಠಗಳನ್ನು ನಾಚಿಗೆಗೆ ಎಂದರೆ, ಅಷ್ಟು ಬಲಿಪೀಠಗಳನ್ನು ಬಾಳನಿಗೆ ಧೂಪವನ್ನರ್ಪಿಸುವುದಕ್ಕೆ ಇಟ್ಟಿದ್ದೀ.’

[14] “ಆದ್ದರಿಂದ ನೀನು ಈ ಜನರಿಗೋಸ್ಕರ ಪ್ರಾರ್ಥನೆ ಮಾಡಬೇಡ. ಅವರಿಗೋಸ್ಕರ ಮೊರೆಯನ್ನೂ, ಪ್ರಾರ್ಥನೆಯನ್ನೂ ಎತ್ತಬೇಡ. ಏಕೆಂದರೆ, ತಮ್ಮ ಕೇಡಿನ ನಿಮಿತ್ತ ನನ್ನ ಕೂಗುವ ಸಮಯದಲ್ಲಿ ನಾನು ಕೇಳೆನು.

[15] “ನನ್ನ ಪ್ರಿಯಳಿಗೆ ನನ್ನ ಆಲಯದಲ್ಲಿ ಏನು ಕೆಲಸ, ಅವಳು ಬಹಳ ಮಂದಿಯ ಸಂಗಡ ಕುಯುಕ್ತಿಯನ್ನು ನಡೆಸಿದ್ದಾಳೆ. ನೀನು ಸಮರ್ಪಿಸಿದ ಮಾಂಸದ ಬಲಿಯು ನಿನ್ನ ಶಿಕ್ಷೆಯನ್ನು ರದ್ದುಗೊಳಿಸುವುದೋ? ನೀನು ಕೆಟ್ಟತನ ಮಾಡುವಾಗ ಉಲ್ಲಾಸಪಡುತ್ತೀ.”

[16] ಸೌಂದರ್ಯವಾದ ಒಳ್ಳೆಯ ಹಣ್ಣುಳ್ಳ ಹಸುರಾದ ಓಲಿವ್ ಗಿಡವೆಂದು ಯೆಹೋವ ದೇವರು ನಿನಗೆ ಹೆಸರಿಟ್ಟರು. ದೊಡ್ಡ ಗದ್ದಲದಿಂದ ಅದರ ಮೇಲೆ ಬೆಂಕಿ ಹತ್ತಿಸುವನು. ಅದರ ಕೊಂಬೆಗಳು ಮುರಿದು ಹೋಗುವುವು.

[17] ಇಸ್ರಾಯೇಲಿನ ವಂಶವೂ ಯೆಹೂದದ ವಂಶವೂ ನನಗೆ ಕೋಪವನ್ನೆಬ್ಬಿಸುವ ಹಾಗೆ ಬಾಳನಿಗೆ ಧೂಪವನ್ನರ್ಪಿಸಿ, ತಮಗೆ ವಿರೋಧವಾಗಿ ಮಾಡಿಕೊಂಡ ಕೇಡಿನ ನಿಮಿತ್ತ, ನಿನ್ನನ್ನು ನೆಟ್ಟ ಸೇನಾಧೀಶ್ವರ ಯೆಹೋವ ದೇವರು ನಿನ್ನ ಮೇಲೆ ಕೆಡುಕಾಗಲಿ ಎಂದು ಪ್ರಕಟಿಸಿದ್ದಾರೆ.

[18] ಯೆಹೋವ ದೇವರು ತಿಳಿಸಿದ್ದರಿಂದಲೇ ಶತ್ರುಗಳು ನನಗೆ ವಿರುದ್ಧ ಹೂಡಿದ್ದ ಕುತಂತ್ರವು ನನಗೆ ಗೊತ್ತಾಯಿತು. ಅವರ ಕೃತ್ಯಗಳನ್ನು ನನಗೆ ತೋರಿಸಲಾಯಿತು.

[19] ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯಂತೆ ಇದ್ದೆ. ಆದರೆ ನನ್ನ ವಿರುದ್ಧ ಸಂಚು ಹೂಡುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ. “ಮರವನ್ನು ಫಲ ಸಹಿತ ನಾಶ ಪಡಿಸೋಣ, ಜೀವ ಲೋಕದಿಂದ ಇವನನ್ನು ನಿರ್ಮೂಲ ಮಾಡೋಣ, ಅವನ ಹೆಸರೇ ಇಲ್ಲದಂತಾಗಲಿ.”

[20] ಆದರೆ ನೀತಿಯಾಗಿ ನ್ಯಾಯತೀರಿಸುವಂಥ ಅಂತರಿಂದ್ರಿಯಗಳನ್ನೂ, ಹೃದಯವನ್ನೂ ಶೋಧಿಸುವಂಥ ಸೇನಾಧೀಶ್ವರ ಯೆಹೋವ ದೇವರೇ, ನೀನು ಅವರಿಗೆ ಕೊಡುವ ಪ್ರತಿದಂಡನೆಯನ್ನು ನಾನು ಕಾಣುವೆನು. ಏಕೆಂದರೆ ನಿನಗೆ ನನ್ನ ವ್ಯಾಜ್ಯವನ್ನು ಒಪ್ಪಿಸಿದ್ದೇನೆ.

[21] ಆದ್ದರಿಂದ ನಿನ್ನ ಪ್ರಾಣವನ್ನು ಹುಡುಕುವ ಅನಾತೋತಿನ ಮನುಷ್ಯರಿಗೆ ನೀನು, “ನಮ್ಮ ಕೈಯಿಂದ ಸಾಯದ ಹಾಗೆ ಯೆಹೋವ ದೇವರ ಹೆಸರಿನಲ್ಲಿ ಪ್ರವಾದನೆ ಹೇಳಬೇಡ,” ಅನ್ನುವವರಿಗೆ ಯೆಹೋವ ದೇವರು ಹೇಳುವುದೇನೆಂದರೆ,

[22] ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಅವರನ್ನು ಶಿಕ್ಷಿಸುತ್ತೇನೆ, ಯೌವನಸ್ಥರು ಖಡ್ಗದಿಂದ ಸಾಯುವರು. ಅವರ ಪುತ್ರಪುತ್ರಿಯರು ಹಸಿವೆಯಿಂದ ಸಾಯುವರು.

[23] ಅವರಲ್ಲಿ ಶೇಷವು ಇರುವುದಿಲ್ಲ. ಏಕೆಂದರೆ ನಾನು ಅನಾತೋತಿನ ಮನುಷ್ಯರ ಮೇಲೆ ಕೇಡನ್ನು ಎಂದರೆ ಅವರ ಶಿಕ್ಷೆಯ ವರ್ಷವನ್ನೇ ತರುತ್ತೇನೆ.”

ಯೆರೆಮೀಯ — Chapters