[1] ಯೇಸು ಅವರಿಗೆ, “ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ಇಲ್ಲಿ ನಿಂತಿರುವವರೊಳಗೆ ಕೆಲವರು ದೇವರ ರಾಜ್ಯವು ಪ್ರಬಲವಾಗಿ ಬರುವುದನ್ನು ನೋಡುವ ತನಕ ಮರಣಹೊಂದುವುದಿಲ್ಲ” ಎಂದು ಹೇಳಿದನು.
[2] ಆರು ದಿನಗಳಾದ ಮೇಲೆ ಯೇಸು ಪೇತ್ರ, ಯಾಕೋಬ, ಯೋಹಾನ ಇವರನ್ನು ಮಾತ್ರ ತನ್ನೊಡನೆ ಕರೆದುಕೊಂಡು ಎತ್ತರವಾದ ಬೆಟ್ಟಕ್ಕೆ ಹೋದನು. ಅಲ್ಲಿ ಅವರ ಕಣ್ಣೆದುರಿಗೇ ಯೇಸುವು ರೂಪಾಂತರಗೊಂಡನು.
[3] ಆತನ ವಸ್ತ್ರಗಳು ಅತ್ಯಂತ ಶುಭ್ರವಾಗಿ ಬೆಳ್ಳಗೆ ಹೊಳೆಯಿತು. ಭೂಲೋಕದಲ್ಲಿರುವ ಯಾವ ಅಗಸನಾದರೂ ಅಷ್ಟು ಬೆಳ್ಳಗೆ ಮಾಡಲಾಗದಷ್ಟು ಅದು ಬಿಳುಪಾಗಿತ್ತು.
[4] ಇದಲ್ಲದೆ ಎಲೀಯನೂ, ಮೋಶೆಯೂ ಅವರಿಗೆ ಕಾಣಿಸಿಕೊಂಡು ಅವರು ಯೇಸುವಿನ ಸಂಗಡ ಮಾತನಾಡುತ್ತಿದ್ದರು.
[5] ಆಗ ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು; ಮೂರು ಗುಡಾರಗಳನ್ನು ಕಟ್ಟುವೆವು; ನಿನಗೊಂದು, ಮೋಶೆಗೊಂದು, ಎಲೀಯನಿಗೊಂದು” ಎಂದು ಹೇಳಿದನು.
[6] ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂಬುದೇ ತಿಳಿಯಲಿಲ್ಲ. ಅವರು ಬಹಳವಾಗಿ ಹೆದರಿಕೊಂಡಿದ್ದರು.
[7] ಅಷ್ಟರಲ್ಲಿ ಒಂದು ಮೋಡವು ಬಂದು ಅವರ ಮೇಲೆ ಕವಿಯಿತು. ಆ ಮೋಡದೊಳಗಿನಿಂದ, “ಈತನು ನನ್ನ ಪ್ರಿಯ ಕುಮಾರನು; ಈತನ ಮಾತನ್ನು ಕೇಳಿರಿ” ಎಂದು ಧ್ವನಿ ಉಂಟಾಯಿತು.
[8] ಕೂಡಲೇ ಅವರು ಸುತ್ತಲೂ ನೋಡಿದಾಗ ತಮ್ಮ ಸಂಗಡ ಯೇಸುವನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ.
[9] ಅವರು ಆ ಬೆಟ್ಟದಿಂದ ಇಳಿದು ಬರುತ್ತಿರುವಾಗ ಆತನು ಅವರಿಗೆ, “ಮನುಷ್ಯಕುಮಾರನು ಸತ್ತು ಪುನರುತ್ಥಾನಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿರಿ” ಎಂದು ಆಜ್ಞಾಪಿಸಿದನು.
[10] ಅವರು ಆ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡರು “ಸತ್ತು ಜೀವಿತನಾಗಿ ಏಳುವುದೆಂದರೇನು” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
[11] ಇದಲ್ಲದೆ ಅವರು, “ಎಲೀಯನು ಮೊದಲು ಬರುವುದು ಅಗತ್ಯವೆಂಬುದಾಗಿ ಶಾಸ್ತ್ರಿಗಳು ಯಾಕೆ ಹೇಳುತ್ತಾರೆ?” ಎಂದು ಆತನನ್ನು ಕೇಳಿದರು.
[12] ಅದಕ್ಕೆ ಯೇಸು ಅವರಿಗೆ, “ಎಲೀಯನು ಮೊದಲು ಬಂದು ಎಲ್ಲವನ್ನು ಪುನರ್ಸ್ಥಾಪಿಸುವುದು ನಿಜ. ಮತ್ತು ಮನುಷ್ಯಕುಮಾರನ ವಿಷಯವಾಗಿ; ಅವನು ಬಹು ಕಷ್ಟಗಳನ್ನನುಭವಿಸಿ ತಿರಸ್ಕರಿಸಲ್ಪಡಬೇಕೆಂಬುದಾಗಿ ಬರೆದಿದೆ, ಇದು ಹೇಗೆ?
[13] ಆದರೆ ನಾನು ನಿಮಗೆ ಹೇಳುವುದೇನಂದರೆ; ಎಲೀಯನು ಬಂದನು ಮತ್ತು ಆತನ ವಿಷಯವಾಗಿ ಬರೆದಿರುವ ಪ್ರಕಾರ ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಮಾಡಿದರು” ಅಂದನು.
[14] ತರುವಾಯ ಅವರು ಉಳಿದ ಶಿಷ್ಯರ ಬಳಿಗೆ ಬಂದು ಅವರ ಸುತ್ತಲು ಜನರ ದೊಡ್ಡ ಗುಂಪು ಇರುವುದನ್ನೂ ಅವರ ಸಂಗಡ ಶಾಸ್ತ್ರಿಗಳು ತರ್ಕಮಾಡುವುದನ್ನೂ ಕಂಡರು.
[15] ಕೂಡಲೆ ಆ ಗುಂಪಿನವರೆಲ್ಲರು ಯೇಸುವನ್ನು ಕಂಡು ಬಹು ಆಶ್ಚರ್ಯಪಟ್ಟು ಆತನ ಬಳಿಗೆ ಓಡಿ ಬಂದು ಆತನನ್ನು ವಂದಿಸಿದರು.
[16] ಆತನು ಅವರಿಗೆ, “ಇವರ ಸಂಗಡ ಏನು ವಾದಮಾಡುತ್ತೀರಿ?” ಎಂದು ಕೇಳಿದನು.
[17] ಅದಕ್ಕೆ ಆ ಗುಂಪಿನಲ್ಲಿ ಒಬ್ಬನು, “ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆನು; ಅವನಿಗೊಂದು ದೆವ್ವ ಹಿಡಿದದೆ ಅದು ಅವನನ್ನು ಮೂಗನನ್ನಾಗಿಸಿದೆ.
[18] ಅದು ಎಲ್ಲಿ ಅವನ ಮೇಲೆ ಬಂದರೂ ಅವನನ್ನು ನೆಲಕ್ಕೆ ಕೆಡವುತ್ತದೆ; ಆಗ ಅವನು ನೊರೆಸುರಿಸುತ್ತಾನೆ, ಕರಕರನೆ ಹಲ್ಲು ಕಡಿಯುತ್ತಾನೆ ಮತ್ತು ಮರಗಟ್ಟಿದವನಂತೆ ಆಗುತ್ತಾನೆ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರಿಗೆ ಕೇಳಿಕೊಂಡೆನು, ಆದರೆ ಅವರ ಕೈಯಿಂದ ಆಗದೆಹೋಯಿತು” ಎಂದು ಉತ್ತರ ಕೊಟ್ಟನು.
[19] ಅದಕ್ಕಾತನು, “ಎಲಾ, ಅಪನಂಬಿಕೆಯುಳ್ಳಂಥ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ! ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ” ಅಂದನು.
[20] ಆಗ ಅವರು ಆ ಹುಡುಗನನ್ನು ಯೇಸುವಿನ ಬಳಿಗೆ ತೆಗೆದುಕೊಂಡು ಬಂದರು. ಆತನನ್ನು ಕಂಡಕೂಡಲೆ ಆ ದೆವ್ವವು ಹುಡುಗನನ್ನು ಬಹಳವಾಗಿ ಒದ್ದಾಡಿಸಲು ಅವನು ನೆಲಕ್ಕೆ ಬಿದ್ದು ನೊರೆಸುರಿಸುತ್ತಾ ಹೊರಳಾಡಿದನು.
[21] ಯೇಸು ಅವನ ತಂದೆಯನ್ನು, “ಇವನಿಗೆ ಹೀಗಾಗಿ ಎಷ್ಟು ಕಾಲವಾಯಿತು?” ಎಂದು ಕೇಳಿದಾಗ ಅವನು, “ಚಿಕ್ಕಂದಿನಲ್ಲಿಯೇ ಬಂದಿದೆ;
[22] ಮತ್ತು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು; ನಿನ್ನ ಕೈಯಲ್ಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕನಿಕರವಿಟ್ಟು ನಮಗೆ ಸಹಾಯಮಾಡು” ಅಂದನು.
[23] ಯೇಸು ಅವನಿಗೆ, “‘ನಿನ್ನ ಕೈಯಲ್ಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ’? ನಂಬುವವನಿಗೆ ಎಲ್ಲವೂ ಸಾಧ್ಯ!” ಎಂದು ಹೇಳಿದನು.
[24] ಕೂಡಲೆ ಆ ಹುಡುಗನ ತಂದೆಯು, “ನಂಬುತ್ತೇನೆ, ನನಗೆ ಅಪನಂಬಿಕೆ ಇಲ್ಲದಂತೆ ಸಹಾಯಮಾಡು” ಎಂದು ಕೂಗಿ ಹೇಳಿದನು.
[25] ಆಗ ಯೇಸು ಜನರ ಗುಂಪು ಓಡಿಬರುವುದನ್ನು ಕಂಡು ಆ ದೆವ್ವವನ್ನು ಗದರಿಸಿ, “ಎಲೈ, ಕಿವುಡಾದ ಮೂಗದೆವ್ವವೇ, ಇವನನ್ನು ಬಿಟ್ಟು ಹೋಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಾನು ನಿನಗೆ ಅಪ್ಪಣೆಕೊಡುತ್ತೇನೆ” ಅಂದನು.
[26] ಆಗ ಅದು ಅಬ್ಬರಿಸಿ ಹುಡುಗನನ್ನು ಒದ್ದಾಡಿಸಿ ಬಿಟ್ಟುಹೋಯಿತು. ಆ ಹುಡುಗನು ಸತ್ತಹಾಗೆ ಬಿದ್ದಿದ್ದರಿಂದ ಬಹುಜನರು, “ಸತ್ತುಹೋದನು” ಎಂದು ಅಂದುಕೊಂಡರು.
[27] ಆದರೆ ಯೇಸು ಅವನನ್ನು ಕೈಹಿಡಿದು ಎಬ್ಬಿಸಲು ಹುಡುಗನು ಎದ್ದು ನಿಂತನು.
[28] ಯೇಸು ಮನೆಗೆ ಬಂದಾಗ ಆತನ ಶಿಷ್ಯರು, “ಅದನ್ನು ಬಿಡಿಸಲಿಕ್ಕೆ ನಮ್ಮಿಂದ ಏಕೆ ಆಗಲಿಲ್ಲವೆಂದು” ಆತನನ್ನು ಏಕಾಂತದಲ್ಲಿ ಕೇಳಿದರು.
[29] ಅದಕ್ಕೆ ಆತನು, “ಈ ಬಗೆಯ ದೆವ್ವಗಳು ದೇವರ ಪ್ರಾರ್ಥನೆಯಿಂದಲೇ ಹೊರತು ಬೇರೆ ಯಾವ ರೀತಿಯಿಂದಲೂ ಬಿಟ್ಟು ಹೋಗುವುದಿಲ್ಲವೆಂದು” ಅವರಿಗೆ ಹೇಳಿದನು.
[30] ಅಲ್ಲಿಂದ ಅವರು ಹೊರಟು ಗಲಿಲಾಯವನ್ನು ಹಾದು ಹೋಗುತ್ತಿದ್ದರು. ಆದರೆ ತಾವು ಎಲ್ಲಿಗೆ ಹೋಗುತ್ತಿರುವುದೆಂದು ಯಾರಿಗೂ ಗೊತ್ತಾಗಬಾರದೆಂದು ಆತನು ಬಯಸಿದನು.
[31] ಏಕೆಂದರೆ ಆತನು ತನ್ನ ಶಿಷ್ಯರಿಗೆ ಉಪದೇಶಮಾಡುತ್ತಾ, “ಮನುಷ್ಯಕುಮಾರನು ಜನರ ಕೈಗಳಿಗೆ ಒಪ್ಪಿಸಲ್ಪಡುತ್ತಾನೆ; ಅವರು ಆತನನ್ನು ಕೊಲ್ಲುವರು; ಕೊಲ್ಲಲ್ಪಟ್ಟ ತರುವಾಯ ಮೂರು ದಿನದ ಮೇಲೆ ಆತನು ಜೀವಿತನಾಗಿ ಎದ್ದು ಬರುವನೆಂದು” ಹೇಳಿದನು.
[32] ಆದರೆ ಅವರು ಆ ಮಾತನ್ನು ಗ್ರಹಿಸಲಿಲ್ಲ ಮತ್ತು ಆತನನ್ನು ಕೇಳುವುದಕ್ಕೆ ಭಯಪಟ್ಟರು.
[33] ಅವರು ಕಪೆರ್ನೌಮಿಗೆ ಬಂದರು. ಅಲ್ಲಿ ಆತನು ಮನೆಯಲ್ಲಿದ್ದಾಗ, “ನೀವು ದಾರಿಯಲ್ಲಿ ಏನು ಚರ್ಚೆಮಾಡಿಕೊಳ್ಳುತ್ತಿದ್ದಿರಿ?” ಎಂದು ಶಿಷ್ಯರನ್ನು ಕೇಳಿದನು.
[34] ಆದರೆ ಅವರು ಸುಮ್ಮನಿದ್ದರು; ಏಕೆಂದರೆ ಅವರು ದಾರಿಯಲ್ಲಿ ಒಬ್ಬರನ್ನೊಬ್ಬರು, ತಮ್ಮಲ್ಲಿ ಯಾರು ಹೆಚ್ಚಿನವನೆಂದು ವಾಗ್ವಾದಮಾಡಿಕೊಂಡಿದ್ದರು.
[35] ಆಗ ಯೇಸು ಕುಳಿತುಕೊಂಡು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ, “ಯಾರಾದರೂ ಮೊದಲಿನವನಾಗಬೇಕೆಂದಿದ್ದರೆ ಅವನು ಎಲ್ಲರಲ್ಲಿ ಕಡೆಯವನೂ ಎಲ್ಲರ ಸೇವಕನೂ ಆಗಿರಬೇಕು” ಎಂದು ಹೇಳಿ,
[36] ಒಂದು ಚಿಕ್ಕ ಮಗುವನ್ನು ತೆಗೆದುಕೊಂಡು ಅವರ ಮಧ್ಯದಲ್ಲಿ ನಿಲ್ಲಿಸಿ, ಅದನ್ನು ಅಪ್ಪಿಕೊಂಡು ಅವರಿಗೆ,
[37] “ಯಾರಾದರೂ ನನ್ನ ಹೆಸರಿನಲ್ಲಿ ಇಂಥ ಚಿಕ್ಕ ಮಕ್ಕಳಲ್ಲಿ ಒಂದನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು; ಮತ್ತು ಯಾರಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಮಾತ್ರವಲ್ಲ, ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು” ಎಂದು ಹೇಳಿದನು.
[38] ಯೋಹಾನನು ಆತನಿಗೆ, “ಬೋಧಕನೇ, ಯಾರೋ ಒಬ್ಬನು ನಿನ್ನ ಹೆಸರನ್ನು ಹೇಳಿ ದೆವ್ವ ಬಿಡಿಸುವುದನ್ನು ನಾವು ಕಂಡು ಅವನು ನಮ್ಮೊಂದಿಗೆ ಸೇರಿದವನಲ್ಲವಾದ್ದರಿಂದ ಅವನಿಗೆ ಅಡ್ಡಿಮಾಡಿದೆವು” ಎಂದು ಹೇಳಿದನು.
[39] ಅದಕ್ಕೆ ಯೇಸು, “ಅವನಿಗೆ ಅಡ್ಡಿಮಾಡಬೇಡಿರಿ; ನನ್ನ ಹೆಸರಿನಲ್ಲಿ ಮಹತ್ಕಾರ್ಯವನ್ನು ಮಾಡಿ ಏಕಾಏಕಿ ನನ್ನನ್ನು ದೂಷಿಸುವವನು ಒಬ್ಬನೂ ಇಲ್ಲ.
[40] ನಮಗೆ ವಿರುದ್ಧವಾಗಿಲ್ಲದವನು ನಮ್ಮ ಪಕ್ಷದವನೇ.
[41] ನೀವು ಕ್ರಿಸ್ತನವರೆಂದು ನಿಮಗೆ ಯಾರಾದರೂ ಒಂದು ತಂಬಿಗೆ ನೀರನ್ನು ಕುಡಿಯುವುದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ” ಹೇಳುತ್ತೇನೆ.
[42] ನನ್ನಲ್ಲಿ ನಂಬಿಕೆ ಇಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾರಾದರೂ ಪಾಪ ಮಾಡುವುದಕ್ಕೆ ಕಾರಣನಾದರೆ, ಅಂಥವನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿ ಅವನನ್ನು ಸಮುದ್ರದಲ್ಲಿ ಬಿಸಾಡಿಬಿಡುವುದು ಅವನಿಗೆ ಉತ್ತಮ.
[43] ಇದಲ್ಲದೆ ನಿನ್ನ ಕೈ ಪಾಪ ಮಾಡಲು ನಿನಗೆ ಕಾರಣವಾದರೆ, ಅದನ್ನು ಕತ್ತರಿಸಿಬಿಡು; ಎರಡು ಕೈಯುಳ್ಳವನಾಗಿ ಆರದ ಬೆಂಕಿಯಾಗಿರುವ ನರಕದಲ್ಲಿ ಬೀಳುವುದಕ್ಕಿಂತ ಕೈಕಳೆದುಕೊಂಡವನಾಗಿ ನಿತ್ಯಜೀವದಲ್ಲಿ ಸೇರುವುದು ನಿನಗೆ ಉತ್ತಮ.
[45] ನಿನ್ನ ಕಾಲು ಪಾಪ ಮಾಡಲು ನಿನಗೆ ಕಾರಣವಾದರೆ, ಅದನ್ನು ಕಡಿದುಬಿಡು; ಎರಡು ಕಾಲುಳ್ಳವನಾಗಿ ನರಕದಲ್ಲಿ ಬೀಳುವುದಕ್ಕಿಂತ ಕಾಲಿಲ್ಲದವನಾಗಿ ನಿತ್ಯಜೀವದಲ್ಲಿ ಸೇರುವುದು ನಿನಗೆ ಉತ್ತಮ.
[47] ನಿನ್ನ ಕಣ್ಣು ಪಾಪ ಮಾಡಲು ನಿನಗೆ ಕಾರಣವಾದರೆ, ಅದನ್ನು ಕಿತ್ತುಬಿಸಾಡು; ಎರಡು ಕಣ್ಣುಳ್ಳವನಾಗಿ ನರಕಕ್ಕೆ ಬೀಳುವುದಕ್ಕಿಂತ ಒಂದು ಕಣ್ಣುಳ್ಳವನಾಗಿ ದೇವರ ರಾಜ್ಯದಲ್ಲಿ ಸೇರುವುದು ನಿನಗೆ ಉತ್ತಮ.
[48] ನರಕದಲ್ಲಿರುವ ಹುಳ ಸಾಯುವುದಿಲ್ಲ, ಬೆಂಕಿ ಆರುವುದಿಲ್ಲ.
[49] “ಉಪ್ಪು ಯಜ್ಞವನ್ನು ಶುದ್ಧೀಕರಿಸುವಂತೆ ಬೆಂಕಿಯು ಪ್ರತಿಯೊಬ್ಬನನ್ನು ಶುದ್ಧೀಕರಿಸುವುದು.
[50] ಉಪ್ಪು ಒಳ್ಳೆಯ ಪದಾರ್ಥವೇ; ಉಪ್ಪು ಸಪ್ಪಗಾದರೆ ಅದನ್ನು ಇನ್ಯಾತರಿಂದ ರುಚಿಗೊಳಿಸಲು ಸಾಧ್ಯ? ನಿಮ್ಮೊಳಗೆ ಉಪ್ಪು ಇರಲಿ, ಒಬ್ಬರಿಗೊಬ್ಬರು ಸಮಾಧಾನದಿಂದಿರಿ.”