Skip to content
Opens in a new window
Listen to this chapter • 8:07

[1] ದೇವಕುಮಾರನಾದ ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಯ ಪ್ರಾರಂಭವು.

[2] ಪ್ರವಾದಿಯಾದ ಯೆಶಾಯನ ಗ್ರಂಥದಲ್ಲಿ ಬರೆದಿರುವ ಪ್ರಕಾರ, “ಇಗೋ, ನಾನು ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ; ಅವನು ನಿನ್ನ ದಾರಿಯನ್ನು ಸಿದ್ಧಮಾಡುವನು.”

[3] “‘ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ’ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ.

[4] ಯೋಹಾನನು ಬಂದು ಜನರಿಗೆ, ನೀವು ಪಾಪಗಳ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಉಪದೇಶಿಸುತ್ತಾ ಅಡವಿಯಲ್ಲಿ ದೀಕ್ಷಾಸ್ನಾನಮಾಡಿಸುತ್ತಾ ಇದ್ದನು.

[5] ಆಗ ಯೂದಾಯ ಸೀಮೆಯೆಲ್ಲವೂ ಯೆರೂಸಲೇಮಿನವರೆಲ್ಲರೂ ಅವನ ಬಳಿಗೆ ಹೊರಟುಹೋಗಿ ತಮ್ಮ ತಮ್ಮ ಪಾಪಗಳನ್ನು ಒಪ್ಪಿಕೊಂಡು ಯೊರ್ದನ್ ಹೊಳೆಯಲ್ಲಿ ಅವನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುತ್ತಿದ್ದರು.

[6] ಈ ಯೋಹಾನನು ಒಂಟೆಯ ರೋಮದ ಹೊದಿಕೆಯನ್ನು ಧರಿಸಿಕೊಂಡು ಸೊಂಟಕ್ಕೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡಿದ್ದನು; ಅವನು ಮಿಡತೆಯನ್ನೂ ಕಾಡುಜೇನನ್ನೂ ಆಹಾರವನ್ನಾಗಿ ಸೇವಿಸುತ್ತಿದ್ದನು.

[7] ಅವನು “ನನಗಿಂತ ಶಕ್ತನು ನನ್ನ ಹಿಂದೆ ಬರುತ್ತಾನೆ; ಆತನ ಕೆರಗಳ ಪಟ್ಟಿಗಳನ್ನು ಬಗ್ಗಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ.

[8] ನಾನು ನಿಮಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೇನೆ; ಆತನಾದರೋ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುತ್ತಾನೆ” ಎಂದು ಸಾರಿ ಹೇಳಿದನು.

[9] ಆ ದಿನಗಳಲ್ಲಿ ಯೇಸು ಗಲಿಲಾಯ ಸೀಮೆಗೆ ಸೇರಿದ ನಜರೇತೆಂಬ ಊರಿನಿಂದ ಬಂದು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡನು.

[10] ಯೇಸುವು ನೀರಿನೊಳಗಿನಿಂದ ಮೇಲಕ್ಕೆ ಬಂದ ಕೂಡಲೇ ಪರಲೋಕವು ತೆರೆಯಲ್ಪಟ್ಟು ದೇವರಾತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿಯುವುದನ್ನು ಕಂಡನು.

[11] ಆಗ “ನೀನು ಪ್ರಿಯನಾಗಿರುವ ನನ್ನ ಮಗನು, ನಾನು ನಿನ್ನನ್ನು ಬಹಳವಾಗಿ ಮೆಚ್ಚಿದ್ದೇನೆ” ಎಂಬ ದೈವ ವಾಣಿ ಪರಲೋಕದಿಂದ ಕೇಳಿಸಿತು.

[12] ಕೂಡಲೇ ಪವಿತ್ರಾತ್ಮ ಪ್ರೇರಿತನಾಗಿ ಯೇಸು ಅಡವಿಗೆ ಹೋದನು.

[13] ಆತನು ನಲವತ್ತು ದಿನ ಅಡವಿಯಲ್ಲಿ ಕಾಡುಮೃಗಗಳೊಂದಿಗೆ ಇದ್ದು ಸೈತಾನನಿಂದ ಶೋಧಿಸಲ್ಪಟ್ಟನು ಮತ್ತು ದೇವದೂತರು ಯೇಸುವಿಗೆ ಉಪಚಾರ ಮಾಡಿದರು.

[14] ಯೋಹಾನನು ಬಂಧಿತನಾದ ತರುವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ಸುವಾರ್ತೆಯನ್ನು ಹೀಗೆ ಸಾರಿ ಹೇಳಿದನು,

[15] “ಕಾಲವು ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು; ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ.”

[16] ಯೇಸು ಗಲಿಲಾಯ ಸಮುದ್ರದ ಬಳಿಯಲ್ಲಿ ಹೋಗುತ್ತಿರುವಾಗ ಸೀಮೋನನು ಮತ್ತು ಅವನ ತಮ್ಮನಾದ ಅಂದ್ರೆಯನು ಸಮುದ್ರದಲ್ಲಿ ಬಲೆ ಬೀಸುವುದನ್ನು ಕಂಡನು. ಅವರು ಬೆಸ್ತರಾಗಿದ್ದರು.

[17] ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳಿದನು.

[18] ಕೂಡಲೆ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.

[19] ಯೇಸು ಇನ್ನು ಸ್ವಲ್ಪ ಮುಂದೆ ಹೋಗಿ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನನ್ನೂ ಕಂಡನು; ಅವರು ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು.

[20] ಅವನು ಕೂಡಲೇ ಅವರನ್ನೂ ಕರೆದನು. ಅವರು ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಆತನನ್ನು ಹಿಂಬಾಲಿಸಿದರು.

[21] ಬಳಿಕ ಅವರು ಕಪೆರ್ನೌಮೆಂಬ ಊರಿಗೆ ಹೋದರು. ಸಬ್ಬತ್ ದಿನವಾದಾಗ ಯೇಸು ಸಭಾಮಂದಿರಕ್ಕೆ ಹೋಗಿ ಉಪದೇಶ ಮಾಡತೊಡಗಿದನು.

[22] ಜನರು ಆತನ ಬೋಧನೆಯನ್ನು ಕೇಳಿ ಆತ್ಯಾಶ್ಚರ್ಯಪಟ್ಟರು; ಏಕೆಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಿದ್ದವನಂತೆ ಅವರಿಗೆ ಬೋಧಿಸುತ್ತಿದ್ದನು.

[23] ಆಗ ಅವರ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು.

[24] ಆ ದೆವ್ವವು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನೀನು ನಮ್ಮನ್ನು ನಾಶಮಾಡುವುದಕ್ಕೆ ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಬಂದ ಪರಿಶುದ್ಧನು” ಎಂದು ಕೂಗಿ ಹೇಳಿತು.

[25] ಯೇಸು ಅದನ್ನು ಗದರಿಸಿ, “ಸುಮ್ಮನಿರು, ಅವನನ್ನು ಬಿಟ್ಟು ಹೊರಗೆ ಬಾ” ಎಂದನು.

[26] ಆ ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಕೂಗುತ್ತಾ, ಅವನೊಳಗಿಂದ ಹೊರಗೆ ಬಂದಿತು.

[27] ಜನರೆಲ್ಲರೂ ಬೆರಗಾಗಿ, “ಇದೇನು? ಅಧಿಕಾರಸಹಿತವಾದ ಹೊಸ ಬೋಧನೆ! ಈತನು ದೆವ್ವಗಳಿಗೂ ಸಹ ಆಜ್ಞಾಪಿಸುತ್ತಾನೆ, ಅವು ಈತನಿಗೆ ವಿಧೇಯವಾಗುತ್ತವೆ!” ಎಂದು ತಮ್ಮತಮ್ಮೊಳಗೆ ವಿಚಾರಮಾಡಿಕೊಂಡರು.

[28] ಕೂಡಲೆ ಆತನ ಸುದ್ದಿಯು ಗಲಿಲಾಯ ಸೀಮೆಯಲ್ಲೆಲ್ಲಾ ಹಬ್ಬಿತು.

[29] ಆ ಮೇಲೆ ಅವರು ಸಭಾಮಂದಿರದಿಂದ ಹೊರಟು ಯಾಕೋಬ ಯೋಹಾನರ ಸಂಗಡ ಸೀಮೋನ ಅಂದ್ರೆಯರ ಮನೆಗೆ ಹೋದರು.

[30] ಅಲ್ಲಿ ಸೀಮೋನನ ಅತ್ತೆ ಜ್ವರದಿಂದ ಮಲಗಿರಲಾಗಿ ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು.

[31] ಆತನು ಹತ್ತಿರಕ್ಕೆ ಬಂದು ಆಕೆಯ ಕೈಯನ್ನು ಹಿಡಿದು ಎಬ್ಬಿಸಲು ಜ್ವರವು ಆಕೆಯನ್ನು ಬಿಟ್ಟುಹೋಯಿತು; ಆಕೆಯು ಅವರಿಗೆ ಉಪಚಾರಮಾಡಿದಳು.

[32] ಸಂಜೆಯಾಗಿ ಹೊತ್ತು ಮುಳುಗಿದ ಮೇಲೆ ಜನರು ಅಸ್ವಸ್ಥರಾದವರನ್ನೂ, ದೆವ್ವಹಿಡಿದವರನ್ನೂ ಆತನ ಬಳಿಗೆ ಕರತಂದರು.

[33] ಊರಿನವರೆಲ್ಲಾ ಬಾಗಿಲಿನ ಮುಂದೆ ಒಟ್ಟುಗೂಡಿದ್ದರು.

[34] ಆಗ ಆತನು ನಾನಾ ರೀತಿಯ ರೋಗಗಳಿಂದ ಅಸ್ವಸ್ಥರಾಗಿದ್ದ ಬಹು ಜನರನ್ನು ಸ್ವಸ್ಥಮಾಡಿ ಅನೇಕ ದೆವ್ವಗಳನ್ನು ಬಿಡಿಸಿದನು. ಆದರೆ ಅವುಗಳಿಗೆ ತಾನು ಇಂಥವನೆಂದು ತಿಳಿದಿದ್ದರಿಂದ ಆತನು ಅವುಗಳನ್ನು ಮಾತನಾಡಗೊಡಿಸಲಿಲ್ಲ.

[35] ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ನಿರ್ಜನ ಸ್ಥಳಕ್ಕೆ ಹೋಗಿ ಪ್ರಾರ್ಥನೆಮಾಡುತ್ತಿದ್ದನು.

[36] ಸೀಮೋನನೂ ಅವನ ಸಂಗಡ ಇದ್ದವರೂ ಆತನನ್ನು ಹುಡುಕಿಕೊಂಡು ಆತನಿದ್ದಲ್ಲಿಗೆ ಬಂದು,

[37] ಆತನನ್ನು ಕಂಡಾಗ “ಎಲ್ಲರೂ ನಿನ್ನನ್ನು ಎದುರುನೋಡುತ್ತಿದ್ದಾರೆ” ಎಂದರು.

[38] ಆತನು ಅವರಿಗೆ, “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಇಲ್ಲಿಗೆ ಹೊರಟು ಬಂದಿದ್ದೇನೆ” ಎಂದು ಹೇಳಿದನು.

[39] ಬಳಿಕ ಆತನು ಗಲಿಲಾಯದಲ್ಲೆಲ್ಲಾ ಹೋಗಿ ಅವರ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ದೆವ್ವಗಳನ್ನು ಬಿಡಿಸುತ್ತಾ ಇದ್ದನು.

[40] ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿಕೊಂಡು, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು.

[41] ಯೇಸು ಕನಿಕರಪಟ್ಟು ತನ್ನ ಕೈ ಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಅಂದನು.

[42] ಕೂಡಲೆ ಅವನ ಕುಷ್ಠವು ಹೋಗಿ, ಅವನು ಶುದ್ಧನಾದನು.

[43] ಆಗ ಯೇಸು ಅವನಿಗೆ, “ಯಾರಿಗೂ ಏನೂ ಹೇಳಬೇಡ ನೋಡು;

[44] ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ನಿನ್ನ ಶುದ್ಧಿಗಾಗಿ ಮೋಶೆಯು ಆಜ್ಞಾಪಿಸಿರುವಂಥವುಗಳನ್ನು ಅರ್ಪಿಸು. ಅದು ಜನರಿಗೆ ಸಾಕ್ಷಿಯಾಗಿರಲಿ ಎಂದು ಖಂಡಿತವಾಗಿ” ಹೇಳಿ ಅವನನ್ನು ಕೂಡಲೆ ಕಳುಹಿಸಿ ಬಿಟ್ಟನು.

[45] ಆದರೆ ಅವನು ಹೊರಟುಹೋಗಿ ಎಲ್ಲಾ ಕಡೆಗೂ ಈ ಸಂಗತಿಯನ್ನು ಬಹಳವಾಗಿ ಸಾರಿ ಹಬ್ಬಿಸುವುದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಬಹಿರಂಗವಾಗಿ ಬೇರೆ ಊರುಗಳಿಗೆ ಹೋಗಲಾರದೆ ನಿರ್ಜನ ಸ್ಥಳಗಳಲ್ಲಿ ಇದ್ದನು. ಆದರೂ ಜನರು ಎಲ್ಲಾ ಕಡೆಯಿಂದಲೂ ಆತನ ಬಳಿಗೆ ಬರುತ್ತಿದ್ದರು.

ಮಾರ್ಕನು — Chapters