Skip to content
Opens in a new window
Listen to this chapter • 11:38

[1] ಯೇಸು ಅಲ್ಲಿಂದ ಹೊರಟು ಯೂದಾಯ ಪ್ರಾಂತ್ಯಕ್ಕೂ ಯೊರ್ದನ್ ಹೊಳೆಯ ಆಚೆಯ ಸೀಮೆಗೂ ಬಂದನು. ಅಲ್ಲಿ ಜನರು ತಿರುಗಿ ಗುಂಪುಗುಂಪಾಗಿ ಆತನ ಬಳಿಗೆ ಕೂಡಿ ಬರಲು ಆತನು ತಿರುಗಿ ಎಂದಿನಂತೆ ಅವರಿಗೆ ಉಪದೇಶಮಾಡುತ್ತಿದ್ದನು.

[2] ಆಗ ಫರಿಸಾಯರು ಆತನ ಹತ್ತಿರಕ್ಕೆ ಬಂದು ಆತನನ್ನು ಪರೀಕ್ಷಿಸಬೇಕೆಂಬ ಯೋಚನೆಯಿಂದ, “ಒಬ್ಬನು ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮವೋ ಹೇಗೆ” ಎಂದು ಕೇಳಿದರು.

[3] ಅದಕ್ಕೆ ಆತನು “ಮೋಶೆಯು ನಿಮಗೆ ಏನು ಆಜ್ಞೆ ಕೊಟ್ಟನು?” ಎಂದನು.

[4] ಅದಕ್ಕೆ ಅವರು, “ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಅನುಮತಿ ಕೊಟ್ಟನು” ಅಂದರು.

[5] ಆದರೆ ಯೇಸು ಅವರಿಗೆ, “ಅವನು ನಿಮ್ಮ ಮೊಂಡತನವನ್ನು ನೋಡಿ ನಿಮಗೆ ಇಂಥಾ ಆಜ್ಞೆಯನ್ನು ಬರೆದಿಟ್ಟನು.

[6] ದೇವರಾದರೋ ಸೃಷ್ಟಿಯ ಮೊದಲಿನಿಂದಲೇ ಮನುಷ್ಯರನ್ನು ಗಂಡುಹೆಣ್ಣಾಗಿ ಉಂಟುಮಾಡಿದನು.

[7] ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು.

[8] ಅವರಿಬ್ಬರು ಒಂದೇ ಶರೀರವಾಗಿರುವರು. ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ ಒಂದೇ ಶರೀರವಾಗಿದ್ದಾರೆ.

[9] ಆದ್ದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಎಂದು ಹೇಳಿದನು.

[10] ಅವರು ಮನೆಯಲ್ಲಿದ್ದಾಗ ಆತನ ಶಿಷ್ಯರು ಈ ವಿಷಯವಾಗಿ ಆತನನ್ನು ಪುನಃ ಕೇಳಿದರು.

[11] ಅದಕ್ಕೆ ಆತನು, “ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ತನ್ನ ಹೆಂಡತಿಗೆ ವಿರೋಧವಾಗಿ ವ್ಯಭಿಚಾರ ಮಾಡಿದವನಾಗಿದ್ದಾನೆ;

[12] ಮತ್ತು ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆಮಾಡಿಕೊಂಡರೆ ಅವಳು ವ್ಯಭಿಚಾರ ಮಾಡಿದವಳಾಗಿದ್ದಾಳೆ” ಎಂದು ಹೇಳಿದನು.

[13] ಬಳಿಕ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ಕರತರಲು ಶಿಷ್ಯರು ಅವರನ್ನು ಗದರಿಸಿದರು.

[14] ಆದರೆ ಯೇಸು ಅದನ್ನು ಕಂಡು ಕೋಪಗೊಂಡು ಅವರಿಗೆ, “ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ಏಕೆಂದರೆ ದೇವರ ರಾಜ್ಯವು ಇಂಥವರದೇ.

[15] ನಿಮಗೆ ಸತ್ಯವಾಗಿ ಹೇಳುತ್ತೇನೆ ಯಾರು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ” ಎಂದು ಹೇಳಿದನು.

[16] ಆಗ ಆತನು ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.

[17] ಅಲ್ಲಿಂದ ಯೇಸು ಪ್ರಯಾಣವನ್ನು ಪ್ರಾರಂಭಿಸಿದಾಗ, ದಾರಿಯಲ್ಲಿ ಒಬ್ಬನು ಓಡುತ್ತಾ ಆತನ ಎದುರಿಗೆ ಬಂದು ಮೊಣಕಾಲೂರಿ, “ಒಳ್ಳೆಯ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯಸ್ಥನಾಗಬೇಕಾದರೆ ಏನು ಮಾಡಬೇಕೆಂದು” ಆತನನ್ನು ಕೇಳಿದನು.

[18] ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾರೂ ಒಳ್ಳೆಯವರಲ್ಲ.

[19] ನರಹತ್ಯಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. ಮೋಸಮಾಡಬಾರದು, ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ” ಎಂದು ಹೇಳಿದನು.

[20] ಅವನು ಆತನಿಗೆ, “ಬೋಧಕನೇ, ನಾನು ಚಿಕ್ಕಂದಿನಿಂದಲೂ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ” ಎಂದು ಹೇಳಲು,

[21] ಯೇಸು ಅವನನ್ನು ದೃಷ್ಟಿಸಿ ನೋಡಿ ಪ್ರೀತಿಸಿ ಅವನಿಗೆ, “ನಿನಗೆ ಒಂದು ಕಡಿಮೆಯಾಗಿದೆ. ಹೋಗು ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡವರಿಗೆ ಕೊಡು ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

[22] ಆದರೆ ಅವನು ಬಹಳ ಆಸ್ತಿಯುಳ್ಳವನಾಗಿದ್ದುದರಿಂದ ಈ ಮಾತಿಗೆ ವ್ಯಸನಗೊಂಡು ದುಃಖದಿಂದ ಹೊರಟುಹೋದನು.

[23] ಆಗ ಯೇಸುವು ಸುತ್ತಲೂ ನೋಡಿ ತನ್ನ ಶಿಷ್ಯರಿಗೆ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ತುಂಬಾ ಕಷ್ಟ” ಎಂದು ಹೇಳಿದನು.

[24] ಶಿಷ್ಯರು ಆತನ ಮಾತುಗಳನ್ನು ಕೇಳಿ ಅಶ್ಚರ್ಯಪಟ್ಟರು. ಆದರೆ ಯೇಸು ಪುನಃ ಅವರಿಗೆ, “ಮಕ್ಕಳೇ, ದೇವರ ರಾಜ್ಯದಲ್ಲಿ ಸೇರುವುದು ಬಹಳ ಕಷ್ಟ.

[25] ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಕಣ್ಣಿನಲ್ಲಿ ನುಗ್ಗುವುದು ಸುಲಭ” ಎಂದು ಹೇಳಿದನು.

[26] ಈ ಮಾತಿಗೆ ಅವರು ಇನ್ನಷ್ಟು ಆಶ್ಚರ್ಯಪಟ್ಟು, “ಹಾಗಾದರೆ ಯಾರಿಗೆ ರಕ್ಷಣೆಯಾದೀತು” ಎಂದು ತಮ್ಮತಮ್ಮೊಳಗೆ ಅಂದುಕೊಂಡರು.

[27] ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಗೆ ಅಸಾಧ್ಯ; ದೇವರಿಗೆ ಅಸಾಧ್ಯವಲ್ಲ. ದೇವರಿಗೆ ಎಲ್ಲವೂ ಸಾಧ್ಯವೇ” ಅಂದನು.

[28] ಪೇತ್ರನು ಆತನಿಗೆ, “ಇಗೋ ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ” ಎಂದು ಹೇಳುವುದಕ್ಕೆ ಪ್ರಾರಂಭಿಸಿದನು.

[29] ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರು ನನ್ನ ನಿಮಿತ್ತವೂ, ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ಬಿಟ್ಟು ಬಿಟ್ಟಿರುವನೋ,

[30] ಅವನಿಗೆ ಈ ಕಾಲದಲ್ಲಿಯೇ ಮನೆ, ಸಹೋದರರು, ಸಹೋದರಿಯರು, ತಾಯಿ, ಮಕ್ಕಳು, ಹೊಲಗದ್ದೆಗಳು ಇವೆಲ್ಲವೂ ಹಿಂಸೆಗಳ ಸಹಿತವಾಗಿ ನೂರರಷ್ಟು ಸಿಕ್ಕೇ ಸಿಗುತ್ತವೆ ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು.

[31] ಆದರೆ ಬಹು ಮಂದಿ ಮೊದಲಿನವರು ಕಡೆಯವರಾಗುವರು, ಕಡೆಯವರು ಮೊದಲಿನವರಾಗುವರು” ಎಂದು ಹೇಳಿದನು.

[32] ಅವರು ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿರುವಾಗ ಯೇಸು ಅವರೆಲ್ಲರಿಗಿಂತ ಮುಂದಾಗಿ ನಡೆದುಹೋದದ್ದರಿಂದ ಶಿಷ್ಯರು ಆಶ್ಚರ್ಯಪಟ್ಟರು. ಆತನನ್ನು ಹಿಂಬಾಲಿಸುವವರು ಭಯಪಟ್ಟರು. ಆಗ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಪುನಃ ಕರೆದುಕೊಂಡು ಮುಂದೆ ತನಗೆ ಸಂಭವಿಸುವ ಸಂಗತಿಯನ್ನು ಹೇಳುವುದಕ್ಕೆ ಪ್ರಾರಂಭಿಸಿದನು;

[33] ಅವರಿಗೆ, “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ ಮತ್ತು ಮನುಷ್ಯಕುಮಾರನನ್ನು ಮುಖ್ಯಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಒಪ್ಪಿಸಿಕೊಡುವರು. ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಆತನನ್ನು ಅನ್ಯಜನಗಳ ಕೈಗೆ ಒಪ್ಪಿಸುವರು.

[34] ಇವರು ಆತನನ್ನು ಅಪಹಾಸ್ಯ ಮಾಡುವರು, ಆತನ ಮೇಲೆ ಉಗುಳುವರು, ಆತನನ್ನು ಚಾವಟಿಗಳಿಂದ ಹೊಡೆಯುವರು, ಅನಂತರ ಕೊಂದು ಹಾಕುವರು. ಆದರೆ ಆತನು ಮೂರು ದಿನಗಳ ನಂತರ ಜೀವಿತನಾಗಿ ಎದ್ದು ಬರುವನು” ಎಂದು ಹೇಳಿದನು.

[35] ಆಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಆತನ ಬಳಿಗೆ ಬಂದು ಆತನಿಗೆ, “ಗುರುವೇ, ನಾವು ಬೇಡಿಕೊಳ್ಳುವುದನ್ನು ನಮಗೋಸ್ಕರ ಮಾಡಬೇಕೆಂದು” ಹೇಳಿದರು.

[36] ಅದಕ್ಕೆ ಆತನು ಅವರಿಗೆ, “ನಾನು ನಿಮಗೇನು ಮಾಡಬೇಕೆಂದು ಅಪೇಕ್ಷಿಸುತ್ತೀರಿ?” ಎಂದು ಕೇಳಲು,

[37] ಅವರು ಆತನಿಗೆ, “ನಾವು ಪರಲೋಕದಲ್ಲಿ ಮಹಾಪದವಿಯನ್ನು ಪಡೆದಾಗ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ನಮಗೆ ಅನುಗ್ರಹಿಸಬೇಕು” ಅಂದರು.

[38] ಆದರೆ ಯೇಸು ಅವರಿಗೆ, “ನೀವು ಬೇಡಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯುವ ಪಾತ್ರೆಯಲ್ಲಿ ಕುಡಿಯುವುದು ನಿಮ್ಮಿಂದಾದೀತೆ? ನನಗಾಗುವ ದೀಕ್ಷಾಸ್ನಾನವನ್ನು ಹೊಂದುವುದು ನಿಮ್ಮಿಂದಾದೀತೆ?” ಎಂದು ಕೇಳಲು ಅವರು “ನಮ್ಮಿಂದಾಗುವುದು” ಅಂದರು.

[39] ಆಗ ಯೇಸು ಅವರಿಗೆ, “ನಾನು ಕುಡಿಯುವ ಪಾತ್ರೆಯಲ್ಲಿ ನೀವು ಕುಡಿಯುವಿರಿ. ನನಗಾಗುವ ದೀಕ್ಷಾಸ್ನಾನವು ನಿಮಗಾಗುವುದು.

[40] ಆದರೆ ನನ್ನ ಬಲಗಡೆಯಲ್ಲಾದರೂ ಎಡಗಡೆಯಲ್ಲಾದರೂ ಕುಳಿತುಕೊಳ್ಳುವಂತೆ ಅನುಗ್ರಹಮಾಡುವುದು ನನ್ನದಲ್ಲ; ಅದು ಯಾರಿಗೆಂದು ಸಿದ್ಧಪಡಿಸಿದೆಯೋ ಅವರಿಗೇ ಸಿಕ್ಕುವುದು” ಎಂದು ಹೇಳಿದನು.

[41] ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಯಾಕೋಬ ಯೋಹಾನರ ಮೇಲೆ ಸಿಟ್ಟಿಗೆದ್ದರು.

[42] ಯೇಸು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ, “ಅನ್ಯಜನಗಳ ಅಧಿಪತಿಗಳು ಎನ್ನಿಸಿಕೊಳ್ಳುವವರು ಅವರ ಮೇಲೆ ದೊರೆತನ ಮಾಡುತ್ತಾರೆ. ಮತ್ತು ಅವರಲ್ಲಿ ಮುಖ್ಯಸ್ಥರು ಅವರ ಮೇಲೆ ಅಧಿಕಾರ ನಡೆಸುತ್ತಾರೆ ಎಂದು ನೀವು ಬಲ್ಲಿರಷ್ಟೆ.

[43] ಆದರೆ ನಿಮ್ಮಲ್ಲಿ ಹಾಗಿರಬಾರದು; ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಬೇಕು.

[44] ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ಎಲ್ಲರ ಆಳಾಗಬೇಕು.

[45] ಮನುಷ್ಯಕುಮಾರನು ಸಹ ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಸೇವೆಮಾಡುವುದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವುದಕ್ಕಾಗಿ ಬಂದನು” ಎಂದು ಹೇಳಿದನು.

[46] ತರುವಾಯ ಅವರು ಯೆರಿಕೋವಿಗೆ ಬಂದರು. ಯೇಸುವೂ ತನ್ನ ಶಿಷ್ಯರೂ ಬಹು ಜನರ ಗುಂಪಿನೊಂದಿಗೆ ಆ ಊರಿನಿಂದ ಹೊರಟುಹೋಗುತ್ತಿರುವಾಗ ತಿಮಾಯನ ಮಗನಾದ ಬಾರ್ತಿಮಾಯನು ದಾರಿಯ ಬದಿಯಲ್ಲಿ ಕುಳಿತಿದ್ದನು.

[47] ಅವನು ಒಬ್ಬ ಕುರುಡ ಭಿಕ್ಷುಕನಾಗಿದ್ದನು. ಈ ಮಾರ್ಗವಾಗಿ ಹೋಗುತ್ತಿರುವವನು ನಜರೇತಿನ ಯೇಸುವೆಂದು ಅವನು ಕೇಳಿದಾಗ ಅವನು, “ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಕೂಗಿಕೊಳ್ಳುವುದಕ್ಕೆ ಪ್ರಾರಂಭಿಸಿದನು.

[48] ಅನೇಕರು, ಅವನಿಗೆ ಸುಮ್ಮನಿರು ಎಂದು ಗದರಿಸಲು ಅವನು, “ದಾವೀದನ ಕುಮಾರನೇ ನನ್ನನ್ನು ಕರುಣಿಸು” ಎಂದು ಮತ್ತಷ್ಟು ಕೂಗಿಕೊಂಡನು.

[49] ಆಗ ಯೇಸು ನಿಂತು, “ಅವನನ್ನು ಕರೆಯಿರಿ” ಅನ್ನಲು ಅವರು ಆ ಕುರುಡನನ್ನು ಕರೆದು, “ಧೈರ್ಯವಾಗಿರು, ಏಳು, ಯೇಸು ನಿನ್ನನ್ನು ಕರೆಯುತ್ತಾನೆ” ಅಂದರು.

[50] ಅವನು ತನ್ನ ಹೊದಿಕೆಯನ್ನು ತೆಗೆದುಹಾಕಿ ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು.

[51] ಯೇಸು ಅವನನ್ನು, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ” ಎಂದು ಕೇಳಲು ಆ ಕುರುಡನು, “ಗುರುವೇ, ನನಗೆ ಕಣ್ಣಿನ ದೃಷ್ಟಿ ಬರುವಂತೆ ಮಾಡಬೇಕು” ಅಂದನು.

[52] ಯೇಸು ಅವನಿಗೆ, “ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ” ಎಂದು ಹೇಳಿದನು. ಕೂಡಲೇ ಅವನಿಗೆ ಕಣ್ಣಿನ ದೃಷ್ಟಿ ಬಂದಿತು. ಅವನು ಆ ದಾರಿಯಲ್ಲಿ ಆತನನ್ನು ಹಿಂಬಾಲಿಸಿದನು.

ಮಾರ್ಕನು — Chapters