Skip to content
Opens in a new window
Listen to this chapter • 7:23

[1] ಅವರು ಯೆರೂಸಲೇಮಿಗೆ ಸಮೀಪಿಸಿ ಬೆತ್ಫಗೆ ಹಾಗೂ ಬೇಥಾನ್ಯದ ಬಳಿಯಲ್ಲಿರುವ ಎಣ್ಣೆಮರಗಳ ಗುಡ್ಡಕ್ಕೆ ಬಂದಾಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು,

[2] “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಅದರೊಳಗೆ ಸೇರುತ್ತಿರುವಾಗಲೇ ಅಲ್ಲಿ ಕಟ್ಟಿರುವ ಒಂದು ಕತ್ತೆಮರಿಯನ್ನು ಕಾಣುವಿರಿ; ಇದುವರೆಗೂ ಅದರ ಮೇಲೆ ಯಾರೂ ಸವಾರಿ ಮಾಡಿಲ್ಲ; ಅದನ್ನು ಬಿಚ್ಚಿ ಇಲ್ಲಿಗೆ ತನ್ನಿರಿ.

[3] ಯಾರಾದರೂ ನಿಮ್ಮನ್ನು, ‘ಅದನ್ನೇಕೆ ಬಿಚ್ಚುತ್ತೀರಿ?’ ಎಂದು ಕೇಳಿದರೆ, ‘ಇದು ಕರ್ತನಿಗೆ ಅಗತ್ಯವಾಗಿದೆ’ ಅನ್ನಿರಿ, ಅವರು ಬೇಗನೆ ಅದನ್ನು ಕಳುಹಿಸಿಕೊಡುವರು” ಎಂದು ಹೇಳಿ ಕಳುಹಿಸಿದನು.

[4] ಆ ಶಿಷ್ಯರು ಹೋಗಿ ಬೀದಿಯಲ್ಲಿ ಹೊರಗೆ ಬಾಗಿಲಿನ ಹತ್ತಿರ ಕತ್ತೆಮರಿಯನ್ನು ಕಟ್ಟಿರುವುದನ್ನು ಕಂಡು ಅದನ್ನು ಬಿಚ್ಚಿದರು.

[5] ಅಲ್ಲಿ ನಿಂತಿದ್ದವರಲ್ಲಿ ಕೆಲವರು, “ಈ ಕತ್ತೆಮರಿಯನ್ನು ಏಕೆ ಬಿಚ್ಚುತ್ತೀರಿ?” ಎಂದು ಅವರನ್ನು ಕೇಳಿದರು.

[6] ಅದಕ್ಕೆ ಯೇಸು ಹೇಳಿದಂತೆಯೇ ಅವರು ಹೇಳಿದರು ಆಗ ಜನರು ಅದನ್ನು ತೆಗೆದುಕೊಂಡು ಹೋಗಲು ಬಿಟ್ಟುಕೊಟ್ಟರು.

[7] ಶಿಷ್ಯರು ಆ ಕತ್ತೆಮರಿಯನ್ನು ಯೇಸುವಿನ ಬಳಿಗೆ ತಂದು ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಕಲು ಆತನು ಅದನ್ನು ಹತ್ತಿ ಕುಳಿತುಕೊಂಡನು.

[8] ಆಗ ಅನೇಕರು ತಮ್ಮ ಮೇಲಂಗಿಗಳನ್ನು ದಾರಿಯಲ್ಲಿ ಹಾಸಿದರು. ಬೇರೆ ಕೆಲವರು ತೋಟಗಳಿಂದ ಎಳೆಯ ರೆಂಬೆಗಳನ್ನು ಕಡಿದು, ತಂದು ಹಾಸಿದರು.

[9] ಯೇಸುವಿನ ಹಿಂದೆ ಹಾಗೂ ಮುಂದೆ ಹೋಗುತ್ತಿದ್ದವರು: “ಹೊಸನ್ನ, ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ;

[10] ನಮ್ಮ ಪಿತೃವಾದ ದಾವೀದನ ರಾಜ್ಯವು ಬರುತ್ತದೆ, ಅದಕ್ಕೆ ಆಶೀರ್ವಾದವುಂಟಾಗಲಿ; ಮೇಲಣ ಲೋಕಗಳಲ್ಲಿ ಹೊಸನ್ನ” ಎಂದು ಆರ್ಭಟಿಸಿದರು.

[11] ತರುವಾಯ ಯೇಸು ಯೆರೂಸಲೇಮನ್ನು ಸೇರಿ ದೇವಾಲಯದೊಳಗೆ ಹೋಗಿ ಸುತ್ತಲೂ ನೋಡಿದನು, ಅಷ್ಟರಲ್ಲಿ ಸಂಜೆಯಾದದ್ದರಿಂದ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು ಬೇಥಾನ್ಯಕ್ಕೆ ಹೊರಟು ಹೋದನು.

[12] ಮರುದಿನ ಅವರು ಬೇಥಾನ್ಯವನ್ನು ಬಿಟ್ಟು ಬರುತ್ತಿರುವಾಗ ಆತನಿಗೆ ಹಸಿವಾಯಿತು.

[13] ಎಲೆಗಳಿದ್ದ ಅಂಜೂರದ ಮರವನ್ನು ದೂರದಿಂದ ಕಂಡು ಅದರಲ್ಲಿ ತನಗೇನಾದರೂ ಹಣ್ಣು ಸಿಕ್ಕೀತೆಂದು ಅಲ್ಲಿಗೆ ಹೋದನು. ಅದರ ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಏಕೆಂದರೆ ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ.

[14] ಆಗ ಯೇಸು ಆ ಮರಕ್ಕೆ, “ಇನ್ನೆಂದಿಗೂ ಒಬ್ಬರೂ ನಿನ್ನಲ್ಲಿ ಹಣ್ಣನ್ನು ತಿನ್ನದಿರಲಿ” ಎಂದು ಹೇಳಿದನು. ಆತನ ಶಿಷ್ಯರು ಅದನ್ನು ಕೇಳಿಸಿಕೊಂಡರು.

[15] ಅವರು ಯೆರೂಸಲೇಮಿಗೆ ಬಂದಾಗ ಯೇಸು ದೇವಾಲಯಕ್ಕೆ ಹೋಗಿ ಅದರಲ್ಲಿ ಮಾರುತ್ತಿದ್ದವರನ್ನೂ, ಕೊಳ್ಳುತ್ತಿದ್ದವರನ್ನೂ ಹೊರಡಿಸಿಬಿಡುವುದಕ್ಕೆ ತೊಡಗಿದನು; ನಾಣ್ಯಗಳನ್ನು ವಿನಿಮಯಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿಹಾಕಿದನು; ಪಾರಿವಾಳಗಳನ್ನು ಮಾರುವವರ ಮಣೆಗಳನ್ನು ಉರುಳಿಸಿದನು;

[16] ಒಬ್ಬನನ್ನಾದರೂ ಸಾಮಾನುಗಳನ್ನು ಹೊತ್ತುಕೊಂಡು ದೇವಾಲಯದೊಳಕ್ಕೆ ಹಾದು ಹೋಗಗೊಡಿಸಲಿಲ್ಲ.

[17] ಮತ್ತು ಆತನು ಉಪದೇಶಮಾಡಿ, “‘ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವುದು’ ಎಂದು ಬರೆದಿದೆಯಲ್ಲಾ? ಆದರೆ ‘ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ’” ಎಂದು ಹೇಳಿದನು.

[18] ಅದನ್ನು ಮುಖ್ಯಯಾಜಕರೂ, ಶಾಸ್ತ್ರಿಗಳೂ ಕೇಳಿ ಅವನನ್ನು ಯಾವ ಉಪಾಯದಿಂದ ಕೊಲ್ಲೋಣ ಎಂದು ಕಾದು ನೋಡುತ್ತಿದ್ದರು; ಏಕೆಂದರೆ ಜನರೆಲ್ಲರೂ ಆತನ ಉಪದೇಶವನ್ನು ಕೇಳಿ ಅತ್ಯಾಶ್ಚರ್ಯಪಟ್ಟಿದ್ದರಿಂದ ಅವರು ಆತನಿಗೆ ಹೆದರುತ್ತಿದ್ದರು.

[19] ಸಂಜೆಯಾದಾಗ ಯೇಸುವೂ, ಆತನ ಶಿಷ್ಯರೂ ಪಟ್ಟಣವನ್ನು ಬಿಟ್ಟು ಹೊರಗೆ ಹೋಗುತ್ತಿದ್ದರು.

[20] ಬೆಳಗ್ಗೆ ಅವರು ಬರುತ್ತಿರುವಾಗ ಆ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು.

[21] ಆಗ ಪೇತ್ರನು ಹಿಂದಿನ ದಿನದ ಸಂಗತಿಯನ್ನು ನೆನಪಿಸಿಕೊಂಡು ಆತನಿಗೆ, “ಗುರುವೇ, ಇಗೋ, ನೀನು ಶಾಪ ಕೊಟ್ಟ ಅಂಜೂರದ ಮರವು ಒಣಗಿಹೋಗಿದೆ” ಎಂದು ಹೇಳಿದ್ದಕ್ಕೆ

[22] ಯೇಸು ಹೇಳಿದ್ದೇನಂದರೆ, “ನಿಮಗೆ ದೇವರಲ್ಲಿ ನಂಬಿಕೆಯಿರಲಿ.

[23] ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ ತನ್ನ ಮನಸ್ಸಿನಲ್ಲಿ ಸಂಶಯಪಡದೆ ತಾನು ಹೇಳಿದ್ದು ಆಗುವುದೆಂದು ನಂಬಿದರೆ ಅವನು ಹೇಳಿದಂತೆಯೇ ಆಗುವುದು.

[24] ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವುದೆಂದು ನಿಮಗೆ ಹೇಳುತ್ತೇನೆ.

[25] ಇದಲ್ಲದೆ ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಕ್ಷಮಿಸಿರಿ; ಆಗ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವನು” ಅಂದನು.

[26] ಆದರೆ ನೀವು ಕ್ಷಮಿಸದಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.

[27] ಅವರು ಪುನಃ ಯೆರೂಸಲೇಮಿಗೆ ಬಂದಾಗ ಯೇಸು ದೇವಾಲಯದ ಆವರಣದಲ್ಲಿ ನಡೆದಾಡುತ್ತಿರಲಾಗಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಹಿರಿಯರೂ ಆತನ ಬಳಿಗೆ ಬಂದು,

[28] “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಇದನ್ನು ಮಾಡುವುದಕ್ಕೆ ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಆತನನ್ನು ಕೇಳಿದರು.

[29] ಯೇಸು ಅವರಿಗೆ, “ನಾನೂ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ, ನನಗೆ ಉತ್ತರ ಹೇಳಿದರೆ ನಾನೂ ಸಹ ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂಬುದನ್ನು ನಿಮಗೆ ಹೇಳುತ್ತೇನೆ.

[30] ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ?” ಉತ್ತರಕೊಡಿರಿ ಅಂದನು.

[31] ಆಗ ಅವರು, “‘ಪರಲೋಕದಿಂದ ಬಂದಿತೆಂದು’ ನಾವು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ’ ಅಂದಾನು;

[32] ‘ಮನುಷ್ಯರಿಂದ ಬಂದಿತು’” ಎಂದು ಹೇಳಿದರೆ ಏನಾಗುವುದೋ ಎಂಬುದಾಗಿ ಎಂದು ತಮ್ಮತಮ್ಮೊಳಗೆ ಚರ್ಚಿಸಿಕೊಳ್ಳುತ್ತಿದ್ದರು. ಯೋಹಾನನು ನಿಜವಾದ ಪ್ರವಾದಿಯೆಂದು ಜನರೆಲ್ಲರೂ ಅನುಮಾನವಿಲ್ಲದೆ ತಿಳಿದುಕೊಂಡಿದ್ದರಿಂದ ಇವರಿಗೆ ಜನರ ಭಯವಿತ್ತು.

[33] ಹೀಗಿರಲಾಗಿ ಅವರು, “ನಮಗೆ ಗೊತ್ತಿಲ್ಲ” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು ಅವರಿಗೆ, “ನಾನೂ ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ” ಅಂದನು.

ಮಾರ್ಕನು — Chapters