[1] ಯೇಸು ದೇವಾಲಯದಿಂದ ಹೊರಗೆ ಹೋಗುತ್ತಿದ್ದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು, ಎಂಥಾ ಅದ್ಭುತವಾದ ಕಲ್ಲುಗಳು! ಎಂಥಾ ಮಹಾಕಟ್ಟಡಗಳು!” ಎಂದು ಹೇಳಿದನು.
[2] ಯೇಸು, “ಈ ದೊಡ್ಡ ಕಟ್ಟಡಗಳನ್ನು ನೋಡುತ್ತೀಯಲ್ಲವೇ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲ್ಪಡುವುದು” ಎಂದನು.
[3] ಬಳಿಕ ಆತನು ಎಣ್ಣೆ ಮರಗಳ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕುಳಿತುಕೊಂಡಿದ್ದಾಗ ಪೇತ್ರ, ಯಾಕೋಬ, ಯೋಹಾನ ಹಾಗೂ ಅಂದ್ರೆಯ,
[4] ಇವರು ಪ್ರತ್ಯೇಕವಾಗಿ ಆತನಿಗೆ, “ಇವೆಲ್ಲಾ ಯಾವಾಗ ಆಗುವವು? ಇವೆಲ್ಲವು ನೆರವೇರುವುದಕ್ಕೆ ಸೂಚನೆ ಏನು? ನಮಗೆ ಹೇಳು” ಎಂದು ಆತನನ್ನು ಕೇಳಿದರು.
[5] ಯೇಸು ಅವರಿಗೆ ಹೇಳಿದ್ದೇನಂದರೆ, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಾಗಿರಿ.
[6] ಅನೇಕರು ಬಂದು ನನ್ನ ಹೆಸರನ್ನು ಹೇಳಿಕೊಂಡು, ‘ನಾನೇ ಕ್ರಿಸ್ತನು’ ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು.
[7] ಇದಲ್ಲದೆ ಯುದ್ಧಗಳಾಗುವುದನ್ನೂ, ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಹಾಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ.
[8] ಜನಾಂಗಕ್ಕೆ ವಿರೋಧವಾಗಿ ಜನಾಂಗವೂ, ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ಮತ್ತು ನಾನಾ ಕಡೆಗಳಲ್ಲಿ ಭೂಕಂಪಗಳೂ, ಬರಗಾಲಗಳೂ, ಉಂಟಾಗುವವು. ಆದರೆ ಇವೆಲ್ಲಾ ಪ್ರಸವ ವೇದನೆಯ ಪ್ರಾರಂಭ ಮಾತ್ರ.
[9] “ಆದರೆ ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಜನರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗುವರು. ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು, ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸುಗಳ ಮುಂದೆ ಅವರಿಗೆ ಸಾಕ್ಷಿಗಳಾಗಿ ನಿಲ್ಲಿಸುವರು,
[10] ಆದರೆ ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.
[11] “ನಿಮ್ಮನ್ನು ಹಿಡಿದುಕೊಂಡು ಹೋಗಿ ಒಪ್ಪಿಸುವಾಗ ಏನು ಹೇಳಬೇಕು ಎಂದು ಮುಂಚಿತವಾಗಿಯೇ ಚಿಂತಿಸಬೇಡಿರಿ, ನೀವು ಏನು ಹೇಳಬೇಕೋ ಅದು ನಿಮಗೆ ಆ ಗಳಿಗೆಯಲ್ಲಿ ಕೊಡಲ್ಪಡುವುದು, ಏಕೆಂದರೆ ಮಾತನಾಡುವವರು ನೀವಲ್ಲ, ಆದರೆ ಪವಿತ್ರಾತ್ಮನೇ ನಿಮ್ಮ ಮೂಲಕವಾಗಿ ಮಾತನಾಡುವನು,
[12] ಇದಲ್ಲದೆ ಸಹೋದರನು ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ಹೆತ್ತವರಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು,
[13] ಮತ್ತು ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಿಸುವರು, ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆ ಹೊಂದುವನು.”
[14] “ಇದಲ್ಲದೆ ವಿನಾಶಕಾರಕ ಅಸಹ್ಯ ಮೂರ್ತಿಯು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಾಗ (ಇದನ್ನು ಓದುವವನು ತಿಳಿದುಕೊಳ್ಳಲಿ). ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
[15] ಮಾಳಿಗೆಯ ಮೇಲಿದ್ದವನು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದಿರಲಿ; ಮನೆಯೊಳಗಿಂದ ಏನನ್ನೂ ತೆಗೆದುಕೊಳ್ಳದಿರಲಿ.
[16] ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗಿ ಹೋಗದಿರಲಿ.
[17] “ಆದರೆ ಆ ದಿನಗಳಲ್ಲಿ ಗರ್ಭಿಣಿಯರಿಗೂ, ಹಾಲು ಕುಡಿಸುವ ತಾಯಂದಿರಿಗೂ ಆಗುವ ಕಷ್ಟ ಎಷ್ಟೆಂದು ಹೇಳಲಿ!
[18] ಆ ದಿನಗಳು ಸಂಕಟದ ದಿನಗಳಾಗಿರುವುದರಿಂದ ಇದೆಲ್ಲಾ ಚಳಿಗಾಲದಲ್ಲಿ ಆಗಬಾರದೆಂದು ಪ್ರಾರ್ಥನೆ ಮಾಡಿರಿ.
[19] ಅಂಥ ಸಂಕಟವು ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ದಿನದವರೆಗೂ ಆಗಲಿಲ್ಲ; ಇನ್ನು ಮುಂದೆ ಆಗುವುದೂ ಇಲ್ಲ.
[20] ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯುವುದಿಲ್ಲ. ಆದರೆ ತಾನು ಆರಿಸಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿದ್ದಾನೆ.
[21] “ಆಗ ಯಾರಾದರೂ ನಿಮಗೆ, ಇಗೋ, ಕ್ರಿಸ್ತನು ಇಲ್ಲಿದ್ದಾನೆ! ಅಗೋ, ಆತನು ಅಲ್ಲಿದ್ದಾನೆ! ಎಂದು ಹೇಳಿದರೆ ನಂಬಬೇಡಿರಿ.
[22] ಏಕೆಂದರೆ ಸುಳ್ಳು ಕ್ರಿಸ್ತರೂ, ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನು ಮೋಸಗೊಳಿಸುವುದಕ್ಕೋಸ್ಕರ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.
[23] ನೀವಂತೂ ಜಾಗರೂಕರಾಗಿರಿ. ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿಯೇ” ಹೇಳಿದ್ದೇನೆ.
[24] ಇದಲ್ಲದೆ ಆ ದಿನಗಳ ಸಂಕಟವು ತೀರಿದ ನಂತರ; “‘ಸೂರ್ಯನು ಕತ್ತಲಾಗಿ ಹೋಗುವನು.
[25] ಚಂದ್ರನು ತನ್ನ ಬೆಳಕು ಕೊಡದೆ ಇರುವನು. ನಕ್ಷತ್ರಗಳು ಆಕಾಶದಿಂದ ಬೀಳುವವು. ಮತ್ತು ಪರಲೋಕದಲ್ಲಿ ಶಕ್ತಿಗಳು ಕದಲುವವು.’
[26] ಆಗ ಮನುಷ್ಯಕುಮಾರನು ಮಹಾಬಲದಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವುದನ್ನು ಅವರು ನೋಡುವರು.
[27] ಮತ್ತು ಆತನು ತನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯವರೆಗೆ ತಾನು ಆರಿಸಿಕೊಂಡವರನ್ನು ನಾಲ್ಕುದಿಕ್ಕುಗಳಿಂದ ಒಟ್ಟುಗೂಡಿಸುವನು.”
[28] “ಅಂಜೂರ ಮರವನ್ನು ನೋಡಿ ಒಂದು ಪಾಠವನ್ನು ಕಲಿತುಕೊಳ್ಳಿ. ಅದರ ಕೊಂಬೆಗಳಲ್ಲಿ ಇನ್ನೂ ಎಳೆದಾಗಿ ಎಲೆಗಳು ಚಿಗುರುವಾಗ ಬೇಸಿಗೆಯು ಸಮೀಪಿಸಿತು ಎಂದು ಅರಿತುಕೊಳ್ಳುತ್ತಿರಲ್ಲಾ.
[29] ಹಾಗೆಯೇ ಇವೆಲ್ಲವೂ ಆಗುವುದನ್ನು ನೀವು ನೋಡುವಾಗ ಬಾಗಿಲ ಹತ್ತಿರದಲ್ಲಿಯೇ ಇದ್ದೆ ಎಂದು ತಿಳಿದುಕೊಳ್ಳಿರಿ.
[30] ಇದೆಲ್ಲವೂ ನೆರವೇರುವವರೆಗೂ ಈ ಸಂತತಿಯು ಅಳಿದು ಹೋಗುವುದೇ ಇಲ್ಲವೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
[31] ಆಕಾಶವೂ, ಭೂಮಿಯೂ ಅಳಿದು ಹೋಗುವವು; ಆದರೆ ನನ್ನ ವಾಕ್ಯವು ಅಳಿದು ಹೋಗುವುದೇ ಇಲ್ಲ.”
[32] “ಇದಲ್ಲದೆ ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ನನ್ನ ತಂದೆಗೆ ಹೊರತು ಮತ್ತಾರಿಗೂ ತಿಳಿಯದು, ಪರಲೋಕದಲ್ಲಿರುವ ದೂತರಿಗಾಗಲಿ, ಮಗನಿಗಾಗಲಿ ತಿಳಿಯದು.
[33] ಆ ಕಾಲವು ಯಾವಾಗ ಬರುವುದು ಎಂದು ನಿಮಗೆ ತಿಳಿಯದೆ ಇರುವುದರಿಂದ ನೀವು ಎಚ್ಚರವಾಗಿರಿ, ಜಾಗರೂಕರಾಗಿರಿ.
[34] ಅದು ಒಬ್ಬ ಮನುಷ್ಯನು ತನ್ನ ಮನೆಯನ್ನು ಬಿಟ್ಟು ದೂರಪ್ರಯಾಣಕ್ಕೆ ಹೋಗುವಾಗ ತನ್ನ ಸೇವಕರಿಗೆ ಮನೇ ಅಧಿಕಾರವನ್ನು ಒಪ್ಪಿಸಿಕೊಟ್ಟು ಪ್ರತಿಯೊಬ್ಬನಿಗೆ ಅವನವನ ಕೆಲಸಗಳನ್ನು ಕೊಟ್ಟು ಬಾಗಿಲು ಕಾಯುವವನಿಗೆ, ನೀನು ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇರುತ್ತದೆ” ಎಂದು ನಾನು ನಿಮಗೆ ಹೇಳುತ್ತಿದ್ದೇನೆ.
[35] “ಮನೆ ಯಜಮಾನನು ಸಂಜೆಯಲ್ಲಿಯೋ, ಮಧ್ಯರಾತ್ರಿಯಲ್ಲಿಯೋ, ಕೋಳಿ ಕೂಗುವಾಗಲೋ ಬೆಳಕಾಗುವಾಗಲೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲದ ಕಾರಣ ಎಚ್ಚರವಾಗಿರಿ!
[36] ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುತ್ತಿರುವುದನ್ನು ಕಂಡಾನು.
[37] ನಾನು ನಿಮಗೆ ಹೇಳುತ್ತಿರುವುದನ್ನು ಎಲ್ಲರಿಗೂ ಹೇಳುತ್ತಿದ್ದೇನೆ; ಎಚ್ಚರವಾಗಿರಿ!” ಎಂದನು.