Skip to content
Opens in a new window
Listen to this chapter • 9:59

[1] ಆಗ ಯೇಸು ಅವರೊಂದಿಗೆ ಸಾಮ್ಯಗಳಿಂದ ಮಾತನಾಡುವುದಕ್ಕೆ ಪ್ರಾರಂಭಿಸಿದನು, “ಒಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ ಸುತ್ತಲೂ ಬೇಲಿ ಹಾಕಿಸಿ ದ್ರಾಕ್ಷಿಯ ಆಲೆಗಾಗಿ ಒಂದು ಗುಂಡಿಯನ್ನು ತೆಗೆಸಿ ಕಾವಲು ಗೋಪುರವನ್ನು ಕಟ್ಟಿಸಿದನು. ಬಳಿಕ ಆ ತೋಟವನ್ನು ದ್ರಾಕ್ಷಿಯ ತೋಟಗಾರರಿಗೆ ಗುತ್ತಿಗೆಗೆ ಕೊಟ್ಟು, ಹೊರದೇಶಕ್ಕೆ ಹೊರಟು ಹೋದನು.

[2] ಫಲಕಾಲವು ಬಂದಾಗ ತನಗೆ ಬರತಕ್ಕ ಪಾಲನ್ನು ತೆಗೆದುಕೊಳ್ಳುವುದಕ್ಕಾಗಿ ಒಬ್ಬ ಸೇವಕನನ್ನು ಗುತ್ತಿಗೆದಾರರ ಬಳಿಗೆ ಕಳುಹಿಸಿದನು.

[3] ಆದರೆ ಅವರು ಅವನನ್ನು ಹಿಡಿದುಕೊಂಡು ಹೊಡೆದು ಏನೂ ಕೊಡದೆ ಬರಿಗೈಯಲ್ಲಿ ಕಳುಹಿಸಿಬಿಟ್ಟರು.

[4] ಆ ತೋಟದ ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಲು ಅವರು ಅವನ ತಲೆಯ ಮೇಲೆ ಹೊಡೆದು ಗಾಯಗೊಳಿಸಿ ಅಪಮಾನಮಾಡಿ ಕಳುಹಿಸಿಬಿಟ್ಟರು.

[5] ಆದರೂ ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ಇವನನ್ನು ಅವರು ಕೊಂದು ಹಾಕಿದರು. ಇನ್ನೂ ಅನೇಕರಿಗೆ ಅವರು ಹಾಗೆಯೇ ಮಾಡಿ, ಅವರಲ್ಲಿ ಕೆಲವರನ್ನು ಹೊಡೆದರು ಮತ್ತು ಕೆಲವರನ್ನು ಕೊಂದು ಹಾಕಿದರು.

[6] ಅವನಿಗೆ ಕಳುಹಿಸಲು ಇನ್ನು ಒಬ್ಬನಿದ್ದನು. ಯಾರೆಂದರೆ ತನಗೆ ಪ್ರಿಯನಾಗಿದ್ದ ಒಬ್ಬನೇ ಮಗನು. ತನ್ನ ಮಗನಿಗೆ ಅವರು ಮರ್ಯಾದೆ ಕೊಡಬಹುದೆಂದು ಯಜಮಾನನು ಕೊನೆಗೆ ಅವನನ್ನು ಅವರ ಬಳಿಗೆ ಕಳುಹಿಸಿದನು.

[7] ಆದರೆ ಆ ಗುತ್ತಿಗೆದಾರರು, ‘ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು’ ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡು,

[8] ಅವರು ಅವನನ್ನು ಹಿಡಿದು ಕೊಂದು ಹಾಕಿ ದ್ರಾಕ್ಷಿಯ ತೋಟದಿಂದ ಹೊರಗೆ ಬಿಸಾಡಿದರು.

[9] ಹಾಗಾದರೆ ಆ ದ್ರಾಕ್ಷಾ ತೋಟದ ಯಜಮಾನನು ಏನು ಮಾಡುವನು? ಅವನು ಬಂದು ಆ ಗುತ್ತಿಗೆದಾರರನ್ನು ಸಂಹರಿಸಿ ತನ್ನ ದ್ರಾಕ್ಷಾತೋಟವನ್ನು ಬೇರೆಯವರಿಗೆ ಒಪ್ಪಿಸುವನು.

[10] “‘ಮನೆಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.

[11] ಇದು ಕರ್ತನಿಂದಲೇ ಆಯಿತು, ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿ ತೋರುತ್ತದೆ ಎಂಬ ಶಾಸ್ತ್ರವಚನಗಳನ್ನೂ ನೀವು ಓದಲಿಲ್ಲವೇ?’” ಎಂದನು.

[12] ಯೇಸು ತಮ್ಮನ್ನೇ ಕುರಿತು ಈ ಸಾಮ್ಯವನ್ನು ಹೇಳಿದ್ದಾನೆ ಎಂದು ಅವರು ತಿಳಿದುಕೊಂಡು ಆತನನ್ನು ಹಿಡಿಯುವುದಕ್ಕೆ ಸಂದರ್ಭನೋಡುತ್ತಿದ್ದರು. ಆದರೆ ಜನರಿಗೆ ಭಯಪಟ್ಟು ಆತನನ್ನು ಬಿಟ್ಟುಹೋದರು.

[13] ಆ ಮೇಲೆ ಅವರು ಯೇಸುವನ್ನು ಮಾತುಗಳಲ್ಲಿ ಹಿಡಿಯಬೇಕೆಂದು ಫರಿಸಾಯರಲ್ಲಿಯೂ, ಹೆರೋದ್ಯರಲ್ಲಿಯೂ ಕೆಲವರನ್ನು ಆತನ ಬಳಿಗೆ ಕಳುಹಿಸಿದರು.

[14] ಇವರು ಬಂದು, “ಬೋಧಕನೇ ನೀನು ಸತ್ಯವಂತನು, ಯಾವ ಮನುಷ್ಯನನ್ನು ಲಕ್ಷಿಸದವನೂ, ಮುಖದಾಕ್ಷಿಣ್ಯ ತೋರಿಸದವನೂ, ಸತ್ಯಕ್ಕನುಸಾರವಾಗಿ ದೈವಮಾರ್ಗವನ್ನು ಬೋಧಿಸುವವನೂ ಎಂದು ನಾವು ಬಲ್ಲೆವು. ಕೈಸರನಿಗೆ ಸುಂಕ ಕೊಡುವುದು ಧರ್ಮಸಮ್ಮತವೋ? ಅಲ್ಲವೋ? ನಾವದನ್ನು ಕೊಡಬೇಕೋ ಬೇಡವೋ?” ಎಂದು ಆತನನ್ನು ಕೇಳಿದರು.

[15] ಆದರೆ ಯೇಸು ಅವರ ಕಪಟತನವನ್ನು ಗ್ರಹಿಸಿ, “ನೀವು ನನ್ನನ್ನು ಪರೀಕ್ಷಿಸುವುದೇಕೆ? ಒಂದು ನಾಣ್ಯವನ್ನು ತಂದು ನನಗೆ ತೋರಿಸಿರಿ ನಾನು ಅದನ್ನು ನೋಡುತ್ತೇನೆ” ಎಂದು ಹೇಳಲು ಅವರು ತಂದರು.

[16] ಆಗ ಆತನು ಇದರ “ಮೇಲಿರುವುದು ಯಾರ ಮುಖಮುದ್ರೆ? ಮತ್ತು ಯಾರ ಲಿಪಿ?” ಎಂದು ಕೇಳಿದ್ದಕ್ಕೆ ಅವರು ಕೈಸರನದು ಅಂದರು.

[17] ಯೇಸು, “ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ” ಎಂದು ಹೇಳಿದನು. ಅದಕ್ಕೆ ಅವರು ಆತನ ವಿಷಯವಾಗಿ ಬಹು ಆಶ್ಚರ್ಯಪಟ್ಟರು.

[18] ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಆತನ ಬಳಿಗೆ ಬಂದು,

[19] ಆತನನ್ನು ಪ್ರಶ್ನೆಮಾಡಿದ್ದೇನಂದರೆ, “ಬೋಧಕನೇ, ‘ಅಣ್ಣನಾದವನು ಮಕ್ಕಳಿಲ್ಲದೆ ಹೆಂಡತಿಯನ್ನು ಬಿಟ್ಟು ಸತ್ತರೆ ಆಕೆಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು’ ಮೋಶೆಯು ನಮಗಾಗಿ ಬರೆದಿಟ್ಟಿದ್ದಾನಲ್ಲವೇ.

[20] “ಒಮ್ಮೆ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆ ಮಾಡಿಕೊಂಡು ಸಂತಾನವಿಲ್ಲದೆ ಸತ್ತನು.

[21] ಎರಡನೆಯವನೂ ಆಕೆಯನ್ನು ಮದುವೆ ಮಾಡಿಕೊಂಡು ಸಂತಾನವಿಲ್ಲದೆ ಸತ್ತನು. ಅದರಂತೆ ಮೂರನೆಯವನು.

[22] ಇದೇ ಪ್ರಕಾರ ಏಳು ಮಂದಿಯೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಸತ್ತರು. ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು.

[23] ಪುನರುತ್ಥಾನದಲ್ಲಿ ಅವರು ಎದ್ದುಬರುವಾಗ ಅವರಲ್ಲಿ ಆಕೆಯು ಯಾರ ಹೆಂಡತಿಯಾಗಿರುವಳು? ಆ ಏಳು ಮಂದಿಗೂ ಆಕೆಯು ಹೆಂಡತಿಯಾಗಿದ್ದಳಲ್ಲಾ” ಎಂದರು.

[24] ಅದಕ್ಕೆ ಯೇಸು, “ನೀವು ಶಾಸ್ತ್ರವಚನಗಳನ್ನಾದರೂ, ದೇವರ ಶಕ್ತಿಯನ್ನಾದರೂ ತಿಳಿಯದೆ ಇರುವುದರಿಂದಲೇ ತಪ್ಪುವವರಾಗಿದ್ದೀರಿ?

[25] ಸತ್ತವರು ಬದುಕಿ ಎದ್ದಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ.

[26] ಆದರೆ ಸತ್ತವರು ಬದುಕಿ ಬರುತ್ತಾರೆಂಬುದನ್ನು ಕುರಿತು ಹೇಳಬೇಕಾದರೆ ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಮಾತನಾಡಿದನೆಂದು ನೀವು ಮೋಶೆಯ ಗ್ರಂಥದಲ್ಲಿ ಓದಲಿಲ್ಲವೋ?’

[27] ಆತನು ಜೀವಂತರಿಗೆ ದೇವರಾಗಿದ್ದಾನೆ ಹೊರತು ಸತ್ತವರಿಗಲ್ಲ. ಈ ವಿಷಯದಲ್ಲಿ ನೀವು ಬಹು ತಪ್ಪಾದ ಅಭಿಪ್ರಾಯವುಳ್ಳವರಾಗಿದ್ದಿರಿ” ಎಂದು ಹೇಳಿದನು.

[28] ಶಾಸ್ತ್ರಿಗಳಲ್ಲಿ ಒಬ್ಬನು ಅವರ ವಾದವನ್ನು ಕೇಳಿ ಯೇಸು ಅವರಿಗೆ ಸರಿಯಾಗಿ ಉತ್ತರ ಕೊಟ್ಟನೆಂದು ತಿಳಿದು ಆತನ ಹತ್ತಿರಕ್ಕೆ ಬಂದು, “ಎಲ್ಲಾ ಆಜ್ಞೆಗಳಲ್ಲಿ ಮುಖ್ಯವಾದ್ದದು ಯಾವುದು?” ಎಂದು ಆತನನ್ನು ಕೇಳಿದರು.

[29] ಅದಕ್ಕೆ ಯೇಸು, “‘ಇಸ್ರಾಯೇಲ್ ಜನರೇ ಕೇಳಿ, ನಮ್ಮ ದೇವರಾದ ಕರ್ತನು ಒಬ್ಬನೇ ದೇವರು.

[30] ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣ ಬುದ್ಧಿಯಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು’ ಎಂಬುದೇ ಮುಖ್ಯವಾದ ಆಜ್ಞೆ.

[31] ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ ಎರಡನೆಯ ಆಜ್ಞೆ. ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ” ಎಂದು ಉತ್ತರ ಕೊಟ್ಟನು.

[32] ಆಗ ಆ ಶಾಸ್ತ್ರಿಯು, “ಬೋಧಕನೇ, ನೀನು ಚೆನ್ನಾಗಿ ಹೇಳಿದೆ. ಸತ್ಯವನ್ನೇ ಹೇಳಿದಿ ದೇವರು ಒಬ್ಬನೇ, ಆತನ ಹೊರತು ಬೇರೊಬ್ಬ ದೇವರಿಲ್ಲ ಎಂದು ಹೇಳಿದನು.

[33] ಆತನನ್ನು ಪೂರ್ಣಹೃದಯದಿಂದಲೂ, ಪೂರ್ಣ ಬುದ್ಧಿಯಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ತನ್ನನ್ನು ಪ್ರೀತಿಸಿಕೊಳ್ಳುವಂತೆ ತನ್ನ ನೆರೆಯವನನ್ನು ಪ್ರೀತಿಸುವುದು ಇವೆರಡೂ ಎಲ್ಲಾ ಸರ್ವಾಂಗಹೋಮಗಳಿಗಿಂತಲೂ ಎಲ್ಲಾ ಯಜ್ಞಗಳಿಗಿಂತಲೂ ಮೇಲಾದುವು” ಅಂದನು.

[34] ಅವನು ಬುದ್ಧಿಯಿಂದ ಉತ್ತರಕೊಟ್ಟದ್ದನ್ನು ಯೇಸು ಕಂಡು, “ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ” ಎಂದನು. ಅಂದಿನಿಂದ ಆತನನ್ನು ಪ್ರಶ್ನೆಮಾಡುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.

[35] ಯೇಸು ದೇವಾಲಯದಲ್ಲಿ ಉಪದೇಶಮಾಡುತ್ತಿರಲಾಗಿ ಆತನು ಅವರನ್ನು, “ಶಾಸ್ತ್ರಿಗಳು ಕ್ರಿಸ್ತನನ್ನು ದಾವೀದನ ಮಗನೆಂದು ಹೇಳುತ್ತಾರಲ್ಲಾ ಅದು ಹೇಗೆ?

[36] “‘ನಾನು ನಿನ್ನ ಶತ್ರುಗಳನ್ನು ನಿನ್ನ ಪಾದದಡಿ ಹಾಕುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು’ ಎಂಬುದಾಗಿ ದಾವೀದನೇ ಪವಿತ್ರಾತ್ಮನ ಪ್ರೇರಣೆಯಿಂದ ಹೇಳಿದ್ದಾನೆ.

[37] ದಾವೀದನೇ ಆತನನ್ನು ‘ಕರ್ತನೆಂದು’ ಹೇಳಿರುವಲ್ಲಿ ಆತನು ಅವನಿಗೆ ಮಗನಾಗುವುದು ಹೇಗೆ?” ಎಂದು ಪ್ರಶ್ನಿಸಿದನು. ಜನರ ದೊಡ್ಡ ಸಮೂಹವು ಆತನ ಮಾತನ್ನು ಸಂತೋಷದಿಂದ ಕೇಳುತ್ತಿತ್ತು.

[38] ಆತನು ಉಪದೇಶಮಾಡಿ ಹೇಳಿದ್ದೇನಂದರೆ, “ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿಲುವಂಗಿಯನ್ನು ಧರಿಸಿಕೊಂಡು ತಿರುಗಾಡುತ್ತಾ,

[39] ಸಂತೆಯ ಬೀದಿಗಳಲ್ಲಿ ನಮಸ್ಕಾರಗಳನ್ನೂ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳನ್ನೂ, ಔತಣಗಳಲ್ಲಿ ಪ್ರಥಮ ಸ್ಥಾನಗಳನ್ನೂ ಅವರು ಇಷ್ಟಪಡುವವರಾಗಿದ್ದಾರೆ.

[40] ಇವರು ವಿಧವೆಯರ ಮನೆಗಳನ್ನು ದೋಚಿ ತೋರಿಕೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಿನ ದಂಡನೆಯನ್ನು ಹೊಂದುವರು” ಎಂದನು.

[41] ಯೇಸು ದೇವಾಲಯದ ಆವರಣದಲ್ಲಿ ಕಾಣಿಕೆ ಪೆಟ್ಟಿಗೆಯ ಎದುರಿಗೆ ಕುಳಿತುಕೊಂಡು ಜನರು ಅದರಲ್ಲಿ ಹಣ ಹಾಕುವುದನ್ನು ಗಮನಿಸುತ್ತಿದ್ದನು. ಅನೇಕ ಮಂದಿ ಐಶ್ವರ್ಯವಂತರು ಹೆಚ್ಚೆಚ್ಚು ಹಣ ಹಾಕುತ್ತಿದ್ದರು.

[42] ಒಬ್ಬ ಬಡ ವಿಧವೆಯು ಬಂದು, ಎರಡು ಕಾಸು ಬೆಲೆಯುಳ್ಳ ಒಂದು ದುಗ್ಗಾಣಿ ಹಾಕಿದಳು.

[43] ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, “ಈ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದವರೆಲ್ಲರಿಗಿಂತಲೂ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.

[44] ಹೇಗೆಂದರೆ, ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು. ಆದರೆ ಈ ವಿಧವೆಯೋ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಎಂದರೆ, ತನ್ನ ಜೀವನಕ್ಕೆ ಆಧಾರವಾಗಿದ್ದ ಎಲ್ಲವನ್ನೂ ಕಾಣಿಕೆಯಾಗಿ ಹಾಕಿದ್ದಾಳೆ” ಎಂದನು.

ಮಾರ್ಕನು — Chapters