[1] ಆ ದಿನಗಳಲ್ಲಿ ಜನರು ಪುನಃ ದೊಡ್ಡಗುಂಪಾಗಿ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಆಹಾರವಿರಲಿಲ್ಲ. ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು,
[2] “ಈ ಜನರನ್ನು ನೋಡಿ ಕನಿಕರಪಡುತ್ತೇನೆ, ಏಕೆಂದರೆ ಮೂರು ದಿನಗಳಿಂದ ಇವರು ನನ್ನ ಬಳಿಯಲ್ಲಿದ್ದಾರೆ; ಇವರಿಗೆ ಊಟಕ್ಕೆ ಏನೂ ಇಲ್ಲ.
[3] ಇವರನ್ನು ಹಸಿವೆಯಿಂದ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರಲ್ಲಾ” ಎಂದು ಅವರಿಗೆ ಹೇಳಿದನು.
[4] ಅದಕ್ಕೆ ಶಿಷ್ಯರು, “ಈ ಅಡವಿಯಲ್ಲಿ ಸಾಕಷ್ಟು ರೊಟ್ಟಿಯನ್ನು ಎಲ್ಲಿಂದ ತಂದು ಈ ಜನರನ್ನು ತೃಪ್ತಿಪಡಿಸುವುದಕ್ಕಾದೀತು?” ಅಂದರು.
[5] ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಅವರನ್ನು ಕೇಳಿದ್ದಕ್ಕೆ ಅವರು, “ಏಳು ರೊಟ್ಟಿಗಳು ಇವೆ” ಅಂದರು.
[6] ಆಗ ಯೇಸು ಜನರ ಗುಂಪಿಗೆ, ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟು, ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಮಾಡಿ ಅವುಗಳನ್ನು ಮುರಿದು ಜನರಿಗೆ ಹಂಚಲು ತನ್ನ ಶಿಷ್ಯರ ಕೈಗೆ ಕೊಟ್ಟನು; ಅವರು ಗುಂಪಿನವರಿಗೆ ಹಂಚಿಕೊಟ್ಟರು.
[7] ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು; ಆತನು ಅವುಗಳಿಗಾಗಿ ದೇವರಿಗೆ ಸ್ತೋತ್ರಮಾಡಿ, ಇವುಗಳನ್ನೂ ಹಂಚಿಕೊಡಿರಿ ಎಂದು ಶಿಷ್ಯರಿಗೆ ಅಪ್ಪಣೆ ಕೊಟ್ಟನು.
[8] ಜನರು ತಿಂದು ತೃಪ್ತರಾದರು. ಉಳಿದ ತುಂಡುಗಳನ್ನು ಒಟ್ಟುಗೂಡಿಸಲಾಗಿ ಏಳು ಬುಟ್ಟಿಗಳು ತುಂಬಿದವು.
[9] ಊಟಮಾಡಿದವರು ಹೆಚ್ಚುಕಡಿಮೆ ನಾಲ್ಕು ಸಾವಿರ ಗಂಡಸರಿದ್ದರು.
[10] ಆತನು ಅವರನ್ನು ಕಳುಹಿಸಿದ ನಂತರ ಕೂಡಲೆ ತನ್ನ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿ ದಲ್ಮನೂಥ ಸೀಮೆಗೆ ಬಂದನು.
[11] ತರುವಾಯ ಫರಿಸಾಯರು ಯೇಸುವಿನ ಬಳಿಗೆ ಬಂದು, ಆತನ ಕೂಡ ತರ್ಕಮಾಡಿ, ಆತನನ್ನು ಪರೀಕ್ಷಿಸುವ ಉದ್ದೇಶದಿಂದ, “ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಮಾಡಿ ತೋರಿಸು” ಎಂದು ಕೇಳಿದರು.
[12] ಯೇಸು ಅದನ್ನು ಕೇಳಿ ತನ್ನ ಆತ್ಮದಲ್ಲಿ ನಿಟ್ಟುಸಿರುಬಿಟ್ಟು, “ಈ ಸಂತತಿಯು ಸೂಚಕಕಾರ್ಯವನ್ನು ಅಪೇಕ್ಷಿಸುವುದು ಏಕೆ? ನಿಮಗೆ ನಾನು ಸತ್ಯವಾಗಿ ಹೇಳುತ್ತೇನೆ, ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲ್ಪಡುವುದಿಲ್ಲ, ಇದು ಖಂಡಿತ” ಎಂದು ಹೇಳಿದನು.
[13] ಅವರನ್ನು ಬಿಟ್ಟು ತಿರುಗಿ ದೋಣಿಯನ್ನು ಹತ್ತಿ ಆಚೇದಡಕ್ಕೆ ಹೋದನು.
[14] ಆದರೆ ಶಿಷ್ಯರು ರೊಟ್ಟಿಯನ್ನು ತೆಗೆದುಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಅವರ ಹತ್ತಿರ ಒಂದು ರೊಟ್ಟಿ ಮಾತ್ರ ಇತ್ತು; ಬೇರೆ ಏನೂ ಇರಲಿಲ್ಲ.
[15] ಯೇಸು ಅವರಿಗೆ, “ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ನೀವು ಜಾಗರೂಕತೆಯಿಂದಿರಿ” ಎಂದು ಎಚ್ಚರಿಸಿದನು.
[16] ಅವರು, “ನಮ್ಮಲ್ಲಿ ರೊಟ್ಟಿ ಇಲ್ಲದಿರುವುದರಿಂದಲೇ ಹೀಗೆ ಹೇಳುತ್ತಿರಬೇಕು” ಎಂದು ತಮ್ಮೊಳಗೆ ಚರ್ಚಿಸಿಕೊಂಡರು.
[17] ಆತನು ಅದನ್ನು ತಿಳಿದು, “ರೊಟ್ಟಿಯಿಲ್ಲವಲ್ಲಾ ಎಂದು ನಿಮ್ಮೊಳಗೆ ಚರ್ಚಿಸಿಕೊಳ್ಳುವುದೇಕೆ? ನೀವು ಇನ್ನೂ ಗ್ರಹಿಸಲಿಲ್ಲವೋ? ನಿಮಗೆ ತಿಳಿವಳಿಕೆ ಬರಲಿಲ್ಲವೋ? ನಿಮ್ಮ ಮನಸ್ಸು ಅಷ್ಟು ಕಠಿಣವಾಗಿದೆಯೋ?
[18] ಕಣ್ಣಿದ್ದು ಕಾಣುವುದಿಲ್ಲವೋ? ಕಿವಿಯಿದ್ದು ಕೇಳುವುದಿಲ್ಲವೋ? ನಿಮಗೆ ನೆನಪಿಲ್ಲವೋ?
[19] ನಾನು ಆ ಐದು ರೊಟ್ಟಿಗಳನ್ನು ಮುರಿದು ಐದು ಸಾವಿರ ಜನರಿಗೆ ಹಂಚಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ತೆಗೆದುಕೊಂಡು ಹೋದಿರಿ?” ಎಂದು ಕೇಳಿದನು. ಅವರು, “ಹನ್ನೆರಡು ಬುಟ್ಟಿಗಳು” ಅಂದರು.
[20] “ಮತ್ತು ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದು ಹಂಚಿಸಿದ ನಂತರ ಎಷ್ಟು ಪುಟ್ಟಿಗಳನ್ನು ತೆಗೆದುಕೊಂಡು ಹೋದಿರಿ” ಎಂದು ಕೇಳಿದನು. ಅವರು, “ಏಳು ಪುಟ್ಟಿಗಳು” ಅಂದರು.
[21] ಆಗ ಆತನು ಅವರಿಗೆ, “ನೀವು ಇನ್ನೂ ಗ್ರಹಿಸಲಿಲ್ಲವೋ?” ಎಂದು ಕೇಳಿದನು.
[22] ಮತ್ತು ಅವರು ಬೇತ್ಸಾಯಿದ ಊರಿಗೆ ಬಂದರು. ಅಲ್ಲಿ ಜನರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದು, ಇವನನ್ನು ಮುಟ್ಟಬೇಕು ಎಂದು ಆತನನ್ನು ಬೇಡಿಕೊಂಡರು.
[23] ಆತನು ಕುರುಡನ ಕೈ ಹಿಡಿದು ಊರ ಹೊರಗೆ ಕರೆದುಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳು ಹಚ್ಚಿ, ಅವನ ಮೇಲೆ ತನ್ನ ಕೈಗಳನ್ನಿಟ್ಟು, “ನಿನಗೆ ಏನಾದರೂ ಕಾಣುತ್ತದೆಯೋ?” ಎಂದು ಅವನನ್ನು ಕೇಳಿದನು.
[24] ಅವನು ತಲೆಯೆತ್ತಿ ನೋಡಿ, “ನನಗೆ ಜನರು ಕಾಣುತ್ತಾರೆ; ಆದರೆ ಅವರು ನಡೆದಾಡುವ ಮರಗಳಂತೆ ಕಾಣಿಸುತ್ತಿದ್ದಾರೆ” ಎಂದನು.
[25] ತನ್ನ ಕೈಗಳನ್ನು ಪುನಃ ಅವನ ಕಣ್ಣುಗಳ ಮೇಲಿಟ್ಟನು; ಆಗ ಅವನು ಕಣ್ಣರಳಿಸಿ ನೋಡಿ ಪೂರ್ಣ ದೃಷ್ಟಿಯನ್ನು ಹೊಂದಿದನು. ಅವನು ನೋಡಲು ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು.
[26] ತರುವಾಯ ಆತನು, “ನೀನು ಊರೊಳಗೆ ಹೋಗಬೇಡ” ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿಬಿಟ್ಟನು.
[27] ಯೇಸುವೂ ಆತನ ಶಿಷ್ಯರೂ ಫಿಲಿಪ್ಪನ ಕೈಸರೈಯ ಎಂಬ ಪಟ್ಟಣಕ್ಕೆ ಸೇರಿದ ಗ್ರಾಮಗಳಿಗೆ ಹೊರಟರು. ದಾರಿಯಲ್ಲಿ ಆತನು, “ಜನರು ನನ್ನನ್ನು ಯಾರೆಂದು ಹೇಳುತ್ತಾರೆ?” ಎಂದು ತನ್ನ ಶಿಷ್ಯರನ್ನು ಕೇಳಿದನು.
[28] ಅದಕ್ಕೆ ಅವರು, “ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ; ಕೆಲವರು ಎಲೀಯನು ಅನ್ನುತ್ತಾರೆ; ಇನ್ನು ಕೆಲವರು ಪ್ರವಾದಿಗಳಲ್ಲಿ ಒಬ್ಬನು ಅನ್ನುತ್ತಾರೆ” ಎಂದು ಹೇಳಿದರು.
[29] ಆತನು ಅವರನ್ನು, ಕುರಿತು “ನೀವು ನನ್ನನ್ನು ಯಾರನ್ನುತ್ತೀರಿ?” ಎಂದು ಕೇಳಲಾಗಿ ಪೇತ್ರನು, “ನೀನು ಕ್ರಿಸ್ತನು” ಎಂದು ಉತ್ತರಕೊಟ್ಟನು.
[30] ಅದಕ್ಕೆ ಆತನು, “ನನ್ನ ವಿಷಯವಾಗಿ ಯಾರಿಗೂ ಹೇಳಬೇಡಿರಿ” ಎಂದು ಅವರಿಗೆ ಖಂಡಿತವಾಗಿ ಎಚ್ಚರಿಸಿದನು.
[31] ಇದಲ್ಲದೆ ಆತನು, ಮನುಷ್ಯಕುಮಾರನು ಬಹು ಕಷ್ಟಗಳನ್ನು ಅನುಭವಿಸಿ ಹಿರಿಯರಿಂದಲೂ, ಮುಖ್ಯಯಾಜಕರಿಂದಲೂ, ಶಾಸ್ತ್ರಿಗಳಿಂದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರು ದಿನಗಳ ನಂತರ ಜೀವಿತನಾಗಿ ಎದ್ದು ಬರಬೇಕಾಗಿದೆ ಎಂದು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದನು.
[32] ಆತನು ಈ ಮಾತನ್ನು ಸ್ಪಷ್ಟವಾಗಿ ಹೇಳಿದನು. ಆಗ ಪೇತ್ರನು ಆತನನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ “ನೀನು ಹೀಗೆ ಹೇಳುವುದು ಸರಿಯಲ್ಲ” ಎಂದು ಗದರಿಸಿದನು.
[33] ಆದರೆ ಯೇಸು ಹಿಂತಿರುಗಿ ತನ್ನ ಶಿಷ್ಯರನ್ನು ನೋಡಿ ಪೇತ್ರನನ್ನು ಗದರಿಸಿ, “ಸೈತಾನನೇ, ನನ್ನನ್ನು ಬಿಟ್ಟು ತೊಲಗಿ ಹೋಗು! ನಿನ್ನ ಯೋಚನೆ ಮನುಷ್ಯರದಾಗಿದೆಯೇ ಹೊರತು ದೇವರದಲ್ಲ” ಎಂದು ಹೇಳಿದನು.
[34] ಆ ಮೇಲೆ ಆತನು ತನ್ನ ಶಿಷ್ಯರ ಜೊತೆಗೆ ಜನರ ಗುಂಪನ್ನೂ ಹತ್ತಿರ ಕರೆದು ಅವರಿಗೆ ಹೇಳಿದ್ದೇನಂದರೆ, “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
[35] ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿಯೂ, ಸುವಾರ್ತೆಯ ನಿಮಿತ್ತವಾಗಿಯೂ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು.
[36] ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನ ಸ್ವಂತ ಪ್ರಾಣವನ್ನೇ ನಷ್ಟಪಡಿಸಿಕೊಂಡರೆ ಅವನಿಗೆ ಲಾಭವೇನು?
[37] ಒಬ್ಬನು ತನ್ನ ಪ್ರಾಣಕ್ಕೆ ಬದಲಾಗಿ ಏನು ಈಡು ಕೊಡಲಾದೀತು?
[38] ವ್ಯಭಿಚಾರಿಣಿಯಂತಿರುವ ಈ ಪಾಪಿಷ್ಠ ಪೀಳಿಗೆಯವರಲ್ಲಿ ಯಾರು ನನ್ನನ್ನೂ, ನನ್ನ ಮಾತುಗಳನ್ನೂ ಕುರಿತು ನಾಚಿಕೆಪಡುವರೋ, ಅಂಥವರನ್ನು ಕುರಿತು ಮನುಷ್ಯಕುಮಾರನು, ತಾನು ತನ್ನ ತಂದೆಯ ಪ್ರಭಾವದೊಡನೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವಾಗ, ನಾಚಿಕೆಪಡುವನು” ಎಂದನು.