Skip to content
Opens in a new window
Listen to this chapter • 7:30

[1] ತರುವಾಯ ಯೆರೂಸಲೇಮಿನಿಂದ ಬಂದಿದ್ದ ಫರಿಸಾಯರೂ ಶಾಸ್ತ್ರಿಗಳಲ್ಲಿ ಕೆಲವರೂ ಯೇಸುವಿನ ಬಳಿಗೆ ಕೂಡಿ ಬಂದರು.

[2] ಆಗ ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ ಅಂದರೆ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಕಂಡರು.

[3] ಫರಿಸಾಯರೂ ಯೆಹೂದ್ಯರೆಲ್ಲರೂ ಹಿರಿಯರಿಂದ ಬಂದ ಪದ್ಧತಿಯಂತೆ ತಮ್ಮ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ.

[4] ಮತ್ತು ಸಂತೆಗೆ ಹೋಗಿ ಬಂದರೆ ನೀರನ್ನು ಪ್ರೋಕ್ಷಿಸಿಕೊಳ್ಳದೆ ಇರುತ್ತಿರಲಿಲ್ಲ. ಬಹು ಸ್ವಚ್ಛವಾಗಿ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದುವು.

[5] ಆದುದರಿಂದ ಫರಿಸಾಯರೂ ಶಾಸ್ತ್ರಿಗಳೂ ಯೇಸುವನ್ನು, “ನಿನ್ನ ಶಿಷ್ಯರು ಹಿರಿಯರ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ಧವಾದ ಕೈಗಳಿಂದಲೇ ಅವರು ಊಟಮಾಡುತ್ತಿದ್ದಾರಲ್ಲಾ?” ಎಂದು ಕೇಳಿದರು.

[6] ಅದಕ್ಕೆ ಆತನು, “ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ಸರಿಯಾಗಿ ಪ್ರವಾದಿಸಿದ್ದಾನೆ; ಅವನು ಬರೆದಿರುವಂತೆ: “‘ಈ ಜನರು ಮಾತಿನಿಂದ ನನ್ನನ್ನು ಗೌರವಿಸುತ್ತಾರೆ, ಆದರೆ ಅವರ ಹೃದಯ ನನ್ನಿಂದ ದೂರವಾಗಿದೆ.

[7] ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಉಪದೇಶವನ್ನಾಗಿ ಅವರು ಬೋಧಿಸುವುದರಿಂದ ನನಗೆ ಆರಾಧನೆ ಮಾಡುವುದು ವ್ಯರ್ಥ’ ಎಂಬುದೇ.

[8] ನೀವು ದೇವರ ಆಜ್ಞೆಯನ್ನು ಬಿಟ್ಟು ಮನುಷ್ಯರು ನೇಮಿಸಿದ ಸಂಪ್ರದಾಯಗಳನ್ನು ಬಿಡದೆ ಹಿಡಿದುಕೊಂಡಿದ್ದೀರಿ” ಎಂದು ಹೇಳಿದನು.

[9] ಆತನು ಇನ್ನೂ ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಬಹು ಜಾಣತನದಿಂದ ದೇವರ ಆಜ್ಞೆಯನ್ನು ನಿರ್ಲಕ್ಷಿಸುತ್ತೀರಿ;

[10] ‘ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’ ಮತ್ತು ‘ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಬೇಕೆಂತಲೂ’ ಮೋಶೆಯು ಹೇಳಿದ್ದಾನೆ.

[11] ನೀವಾದರೋ ‘ಒಬ್ಬನು ತನ್ನ ತಂದೆಯನ್ನಾಗಲಿ, ತಾಯಿಯನ್ನಾಗಲಿ ನೋಡಿ, ನಾನು ನಿನ್ನ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ಕೊರ್ಬಾನ್ (ಅಂದರೆ ದೇವರಿಗೆ ಮುಡಿಪು) ಮಾಡಿದ್ದೇನೆ’ ಎಂದು ಹೇಳುವುದಾದರೆ

[12] ಅವನು ತನ್ನ ತಂದೆಗಾಗಲಿ, ತಾಯಿಗಾಗಲಿ ಇನ್ನೇನೂ ಸಹಾಯ ಮಾಡಬೇಕಾಗಿಲ್ಲ ಎಂದು ಹೇಳುತ್ತೀರಿ.

[13] ಹೀಗೆ ನೀವು ಕಲಿಸುತ್ತಾ ಬಂದಿರುವ ಸಂಪ್ರದಾಯದಿಂದ ದೇವರ ವಾಕ್ಯವನ್ನು ನಿರರ್ಥಕಮಾಡುತ್ತಿದ್ದೀರಿ, ಮತ್ತು ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ” ಎಂದು ಹೇಳಿದನು.

[14] ಆ ಮೇಲೆ ಯೇಸು ಜನರ ಗುಂಪನ್ನು ಪುನಃ ಹತ್ತಿರಕ್ಕೆ ಕರೆದು, “ಎಲ್ಲರೂ ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ ಮತ್ತು ಅರ್ಥ ಮಾಡಿಕೊಳ್ಳಿರಿ.

[15] ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದು ಅವನನ್ನು ಮೈಲಿಗೆ ಮಾಡುವುದಿಲ್ಲ; ಆದರೆ ಮನುಷ್ಯನೊಳಗಿನಿಂದ ಹೊರಗೆ ಬರುವಂಥದು ಮನುಷ್ಯನನ್ನು ಮೈಲಿಗೆ ಮಾಡುವಂಥವುಗಳಾಗಿವೆ” ಎಂದು ಹೇಳಿದನು.

[16] “ಯಾರಿಗಾದರೂ ಕೇಳುವುದಕ್ಕೆ ಕಿವಿಯಿದ್ದರೆ ಕೇಳಲಿ” ಅಂದನು.

[17] ತರುವಾಯ ಆತನು ಜನರನ್ನು ಬಿಟ್ಟು ಮನೆಯೊಳಗೆ ಹೋದಾಗ ಆತನ ಶಿಷ್ಯರು ಆ ಸಾಮ್ಯದ ಅರ್ಥವೇನೆಂದು ಆತನನ್ನು ಕೇಳಲು

[18] ಆತನು ಅವರಿಗೆ, “ನಿಮಗೆ ಇನ್ನೂ ತಿಳಿವಳಿಕೆಯಿಲ್ಲವೇ? ಹೊರಗಿನಿಂದ ಮನುಷ್ಯನೊಳಗೆ ಹೋಗುವಂಥದು,

[19] ಅವನ ಹೃದಯದೊಳಕ್ಕೆ ಸೇರದೆ ಹೊಟ್ಟೆಯಲ್ಲಿ ಸೇರಿ, ಬಳಿಕ ಹೊರಗೆ ವಿಸರ್ಜಿಸಲ್ಪಡುತ್ತದೆ. ಅವು ಅವನನ್ನು ಅಶುದ್ಧ ಮಾಡಲಾರದೆಂದು ನಿಮಗೆ ಅರ್ಥವಾಗುವುದಿಲ್ಲವೋ?” ಎಂದು ಹೇಳಿದನು. ಹೀಗೆ ಹೇಳಿದ್ದರಿಂದ ಆಹಾರ ಪದಾರ್ಥಗಳೆಲ್ಲಾ ಶುದ್ಧವೆಂದು ಯೇಸು ಸೂಚಿಸಿದನು.

[20] ಆತನು ಮತ್ತೆ ಹೇಳಿದ್ದೇನೆಂದರೆ, “ಆದರೆ ಮನುಷ್ಯನ ಅಂತರಂಗದಿಂದ ಹೊರಹೊಮ್ಮುವಂಥವುಗಳೇ ಅವನನ್ನು ಅಶುದ್ಧಗೊಳಿಸುತ್ತವೆ;

[21] ಒಳಗಿನಿಂದ ಅಂದರೆ ಮನುಷ್ಯರ ಹೃದಯದೊಳಗಿನಿಂದ ಬರುವ ದುರಾಲೋಚನೆಗಳು, ಹಾದರ, ಕಳ್ಳತನ, ಕೊಲೆ,

[22] ವ್ಯಭಿಚಾರ, ದುರಾಶೆ, ಕೆಡುಕುತನ, ಮೋಸ, ಕಾಮಾಭಿಲಾಷೆ, ಹೊಟ್ಟೆಕಿಚ್ಚು, ಅಪನಿಂದೆ, ಗರ್ವ, ಬುದ್ಧಿಗೇಡಿತನ ಇವೇ ಮೊದಲಾದವುಗಳು ಹೊರಡುತ್ತವೆ.

[23] ಈ ಎಲ್ಲಾ ಕೆಡುಕುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ ಅವನನ್ನು ಅಶುದ್ಧ ಮಾಡುತ್ತವೆ.”

[24] ಯೇಸು ಅಲ್ಲಿಂದ ಹೊರಟು ತೂರ್ ಪಟ್ಟಣದ ಪ್ರಾಂತ್ಯಗಳಿಗೆ ಹೋಗಿ ಒಂದು ಮನೆಯೊಳಗೆ ಇಳಿದುಕೊಂಡು ಅದು ಯಾರಿಗೂ ತಿಳಿಯಬಾರದೆಂದು ಬಯಸಿದನು; ಆದರೆ ಆತನು ಗುಪ್ತವಾಗಿರುವುದಕ್ಕೆ ಸಾಧ್ಯವಾಗದೆ ಹೋಯಿತು.

[25] ಕೂಡಲೆ ಒಬ್ಬ ಹೆಂಗಸು ಆತನ ಸುದ್ದಿಯನ್ನು ಕೇಳಿ ಬಂದು ಆತನ ಪಾದಕ್ಕೆ ಬಿದ್ದಳು. ಆಕೆಯ ಮಗಳಿಗೆ ದೆವ್ವ ಹಿಡಿದಿತ್ತು.

[26] ಆ ಹೆಂಗಸು ಸುರೋಪೊಯಿನಿಕ್ಯದಲ್ಲಿ ಹುಟ್ಟಿದ ಗ್ರೀಕಳಾಗಿದ್ದಳು. ಆಕೆಯು ತನ್ನ ಮಗಳಿಗೆ ಹಿಡಿದಿದ್ದ ದೆವ್ವವನ್ನು ಬಿಡಿಸಬೇಕೆಂದು ಆತನನ್ನು ಬೇಡಿಕೊಂಡಾಗ,

[27] ಆತನು ಆಕೆಗೆ, “ಮೊದಲು ಮಕ್ಕಳು ತಿಂದು ತೃಪ್ತಿಯಾಗಲಿ; ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದು ಹೇಳಿದನು.

[28] ಆದರೆ ಅದಕ್ಕೆ ಆಕೆಯು, “ಹೌದು ಕರ್ತನೇ, ಮೇಜಿನ ಕೆಳಗಿರುವ ನಾಯಿಮರಿಗಳಂತೂ ಮಕ್ಕಳ ಕೈಯಿಂದ ಬೀಳುವ ರೊಟ್ಟೀತುಂಡುಗಳನ್ನು ತಿನ್ನುತ್ತವಲ್ಲಾ” ಎಂದು ಉತ್ತರಕೊಡಲು

[29] ಆತನು, “ಆಕೆಗೆ ನೀನು ಕೊಟ್ಟಿರುವ ಈ ಉತ್ತರದ ನಿಮಿತ್ತ ದೆವ್ವವು ನಿನ್ನ ಮಗಳನ್ನು ಬಿಟ್ಟು ಹೋಗಿದೆ, ನೀನು ಹೋಗು” ಅಂದನು.

[30] ಆಕೆಯು ತನ್ನ ಮನೆಗೆ ಹೋಗಿ ನೋಡಲಾಗಿ ಆ ಹುಡುಗಿಯು ಹಾಸಿಗೆಯ ಮೇಲೆ ಮಲಗಿದ್ದಳು; ದೆವ್ವ ಅವಳನ್ನು ಬಿಟ್ಟು ಹೋಗಿತ್ತು.

[31] ಅನಂತರ ಆತನು ತೂರ್ ಪಟ್ಟಣದ ಪ್ರಾಂತ್ಯಗಳನ್ನು ಬಿಟ್ಟು ಸೀದೋನ್ ಪಟ್ಟಣದ ಮಾರ್ಗವಾಗಿ ದೆಕಪೊಲಿಯ ಪ್ರಾಂತ್ಯಗಳನ್ನು ಹಾದು ಗಲಿಲಾಯ ಸಮುದ್ರದ ದಡಕ್ಕೆ ಬಂದನು.

[32] ಆಗ ಕೆಲವರು ತೊದಲು ಮಾತನಾಡುವ ಒಬ್ಬ ಕಿವುಡನನ್ನು ಆತನ ಬಳಿಗೆ ಕರೆದುಕೊಂಡು ಬಂದು, ಇವನ ಮೇಲೆ ನಿನ್ನ ಕೈಯಿಡಬೇಕು ಎಂದು ಆತನನ್ನು ಬೇಡಿಕೊಂಡರು.

[33] ಆತನು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ, ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿ ಇಟ್ಟನು ಮತ್ತು ಉಗುಳಿ ನಂತರ ಅವನ ನಾಲಿಗೆಯನ್ನು ಮುಟ್ಟಿ,

[34] ಆಕಾಶದ ಕಡೆಗೆ ನೋಡಿ ದೀರ್ಘವಾಗಿ ನಿಟ್ಟುಸಿರುಬಿಟ್ಟು ಅವನಿಗೆ, “ಎಪ್ಫಥಾ” ಎಂದು ಹೇಳಿದನು. ಆ ಶಬ್ದಕ್ಕೆ “ತೆರೆಯಲಿ” ಎಂದರ್ಥ.

[35] ಹೇಳುತ್ತಲೇ ಅವನ ಕಿವಿಗಳು ತೆರೆದವು; ಅವನ ನಾಲಿಗೆಯು ಸಡಿಲವಾಯಿತು; ಅವನು ಸ್ಪಷ್ಟವಾಗಿ ಮಾತನಾಡಿದನು.

[36] ಆಗ ಆತನು, ಇದನ್ನು ಯಾರಿಗೂ ತಿಳಿಸಬಾರದೆಂದು ಅವರಿಗೆ ಕಟ್ಟಪ್ಪಣೆ ಮಾಡಿದನು. ಆದರೆ ಎಷ್ಟು ಹೇಳಿದರೂ ಕೇಳದೆ ಅವರು ಮತ್ತಷ್ಟು ಹೆಚ್ಚಾಗಿ ಅದನ್ನು ಪ್ರಚಾರ ಮಾಡಿದರು.

[37] ಅವರು ಅತ್ಯಂತ ಆಶ್ಚರ್ಯಪಟ್ಟು, “ಆತನು ಎಲ್ಲವನ್ನು ಚೆನ್ನಾಗಿ ಮಾಡಿದ್ದಾನೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾನೆ” ಎಂದು ಅಂದುಕೊಂಡರು.

ಮಾರ್ಕನು — Chapters