[1] ಇನ್ನೊಂದು ಸಾರಿ ಯೇಸು ಸಭಾಮಂದಿರಕ್ಕೆ ಹೋದಾಗ ಅಲ್ಲಿ ಕೈ ಬತ್ತಿಹೋದ ಮನುಷ್ಯನೊಬ್ಬನಿದ್ದನು.
[2] ಕೆಲವರು ಯೇಸುವಿನ ಮೇಲೆ ತಪ್ಪುಹೊರಿಸುವುದಕ್ಕೆ, ಸಬ್ಬತ್ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೋ ಏನೋ ಎಂದು ಆತನನ್ನು ಹೊಂಚುಹಾಕಿ ನೋಡುತ್ತಾ ಇದ್ದರು.
[3] ಆತನು ಕೈಬತ್ತಿದ್ದವನಿಗೆ, “ಎದ್ದು ನಡುವೆ ನಿಂತುಕೋ” ಎಂದು ಹೇಳಿದನು.
[4] ಆಗ ಅವರಿಗೆ, “ಸಬ್ಬತ್ ದಿನದಲ್ಲಿ ಧರ್ಮಸಮ್ಮತವಾದದು ಯಾವುದು? ಮೇಲನ್ನು ಮಾಡುವುದೋ, ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ, ತೆಗೆಯುವುದೋ?” ಎಂದು ಹೇಳಲು ಅವರು ಸುಮ್ಮನಿದ್ದರು.
[5] ಆಗ ಯೇಸು ಅವರ ಹೃದಯ ಕಾಠಿಣ್ಯಕ್ಕಾಗಿ ದುಃಖಪಟ್ಟು, ಕೋಪದಿಂದ ಸುತ್ತಲೂ ಅವರನ್ನು ದೃಷ್ಟಿಸಿ ನೋಡಿ ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಲು ಅವನು ಕೈ ಚಾಚಿದನು; ಅವನ ಕೈ ವಾಸಿಯಾಯಿತು.
[6] ತಕ್ಷಣ ಫರಿಸಾಯರು ಹೊರಕ್ಕೆ ಹೋಗಿ ಹೆರೋದ್ಯರನ್ನು ಕೂಡಿಕೊಂಡು ಯಾವ ಉಪಾಯದಿಂದ ಯೇಸುವನ್ನು ಕೊಲ್ಲಬಹುದು ಎಂದು ಆತನಿಗೆ ವಿರೋಧವಾಗಿ ಒಳಸಂಚುಮಾಡಿದರು.
[7] ಆ ಮೇಲೆ ಯೇಸುವು ತನ್ನ ಶಿಷ್ಯರೊಂದಿಗೆ ಆ ಸ್ಥಳವನ್ನು ಬಿಟ್ಟು ಸಮುದ್ರದ ಬಳಿಗೆ ಹೋದನು. ಗಲಿಲಾಯದಿಂದ ಬಹು ಜನರ ಗುಂಪು ಆತನನ್ನು ಹಿಂಬಾಲಿಸಿತು.
[8] ಇದಲ್ಲದೆ ಆತನು ಇಂಥಿಂಥ ಕೆಲಸಗಳನ್ನು ಮಾಡುತ್ತಾನೆಂದು ಕೇಳಿ ಬಹುಜನರು ಯೂದಾಯದಿಂದಲೂ, ಯೆರೂಸಲೇಮಿನಿಂದಲೂ, ಇದೂಮಾಯದಿಂದಲೂ, ಯೊರ್ದನ್ ಹೊಳೆಯ ಆಚೆಯಿಂದಲೂ, ತೂರ್, ಸೀದೋನ್ ಪಟ್ಟಣಗಳ ಸುತ್ತಲಿನಿಂದಲೂ ಆತನ ಬಳಿಗೆ ಬಂದರು.
[9] ಜನರ ಗುಂಪು ಅಧಿಕವಾಗಿದ್ದುದರಿಂದ ಅವರು ತನ್ನ ಮೈಮೇಲೆ ಬಿದ್ದು ನೂಕದಂತೆ ಯೇಸು ತನಗೆ ಒಂದು ದೋಣಿಯನ್ನು ಸಿದ್ಧಮಾಡಲು ಶಿಷ್ಯರಿಗೆ ಹೇಳಿದನು.
[10] ಏಕೆಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದರಿಂದ ರೋಗಪೀಡಿತರಾಗಿದ್ದವರೆಲ್ಲರೂ ಯೇಸುವನ್ನು ಮುಟ್ಟಬೇಕೆಂದು ಮೇಲೆ ಬೀಳುತ್ತಿದ್ದರು.
[11] ಮತ್ತು ದೆವ್ವಗಳು ಆತನನ್ನು ಕಂಡಾಗಲ್ಲೆಲ್ಲಾ ಆತನ ಪಾದಕ್ಕೆ ಬಿದ್ದು “ನೀನು ದೇವಕುಮಾರನು” ಎಂದು ಕೂಗುತ್ತಿದ್ದವು.
[12] ಆದರೆ ಆತನು ತಾನು ಇಂಥವನೆಂಬುದಾಗಿ ಯಾರಿಗೂ ಪ್ರಕಟಿಸಬಾರದೆಂದು ಅವರಿಗೆ ಬಹು ಖಂಡಿತವಾಗಿ ಆಜ್ಞಾಪಿಸಿದನು.
[13] ಆ ಮೇಲೆ ಯೇಸು ಬೆಟ್ಟವನ್ನು ಹತ್ತಿ ತನಗೆ ಬೇಕಾದವರನ್ನು ಹತ್ತಿರಕ್ಕೆ ಕರೆಯಲು ಅವರು ಆತನ ಬಳಿಗೆ ಬಂದರು.
[14] ಆತನು ಅಪೊಸ್ತಲರೆಂದು ಹೆಸರಿಟ್ಟಂಥ ಹನ್ನೆರಡು ಮಂದಿಯನ್ನು ತನ್ನ ಸಂಗಡ ಇರಬೇಕೆಂತಲೂ, ಸುವಾರ್ತೆಯನ್ನು ಸಾರುವುದಕ್ಕೆ ಅವರನ್ನು ಕಳುಹಿಸಬೇಕೆಂತಲೂ,
[15] ದೆವ್ವಗಳನ್ನು ಬಿಡಿಸುವ ಅಧಿಕಾರ ಉಳ್ಳವರಾಗಿರಬೇಕೆಂತಲೂ ನೇಮಿಸಿದನು.
[16] ಯೇಸುವಿನಿಂದ ನೇಮಿಸಲ್ಪಟ್ಟ ಹನ್ನೆರಡು ಮಂದಿ ಇವರೇ: ಸೀಮೋನನೆಂಬವನಿಗೆ ಪೇತ್ರನೆಂದು ಹೆಸರಿಟ್ಟನು.
[17] ಜೆಬೆದಾಯನ ಮಗನಾದ ಯಾಕೋಬನಿಗೂ ಯಾಕೋಬನ ತಮ್ಮನಾದ ಯೋಹಾನನಿಗೂ ಬೊವನೆರ್ಗೆಸ್ ಅಂದರೆ ಸಿಡಿಲ ಮರಿಗಳು ಎಂದು ಹೆಸರಿಟ್ಟನು.
[18] ಅಂದ್ರೆಯ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ಮತಾಭಿಮಾನಿ ಎಂದು ಹೆಸರುಗೊಂಡ ಸೀಮೋನ,
[19] ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ.
[20] ಆತನು ಮನೆಯೊಳಗೆ ಬಂದಾಗ ಅಲ್ಲಿ ಬಹಳ ಜನರು ಸೇರಿಬಂದದ್ದರಿಂದ ಊಟ ಮಾಡಲು ಕೂಡ ಆಗಲಿಲ್ಲ.
[21] ಇದನ್ನು ಕೇಳಿ ಆತನ ಬಂಧುಗಳು “ಅವನಿಗೆ ಹುಚ್ಚುಹಿಡಿದಿದೆ” ಎಂದು ಹೇಳಿ ಆತನನ್ನು ಹಿಡಿಯುವುದಕ್ಕೆ ಹೊರಟರು.
[22] ಇದಲ್ಲದೆ ಯೆರೂಸಲೇಮಿನಿಂದ ಬಂದಿದ್ದ ಶಾಸ್ತ್ರಿಗಳು, “ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆಂತಲೂ ಇವನು ದೆವ್ವಗಳ ಒಡೆಯನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಂತಲೂ” ಹೇಳುತ್ತಿದ್ದರು.
[23] ಆತನು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ ಸಾಮ್ಯರೂಪವಾಗಿ ಹೇಳಿದ್ದೇನಂದರೆ, “ಸೈತಾನನು ಸೈತಾನನನ್ನು ಬಿಡಿಸುವುದುಂಟೇ?
[24] ಯಾವುದೇ ಒಂದು ರಾಜ್ಯವು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ರಾಜ್ಯವು ಉಳಿಯದು;
[25] ಹಾಗೆಯೇ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ಮನೆಯು ಉಳಿಯದು.
[26] ಅದರಂತೆ ಸೈತಾನನು ತನಗೆ ವಿರೋಧವಾಗಿ ಎದ್ದು ತನ್ನಲ್ಲಿ ವಿಭಾಗಿಸಲ್ಪಟ್ಟರೆ ಅವನು ಉಳಿಯದೆ ನಾಶವಾಗಿ ಹೋಗುವನು.
[27] ಅದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಯನ್ನು ನುಗ್ಗಿ ಅವನ ಆಸ್ತಿಯನ್ನು ಕದಿಯಲು ಸಾಧ್ಯವಿಲ್ಲ; ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಕೊಳ್ಳೆಹೊಡೆಯಬಹುದು.
[28] ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ದೂಷಣೆಗಳಿಗೂ ಕ್ಷಮಾಪಣೆ ಸಿಕ್ಕುವುದು.
[29] ಆದರೆ ಪವಿತ್ರಾತ್ಮನನ್ನು ದೂಷಿಸಿದವನು ಎಂದಿಗೂ ಕ್ಷಮಾಪಣೆ ಹೊಂದಲಾರನು; ಅವನು ಶಾಶ್ವತವಾದ ಪಾಪದೊಳಗೆ ಸೇರಿದವನಾದನು” ಎಂದು ಹೇಳಿದನು.
[30] ಅವರು “ಈತನಲ್ಲಿ ಅಶುದ್ಧಾತ್ಮವಿದೆ” ಎಂದು ಹೇಳುತ್ತಿದ್ದರಿಂದ ಯೇಸು ಇದನ್ನು ಹೇಳಿದನು.
[31] ಜನರು ಯೇಸುವಿನ ಸುತ್ತಲು ಕುಳಿತುಕೊಂಡಿದ್ದಾಗ ಆತನ ತಾಯಿಯೂ, ತಮ್ಮಂದಿರೂ ಬಂದು ಹೊರಗೆ ನಿಂತುಕೊಂಡು ಆತನನ್ನು ಕರೆಕಳುಹಿಸಿದರು.
[32] ಆ ಜನರು ಆತನಿಗೆ, “ನಿನ್ನ ತಾಯಿಯೂ, ನಿನ್ನ ತಮ್ಮಂದಿರೂ ನಿನ್ನನ್ನು ಹುಡುಕಿಕೊಂಡು ಬಂದು ಹೊರಗೆ ನಿಂತಿದ್ದಾರೆ ನೋಡು” ಎಂದು ಹೇಳಿದರು.
[33] ಅದಕ್ಕೆ ಆತನು ಅವರಿಗೆ, “ನನಗೆ ತಾಯಿಯೂ, ತಮ್ಮಂದಿರೂ ಯಾರು?” ಎಂದು ಹೇಳಿ ತನ್ನ ಸುತ್ತಲು ಕುಳಿತಿದ್ದವರನ್ನು ನೋಡಿ,
[34] “ಇಗೋ, ನನ್ನ ತಾಯಿ, ನನ್ನ ತಮ್ಮಂದಿರು.
[35] ದೇವರ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ, ತಂಗಿಯೂ, ತಾಯಿಯೂ ಆಗಿದ್ದಾರೆ” ಅಂದನು.