Skip to content
Opens in a new window
Listen to this chapter • 7:57

[1] ಆ ಮೇಲೆ ಅವರು ಸಮುದ್ರದ ಆಚೇದಡದಲ್ಲಿದ್ದ ಗೆರಸೇನರ ಸೀಮೆಗೆ ತಲುಪಿದರು.

[2] ಯೇಸು ದೋಣಿಯಿಂದ ಇಳಿದು ಬಂದ ಕೂಡಲೆ ದೆವ್ವ ಹಿಡಿದ ಒಬ್ಬ ಮನುಷ್ಯನು ಸಮಾಧಿಯ ಗವಿಗಳೊಳಗಿಂದ ಬಂದು ಆತನನ್ನು ಸಂಧಿಸಿದನು.

[3] ಅವನಿಗೆ ಸಮಾಧಿಯಲ್ಲಿನ ಗವಿಗಳೇ ವಾಸಸ್ಥಳವಾಗಿತ್ತು. ಅವನನ್ನು ಅನೇಕಸಾರಿ ಬೇಡಿಗಳಿಂದ ಮತ್ತು ಸರಪಣಿಗಳಿಂದ ಕಟ್ಟಿದ್ದರೂ ಅವನು ಸರಪಣಿಗಳನ್ನು ಕಿತ್ತು ಬೇಡಿಗಳನ್ನು ತುಂಡುತುಂಡು ಮಾಡುಬಿಡುತಿದ್ದನು; ಅವನನ್ನು ಯಾರೂ ಯಾವ ಸರಪಣಿಯಿಂದಲೂ ಕಟ್ಟಲಾರದೆ ಹೋದರು; ಅವನನ್ನು ಹತೋಟಿಗೆ ತರುವುದಕ್ಕೆ ಯಾರಿಂದಲೂ ಆಗಲಿಲ್ಲ.

[5] ಅವನು ರಾತ್ರಿ ಮತ್ತು ಹಗಲು ಸಮಾಧಿಯ ಗವಿಗಳಲ್ಲಿ ಮತ್ತು ಗುಡ್ಡಗಳ ಮೇಲೆ ಆರ್ಭಟಿಸುತ್ತಾ ಚೂಪಾದ ಕಲ್ಲುಗಳಿಂದ ತನ್ನನ್ನು ಗಾಯಮಾಡಿಕೊಳ್ಳುತ್ತಾ ಇದ್ದನು.

[6] ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು ಆತನಿಗೆ ಅಡ್ಡಬಿದ್ದು,

[7] ಮಹಾಶಬ್ದದಿಂದ ಆರ್ಭಟಿಸಿ, “ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದೇವರಾಣೆ ನನ್ನನ್ನು ಹಿಂಸಿಸಬೇಡ ಎಂದು ನಿನ್ನನ್ನು ನಾನು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು.

[8] ಏಕೆಂದರೆ ಯೇಸು, “ಅಶುದ್ಧಾತ್ಮವೇ ಇವನನ್ನು ಬಿಟ್ಟುಹೋಗು” ಎಂದು ಆಜ್ಞಾಪಿಸಿದ್ದನು.

[9] ಯೇಸು, “ನಿನ್ನ ಹೆಸರು ಏನೆಂದು” ಅವನನ್ನು ಕೇಳಿದ್ದಕ್ಕೆ ಅವನು, “ನನ್ನ ಹೆಸರು ದಂಡು; ಯಾಕೆಂದರೆ ನಾವು ಬಹು ಮಂದಿ ಇದ್ದೇವೆ” ಎಂದು ಹೇಳಿ,

[10] ನಮ್ಮನ್ನು ಈ ಪ್ರಾಂತ್ಯದಿಂದ ಹೊರಡಿಸಬೇಡ ಎಂದು ಆತನನ್ನು ಬಹಳವಾಗಿ ಬೇಡಿಕೊಂಡವು.

[11] ಅಲ್ಲಿಯ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು.

[12] ಆ ಅಶುದ್ಧಾತ್ಮಗಳು, “ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮ್ಮನ್ನು ಕಳುಹಿಸಿಕೊಡು” ಎಂದು ಆತನನ್ನು ಬೇಡಿಕೊಂಡವು.

[13] ಆತನು ಅವುಗಳಿಗೆ ಅನುಮತಿಸಲು ಆ ದೆವ್ವಗಳು ಆ ಮನುಷ್ಯನಿಂದ ಹೊರಗೆ ಬಂದು ಹಂದಿಗಳೊಳಗೆ ಪ್ರವೇಶಿಸಿದವು; ಅಲ್ಲಿ ಹೆಚ್ಚುಕಡಿಮೆ ಎರಡು ಸಾವಿರ ಹಂದಿಗಳಿದ್ದವು. ಆ ಹಂದಿಗಳು ಓಡಿ ಹೋಗಿ ಇಳಿಜಾರು ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಸತ್ತುಹೋದವು.

[14] ಅವುಗಳನ್ನು ಮೇಯಿಸುವವರು ಓಡಿಹೋಗಿ ನಡೆದಿರುವ ಸಂಗತಿಯನ್ನು ಆ ಊರಲ್ಲಿಯೂ ಪಕ್ಕದ ಹಳ್ಳಿಗಳಲ್ಲಿಯೂ ತಿಳಿಸಲು ಜನರು ನಡೆದ ಸಂಗತಿ ಏನೆಂದು ನೋಡುವುದಕ್ಕೆ ಹೊರಟು ಯೇಸು ಇದ್ದಲ್ಲಿಗೆ ಬಂದರು.

[15] ಆ ದೆವ್ವಹಿಡಿದಿದ್ದವನು ಅಂದರೆ ದೆವ್ವಗಳ ದಂಡಿನಿಂದ ಬಂಧಿಸಲ್ಪಟ್ಟವನು, ಬಟ್ಟೆಗಳನ್ನು ಹಾಕಿಕೊಂಡು ಸುಬುದ್ಧಿಯಿಂದ ಕುಳಿತಿರುವುದನ್ನು ನೋಡಿ ಹೆದರಿದರು.

[16] ನಡೆದ ಸಂಗತಿಯನ್ನು ನೋಡಿದ್ದವರು ಆ ದೆವ್ವಹಿಡಿದವನಿಗೆ ಸಂಭವಿಸಿದೆಲ್ಲವನ್ನು ಮತ್ತು ಹಂದಿಗಳ ವಿಷಯವನ್ನೂ ಅವರಿಗೆ ವಿವರಿಸಿದರು.

[17] ಆಗ ಅವರು ಯೇಸುವಿಗೆ ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.

[18] ಆತನು ದೋಣಿಯನ್ನು ಹತ್ತುವಾಗ ಆ ದೆವ್ವಗಳ ಬಂಧನದಿಂದ ಬಿಡುಗಡೆ ಹೊಂದಿದವನು, ನಾನು ನಿನ್ನ ಬಳಿಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡಿದನು.

[19] ಆದರೆ ಯೇಸು ಅವನ ಬೇಡಿಕೆಯನ್ನು ಒಪ್ಪದೆ ಅವನಿಗೆ, “ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಕರ್ತನು ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಏನೇನು ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು” ಅಂದನು.

[20] ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ದೆಕಪೊಲಿ ಎಂಬ ಸೀಮೆಯಲ್ಲಿ ಸಾರುವುದಕ್ಕೆ ಪ್ರಾರಂಭಿಸಿದನು; ಎಲ್ಲರೂ ಆಶ್ಚರ್ಯಪಟ್ಟರು.

[21] ಯೇಸು ತಿರುಗಿ ದೋಣಿಯಲ್ಲಿ ಈಚೇದಡಕ್ಕೆ ಬಂದಾಗ ಜನರು ಬಹು ದೊಡ್ಡ ಗುಂಪಾಗಿ ಆತನ ಬಳಿಗೆ ಬಂದರು; ಆತನು ಸಮುದ್ರದ ದಡದಲ್ಲಿದ್ದನು.

[22] ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬವನು ಬಂದು ಯೇಸುವನ್ನು ಕಂಡು ಆತನ ಪಾದಗಳಿಗೆ ಬಿದ್ದು,

[23] “ನನ್ನ ಚಿಕ್ಕ ಮಗಳು ಈಗ ಸಾವಿನ ಅಂಚಿನಲ್ಲಿದ್ದಾಳೆ; ಆಕೆಯು ಗುಣಹೊಂದಿ ಬದುಕುವಂತೆ ದಯಮಾಡಿ ನೀನು ಬಂದು ಆಕೆಯ ಮೇಲೆ ನಿನ್ನ ಕೈಯಿಡಬೇಕು” ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು.

[24] ಯೇಸುವು ಅವನ ಸಂಗಡ ಹೋದನು; ಮತ್ತು ಬಹು ಜನರು ಆತನನ್ನು ನೂಕುತ್ತಾ ಹಿಂಬಾಲಿಸಿದರು.

[25] ಆಗ ಅಲ್ಲಿ ಹನ್ನೆರಡು ವರ್ಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು ಇದ್ದಳು.

[26] ಅನೇಕ ವೈದ್ಯರ ಚಿಕಿತ್ಸೆಯಿಂದ ಆಕೆಯು ಬಹು ಕಷ್ಟವನ್ನು ಅನುಭವಿಸಿ, ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯಮಾಡಿದ್ದರೂ ಅವಳ ರೋಗ ಮಾತ್ರ ಹೆಚ್ಚುತ್ತಾ ಬಂದಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ.

[27] ಆ ಹೆಂಗಸು ಯೇಸುವಿನ ಸಮಾಚಾರವನ್ನು ಕೇಳಿದ್ದರಿಂದ, “ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಸ್ವಸ್ಥಳಾಗುವೆನು” ಎಂದು ಆಲೋಚಿಸಿ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು.

[29] ಮುಟ್ಟಿದ ಕೂಡಲೆ ಆಕೆಯ ರಕ್ತಸ್ರಾವವು ನಿಂತುಹೋದುದರಿಂದ ಆಕೆಯು, ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನ ಮನಸ್ಸಿನಲ್ಲಿ ತಿಳಿದುಕೊಂಡಳು.

[30] ಆ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳಿದುಕೊಂಡು ಗುಂಪಿನಲ್ಲಿ ಹಿಂತಿರುಗಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಲು

[31] ಆತನ ಶಿಷ್ಯರು ಆತನಿಗೆ, “ನಿನ್ನ ಸುತ್ತಲೂ ಜನರು ಮುತ್ತಿಕೊಂಡು ನೂಕುವುದು ನಿನಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು’ ಎಂದು ಕೇಳುತ್ತೀಯಲ್ಲಾ?” ಎಂದರು.

[32] ಆದರೆ ಯೇಸು ಈ ಕೆಲಸ ಮಾಡಿದವರನ್ನು ನೋಡಬೇಕೆಂದು ಸುತ್ತಲು ನೋಡುತ್ತಾ ಇರಲಾಗಿ,

[33] ಆ ಮಹಿಳೆ ತನಗೆ ಸಂಭವಿಸಿದ್ದನ್ನು ಗ್ರಹಿಸಿ, ಭಯದಿಂದ ನಡುಗುತ್ತಾ ಬಂದು ಆತನಿಗೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ತಿಳಿಸಿದಳು.

[34] ಆತನು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನ ರೋಗದಿಂದ ನೀನು ಸ್ವಸ್ಥಳಾಗಿರುವೆ” ಎಂದು ಹೇಳಿದನು.

[35] ಆತನು ಇನ್ನೂ ಮಾತನಾಡುತ್ತಿರುವಾಗಲೇ ಸಭಾಮಂದಿರದ ಅಧಿಕಾರಿಯ ಕಡೆಯವರು ಬಂದು, “ನಿನ್ನ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುವಿ?” ಅಂದರು.

[36] ಅವರು ಆಡಿದ ಮಾತನ್ನು ಯೇಸು ಗಣನೆಗೆ ತಂದುಕೊಳ್ಳದೆ ಸಭಾಮಂದಿರದ ಅಧಿಕಾರಿಗೆ, “ಅಂಜಬೇಡ, ನಂಬಿಕೆ ಮಾತ್ರ ಇರಲಿ” ಎಂದು ಹೇಳಿದನು.

[37] ಮತ್ತು ಆತನು ಪೇತ್ರ, ಯಾಕೋಬ, ಮತ್ತು ಯಾಕೋಬನ ತಮ್ಮನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನೊಂದಿಗೆ ಬರುವುದಕ್ಕೆ ಅನುಮತಿಸಲಿಲ್ಲ.

[38] ಅವರು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಅಲ್ಲಿ ಜನರ ಗದ್ದಲವನ್ನೂ ಕೆಲವರು ಅಳುವುದನ್ನೂ ಗೋಳಾಡುವುದನ್ನೂ ಆತನು ಕಂಡನು.

[39] ಆತನು ಒಳಕ್ಕೆ ಹೋಗಿ, “ನೀವು ಗದ್ದಲ ಮಾಡುವುದೂ ಅಳುವುದೂ ಯಾಕೆ? ಹುಡುಗಿ ಸತ್ತಿಲ್ಲ; ಅವಳು ನಿದ್ದೆಮಾಡುತ್ತಿದ್ದಾಳೆ” ಅನ್ನಲು,

[40] ಅವರು ಆತನನ್ನು ಪರಿಹಾಸ್ಯಮಾಡಿದರು. ಆದರೆ ಆತನು ಎಲ್ಲರನ್ನು ಹೊರಕ್ಕೆ ಕಳುಹಿಸಿ ಆ ಹುಡುಗಿಯ ತಂದೆತಾಯಿಗಳನ್ನೂ ತನ್ನೊಂದಿಗಿದ್ದವರನ್ನೂ ಹುಡುಗಿಯಿದ್ದಲ್ಲಿಗೆ ಕರೆದುಕೊಂಡು ಹೋಗಿ,

[41] ಅವಳ ಕೈಹಿಡಿದು, “ತಲಿಥಾಕೂಮ್” ಅಂದನು. ಈ ಮಾತಿಗೆ “ಅಮ್ಮಣ್ಣೀ, ಎದ್ದೇಳು ಎಂದು ನಾನು ಹೇಳುತ್ತೇನೆ” ಎಂದರ್ಥ.

[42] ಕೂಡಲೆ ಆ ಹುಡುಗಿ ಎದ್ದು ನಡೆದಾಡಿದಳು; ಆಕೆಯು ಹನ್ನೆರಡು ವರ್ಷ ವಯಸ್ಸಿನವಳು.

[43] ಅವರೆಲ್ಲರೂ ಬಹಳ ಆಶ್ಚರ್ಯದಿಂದ ಬೆರಗಾದರು. ಆ ಮೇಲೆ ಆತನು ಅವರಿಗೆ, ಇದು ಯಾರಿಗೂ ತಿಳಿಯಬಾರದೆಂದು ಕಟ್ಟಪ್ಪಣೆ ಮಾಡಿದನು. ಆ ಹುಡುಗಿಗೆ ಊಟ ಮಾಡಲು ಏನಾದರೂ ಕೊಡಿರಿ ಎಂದು ಹೇಳಿದನು.

ಮಾರ್ಕನು — Chapters