[1] ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸೇರಿಸಿ ಅಧಿಕ ಸಂಖ್ಯೆಯಲ್ಲಿಯೂ ಮತ್ತು ಅಧಿಕ ಬಲದಲ್ಲಿಯೂ ನಿಮಗೆ ಮೀರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ಎಂಬ ಏಳು ಜನಾಂಗಗಳನ್ನು ನಿಮ್ಮ ಮುಂದೆಯೇ ಹೊರಡಿಸುವನು.
[2] ಯೆಹೋವನು ಅವರನ್ನು ನಿಮಗೆ ಒಪ್ಪಿಸಲು ನೀವು ಅವರನ್ನು ಸಂಪೂರ್ಣವಾಗಿ ಸಂಹರಿಸಬೇಕು. ಅವರ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು ಹಾಗು ಅವರಿಗೆ ಕನಿಕರ ತೋರಬಾರದು.
[3] ಅವರೊಡನೆ ಬೀಗತನಮಾಡಬಾರದು; ಅವರ ಗಂಡು ಮಕ್ಕಳಿಗೆ ನಿಮ್ಮ ಹೆಣ್ಣುಮಕ್ಕಳನ್ನು ಕೊಡಲೂಬಾರದು ಮತ್ತು ಅವರ ಹೆಣ್ಣುಮಕ್ಕಳನ್ನು ನಿಮ್ಮ ಗಂಡುಮಕ್ಕಳಿಗೆ ತರಲೂಬಾರದು.
[4] ಹಾಗೆ ಮಾಡಿದರೆ ಅವರು ನಿಮ್ಮ ಗಂಡು ಮಕ್ಕಳನ್ನು ಯೆಹೋವನ ಸೇವೆ ಮಾಡದಂತೆ ತಪ್ಪಿಸಿ, ಅನ್ಯ ದೇವರುಗಳನ್ನು ಪೂಜಿಸುವ ಹಾಗೆ ಮಾಡುವರು. ಆಗ ಯೆಹೋವನು ನಿಮ್ಮ ಮೇಲೆ ಕೋಪಗೊಂಡು ಬೇಗನೆ ನಿಮ್ಮನ್ನು ನಾಶಮಾಡುವನು.
[5] ಆದುದರಿಂದ ನೀವು ಹೀಗೆ ಮಾಡಬೇಕು, ಅವರ ಬಲಿಪೀಠಗಳನ್ನು ಕೆಡವಬೇಕು; ಅವರ ಪವಿತ್ರವಾದ ಕಲ್ಲಿನ ಕಂಬಗಳನ್ನು ಒಡೆದು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದು, ಅವರ ದೇವತಾಪ್ರತಿಮೆಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
[6] ಯಾಕೆಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಪರಿಶುದ್ಧ ಜನರಾಗಿದ್ದೀರಲ್ಲವೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯಜನವಾಗುವುದಕ್ಕೆ ಆರಿಸಿಕೊಂಡನು.
[7] ನಿಮ್ಮನ್ನು ಎಲ್ಲಾ ಜನಾಂಗಗಳಲ್ಲಿ ಹೆಚ್ಚು ಜನರು ಎಂದು ಇಷ್ಟಪಟ್ಟು ಆರಿಸಿಕೊಳ್ಳಲಿಲ್ಲ; ನೀವು ಎಲ್ಲಾ ಜನಾಂಗಗಳಿಗಿಂತಲೂ ಅಲ್ಪಸಂಖ್ಯಾತರು.
[8] ಯೆಹೋವನು ನಿಮ್ಮನ್ನು ಪ್ರೀತಿಸಿ, ತಾನು ನಿಮ್ಮ ಪೂರ್ವಿಕರಿಗೆ ಮಾಡಿದ ಪ್ರಮಾಣವನ್ನು ನೆರವೇರಿಸಬೇಕೆಂದು ಐಗುಪ್ತ್ಯರ ಅರಸನಾದ ಫರೋಹನ ಕೈಕೆಳಗೆ ದಾಸರಾಗಿದ್ದ ನಿಮ್ಮನ್ನು ಬಿಡುಗಡೆಮಾಡಿ, ತನ್ನ ಭುಜಬಲವನ್ನು ಪ್ರಯೋಗಿಸಿ ಆ ದೇಶದೊಳಗಿಂದ ಬರಮಾಡಿದನು.
[9] ಆದುದರಿಂದ ನಿಮ್ಮ ದೇವರಾದ ಯೆಹೋವನೊಬ್ಬನೇ ದೇವರೆಂದು ತಿಳಿದುಕೊಳ್ಳಬೇಕು. ಆತನು ನಂಬಿಗಸ್ತನಾದ ದೇವರು; ತನ್ನನ್ನು ಪ್ರೀತಿಸಿ ತನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ತಾನು ಮಾಡಿದ ವಾಗ್ದಾನವನ್ನೂ ಮತ್ತು ಕೃಪೆಯನ್ನೂ ಅವರ ಸಂತತಿಯವರಲ್ಲಿ ಸಾವಿರ ತಲೆಗಳವರೆಗೂ ನೆರವೇರಿಸುವವನಾಗಿಯೂ ಮತ್ತು
[10] ತನ್ನನ್ನು ತಿರಸ್ಕರಿಸಿದವರಿಗೆ ಪ್ರತಿಯಾಗಿ ನಾಶವನ್ನು ಉಂಟುಮಾಡುವವನಾಗಿಯೂ ಇದ್ದಾನೆಂದು ತಿಳಿದುಕೊಳ್ಳಿರಿ. ಹಗೆ ಮಾಡುವವರ ವಿಷಯದಲ್ಲಿ ತಡಮಾಡದೆ ಆಗಲೇ ಮುಯ್ಯಿತೀರಿಸುವನು.
[11] ಆದಕಾರಣ ನಾನು ಈಗ ನಿಮಗೆ ಬೋಧಿಸುವ ಧರ್ಮೋಪದೇಶವನ್ನೂ ಆಜ್ಞಾವಿಧಿಗಳನ್ನೂ ನೀವು ಅನುಸರಿಸಿ ನಡೆಯಬೇಕು.
[12] ನೀವು ಈ ವಿಧಿಗಳನ್ನು ಲಕ್ಷ್ಯವಿಟ್ಟು ಅನುಸರಿಸಿದರೆ, ಅದಕ್ಕೆ ಪ್ರತಿಯಾಗಿ ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ಮಾಡಿದ ಒಡಂಬಡಿಕೆಯನ್ನು ನಂಬಿಗಸ್ತಿಕೆಯಿಂದ ನೆರವೇರಿಸುವವನಾಗಿದ್ದಾನೆ.
[13] ಆತನು ನಿಮ್ಮನ್ನು ಪ್ರೀತಿಸಿ, ಅಭಿವೃದ್ಧಿಪಡಿಸಿ ಹೆಚ್ಚಿಸುವನು. ಆತನು ನಿಮ್ಮ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಿಮ್ಮ ಸಂತಾನವನ್ನೂ, ವ್ಯವಸಾಯವನ್ನೂ, ನಿಮಗಿರುವ ದವಸ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ, ನಿಮ್ಮ ದನ ಮತ್ತು ಕುರಿಗಳಲ್ಲಿ ಹುಟ್ಟಿದ್ದನ್ನೂ ಅಭಿವೃದ್ಧಿಪಡಿಸುವನು.
[14] ನೀವು ಎಲ್ಲಾ ಜನಗಳಿಗಿಂತಲೂ ಹೆಚ್ಚಾಗಿ ದೇವರ ಅನುಗ್ರಹವನ್ನು ಹೊಂದಿದವರಾಗಿರುವಿರಿ. ನಿಮ್ಮೊಳಗೆ ಸ್ತ್ರೀಪುರುಷರಲ್ಲಿಯಾಗಲಿ, ಹೆಣ್ಣುಗಂಡು ಪಶುಗಳಲ್ಲಿಯಾಗಲಿ ಬಂಜೆತನವು ಇರುವುದಿಲ್ಲ.
[15] ನಿಮ್ಮಲ್ಲಿ ಯಾವ ವ್ಯಾಧಿಯೂ ಉಂಟಾಗದಂತೆ ಯೆಹೋವನು ಮಾಡುವನು. ನಿಮ್ಮ ಅನುಭವಕ್ಕೆ ಬಂದ ಪ್ರಕಾರ ಐಗುಪ್ತದೇಶದಲ್ಲಿ ಪ್ರಬಲವಾಗಿರುವ ಕ್ರೂರವ್ಯಾಧಿಗಳನ್ನು ನಿಮಗೆ ಬರಗೊಡಿಸದೆ, ಅವುಗಳನ್ನು ನಿಮ್ಮ ಶತ್ರುಗಳ ಮೇಲೆಯೇ ಬರಮಾಡುವನು.
[16] ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಪರಾಜಯ ಹೊಂದುವ ಜನಾಂಗಗಳನ್ನೆಲ್ಲಾ ನೀವು ಕನಿಕರಿಸದೆ ನಾಶಮಾಡಬೇಕು. ಅವರ ದೇವರುಗಳನ್ನು ಪೂಜಿಸಲೇಬಾರದು; ಪೂಜಿಸಿದರೆ ಅವು ನಿಮ್ಮ ಜೀವಕ್ಕೆ ಉರುಲಾಗುವವು.
[17] ಆ ಜನಗಳು ನಮಗಿಂತ ಹೆಚ್ಚಾಗಿದ್ದಾರೆ; ಅವರನ್ನು ಹೊರಡಿಸುವುದು ನಮ್ಮಿಂದ ಹೇಗಾದೀತು ಅಂದುಕೊಳ್ಳುತ್ತೀರೋ? ಅವರಿಗೆ ಹೆದರಬೇಡಿರಿ.
[18] ನಿಮ್ಮ ದೇವರಾದ ಯೆಹೋವನು ಫರೋಹನಿಗೂ ಮತ್ತು ಐಗುಪ್ತ್ಯರೆಲ್ಲರಿಗೂ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿರಿ.
[19] ಆಗ ನೀವು ಕಣ್ಣಾರೆ ನೋಡಿದ ಪ್ರಕಾರ ಆತನು ವಿಶೇಷ ಪರಿಶೋಧನೆ, ಮಹತ್ಕಾರ್ಯ, ಉತ್ಪಾತ, ಭುಜಪರಾಕ್ರಮ, ಶಿಕ್ಷೆ ಇವುಗಳನ್ನು ಪ್ರಯೋಗಿಸಿ ನಿಮ್ಮನ್ನು ಬಿಡುಗಡೆಮಾಡಿದನಲ್ಲಾ. ನೀವು ಹೆದರಿಕೊಳ್ಳುವ ಆ ಎಲ್ಲಾ ಜನಾಂಗಗಳಿಗೂ ಆತನು ಹಾಗೆಯೇ ಮಾಡುವನು.
[20] ಅದು ಮಾತ್ರವಲ್ಲದೆ ನಿಮ್ಮ ದೇವರಾದ ಯೆಹೋವನು ಕಣಜದ ಹುಳಗಳನ್ನು ಅವರ ನಡುವೆ ಕಳುಹಿಸುವನು. ಮರೆಯಾಗಿದ್ದು ಉಳಿದವರು ಆ ಹುಳಗಳ ದೆಸೆಯಿಂದ ನಾಶವಾಗಿ ನಿಮಗೆ ಕಾಣದೆ ಹೋಗುವರು.
[21] ನೀವು ಅವರಿಗೆ ಹೆದರಿಕೊಳ್ಳಬೇಡಿರಿ; ನಿಮ್ಮ ದೇವರಾದ ಯೆಹೋವನು ನಿಮ್ಮ ಮಧ್ಯದಲ್ಲಿದ್ದಾನೆ; ಆತನು ನಮ್ಮ ಭಕ್ತಿಗೆ ಪ್ರತಿಕಾರವಾಗಿ ವಿಸ್ಮಯ ಹುಟ್ಟಿಸುವ ದೇವರಾಗಿದ್ದಾನೆ.
[22] ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳನ್ನು ನಿಮ್ಮ ಮುಂದೆಯೇ ಸ್ವಲ್ಪಸ್ವಲ್ಪವಾಗಿ ಹೊರಟು ಹೋಗುವಂತೆ ಮಾಡುವನು. ನೀವು ಅವರನ್ನು ಒಂದೇ ಬಾರಿಗೆ ನಿರ್ಮೂಲಮಾಡಬಾರದು. ಹಾಗೆ ಮಾಡಿದರೆ ಕಾಡುಮೃಗಗಳು ಹೆಚ್ಚಿ ಅವು ನಿಮಗೆ ತೊಂದರೆಯನ್ನು ಉಂಟುಮಾಡುತ್ತವೆ.
[23] ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮಿಂದ ಸೋಲಿಸಿ, ಬಹಳವಾಗಿ ಗಲಿಬಿಲಿಮಾಡಿ ಕಡೆಗೆ ಅವರನ್ನು ಇಲ್ಲದಂತೆ ಮಾಡುವನು.
[24] ಆತನು ಅವರ ಅರಸರನ್ನು ನಿಮ್ಮ ಕೈಗೆ ಸಿಗುವಂತೆ ಮಾಡಿ, ನೀವು ಅವರ ಹೆಸರುಗಳೇ ಭೂಮಿಯ ಮೇಲೆ ಉಳಿಯದಂತೆ ಮಾಡಬೇಕು. ಯಾರೂ ನಿಮ್ಮ ಮುಂದೆ ನಿಲ್ಲುವುದಿಲ್ಲ; ನೀವು ಎಲ್ಲರನ್ನೂ ನಾಶಮಾಡುವಿರಿ.
[25] ಅವರು ದೇವರೆಂದು ಮಾಡಿಕೊಂಡ ಮರದ ವಿಗ್ರಹಗಳನ್ನು ನೀವು ಬೆಂಕಿಯಿಂದ ಸುಟ್ಟುಬಿಡಬೇಕು. ಆ ವಿಗ್ರಹಗಳ ಮೇಲಿರುವ ಬೆಳ್ಳಿಬಂಗಾರವನ್ನು ನೀವು ಆಶಿಸಬಾರದು; ಅದನ್ನು ತೆಗೆದುಕೊಂಡರೆ ಅದು ನಿಮಗೆ ಉರುಲಾಗುವುದು. ಅದು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯವಾದುದು.
[26] ಅದು ಕೇವಲ ಯೆಹೋವನಿಂದ ನಾಶವಾಗತಕ್ಕದ್ದು. ಆದುದರಿಂದ ನೀವು ಅಂತಹ ವಸ್ತುವನ್ನು ಮನೆಯೊಳಕ್ಕೆ ತಂದು ಅದರಂತೆಯೇ ನಾಶಕ್ಕೆ ಗುರಿಯಾಗಬಾರದು. ನೀವು ಅದನ್ನು ಅಸಹ್ಯಪಟ್ಟು ಮುಟ್ಟಲೂ ಬಾರದು.