Skip to content
Opens in a new window
Listen to this chapter • 4:14

[1] ಯಾವನಾದರೂ ತಾನು ಮದುವೆಮಾಡಿಕೊಂಡ ಸ್ತ್ರೀಯಲ್ಲಿ ಏನೋ ಅವಲಕ್ಷಣವನ್ನು ಕಂಡು ಅವಳಲ್ಲಿ ಸಂತೋಷಪಡದೆ ಇದ್ದರೆ ಅವನು ತ್ಯಾಗಪತ್ರವನ್ನು ಬರೆದುಕೊಟ್ಟು ಅವಳನ್ನು ಮನೆಯಿಂದ ಕಳುಹಿಸಬೇಕು.

[2] ಅವಳು ಮನೆಯಿಂದ ಹೋಗಿ ಮತ್ತೊಬ್ಬನನ್ನು ಮದುವೆಯಾಗಬಹುದು.

[3] ಆಕೆ ಎರಡನೆಯ ಗಂಡನಿಂದಲೂ ತಿರಸ್ಕರಿಸಲ್ಪಟ್ಟು, ತ್ಯಾಗಪತ್ರವನ್ನು ಹೊಂದಿ ಕಳುಹಿಸಲ್ಪಟ್ಟರೆ ಅಥವಾ ಎರಡನೆಯ ಗಂಡನು ಸತ್ತರೆ,

[4] ಆಗ ಅವಳನ್ನು ಕಳುಹಿಸಿಬಿಟ್ಟ ಮೊದಲನೆಯ ಗಂಡನು ಅವಳನ್ನು ಪುನಃ ತನ್ನ ಹೆಂಡತಿಯಾಗಿ ಸ್ವೀಕರಿಸಬಾರದು; ಅವಳು ಅಶುದ್ಧಳಾದಳು; ಅವಳನ್ನು ಪುನಃ ಸ್ವೀಕರಿಸುವುದು ಯೆಹೋವನಿಗೆ ಅಸಹ್ಯ ಕಾರ್ಯ. ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶಕ್ಕೆ ದೋಷವುಂಟಾಗುವಂತೆ ಅವಕಾಶಕೊಡಬಾರದು.

[5] ಹೊಸದಾಗಿ ಮದುವೆಮಾಡಿಕೊಂಡವನು ಸೈನ್ಯದವರೊಡನೆ ಯುದ್ಧಕ್ಕೆ ಹೋಗಬಾರದು; ಭಾರವಾದ ಯಾವ ಕೆಲಸವನ್ನೂ ಅವನಿಗೆ ನೇಮಿಸಬಾರದು. ಅವನು ಒಂದು ವರ್ಷದ ವರೆಗೂ ಬಿಡುವಾಗಿ ಮನೆಯಲ್ಲಿ ಇದ್ದುಕೊಂಡು ಪರಿಗ್ರಹಿಸಿದ ಹೆಂಡತಿಯೊಡನೆ ಸುಖವಾಗಿರಲಿ.

[6] ಬೀಸುವ ಕಲ್ಲನ್ನು ಪೂರ್ತಿಯಾಗಲಿ ಅಥವಾ ಅರ್ಧವಾಗಲಿ ಒತ್ತೆ ತೆಗೆದುಕೊಳ್ಳಬಾರದು; ಅದು ಜೀವನಾಧಾರವನ್ನೇ ಒತ್ತೆಯಾಗಿ ತೆಗೆದುಕೊಂಡ ಹಾಗಾಗುವುದು.

[7] ಯಾವನಾದರೂ ಸ್ವದೇಶದವನಾದ ಇಸ್ರಾಯೇಲನನ್ನು ಕದ್ದು ಅವನನ್ನು ದಾಸತ್ವದಲ್ಲಿ ನಡಿಸಿದ್ದಾಗಲಿ ಅಥವಾ ಮಾರಿಬಿಟ್ಟದ್ದು ಕಂಡುಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಅಂಥ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಿಬಿಡಬೇಕು.

[8] ಕುಷ್ಠರೋಗಿಗಳ ವಿಷಯದಲ್ಲಿ ಯಾಜಕರಾದ ಲೇವಿಯರು ಬೋಧಿಸುವಂತೆಯೇ ಮಾಡುವುದಕ್ಕೆ ನೀವು ಜಾಗರೂಕರಾಗಿರಬೇಕು. ನಾನು ಅವರಿಗೆ ಆಜ್ಞಾಪಿಸಿದ ನಿಯಮಗಳನ್ನೇ ನೀವು ಅನುಸರಿಸಬೇಕು.

[9] ನೀವು ಐಗುಪ್ತದೇಶದಿಂದ ಬಂದಾಗ ದಾರಿಯಲ್ಲಿ ನಿಮ್ಮ ದೇವರಾದ ಯೆಹೋವನು ಮಿರ್ಯಾಮಳಿಗೆ ಮಾಡಿದ್ದನ್ನು ನೆನಪುಮಾಡಿಕೊಳ್ಳಿರಿ.

[10] ಮತ್ತೊಬ್ಬನಿಗೆ ಸಾಲಕೊಡುವಾಗ ಒತ್ತೆಯನ್ನು ತೆಗೆದುಕೊಳ್ಳುವುದಕ್ಕೆ ಅವನ ಮನೆಯೊಳಕ್ಕೆ ಹೋಗದೆ ಹೊರಗೆ ಇರಬೇಕು.

[11] ಸಾಲತೆಗೆದುಕೊಂಡವನೇ ಒತ್ತೆಯ ಸಾಮಾನುಗಳನ್ನು ತಂದುಕೊಡಬೇಕು.

[12] ಅವನು ಕೇವಲ ಬಡತನದಿಂದ ತನ್ನ ಕಂಬಳಿಯನ್ನೇ ಒತ್ತೆಯಾಗಿ ಇಟ್ಟ ಸಂದರ್ಭದಲ್ಲಿ ಹೊತ್ತುಮುಣುಗಿದಾಗ ಅದನ್ನು ಹಿಂದಕ್ಕೆ ಕೊಡಬೇಕು.

[13] ಅದನ್ನು ಇಟ್ಟುಕೊಂಡು ರಾತ್ರಿ ಮಲಗಬಾರದು; ಅವನು ಅದನ್ನು ಹೊದ್ದುಕೊಂಡೇ ಮಲಗಿಕೊಳ್ಳಬೇಕಲ್ಲಾ; ಅದಲ್ಲದೆ ಅವನು ನಿಮ್ಮನ್ನು ಹರಸುವನು, ಮತ್ತು ನೀವು ಮಾಡಿದ್ದು ಧರ್ಮಕಾರ್ಯವೆಂದು ನಿಮ್ಮ ದೇವರಾದ ಯೆಹೋವನು ತಿಳಿದುಕೊಳ್ಳುವನು.

[14] ನೀವು ಸ್ವದೇಶದವರಲ್ಲಿಯಾಗಲಿ ಅಥವಾ ನಿಮ್ಮಲ್ಲಿರುವ ಅನ್ಯದೇಶದವರಲ್ಲಿಯಾಗಲಿ ಗತಿಯಿಲ್ಲದ ಬಡ ಕೂಲಿಯವನಿಗೆ

[15] ಏನೂ ಅನ್ಯಾಯಮಾಡದೆ ದಿನದ ಕೂಲಿಯನ್ನು ಆ ದಿನದಲ್ಲೇ ಹೊತ್ತುಮುಣುಗುವುದಕ್ಕೆ ಮುಂಚಿತವಾಗಿ ಅವನಿಗೆ ಕೊಡಬೇಕು. ಅವನಿಗೆ ಬೇರೆ ಗತಿಯಿಲ್ಲದ್ದರಿಂದ ಅದನ್ನೇ ಎದುರುನೋಡುತ್ತಾನಲ್ಲಾ. ನೀವು ಕೊಡದಿದ್ದರೆ ಅವನು ಯೆಹೋವನಿಗೆ ಮೊರೆಯಿಟ್ಟಾನು; ಆಗ ನೀವು ದೋಷಿಗಳಾಗಿ ಕಂಡುಬಂದೀರಿ.

[16] ಮಕ್ಕಳ ಪಾಪಕ್ಕಾಗಿ ತಂದೆಗೂ, ತಂದೆಯ ಪಾಪಕ್ಕಾಗಿ ಮಕ್ಕಳಿಗೂ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪಫಲವನ್ನು ತಾನೇ ಅನುಭವಿಸಬೇಕು.

[17] ನೀವು ಪರದೇಶಿಯ ಅಥವಾ ದಿಕ್ಕಿಲ್ಲದವನ ವ್ಯಾಜ್ಯವನ್ನು ವಿಚಾರಿಸುವಾಗ ನ್ಯಾಯವನ್ನು ಬಿಟ್ಟು ತೀರ್ಪು ಕೊಡಬಾರದು. ವಿಧವೆಯಿಂದ ಉಡುವ ಬಟ್ಟೆಯನ್ನು ಒತ್ತೆಯಿಡಿಸಿಕೊಳ್ಳಬಾರದು.

[18] ನೀವೇ ಐಗುಪ್ತದೇಶದಲ್ಲಿ ದಾಸರಾಗಿದ್ದಾಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿದನೆಂಬುವುದನ್ನು ನೆನಪುಮಾಡಿಕೊಳ್ಳಿರಿ; ಅದಕ್ಕಾಗಿಯೇ ಇದನ್ನು ಆಜ್ಞಾಪಿಸಿದ್ದೇನೆ.

[19] ನೀವು ಪೈರುಗಳನ್ನು ಕೊಯ್ಯುವಾಗ ಒಂದು ಸಿವುಡನ್ನು ಹೊಲದಲ್ಲೇ ಮರೆತುಬಂದರೆ ಅದನ್ನು ತರುವುದಕ್ಕೆ ಹಿಂದಕ್ಕೆ ಹೋಗಬಾರದು; ಪರದೇಶಿ, ಅನಾಥ, ವಿಧವೆ ಇಂಥವರಿಗೋಸ್ಕರ ಇರಲಿ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ನಿಮ್ಮನ್ನು ಅಭಿವೃದ್ಧಿಪಡಿಸುವನು.

[20] ಎಣ್ಣೆಯಮರಗಳ ರೆಂಬೆಗಳನ್ನು ಹೊಡೆದು ಕಾಯಿಗಳನ್ನು ಉದುರಿಸಿದ ಮೇಲೆ ಪುನಃ ಉದುರಿಸುವುದಕ್ಕೆ ಹೋಗಬಾರದು; ಮಿಕ್ಕ ಕಾಯಿಗಳು ಪರದೇಶಿ, ಅನಾಥ, ವಿಧವೆ ಇಂಥವರಿಗೋಸ್ಕರ ಇರಲಿ.

[21] ದ್ರಾಕ್ಷಿತೋಟದ ಬೆಳೆಯನ್ನು ಕೂಡಿಸಿಕೊಳ್ಳುವಾಗ ಹಕ್ಕಲಾಯಬಾರದು; ಅದು ಪರದೇಶಿ, ಅನಾಥ, ವಿಧವೆ ಇಂಥವರಿಗೋಸ್ಕರ ಇರಲಿ.

[22] ನೀವೇ ಐಗುಪ್ತದೇಶದಲ್ಲಿ ದಾಸರಾಗಿದ್ದದ್ದು ಜ್ಞಾಪಕದಲ್ಲಿರಬೇಕು; ಅದಕ್ಕಾಗಿಯೇ ಇದನ್ನು ನಿಮಗೆ ಆಜ್ಞಾಪಿಸಿದ್ದೇನೆ.

ಧರ್ಮೋಪದೇಶಕಾಂಡ — Chapters