[1] ಮೋಶೆಯು ಮೋವಾಬ್ಯರ ಮೈದಾನದಿಂದ ಯೆರಿಕೋ ಪಟ್ಟಣಕ್ಕೆ ಎದುರಾಗಿರುವ ನೆಬೋ ಪರ್ವತಕ್ಕೆ ಹೋಗಿ ಪಿಸ್ಗಾ ಎಂಬ ಬೆಟ್ಟದ ಶಿಖರವನ್ನು ಹತ್ತಿದನು. ಆಗ ಯೆಹೋವನು ಕಾನಾನ್ ದೇಶವನ್ನೆಲ್ಲಾ ಅಂದರೆ ದಾನ್ ಪಟ್ಟಣದ ವರೆಗೂ ಗಿಲ್ಯಾದ್ ಸೀಮೆ,
[2] ನಫ್ತಾಲಿ ಪ್ರದೇಶ, ಎಫ್ರಾಯೀಮ್ ಮತ್ತು ಮನಸ್ಸೆ ಕುಲಗಳವರ ಸೀಮೆ, ಪಶ್ಚಿಮಸಮುದ್ರದವರೆಗೂ ಯೆಹೂದ ಸೀಮೆ,
[3] ದಕ್ಷಿಣಪ್ರದೇಶ, ಚೋಗರೂರಿನ ತನಕ ಯೆರಿಕೋ ಎಂಬ ಖರ್ಜೂರಗಳ ಪಟ್ಟಣದ ಸುತ್ತಲಿರುವ ಮೈದಾನ ಇದನ್ನೆಲ್ಲಾ ಅವನಿಗೆ ತೋರಿಸಿ,
[4] “ನಾನು ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣಮಾಡಿ ಅವರ ಸಂತತಿಯವರಿಗೆ ಕೊಡುವೆನೆಂದು ವಾಗ್ದಾನಮಾಡಿದ ದೇಶವು ಇದೇ; ನಿನಗೆ ಪ್ರತ್ಯಕ್ಷವಾಗಿ ತೋರಿಸಿದ್ದೇನೆ. ಆದರೆ ನೀನು ನದಿ ದಾಟಿ ಅಲ್ಲಿಗೆ ಹೋಗಕೂಡದು” ಎಂದು ಹೇಳಿದನು.
[5] ಯೆಹೋವನ ಮಾತಿನಂತೆ ಆತನ ಸೇವಕನಾದ ಮೋಶೆ ಅಲ್ಲೇ ಮೋವಾಬ್ಯರ ದೇಶದಲ್ಲಿ ಮರಣ ಹೊಂದಿದನು.
[6] ಮೋವಾಬ್ಯರ ದೇಶದಲ್ಲಿ ಬೇತ್‍ಪೆಗೋರದ ಎದುರಾಗಿರುವ ಕಣಿವೆಯಲ್ಲಿ (ಯೆಹೋವನು) ಅವನ ದೇಹವನ್ನು ಸಮಾಧಿಮಾಡಿದನು; ಅವನ ಸಮಾಧಿ ಎಲ್ಲಿದೆಯೋ ಇಂದಿನ ವರೆಗೆ ಯಾರಿಗೂ ತಿಳಿಯದು.
[7] ಮೋಶೆ ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿಹೋಗಿರಲಿಲ್ಲ.
[8] ಮೋವಾಬ್ಯರ ಮೈದಾನದಲ್ಲಿ ಇಸ್ರಾಯೇಲರು ಮೋಶೆಗೋಸ್ಕರ ಮೂವತ್ತು ದಿನಗಳ ವರೆಗೆ ದುಃಖಿಸಿದರು. ಅಲ್ಲಿಗೆ ಮೋಶೆಯ ಪ್ರಲಾಪದ ದಿನಗಳು ಮುಗಿದವು.
[9] ಮೋಶೆಯು ನೂನನ ಮಗನಾದ ಯೆಹೋಶುವನ ಮೇಲೆ ಕೈಯಿಟ್ಟಿದ್ದರಿಂದ ಅವನು ಜ್ಞಾನವರಸಂಪನ್ನನಾದನು. ಯೆಹೋವನು ಮೋಶೆಗೆ ಕೊಟ್ಟ ಆಜ್ಞೆಗೆ ಅನುಸಾರವಾಗಿ ಇಸ್ರಾಯೇಲರು ಯೆಹೋಶುವನ ಮಾತಿನ ಪ್ರಕಾರ ನಡೆದರು.
[10] ಮೋಶೆಗೆ ಸಮಾನನಾದ ಮತ್ತೊಬ್ಬ ಪ್ರವಾದಿ ಇಸ್ರಾಯೇಲರಲ್ಲಿ ಮತ್ತೆ ಹುಟ್ಟಲೇ ಇಲ್ಲ, ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದನು.
[11] ಆತನು ಐಗುಪ್ತದೇಶದಲ್ಲಿ ಫರೋಹನ ಮುಂದೆಯೂ, ಅವನ ಪ್ರಜಾಪರಿವಾರದವರ ಮುಂದೆಯೂ ವಿಧವಿಧವಾದ ಅದ್ಭುತಕಾರ್ಯಗಳನ್ನು ಮತ್ತು ಮಹತ್ಕಾರ್ಯಗಳನ್ನು ನಡಿಸುವುದಕ್ಕೆ ಯೆಹೋವನು ಅವನನ್ನು ಕಳುಹಿಸಿದನು.
[12] ಅವನು ಇಸ್ರಾಯೇಲರ ಕಣ್ಣ ಮುಂದೆ ವಿಶೇಷವಾದ ಭುಜಪರಾಕ್ರಮವನ್ನೂ ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನೂ ನಡೆಸಿದನು.