[1] ಮೋಶೆ ಮತ್ತು ಇಸ್ರಾಯೇಲರ ಹಿರಿಯರ ಸಹಿತ ಜನರಿಗೆ, “ನಾನು ಈಗ ನಿಮಗೆ ಆಜ್ಞಾಪಿಸಿದ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು.
[2] ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಪ್ರವೇಶಿಸುವುದಕ್ಕೆ ನೀವು ಯೊರ್ದನ್ ನದಿಯನ್ನು ದಾಟುವಾಗ ನೀವು ದೊಡ್ಡ ಕಲ್ಲುಗಳನ್ನು ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಬೇಕು.
[3] ನಿಮ್ಮ ಪೂರ್ವಿಕರ ದೇವರಾದ ಯೆಹೋವನು ತಾನು ವಾಗ್ದಾನಮಾಡಿದಂತೆ ನಿಮಗೆ ಕೊಡುವ ಹಾಲೂ ಮತ್ತು ಜೇನೂ ಹರಿಯುವ ದೇಶವನ್ನು ಪ್ರವೇಶಿಸುವುದಕ್ಕೆ ನೀವು ಯೊರ್ದನ್ ನದಿಯನ್ನು ದಾಟುವಾಗ ಈ ಧರ್ಮಶಾಸ್ತ್ರದ ವಾಕ್ಯಗಳನ್ನೆಲ್ಲಾ ಆ ದೊಡ್ಡ ಕಲ್ಲುಗಳ ಮೇಲೆ ಬರೆಯಿಸಬೇಕು.
[4] ನೀವು ಯೊರ್ದನ್ ನದಿಯನ್ನು ದಾಟಿದ ನಂತರ ನಾನು ಈಗ ಆಜ್ಞಾಪಿಸಿದ ಕಲ್ಲುಗಳನ್ನು ಏಬಾಲ್ ಬೆಟ್ಟದ ಮೇಲೆ ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಬೇಕು.
[5] “ಅಲ್ಲಿ ನಿಮ್ಮ ದೇವರಾದ ಯೆಹೋವನಿಗೋಸ್ಕರ ನೀವು ಕಲ್ಲುಗಳಿಂದ ಯಜ್ಞವೇದಿಯನ್ನು ಕಟ್ಟಿಸಬೇಕು.
[6] ಉಳಿ ಮುಂತಾದದ್ದನ್ನು ಉಪಯೋಗಿಸದೆ ಹುಟ್ಟುಕಲ್ಲುಗಳಿಂದಲೇ ನಿಮ್ಮ ದೇವರಾದ ಯೆಹೋವನ ಯಜ್ಞವೇದಿಯನ್ನು ಕಟ್ಟಿಸಬೇಕು.
[7] ಅಲ್ಲಿ ಸರ್ವಾಂಗಹೋಮಗಳನ್ನೂ ಮತ್ತು ಸಮಾಧಾನಯಜ್ಞಗಳನ್ನೂ ಸಮರ್ಪಿಸಿ, ಸಹಭೋಜನಮಾಡಿ, ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಸಂಭ್ರಮಿಸಬೇಕು.
[8] ನೀವು ಆ ಕಲ್ಲುಗಳ ಮೇಲೆ ಈ ಧರ್ಮಶಾಸ್ತ್ರದ ವಾಕ್ಯಗಳನ್ನೆಲ್ಲಾ ಸ್ಪಷ್ಟವಾಗಿ ಬರೆಯಬೇಕು” ಎಂದು ಆಜ್ಞಾಪಿಸಿದನು.
[9] ಮೋಶೆ, ಯಾಜಕರು ಮತ್ತು ಲೇವಿಯರೊಡನೆ ಇಸ್ರಾಯೇಲರೆಲ್ಲರಿಗೆ, “ಇಸ್ರಾಯೇಲರೇ, ನಿಶ್ಯಬ್ದವಾಗಿದ್ದು ಕೇಳಿರಿ, ನೀವು ಈಗ ನಿಮ್ಮ ದೇವರಾದ ಯೆಹೋವನ ಜನರಾಗಿದ್ದೀರಷ್ಟೆ.
[10] ಆದುದರಿಂದ ಈಗ ನಾನು ನಿಮಗೆ ಹೇಳುವ ನಿಮ್ಮ ದೇವರಾದ ಯೆಹೋವನ ಮಾತುಗಳಿಗೆ ಕಿವಿಗೊಟ್ಟು ಆತನ ಆಜ್ಞಾವಿಧಿಗಳನ್ನು ಅನುಸರಿಸಬೇಕು” ಎಂದು ಹೇಳಿದನು.
[11] ಮೋಶೆ ಆ ದಿನದಲ್ಲಿ ಜನರಿಗೆ ಆಜ್ಞಾಪಿಸಿದ್ದೇನೆಂದರೆ,
[12] “ನೀವು ಯೊರ್ದನ್ ನದಿಯನ್ನು ದಾಟಿದಾಗ ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್ ಮತ್ತು ಬೆನ್ಯಾಮೀನ್ ಎಂಬ ಈ ಕುಲಗಳವರು ಗೆರಿಜ್ಜೀಮ್ ಬೆಟ್ಟದ ಮೇಲೆ ನಿಂತುಕೊಂಡು ಆಶೀರ್ವಾದಗಳನ್ನು ಉಚ್ಚರಿಸಬೇಕು.
[13] ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್ ಮತ್ತು ನಫ್ತಾಲಿ ಎಂಬ ಈ ಕುಲಗಳವರು ಏಬಾಲ್ ಬೆಟ್ಟದ ಮೇಲೆ ನಿಂತುಕೊಂಡು ಶಾಪೋಕ್ತಿಗಳನ್ನು ಉಚ್ಚರಿಸಬೇಕು.
[14] “ಲೇವಿಯರು ಗಟ್ಟಿಯಾದ ಸ್ವರದಿಂದ ಇಸ್ರಾಯೇಲರೆಲ್ಲರಿಗೂ,
[15] ‘ಶಿಲ್ಪಿಯ ಕೆಲಸವಾಗಿರುವ ಮರದ ವಿಗ್ರಹ ಮತ್ತು ಲೋಹವಿಗ್ರಹ ಯೆಹೋವನಿಗೆ ಅಸಹ್ಯವಾದುದರಿಂದ ಅವುಗಳನ್ನು ಮಾಡಿಸಿ ಗುಪ್ತವಾಗಿ ನಿಲ್ಲಿಸಿಕೊಂಡವನು ಶಾಪಗ್ರಸ್ತನು’ ಎಂದು ಹೇಳಲು ಜನರೆಲ್ಲರೂ, ‘ಆಮೆನ್’” ಅನ್ನಬೇಕು.
[16] “ಲೇವಿಯರು, ತಂದೆತಾಯಿಗಳನ್ನು ಅವಮಾನಪಡಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
[17] “ಅವರು, ಮತ್ತೊಬ್ಬನ ಗಡಿಮೇರೆಯನ್ನು ಮೀರಿಬಂದವನು ಶಾಪಗ್ರಸ್ತನು” ಎಂದು ಹೇಳಲು, “ಆಮೆನ್” ಅನ್ನಬೇಕು.
[18] “ಅವರು, ಕುರುಡರಿಗೆ ದಾರಿತಪ್ಪಿಸಿದವನು ಶಾಪಗ್ರಸ್ತನು” ಎಂದು ಹೇಳಲು, “ಆಮೆನ್” ಅನ್ನಬೇಕು.
[19] “ಅವರು, ಪರದೇಶಿ, ಅನಾಥ, ಇವರ ವ್ಯಾಜ್ಯದಲ್ಲಿ ನ್ಯಾಯ ಬಿಟ್ಟು ತೀರ್ಪುಹೇಳಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
[20] “ಅವರು, ಮಲತಾಯಿಯನ್ನು ಸಂಗಮಿಸಿ ತಂದೆಗೆ ಅವಮಾನಪಡಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
[21] “ಅವರು, ಪಶುಸಂಗಮ ಮಾಡಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
[22] “ಅವರು, ತಂದೆಯ ಮಗಳನ್ನಾಗಲಿ ಅಥವಾ ತಾಯಿಯ ಮಗಳನ್ನಾಗಲಿ ಸಂಗಮಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
[23] “ಅವರು, ಅತ್ತೆಯನ್ನು ಸಂಗಮಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
[24] “ಅವರು, ರಹಸ್ಯವಾಗಿ ನರಹತ್ಯಮಾಡಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
[25] “ಅವರು, ಹಣ ತೆಗೆದುಕೊಂಡು ನಿರಪರಾಧಿಯನ್ನು ಕೊಂದವನು ಶಾಪಗ್ರಸ್ತನು” ಎನ್ನಲಾಗಿ ಜನರೆಲ್ಲರೂ, “ಆಮೆನ್” ಅನ್ನಬೇಕು.
[26] “ಅವರು, ಈ ಧರ್ಮಶಾಸ್ತ್ರವಾಕ್ಯಗಳಿಗೆ ಒಡಂಬಟ್ಟು ಕೈಕೊಳ್ಳದೆ ಇರುವವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.