Skip to content
Opens in a new window
Listen to this chapter • 4:42

[1] ಪ್ರತಿ ಏಳನೆಯ ವರ್ಷದ ಕೊನೆಯಲ್ಲಿ ಸಾಲವನ್ನು ಬಿಟ್ಟುಬಿಡಬೇಕು.

[2] ಹೇಗೆಂದರೆ ಯೆಹೋವನು ನೇಮಿಸಿದ ಬಿಡುಗಡೆಯ ವರ್ಷವು ಬಂತೆಂದು ಪ್ರಕಟವಾದುದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು. ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು.

[3] ಅನ್ಯದೇಶದವರಿಗೆ ಕೊಟ್ಟ ಸಾಲವನ್ನು ಕೇಳಿ ತೆಗೆದುಕೊಳ್ಳಬಹುದೇ ಹೊರತು ಸ್ವದೇಶದವನಿಗೆ ಕೊಟ್ಟಿರುವುನ್ನು ಕೇಳಬಾರದು.

[4] ಆದರೆ ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು, ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ಅನುಸರಿಸಿದರೆ,

[5] ಯೆಹೋವನು ತಾನು ನಿಮಗೆ ಸ್ವದೇಶವಾಗಿ ಕೊಡುವ ದೇಶದಲ್ಲಿ ನೀವು ಅಭಿವೃದ್ಧಿ ಹೊಂದುವುದರಿಂದ ನಿಮ್ಮಲ್ಲಿ ಬಡವರೇ ಇರುವುದಿಲ್ಲ.

[6] ನಿಮ್ಮ ದೇವರಾದ ಯೆಹೋವನು ವಾಗ್ದಾನಮಾಡಿದಂತೆ ನಿಮ್ಮನ್ನು ಅಭಿವೃದ್ಧಿಪಡಿಸುವನು. ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಅವರಿಂದ ಸಾಲ ತೆಗೆದುಕೊಳ್ಳುವುದಿಲ್ಲ. ನೀವು ಅನೇಕ ಜನಾಂಗಗಳ ಮೇಲೆ ದೊರೆತನ ಮಾಡುವಿರೇ ಹೊರತು ಅವರು ನಿಮ್ಮ ಮೇಲೆ ದೊರೆತನ ಮಾಡುವುದಿಲ್ಲ.

[7] ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದ ಯಾವ ಊರಿನಲ್ಲಾದರೂ ಸ್ವದೇಶದವನಾದ ಬಡವನು ಇದ್ದರೆ, ನೀವು ಆ ಬಡ ಸಹೋದರನಿಗೆ ಮನಸ್ಸನ್ನು ಕಠಿಣಮಾಡಿಕೊಂಡು ಅವನಿಗೆ ಸಹಾಯಮಾಡದೆ ಇರಬಾರದು.

[8] ನೀವು ಕೈತೆರೆದು ಅವನಿಗೆ ಅವಶ್ಯವಾಗಿ ಬೇಕಾದದ್ದನ್ನು ಕೊಟ್ಟು ಸಹಾಯ ಮಾಡಬೇಕು.

[9] ನೀವು “ಬಿಡುಗಡೆಯುಂಟಾಗುವ ಏಳನೆಯ ವರ್ಷವು ಸಮೀಪವಾಯಿತು” ಎಂಬ ನೀಚವಾದ ಆಲೋಚನೆಯನ್ನು ಮಾಡಿ, ಆ ಬಡ ಸಹೋದರನಿಗೆ ಏನೂ ಕೊಡದೆ ಇರಬಾರದು, ಎಚ್ಚರಿಕೆ! ಹಾಗೆ ಧಿಕ್ಕರಿಸಿದರೆ ಅವನು ಒಂದು ವೇಳೆ ನಿಮ್ಮ ವಿಷಯದಲ್ಲಿ ಯೆಹೋವನಿಗೆ ಮೊರೆಯಿಟ್ಟಾನು, ನೀವು ದೋಷಿಗಳಾಗಿ ಕಂಡುಬರುವಿರಿ.

[10] ನೀವು ಕೊಡುವಾಗ ಬೇಸರಗೊಳ್ಳದೆ ಉದಾರವಾದ ಮನಸ್ಸಿನಿಂದಲೇ ಕೊಡಬೇಕು. ಇದರಿಂದ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಮತ್ತು ಪ್ರಯತ್ನಗಳಲ್ಲಿಯೂ ನಿಮ್ಮನ್ನು ಅಭಿವೃದ್ಧಿಪಡಿಸುವನು.

[11] ದೇಶದಲ್ಲಿ ಯಾವಾಗಲೂ ಬಡವರು ಇರುವರಷ್ಟೆ; ಆದುದರಿಂದ, “ನೀವು ಸ್ವದೇಶದವರಾದ ನಿಮ್ಮ ಸಹೋದರರಿಗೂ, ಬಡವರಿಗೂ ಮತ್ತು ಗತಿಯಿಲ್ಲದವರಿಗೂ ಕೈನೀಡಿ ಸಹಾಯಮಾಡಬೇಕು” ಎಂದು ನಾನು ನಿಮಗೆ ಆಜ್ಞಾಪಿಸಿದ್ದೇನೆ.

[12] ಸ್ವದೇಶದವರೊಳಗೆ ಯಾವ ಇಬ್ರಿಯ ಪುರುಷನಾಗಲಿ, ಸ್ತ್ರೀಯಾಗಲಿ ನಿಮಗೆ ದಾಸರಾಗಿರುವುದಕ್ಕಾಗಿ ಮಾರಲ್ಪಡುವ ಪಕ್ಷಕ್ಕೆ, ಅಂಥವರು ಆರು ವರ್ಷಗಳವರೆಗೂ ನಿಮ್ಮ ಸೇವೆ ಮಾಡಲಿ; ಏಳನೆಯ ವರ್ಷದಲ್ಲಿ ನೀವು ಅವರನ್ನು ಬಿಡುಗಡೆ ಮಾಡಬೇಕು.

[13] ಬಿಡುಗಡೆ ಮಾಡುವಾಗ ಬರಿಗೈಯಲ್ಲಿ ಕಳುಹಿಸಿಬಿಡಬಾರದು.

[14] ನಿಮ್ಮ ದೇವರಾದ ಯೆಹೋವನು ನಿಮಗೆ ಅನುಗ್ರಹಿಸಿರುವ ಮೇರೆಗೆ ನಿಮಗಿರುವ ಹಿಂಡು, ದವಸ, ದ್ರಾಕ್ಷಿ ಆಲೆ ಮತ್ತು ಕಣ ಇವುಗಳಲ್ಲಿ ಉದಾರವಾಗಿ ಕೊಟ್ಟು ಕಳುಹಿಸಿಬಿಡಬೇಕು.

[15] ಐಗುಪ್ತದೇಶದಲ್ಲಿ ನೀವೇ ದಾಸರಾಗಿರಲು ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡುಗಡೆಮಾಡಿದನು ಎಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ಇದಕ್ಕೋಸ್ಕರವಾಗಿಯೇ ನಾನು ಈ ಆಜ್ಞೆಯನ್ನು ನಿಮಗೆ ಈಗ ಕೊಟ್ಟಿದ್ದೇನೆ.

[16] ಒಂದು ವೇಳೆ ಆ ದಾಸನು ನಿಮ್ಮ ಬಳಿಯಲ್ಲಿ ಸುಖವಾಗಿದ್ದು, ನಿಮ್ಮನ್ನೂ ಮತ್ತು ನಿಮ್ಮ ಮನೆಯವರನ್ನೂ ಪ್ರೀತಿಸಿ, ತಾನು ಬಿಡುಗಡೆಯಾಗಿ ಹೋಗುವುದಿಲ್ಲ ಎಂದು ಹೇಳುವ ಪಕ್ಷಕ್ಕೆ,

[17] ನೀವು ದಬ್ಬಳದಿಂದ ಅವನ ಕಿವಿಯನ್ನು ಚುಚ್ಚಿ, ಕದಕ್ಕೆ ಸಿಕ್ಕಿಸಬೇಕು. ಆ ದಿನದಿಂದ ಅವನು ನಿಮಗೆ ಶಾಶ್ವತ ದಾಸನಾಗಿರಬೇಕು. ಅದೇ ರೀತಿಯಾಗಿ ದಾಸಿಯರ ವಿಷಯದಲ್ಲಿಯೂ ನಡೆದುಕೊಳ್ಳಬೇಕು.

[18] ದಾಸನನ್ನು ಬಿಡುಗಡೆಮಾಡುವುದು ಕಷ್ಟವೆಂದು ಹೇಳಿಕೊಳ್ಳಬಾರದು. ಅವನು ಆರು ವರ್ಷಗಳು ನಿಮ್ಮ ದಾಸನಾಗಿದ್ದು ಕೂಲಿಯಾಳಿಗಿಂತ ಎರಡರಷ್ಟು ಪ್ರಯೋಜನವನ್ನು ಉಂಟುಮಾಡಿದನಲ್ಲಾ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಗೊಳಿಸುವನು.

[19] ದನಗಳಲ್ಲಿಯೂ ಮತ್ತು ಆಡುಕುರಿಗಳಲ್ಲಿಯೂ ಚೊಚ್ಚಲಾದ ಗಂಡನ್ನು ನಿಮ್ಮ ದೇವರಾದ ಯೆಹೋವನಿಗಾಗಿ ಪ್ರತಿಷ್ಠಿಸಬೇಕು. ಚೊಚ್ಚಲಾದ ಹೋರಿಯಿಂದ ಕೆಲಸಮಾಡಿಸಬಾರದು; ಚೊಚ್ಚಲಾದ ಕುರಿಯ ಉಣ್ಣೆಯನ್ನು ಕತ್ತರಿಸಬಾರದು.

[20] ಪ್ರತಿ ವರ್ಷದಲ್ಲಿ ನೀವೂ ಮತ್ತು ನಿಮ್ಮ ಮನೆಯವರೂ ಅವುಗಳನ್ನು ನಿಮ್ಮ ದೇವರಾದ ಯೆಹೋವನು ಆರಿಸಿಕೊಳ್ಳುವ ಸ್ಥಳದಲ್ಲಿ ಆತನ ಸನ್ನಿಧಿಯಲ್ಲೇ ಕೊಯಿದು ತಿನ್ನಬೇಕು.

[21] ಅದು ಕುಂಟಾಗಿ, ಕುರುಡಾಗಿ ಇಲ್ಲವೆ ಬೇರೆ ವಿಧದಿಂದ ವಿರೂಪವಾಗಿದ್ದರೆ ಅದನ್ನು ನಿಮ್ಮ ದೇವರಾದ ಯೆಹೋವನಿಗೆ ಸಮರ್ಪಿಸಬಾರದು.

[22] ಅದನ್ನು ನಿಮ್ಮ ಊರಲ್ಲೇ ತಿನ್ನಬೇಕು. ಶುದ್ಧರೂ ಮತ್ತು ಅಶುದ್ಧರೂ ಜಿಂಕೆ ದುಪ್ಪಿಗಳ ಮಾಂಸವನ್ನು ತಿನ್ನುವ ಪ್ರಕಾರ ಇವುಗಳನ್ನೂ ತಿನ್ನಬಹುದು.

[23] ನೀವು ರಕ್ತವನ್ನು ಮಾತ್ರ ಊಟಮಾಡಬಾರದು; ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.

ಧರ್ಮೋಪದೇಶಕಾಂಡ — Chapters