[1] ಸ್ವದೇಶದವನ ಎತ್ತಾಗಲಿ ಅಥವಾ ಕುರಿಯಾಗಲಿ ದಾರಿ ತಪ್ಪಿ ಹೋಗಿರುವುದನ್ನು ನೀವು ನೋಡಿಯೂ ನೋಡದಂತೆ ಅದನ್ನು ಬಿಟ್ಟು ಹೋಗಬಾರದು; ಅದನ್ನು ಅಟ್ಟಿಸಿಕೊಂಡು ಹೋಗಿ ಅವನಿಗೆ ಕೊಡಲೇಬೇಕು.
[2] ಅವನು ನಿಮಗೆ ದೂರವಾಗಿದ್ದರೆ ಇಲ್ಲವೆ ಅವನು ಯಾರೋ ಎಂದು ನಿಮಗೆ ತಿಳಿಯದೆ ಹೋದರೆ, ಆ ಪಶುವನ್ನು ನಿಮ್ಮ ಮನೆಗೆ ಹೊಡೆದುಕೊಂಡು ಬಂದು ಕಾಯಬೇಕು. ಅವನು ಅದನ್ನು ಹುಡುಕುತ್ತಾ ಬಂದಾಗ ನೀವು ಅದನ್ನು ಅವನಿಗೆ ಹಿಂತಿರುಗಿ ಕೊಡಬೇಕು.
[3] ಅವನ ಕತ್ತೆಯಾಗಲಿ, ಬಟ್ಟೆಯಾಗಲಿ, ಅವನು ಕಳೆದುಕೊಂಡ ಯಾವ ವಸ್ತುವಾಗಲಿ ನಿಮಗೆ ಸಿಕ್ಕಿದರೆ ಹಾಗೆಯೇ ಮಾಡಬೇಕು; ನೋಡದಂತೆ ಇರಲೇ ಬಾರದು.
[4] ಸ್ವದೇಶದವನ ಕತ್ತೆಯಾಗಲಿ ಅಥವಾ ಎತ್ತಾಗಲಿ ದಾರಿಯಲ್ಲಿ ಬಿದ್ದಿರುವುದನ್ನು ನೀವು ಕಂಡರೆ ಕಾಣದವರಂತೆ ಹೋಗದೆ ಅವನಿಗೆ ಸಹಾಯಮಾಡಿ ಎಬ್ಬಿಸಬೇಕು.
[5] ಸ್ತ್ರೀಯು ಪುರುಷವೇಷವನ್ನಾಗಲಿ ಅಥವಾ ಪುರುಷನು ಸ್ತ್ರೀವೇಷವನ್ನಾಗಲಿ ಹಾಕಿಕೊಳ್ಳಬಾರದು; ಹಾಗೆ ಮಾಡುವವರು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯರು.
[6] ನೀವು ದಾರಿಯಲ್ಲಿ ಹೋಗುವಾಗ ಮರದ ಮೇಲಾಗಲಿ ಅಥವಾ ನೆಲದ ಮೇಲಾಗಲಿ ಇರುವ ಒಂದು ಪಕ್ಷಿಯ ಗೂಡಿನೊಳಗೆ ಮರಿಗಳು ಅಥವಾ ಮೊಟ್ಟೆಗಳು ಇದ್ದು, ಅವುಗಳ ಮೇಲೆ ತಾಯಿ ಹೊದಗಿರುವುದನ್ನು ಕಂಡರೆ ಮರಿಗಳನ್ನು ತೆಗೆದುಕೊಳ್ಳಬಹುದೇ ಹೊರತು ತಾಯಿಯನ್ನು ಹಿಡಿದುಕೊಳ್ಳಬಾರದು.
[7] ನೀವು ಹೀಗೆ ನಡೆದುಕೊಂಡರೆ ನಿಮಗೆ ಶ್ರೇಯಸ್ಸು ಉಂಟಾಗುವುದು, ಮತ್ತು ಬಹುಕಾಲ ಬಾಳುವಿರಿ.
[8] ಹೊಸ ಮನೆಯನ್ನು ಕಟ್ಟಿಸಿಕೊಳ್ಳುವಾಗ ಯಾವನಾದರೂ ಅದರ ಮಾಳಿಗೆಯಿಂದ ಬಿದ್ದು ನಿಮಗೆ ಜೀವಹತ್ಯ ದೋಷವುಂಟಾಗದಂತೆ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸಬೇಕು.
[9] ದ್ರಾಕ್ಷಿತೋಟಗಳಲ್ಲಿ ಬೇರೆ ವಿಧವಾದ ಬೀಜವನ್ನು ಬಿತ್ತಬಾರದು; ಹಾಗೆ ಮಾಡಿದರೆ ಯಾಜಕರು ಆ ಬೆಳೆಯನ್ನು, ದ್ರಾಕ್ಷಿಯ ಬೆಳೆಯನ್ನು ಅಂತೂ ಆ ತೋಟದ ಎಲ್ಲಾ ಬೆಳೆಯನ್ನು ದೇವರಿಗೆ ಸಮರ್ಪಿಸಬೇಕು.
[10] ಎತ್ತನ್ನೂ ಮತ್ತು ಕತ್ತೆಯನ್ನೂ ಜೊತೆಮಾಡಿ ನೇಗಿಲಿಗೆ ಕಟ್ಟಿ ಉಳಬಾರದು.
[11] ನಾರು ಹಾಗು ಉಣ್ಣೆಯೂ ಕೂಡಿರುವ ಬಟ್ಟೆಯನ್ನು ಹಾಕಿಕೊಳ್ಳಬಾರದು.
[12] ನೀವು ಹೊದ್ದುಕೊಳ್ಳುವ ಬಟ್ಟೆಯ ನಾಲ್ಕು ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಬೇಕು.
[13] ಯಾವನಾದರೂ ತಾನು ಮದುವೆಮಾಡಿಕೊಂಡ ಸ್ತ್ರೀಯನ್ನು ದ್ವೇಷಿಸಿ, ಅವಳ ವಿಷಯದಲ್ಲಿ ಇಲ್ಲಸಲ್ಲದ ಕೆಟ್ಟ ಮಾತುಗಳನ್ನು ಆಡಿ,
[14] “ನಾನು ಇವಳನ್ನು ಮದುವೆಮಾಡಿಕೊಂಡೆನು; ಆದರೆ ಇವಳೊಡನೆ ಸಂಗಮಿಸಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು” ಎಂದು ಹೇಳಿ ಅವಳ ಹೆಸರನ್ನು ಕೆಡಿಸಿದರೆ,
[15] ಅವಳ ತಾಯಿ ತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕವಿಲ್ಲದವಳು ಎಂಬುವುದಕ್ಕೆ ನಿದರ್ಶನವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು.
[16] ಆ ಸ್ತ್ರೀಯ ತಂದೆ ಅವರಿಗೆ, “ನಾನು ನನ್ನ ಮಗಳನ್ನು ಈ ಪುರುಷನಿಗೆ ಮದುವೆಮಾಡಿಕೊಟ್ಟ ಮೇಲೆ
[17] ಇವನು ಅವಳನ್ನು ದ್ವೇಷಿಸಿ, ಪರಪುರುಷನ ಸಂಪರ್ಕ ಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳ ಹೆಸರನ್ನು ಅವಮಾನಪಡಿಸುತ್ತಾನೆ. ಇಗೋ ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲ ಎಂಬುವುದಕ್ಕೆ ಇದೇ ಪ್ರಮಾಣ” ಎಂದು ಹೇಳಿ ಅವಳ ಹೊದಿಕೆಯನ್ನು ಆ ಊರಿನ ಹಿರಿಯರ ಮುಂದೆ ಇಡಬೇಕು.
[18] ಆ ಊರಿನ ಹಿರಿಯರು ಅವನನ್ನು ಹಿಡಿಸಿ ಅವನನ್ನು ಹೊಡಿಸಬೇಕು.
[19] ಇಸ್ರಾಯೇಲಳಾದ ಹೆಣ್ಣಿನ ವಿಷಯದಲ್ಲಿ ಆ ಪುರುಷನು ನಿರಾಧಾರವಾದ ತಪ್ಪು ಹೊರಿಸಿದ್ದರಿಂದ, ಅವನಿಗೆ ನೂರು ಶೆಕೆಲ್ ಬೆಳ್ಳಿ ದಂಡವನ್ನು ವಿಧಿಸಿ, ಆ ಹಣವನ್ನು ಅವಳ ತಂದೆಗೆ ಕೊಡಿಸಬೇಕು. ಮತ್ತು ಅವನು ಆ ಸ್ತ್ರೀಯನ್ನು ಹೆಂಡತಿಯನ್ನಾಗಿಯೇ ಇಟ್ಟುಕೊಳ್ಳಬೇಕು; ಅವನ ಜೀವಮಾನಕಾಲವೆಲ್ಲಾ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ.
[20] ಆದರೆ ಆ ಹೆಣ್ಣು ವಿವಾಹಕ್ಕೆ ಮುಂಚೆ ದೈಹಿಕವಾಗಿ ಪುರುಷಸಂಪರ್ಕ ಮಾಡಿದ್ದು ನಿಜ ಎಂದು ತಿಳಿದುಬಂದರೆ,
[21] ಅವಳು ತಂದೆಯ ಅಧೀನದಲ್ಲಿರುವಾಗಲ್ಲೇ ಪರಪುರುಷನೊಡನೆ ಸಂಪರ್ಕಮಾಡಿ ಇಸ್ರಾಯೇಲರೊಳಗೆ ದುರಾಚಾರವನ್ನು ನಡಿಸಿದ್ದರಿಂದ, ಅವರು ಅವಳನ್ನು ತಂದೆಯ ಮನೆಯ ಬಾಗಿಲಿಗೆ ಕರೆಯಿಸಬೇಕು; ಊರಿನವರೆಲ್ಲರು ಅವಳನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ನಿವಾರಿಸಿಕೊಳ್ಳಬೇಕು.
[22] ಯಾವನಾದರೂ ಇನ್ನೊಬ್ಬನ ಹೆಂಡತಿಯೊಡನೆ ವ್ಯಭಿಚಾರಮಾಡಿದ್ದು ತಿಳಿದುಬಂದರೆ ಆ ಸ್ತ್ರೀ ಮತ್ತು ಪುರುಷರಿಬ್ಬರಿಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ಇಸ್ರಾಯೇಲರ ಮಧ್ಯದಿಂದ ತೆಗೆದುಹಾಕಬೇಕು.
[23] ಒಬ್ಬನಿಗೆ ನಿಶ್ಚಿತಳಾದ ಹೆಣ್ಣನ್ನು ಯಾವನಾದರೂ ಊರೊಳಗೆ ಮರುಳುಗೊಳಿಸಿ ಸಂಗಮಿಸಿದರೆ,
[24] ನೀವು ಅವರಿಬ್ಬರನ್ನೂ ಊರುಬಾಗಿಲಿನ ಹೊರಕ್ಕೆ ಕರೆತಂದು ಕಲ್ಲೆಸೆದು ಕೊಲ್ಲಬೇಕು. ಒಬ್ಬನಿಗೆ ನಿಶ್ಚಿತಳಾದ ಸ್ತ್ರೀಯನ್ನು ಕೆಡಿಸಿದ್ದರಿಂದ ಆ ಪುರುಷನಿಗೂ, ಊರಲ್ಲಿದ್ದು ರಕ್ಷಣೆಗಾಗಿ ಕೂಗಿಕೊಳ್ಳದೆ ಹೋದುದರಿಂದ ಆ ಸ್ತ್ರೀಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
[25] ಆದರೆ ಆ ಪುರುಷನು ನಿಶ್ಚಿತಳಾದ ಆ ಸ್ತ್ರೀಯನ್ನು ಅಡವಿಯಲ್ಲಿ ಬಲಾತ್ಕಾರದಿಂದ ಸಂಗಮಿಸಿದ್ದರೆ ಪುರುಷನಿಗೆ ಮಾತ್ರ ಮರಣಶಿಕ್ಷೆಯಾಗಬೇಕು.
[26] ಆ ಸ್ತ್ರೀಗೆ ಯಾವ ಶಿಕ್ಷೆಯೂ ಆಗಬಾರದು; ಅವಳಲ್ಲಿ ಮರಣ ಶಿಕ್ಷೆಗೆ ಪಾತ್ರವಾದ ಅಪರಾಧವೇನೂ ಇಲ್ಲ. ಒಬ್ಬ ಮನುಷ್ಯನು ಮತ್ತೊಬ್ಬನ ಮೇಲೆ ಬಿದ್ದು ಕೊಲ್ಲುವುದು ಹೇಗೋ ಈ ಸಂಗತಿಯೂ ಹಾಗೆಯೇ ಎಂದು ತಿಳಿಯಬೇಕು.
[27] ಆ ಸ್ತ್ರೀಯು ಅಡವಿಯಲ್ಲೇ ಅವನ ಕೈಗೆ ಸಿಕ್ಕಿದ್ದರಿಂದ ಅವಳು ಕೂಗಿಕೊಂಡರೂ ತಪ್ಪಿಸುವವರು ಇರಲಿಲ್ಲ.
[28] ಯಾರಿಗೂ ನಿಶ್ಚಯವಾಗದೆ ಇರುವ ಸ್ತ್ರೀಯನ್ನು ಒಬ್ಬನು ಹಿಡಿದು ಸಂಗಮಿಸಿದ್ದು ತಿಳಿದು ಬಂದರೆ,
[29] ಅವನು ಅವಳನ್ನು ಮಾನಭಂಗಪಡಿಸಿದ್ದರಿಂದ, ಅವಳ ತಂದೆಗೆ ಐವತ್ತು ಶೆಕೆಲ್ ಬೆಳ್ಳಿಯನ್ನು ಕೊಟ್ಟು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು. ಅವನು ಬದುಕುವ ತನಕ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ.
[30] ತಂದೆಗೆ ಹೆಂಡತಿಯಾದವಳನ್ನು ಸಂಗಮಿಸಲೇ ಬಾರದು; ಅದು ತಂದೆಗೆ ಅಪಮಾನಪಡಿಸಿದ ಹಾಗಾಗುವುದು.