Skip to content
Opens in a new window
Listen to this chapter • 4:50

[1] ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗಿ ಕೊಡುವ ದೇಶದಲ್ಲಿ ಹತನಾದ ಮನುಷ್ಯನ ಶವವು ಅಡವಿಯಲ್ಲಿ ಬಿದ್ದಿರುವುದನ್ನು ನೀವು ಕಂಡರೆ ಮತ್ತು ಅವನನ್ನು ಕೊಂದವನು ಯಾರೆಂಬುದು ತಿಳಿಯದೆ ಹೋದರೆ,

[2] ನಿಮ್ಮ ಹಿರಿಯರೂ ಮತ್ತು ನ್ಯಾಯಾಧಿಪತಿಗಳೂ ಬಂದು ಹತನಾದವನ ಶವದ ಸುತ್ತಲಿರುವ ಊರುಗಳಲ್ಲಿ ಯಾವುದು ಹತ್ತಿರವೆಂದು ತಿಳಿದುಕೊಳ್ಳುವುದಕ್ಕೆ ಅಳತೆಮಾಡಬೇಕು.

[3] ಯಾವ ಊರು ಹತ್ತಿರವಾಗಿದೆಯೋ ಆ ಊರಿನ ಹಿರಿಯರು ಇನ್ನೂ ನೊಗಕ್ಕೆ ಕಟ್ಟಲ್ಪಡದೆಯೂ, ಯಾವ ಕೆಲಸವನ್ನೂ ಮಾಡದೆಯೂ ಇರುವ ಒಂದು ಮಣಕವನ್ನು ತೆಗೆದುಕೊಳ್ಳಬೇಕು.

[4] ಅವರು ಅದನ್ನು ಎಂದಿಗೂ ವ್ಯವಸಾಯಕ್ಕೆ ಉಪಯೋಗಿಸದಂಥ ಅಥವಾ ನೀರು ಯಾವಾಗಲೂ ಹರಿಯುವಂಥ ತಗ್ಗಿಗೆ ತೆಗೆದುಕೊಂಡು ಹೋಗಿ, ಅಲ್ಲಿ ಅದರ ಕುತ್ತಿಗೆಯನ್ನು ಮುರಿದು ಕೊಲ್ಲಬೇಕು.

[5] ಲೇವಿ ಕುಲದವರಾದ ಯಾಜಕರಲ್ಲಿ ಕೆಲವರು ಹತ್ತಿರ ಬರಬೇಕು. ನಿಮ್ಮ ದೇವರಾದ ಯೆಹೋವನು ಅವರನ್ನೇ ತನ್ನ ಸಾನ್ನಿಧ್ಯಸೇವೆಯನ್ನು ಮಾಡುವುದಕ್ಕೂ ಮತ್ತು ತನ್ನ ಹೆಸರಿನಿಂದ ಜನರನ್ನು ಆಶೀರ್ವದಿಸುವುದಕ್ಕೂ ಆರಿಸಿಕೊಂಡಿದ್ದಾನಲ್ಲಾ; ಅನುಮಾನವಾದ ಎಲ್ಲಾ ವ್ಯಾಜ್ಯಗಳ ಮತ್ತು ಹೊಡೆದಾಟಗಳ ವಿಷಯದಲ್ಲಿ ಅವರೇ ತೀರ್ಮಾನಿಸುವವರು, ಅವರ ಮಾತುಗಳನ್ನು ಕೇಳಿರಿ.

[6] ಹತನಾದ ಮನುಷ್ಯನಿಗೆ ಹತ್ತಿರವಿರುವ ಗ್ರಾಮದ ಹಿರಿಯರು, ತಗ್ಗಿನಲ್ಲಿ ಕುತ್ತಿಗೆ ಮುರಿಯಲ್ಪಟ್ಟ ಆ ಮಣಕದ ಮೇಲೆ ತಮ್ಮ ಕೈಗಳನ್ನು ತೊಳೆದುಕೊಂಡು,

[7] “ನಮ್ಮ ಕೈಗಳು ಈ ಹತ್ಯವನ್ನು ಮಾಡಲಿಲ್ಲ, ನಮ್ಮ ಕಣ್ಣುಗಳು ನೋಡಲಿಲ್ಲ.

[8] ಯೆಹೋವನೇ ನೀನು ಬಿಡುಗಡೆಮಾಡಿದ ನಿನ್ನ ಜನರನ್ನು ಕ್ಷಮಿಸಬೇಕು; ಅನ್ಯಾಯವಾದ ನರಹತ್ಯದೋಷ ಫಲವು ನಿನ್ನ ಜನರಾದ ಇಸ್ರಾಯೇಲರಿಗೆ ತಗಲದಿರಲಿ” ಎಂದು ಹೇಳಬೇಕು.

[9] ಆಗ ಆ ರಕ್ತಾಪರಾಧವು ಕ್ಷಮಿಸಲ್ಪಡುವುದು. ಹೀಗೆ ಯೆಹೋವನ ದೃಷ್ಟಿಯಲ್ಲಿ ಸರಿಯಾದುದನ್ನು ಮಾಡುವುದರಿಂದ ನೀವೇ ಅನ್ಯಾಯವಾದ ನರಹತ್ಯದೋಷವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕುವಿರಿ.

[10] ನೀವು ಶತ್ರುಗಳೊಡನೆ ಯುದ್ಧಮಾಡಲಾಗಿ ನಿಮ್ಮ ದೇವರಾದ ಯೆಹೋವನ ಅನುಗ್ರಹದಿಂದ ಅವರನ್ನು ಸೋಲಿಸಿದಾಗ ನೀವು ಅವರನ್ನು ಸೆರೆಯಾಗಿ ಒಯ್ಯಬೇಕು.

[11] ನಿಮ್ಮಲ್ಲಿ ಯಾವನಾದರೂ ಸೆರೆಯವರಲ್ಲಿ ಸುಂದರ ಸ್ತ್ರೀಯನ್ನು ಕಂಡು ಮೋಹಿಸಿ ಮದುವೆಮಾಡಿಕೊಳ್ಳಬೇಕೆಂದು ಅಪೇಕ್ಷಿಸಿದರೆ,

[12] ಅವಳನ್ನು ಮನೆಗೆ ಕರೆದುಕೊಂಡು ಬರಲಿ, ತರುವಾಯ ಅವಳು ಕ್ಷೌರಮಾಡಿಸಿಕೊಂಡು, ಉಗುರುಗಳನ್ನು ಕತ್ತರಿಸಿಕೊಳ್ಳುವಳು.

[13] ಅವಳು ಸೆರೆಯ ಬಟ್ಟೆಗಳನ್ನು ತೆಗೆದಿಟ್ಟು, ಅವನ ಮನೆಯಲ್ಲಿ ಒಂದು ತಿಂಗಳಿನ ವರೆಗೆ ತಾಯಿ ಮತ್ತು ತಂದೆಗಳ ವಿಯೋಗದ ನಿಮಿತ್ತ ಹಂಬಲಿಸಲಿ. ಆಮೇಲೆ ಅವನು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬಹುದು.

[14] ತರುವಾಯ ಅವಳು ಅವನಿಗೆ ಇಷ್ಟವಾಗದೆಹೋದರೆ ಅವನು ಅವಳನ್ನು ಅವಳ ಮನಸ್ಸು ಬಂದಲ್ಲಿಗೆ ಕಳುಹಿಸಿಬಿಡಬೇಕು. ಅವಳನ್ನು ಸಂಗಮಿಸಿದ್ದರಿಂದ ಹಣ ಕೊಟ್ಟು ದಾಸತ್ವಕ್ಕೆ ಮಾರಲೂ ಬಾರದು, ದಾಸಿಯಂತೆ ನಡಿಸಲೂ ಬಾರದು.

[15] ಯಾವನಾದರು ಇಬ್ಬರು ಹೆಂಡತಿಯರನ್ನು ಮಾಡಿಕೊಂಡು ಅವರಲ್ಲಿ ಒಬ್ಬಳನ್ನು ಪ್ರೀತಿಸಿ, ಮತ್ತೊಬ್ಬಳನ್ನು ತಿರಸ್ಕರಿಸುವ ಸಂದರ್ಭ ಬಂದಾಗ ಅವರಿಬ್ಬರೂ ಅವನಿಂದ ಮಕ್ಕಳನ್ನು ಪಡೆದಿದ್ದರೆ, ಚೊಚ್ಚಲು ಮಗನು ತಿರಸ್ಕರಿಸಲ್ಪಟ್ಟವಳಲ್ಲಿಯೇ ಹುಟ್ಟಿದ್ದರೆ,

[16] ತಂದೆಯಾದವನು ತನ್ನ ಆಸ್ತಿಯನ್ನು ಮಕ್ಕಳಿಗೆ ಸ್ವತ್ತಾಗಿ ಕೊಡುವಾಗ ಆ ತಿರಸ್ಕರಿಸಲ್ಪಟ್ಟವಳ ಮಗನನ್ನು ತಳ್ಳಿಬಿಟ್ಟು ತಾನು ಪ್ರೀತಿಸುವ ಹೆಂಡತಿಯ ಮಗನನ್ನೇ ಚೊಚ್ಚಲನೆಂದು ಭಾವಿಸಬಾರದು.

[17] ತಿರಸ್ಕರಿಸಲ್ಪಟ್ಟವಳ ಮಗನೇ ಚೊಚ್ಚಲನೆಂದು ಒಪ್ಪಿ, ಅವನಿಗೆ ಎರಡು ಭಾಗಗಳನ್ನು ಕೊಡಬೇಕು. ಅವನೇ ತಂದೆಯ ವೀರ್ಯಕ್ಕೆ ಪ್ರಥಮಫಲವೂ ಮತ್ತು ಚೊಚ್ಚಲುತನದ ಹಕ್ಕಿಗೆ ಬಾಧ್ಯನೂ ಆಗಿದ್ದಾನಲ್ಲಾ.

[18] ಒಬ್ಬ ಮಗನು ತಂದೆತಾಯಿಗಳ ಆಜ್ಞೆಗೆ ಒಳಗಾಗದೆ ಶಿಕ್ಷಿಸಲ್ಪಟ್ಟರೂ, ಮೊಂಡನೂ ಮತ್ತು ಅವಿಧೇಯನೂ ಆಗಿ,

[19] ಅವರ ಮಾತನ್ನು ಕೇಳದೆಹೋದರೆ ತಂದೆತಾಯಿಗಳು ಅವನನ್ನು ಹಿಡಿದು,

[20] ಊರು ಬಾಗಿಲಿಗೆ ಹಿರಿಯರ ಮುಂದೆ ತಂದು ಅವರಿಗೆ, “ಈ ನಮ್ಮ ಮಗನು ನಮ್ಮ ಮಾತನ್ನು ಕೇಳುವುದೇ ಇಲ್ಲ, ಆಜ್ಞೆಗೆ ಒಳಗಾಗುವುದಿಲ್ಲ; ಇವನು ಮೊಂಡ, ಕುಡುಕ ಮತ್ತು ಹೊಟ್ಟೆಬಾಕ” ಎಂದು ಸಾಕ್ಷಿಹೇಳಬೇಕು.

[21] ಆಗ ಊರಿನವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದೊಳಗಿಂದ ತೆಗೆದುಹಾಕಿಬಿಡಬೇಕು. ಇಸ್ರಾಯೇಲರೆಲ್ಲರೂ ಇದನ್ನು ಕೇಳಿ ಭಯಪಡುವರು.

[22] ಅಪರಾಧ ಮಾಡಿದವನು ಮರಣಶಿಕ್ಷೆಯನ್ನು ಹೊಂದಿದ ಮೇಲೆ ನೀವು ಅವನ ಶವವನ್ನು ಮರದ ಕಂಬಕ್ಕೆ ತೂಗುಹಾಕಿದರೆ,

[23] ಅದು ರಾತ್ರಿಯೆಲ್ಲಾ ಮರದ ಮೇಲೆ ಇರಬಾರದು; ಅದೇ ದಿನದಲ್ಲಿ ಅದನ್ನು ನೆಲದಲ್ಲಿ ಹೂಣಿಡಬೇಕು. ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶವು ಅಪವಿತ್ರವಾಗಬಾರದು. ಮರಕ್ಕೆ ತೂಗಹಾಕಲ್ಪಟ್ಟವನು ದೇವರ ಶಾಪವನ್ನು ಹೊಂದಿದವನಾಗಿರುತ್ತಾನೆ.

ಧರ್ಮೋಪದೇಶಕಾಂಡ — Chapters