Skip to content
Opens in a new window
Listen to this chapter • 4:30

[1] ಬೀಜಹೊಡಿಸಿಕೊಂಡವರು ಅಥವಾ ರಹಸ್ಯಾಂಗವನ್ನು ಛೇದಿಸಿಕೊಂಡವರು ಯೆಹೋವನ ಸಭೆಯಲ್ಲಿ ಸೇರಬಾರದು.

[2] ಅನೈತಿಕ ಸಂಬಂಧದಿಂದ ಹುಟ್ಟಿದ ಸಂತತಿಯವರು, ಹತ್ತನೆಯ ತಲೆಯವರಾದರೂ ಅವರು ಯೆಹೋವನ ಸಭೆಗೆ ಸೇರಬಾರದು.

[3] ಅಮ್ಮೋನಿಯರಾಗಲಿ ಅಥವಾ ಮೋವಾಬ್ಯರಾಗಲಿ ಯೆಹೋವನ ಸಭೆಗೆ ಎಂದೆಂದಿಗೂ ಸೇರಬಾರದು. ಅವರ ಸಂತತಿಯವರು ಹತ್ತನೆಯ ತಲೆಯವರಾದರೂ ಯೆಹೋವನ ಸಭೆಗೆ ಸೇರಬಾರದು.

[4] ಯಾಕೆಂದರೆ ನೀವು ಐಗುಪ್ತದೇಶದಿಂದ ಬಂದಾಗ ಅಮ್ಮೋನಿಯರು ಅನ್ನಪಾನಗಳನ್ನು ತಂದು ನಿಮ್ಮನ್ನು ಎದುರುಗೊಳ್ಳಲಿಲ್ಲ; ಮೋವಾಬ್ಯರು ನಿಮ್ಮನ್ನು ಶಪಿಸುವುದಕ್ಕಾಗಿ ಬೆಯೋರನ ಮಗನಾದ ಬಿಳಾಮನಿಗೆ ಹಣಕೊಟ್ಟು ಎರಡು ನದಿಗಳ ಮಧ್ಯದಲ್ಲಿರುವ ಅರಾಮಿನ ಪೆತೋರ್ ಊರಿನಿಂದ ಅವನನ್ನು ಕರೆಯಿಸಿದರು.

[5] ಆದರೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಪ್ರೀತಿಸಿದ್ದರಿಂದ ಬಿಳಾಮನ ಮಾತಿಗೆ ಸಮ್ಮತಿಸದೆ ಅವನಿಂದ ಶಾಪವನ್ನು ನುಡಿಸದೆ ಆಶೀರ್ವಾದವನ್ನೇ ಹೇಳಿಸಿದನು.

[6] ನಿಮ್ಮ ಜೀವಮಾನಕಾಲವೆಲ್ಲಾ ಅವರ ಯೋಗಕ್ಷೇಮವನ್ನು ಬಯಸಲೇ ಬಾರದು.

[7] ಎದೋಮ್ಯರನ್ನು ಸಂಪೂರ್ಣವಾಗಿ ನಿಷೇಧಿಸಬಾರದು; ಅವರು ನಮ್ಮ ಹತ್ತಿರ ಸಂಬಂಧಿಕರು. ಐಗುಪ್ತ್ಯರನ್ನೂ ಸಂಪೂರ್ಣವಾಗಿ ನಿಷೇಧಿಸಬಾರದು; ಅವರ ದೇಶದಲ್ಲಿ ನೀವು ಪ್ರವಾಸಿಗಳಾಗಿದ್ದಿರಲ್ಲಾ.

[8] ಅವರ ಸಂತತಿಯವರಲ್ಲಿ ಮೂರನೆಯ ತಲೆಯವರು ಯೆಹೋವನ ಸಭೆಗೆ ಸೇರಬಹುದು.

[9] ನೀವು ಶತ್ರುಗಳೊಡನೆ ಯುದ್ಧಕ್ಕೆ ಹೊರಟು ಪಾಳೆಯದಲ್ಲಿರುವಾಗ ಯಾವ ಅಶುದ್ಧ ಕಾರ್ಯಗಳು ನಡೆಯದಂತೆ ಎಚ್ಚರದಿಂದಿರಬೇಕು.

[10] ರಾತ್ರಿಕಾಲದಲ್ಲಿ ವೀರ್ಯಸ್ಖಲನದಿಂದ ಯಾವನಾದರೂ ಅಶುದ್ಧನಾದರೆ, ಅವನು ಪಾಳೆಯದೊಳಗೆ ಇರದೆ ಹೊರಗೆ ಇರಬೇಕು.

[11] ಅವನು ಸಂಜೆಯ ವೇಳೆಯಲ್ಲಿ ಸ್ನಾನಮಾಡಿ ಸೂರ್ಯನು ಮುಳುಗಿದ ಮೇಲೆ ಪಾಳೆಯದೊಳಗೆ ಬರಬಹುದು.

[12] ಪಾಳೆಯದ ಹೊರಗೆ ಪಾಯಖಾನೆಗಾಗಿ ಒಂದು ಸ್ಥಳವನ್ನು ಗೊತ್ತುಮಾಡಬೇಕು.

[13] ಯುದ್ಧದ ಸಾಮಾನುಗಳಲ್ಲದೆ ನಿಮ್ಮ ಬಳಿಯಲ್ಲಿ ಸಲಿಕೆ ಇರಬೇಕು; ನೀವು ಬಹಿರ್ಭೂಮಿಗೆ ಹೋದಾಗ ಆ ಸಲಿಕೆಯಿಂದ ಅಗೆದು ಕಲ್ಮಷವನ್ನು ಮುಚ್ಚಿಬಿಡಬೇಕು.

[14] ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಕಾಪಾಡುವುದಕ್ಕೂ, ಶತ್ರುಗಳನ್ನು ನಿಮ್ಮ ಕೈವಶಮಾಡುವುದಕ್ಕೂ ನಿಮ್ಮ ಪಾಳೆಯದೊಳಗೆ ಸಂಚಾರಮಾಡುತ್ತಾನಲ್ಲಾ; ಆದುದರಿಂದ ಪಾಳೆಯವು ನಿಮರ್ಲವಾಗಿರಬೇಕು; ನಿಮ್ಮಲ್ಲಿ ಅಶುದ್ಧವೇನಾದರೂ ಕಂಡುಬಂದರೆ ಆತನು ನಿಮ್ಮನ್ನು ಬಿಟ್ಟುಹೋದಾನು.

[15] ತಪ್ಪಿಸಿಕೊಂಡ ಗುಲಾಮನು ನಿಮ್ಮಲ್ಲಿರುವುದಕ್ಕೆ ಬಂದರೆ ಅವನನ್ನು ಅವನ ದಣಿಗೆ ಪುನಃ ವಶಪಡಿಸಬಾರದು.

[16] ನಿಮ್ಮ ಊರುಗಳಲ್ಲಿ ಯಾವ ಸ್ಥಳವು ಅವನಿಗೆ ಇಷ್ಟವಾಗಿದೆಯೋ ಅಲ್ಲೇ ಅವನು ವಾಸವಾಗಿರಬಹುದು; ಅವನನ್ನು ನಿರ್ಬಂಧಪಡಿಸಬಾರದು ಹಾಗೂ ನೀವು ಅವನನ್ನು ಮತ್ತೆ ಶೋಷಣೆಗೆ ಗುರಿಮಾಡಬಾರದು.

[17] ಇಸ್ರಾಯೇಲರಲ್ಲಿ ಯಾವ ಸ್ತ್ರೀಯೂ ದೇವದಾಸಿಯಾಗಬಾರದು; ಯಾವ ಪುರುಷನೂ ಅಂತಹ ವೇಶ್ಯೆತನಕ್ಕೆ ಇಳಿಯಬಾರದು.

[18] ಇಸ್ರಾಯೇಲರ ಪುರುಷ ಅಥವಾ ಸ್ತ್ರೀಯೂ ವ್ಯಭಿಚಾರದಿಂದ ಸಂಪಾದಿಸಿದ ಹಣವನ್ನು ಹರಕೆಯಾಗಿ ನಿಮ್ಮ ದೇವರಾದ ಯೆಹೋವನ ಆಲಯದೊಳಗೆ ತರಲೇಬಾರದು. ಈ ಎರಡೂ ಯೆಹೋವನಿಗೆ ಅಸಹ್ಯವಾದ ವಿಷಯ.

[19] ಹಣವನ್ನಾಗಲಿ, ಆಹಾರಪದಾರ್ಥಗಳನ್ನಾಗಲಿ ಬೇರೆ ಯಾವುದನ್ನಾಗಲಿ ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸ್ವದೇಶದವನಿಗೆ ಕೊಡಬಾರದು.

[20] ಹೀಗೆ ನಡೆದರೆ ನೀವು ಸ್ವದೇಶವಾಗಿ ಪಡೆಯಲಿರುವ ದೇಶದಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿಯೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಭಿವೃದ್ಧಿಪಡಿಸುವನು.

[21] ನಿಮ್ಮ ದೇವರಾದ ಯೆಹೋವನಿಗೆ ಹರಕೆಮಾಡಿದ ಮೇಲೆ ಅದನ್ನು ತಡಮಾಡದೆ ತೀರಿಸಬೇಕು; ಆತನು ತಪ್ಪದೆ ಅದನ್ನು ವಿಚಾರಿಸುವನು; ತೀರಿಸದೆ ಹೋಗುವುದು ಪಾಪ.

[22] ನೀವು ಹರಕೆಮಾಡದಿದ್ದರೆ ದೋಷವೇನೂ ಇರಲಿಲ್ಲ;

[23] ಆದರೆ ಬಾಯಿಂದ ನುಡಿದದ್ದನ್ನು ನೆರವೇರಿಸಲೇಬೇಕು. ನಿಮ್ಮ ದೇವರಾದ ಯೆಹೋವನಿಗೆ ಬಾಯಿಂದ ಹರಕೆಮಾಡಿಕೊಂಡಂತೆಯೇ ಅದನ್ನು ಒಪ್ಪಿಸಿಬಿಡಬೇಕು.

[24] ಮತ್ತೊಬ್ಬನ ದ್ರಾಕ್ಷಿತೋಟದಲ್ಲಿ ನೀವು ಹೋಗುತ್ತಿರುವಾಗ ಇಷ್ಟಾನುಸಾರವಾಗಿ ಹಣ್ಣುಗಳನ್ನು ತಿನ್ನಬಹುದೇ ಹೊರತು ಪಾತ್ರೆಯಲ್ಲಿ ತುಂಬಿಕೊಂಡು ಹೋಗಬಾರದು.

[25] ಮತ್ತೊಬ್ಬನ ಪೈರಿನಲ್ಲಿ ಹೋಗುತ್ತಿರುವಾಗ ತೆನೆಗಳನ್ನು ಕೈಯಿಂದ ಮುರಿದುಕೊಳ್ಳಬಹುದೇ ಹೊರತು ಆ ಪೈರಿಗೆ ಕುಡುಗೋಲು ಹಾಕಬಾರದು.

ಧರ್ಮೋಪದೇಶಕಾಂಡ — Chapters