[1] ಆದುದರಿಂದ ನೀವು ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಆತನ ನಿಯಮಗಳನ್ನು ಕೈಕೊಂಡು, ಆತನ ಆಜ್ಞಾವಿಧಿನಿಯಮಗಳನ್ನು ಯಾವಾಗಲೂ ಅನುಸರಿಸಬೇಕು.
[2] ನೀವು ನಿಮ್ಮ ದೇವರಾದ ಯೆಹೋವನ ಶಿಕ್ಷಣ ಕ್ರಮವನ್ನೂ, ಮಹಿಮೆಯನ್ನೂ, ಭುಜಬಲವನ್ನೂ ಮತ್ತು ಶಿಕ್ಷಾಹಸ್ತವನ್ನೂ ಅಂದರೆ,
[3] ಆತನು ಐಗುಪ್ತದೇಶದಲ್ಲಿ ಫರೋಹನನ್ನೂ ಹಾಗೂ ಅವನ ದೇಶವನ್ನೂ ಶಿಕ್ಷಿಸುವುದಕ್ಕಾಗಿ ನಡಿಸಿದ ಸೂಚಕಕಾರ್ಯಗಳನ್ನೂ ಮತ್ತು ಮಹತ್ಕಾರ್ಯಗಳನ್ನೂ,
[4] ಐಗುಪ್ತ್ಯರ ಸೈನ್ಯ ಅಂದರೆ, ಅವರ ರಥಾಶ್ವಬಲಗಳು ನಿಮ್ಮನ್ನು ಹಿಂದಟ್ಟಿ ಬಂದಾಗ ಆತನು ಕೆಂಪು ಸಮುದ್ರದ ನೀರನ್ನು ಅವರ ಮೇಲೆ ಬರಮಾಡಿ ಸಂಪೂರ್ಣವಾಗಿ ನಾಶಮಾಡಿದ್ದನ್ನೂ,
[5] ನೀವು ಈ ಸ್ಥಳಕ್ಕೆ ಸೇರುವ ತನಕ ಆತನು ನಿಮಗೋಸ್ಕರ ಅರಣ್ಯದಲ್ಲಿ ಉಪಕಾರಮಾಡಿದ್ದನ್ನೂ,
[6] ರೂಬೇನನ ಮೊಮ್ಮಕ್ಕಳೂ, ಎಲೀಯಾಬನ ಮಕ್ಕಳೂ ಆದ ದಾತಾನ್ ಮತ್ತು ಅಬೀರಾಮರು ತಿರುಗಿ ಬಿದ್ದಾಗ ಭೂಮಿಯು ಬಾಯ್ದೆರೆದು ಅವರನ್ನೂ, ಅವರ ಮನೆಯವರನ್ನೂ, ಅವರ ಡೇರೆಗಳನ್ನೂ ಮತ್ತು ಅವರಿಗೆ ಸೇರಿದ ಎಲ್ಲಾ ಪ್ರಾಣಿಗಳನ್ನೂ ಇಸ್ರಾಯೇಲರ ನಡುವೆ ನುಂಗಿಬಿಟ್ಟದ್ದನ್ನೂ ಈಗ ಜ್ಞಾಪಕಮಾಡಿಕೊಳ್ಳಿರಿ.
[7] ಯೆಹೋವನು ನಡಿಸಿದ ಆ ವಿಶೇಷ ಕಾರ್ಯಗಳನ್ನು ಪ್ರತ್ಯಕ್ಷವಾಗಿ ನೋಡಿದವರಾದ ನಿಮಗೇ ಹೇಳುತ್ತಿದ್ದೇನೆ.
[8] ಆದುದರಿಂದಲೇ ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು. ಆಗ ನೀವು ಬಲವುಳ್ಳವರಾಗಿ ಈ ನದಿಯನ್ನು ದಾಟಿ ಆಚೆಯಿರುವ
[9] ದೇಶವನ್ನು ಸೇರಿ ಸ್ವಾಧೀನ ಮಾಡಿಕೊಳ್ಳುವಿರಿ. ಯೆಹೋವನು ನಿಮ್ಮ ಪೂರ್ವಿಕರಿಗೂ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣಮಾಡಿದ ಆ ದೇಶದಲ್ಲಿ ನೀವು ಬಹುಕಾಲ ಬದುಕುವಿರಿ. ಅದು ಹಾಲೂ ಮತ್ತು ಜೇನೂ ಹರಿಯುವ ದೇಶ.
[10] ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶವು ಬಿಟ್ಟುಬಂದ ಐಗುಪ್ತದೇಶದ ಹಾಗಲ್ಲ. ಐಗುಪ್ತದೇಶದಲ್ಲಿ ನೀವು ಹೊಲಗದ್ದೆಗಳಲ್ಲಿ ಬೀಜ ಬಿತ್ತಿದ ಮೇಲೆ ಕಾಯಿಪಲ್ಯಗಳ ತೋಟವನ್ನು ವ್ಯವಸಾಯ ಮಾಡುವ ರೀತಿಯಲ್ಲಿ ಏತವನ್ನು ತುಳಿದು ನೀರು ಕಟ್ಟುತ್ತಿದ್ದಿರಿ.
[11] ಆದರೆ ನೀವು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಹೋಗುವ ದೇಶವೋ ಹಳ್ಳದಿಣ್ಣೆಗಳ ದೇಶ; ಆಕಾಶದಿಂದ ಮಳೆಬಿದ್ದ ಪ್ರಕಾರವೇ ಅದಕ್ಕೆ ನೀರು ದೊರೆಯುವುದು.
[12] ಅದು ನಿಮ್ಮ ದೇವರಾದ ಯೆಹೋವನು ಪರಾಂಬರಿಸುವ ದೇಶ; ವರ್ಷದ ಪ್ರಾರಂಭ ಮೊದಲುಗೊಂಡು ಕೊನೆಯ ವರೆಗೂ ಆತನು ಅದನ್ನು ಸದಾ ಕಟಾಕ್ಷಿಸುವನು.
[13] ನಾನು ಈಗ ನಿಮಗೆ ಬೋಧಿಸುವ ಯೆಹೋವನ ಆಜ್ಞೆಗಳಿಗೆ ನೀವು ಲಕ್ಷ್ಯಕೊಟ್ಟು, ನಿಮ್ಮ ದೇವರಾದ ಯೆಹೋವನನ್ನು ಸಂಪೂರ್ಣ ಹೃದಯದಿಂದಲೂ, ಸಂಪೂರ್ಣ ಮನಸ್ಸಿನಿಂದಲೂ ಪ್ರೀತಿಸಿ ಆತನನ್ನು ಸೇವಿಸಿದರೆ,
[14] ನಿಮಗೆ ಗೋದಿ, ದ್ರಾಕ್ಷಿ, ಎಣ್ಣೇಕಾಯಿ ಇವುಗಳ ಬೆಳೆ ಚೆನ್ನಾಗಿ ಉಂಟಾಗುವಂತೆ ಆತನು ನಿಮ್ಮ ಭೂಮಿಗೆ ಬೇಕಾದ ಮುಂಗಾರು ಮತ್ತು ಹಿಂಗಾರು ಮಳೆಯನ್ನು ಸರಿಯಾಗಿ ಕೊಡುವನು.
[15] ಅಡವಿಯಲ್ಲಿ ದನಕರುಗಳಿಗೆ ಬೇಕಾದಷ್ಟು ಹುಲ್ಲನ್ನು ಕೊಡುವನು; ನೀವು ಆಹಾರದಿಂದ ತೃಪ್ತರಾಗಿರುವಿರಿ.
[16] ಆದರೆ ನೀವು ಎಚ್ಚರದಿಂದಿರಬೇಕು; ನಿಮ್ಮ ಹೃದಯವು ಮರುಳುಗೊಂಡು ಯೆಹೋವನು ಹೇಳಿದ ಮಾರ್ಗವನ್ನು ಬಿಟ್ಟು, ಇತರ ದೇವರುಗಳನ್ನು ಅವಲಂಬಿಸಿ ಪೂಜಿಸಿದರೆ,
[17] ಆತನು ನಿಮ್ಮ ಮೇಲೆ ಸಿಟ್ಟುಗೊಂಡು ಮಳೆಬಾರದಂತೆ ಆಕಾಶವನ್ನು ಮುಚ್ಚಿಬಿಟ್ಟಾನು; ಆಗ ಭೂಮಿಯಲ್ಲಿ ಬೆಳೆಯಾಗದೆ ಯೆಹೋವನು ನಿಮಗೆ ಕೊಡುವ ಆ ಉತ್ತಮ ದೇಶದಲ್ಲಿ ನೀವು ಉಳಿಯದೆ ಬೇಗ ನಾಶವಾಗಿ ಹೋಗುವಿರಿ.
[18] ಆದುದರಿಂದ ನೀವು ಈ ನನ್ನ ಮಾತುಗಳನ್ನು ನಿಮ್ಮ ಹೃದಯದಲ್ಲಿಯೂ, ಮನಸ್ಸಿನಲ್ಲಿಯೂ ಇಟ್ಟುಕೊಳ್ಳಬೇಕು. ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು. ಇವು ನಿಮ್ಮ ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತಿರಬೇಕು.
[19] ನೀವು ಮನೆಯಲ್ಲಿರುವಾಗಲೂ, ಪ್ರಯಾಣದಲ್ಲಿರುವಾಗಲೂ, ಮಲಗುವಾಗಲೂ ಮತ್ತು ಏಳುವಾಗಲೂ ಇವುಗಳ ವಿಷಯದಲ್ಲಿ ಮಾತನಾಡುತ್ತಾ ನಿಮ್ಮ ಮಕ್ಕಳಿಗೆ ಇವುಗಳನ್ನು ಅಭ್ಯಾಸಮಾಡಿಸಬೇಕು.
[20] ನಿಮ್ಮ ಮನೆ ಬಾಗಿಲಿನ ನಿಲುವುಪಟ್ಟಿಗಳಲ್ಲಿಯೂ ಮತ್ತು ಹೆಬ್ಬಾಗಿಲುಗಳ ಮೇಲೆಯೂ ಇವುಗಳನ್ನು ಬರೆಯಬೇಕು.
[21] ಹೀಗೆ ಮಾಡಿದರೆ ಭೂಮಿಯ ಮೇಲೆ ಆಕಾಶವು ಎಷ್ಟು ಕಾಲ ಇರುವುದೋ, ಅಷ್ಟು ಕಾಲದ ವರೆಗೆ ನೀವೂ ಮತ್ತು ನಿಮ್ಮ ಸಂತತಿಯವರೂ ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ಆ ದೇಶದಲ್ಲಿ ಬಾಳುವಿರಿ.
[22] ನಾನು ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸುವವರಾಗಿ, ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಎಲ್ಲಾ ವಿಷಯಗಳಲ್ಲಿಯೂ ಆತನು ಹೇಳುವ ಮಾರ್ಗದಲ್ಲೇ ನಡೆದು, ಆತನನ್ನೇ ಹೊಂದಿಕೊಂಡಿರಬೇಕು.
[23] ಆಗ ಆತನು ಆ ಜನಾಂಗಗಳನ್ನೆಲ್ಲಾ ನಿಮ್ಮ ಎದುರಿನಿಂದ ಹೊರಡಿಸುವನು. ನಿಮಗಿಂತಲೂ ಮಹಾಬಲಿಷ್ಠ ಜನಾಂಗಗಳ ದೇಶವನ್ನು ನೀವು ಸ್ವಾಧೀನ ಮಾಡಿಕೊಳ್ಳುವಿರಿ.
[24] ನೀವು ಹೆಜ್ಜೆಯಿಡುವ ಎಲ್ಲಾ ಸ್ಥಳಗಳು ನಿಮ್ಮದಾಗುವವು. ಅರಣ್ಯ ಮೊದಲುಗೊಂಡು ಲೆಬನೋನ್ ಪರ್ವತದ ವರೆಗೂ ಮತ್ತು ಯೂಫ್ರೆಟಿಸ್ ನದಿಯಿಂದ ಪಶ್ಚಿಮ ಸಮುದ್ರದವರೆಗೂ ನಿಮ್ಮ ಸೀಮೆ ವ್ಯಾಪಿಸುವುದು.
[25] ಯಾರೂ ನಿಮ್ಮ ಮುಂದೆ ನಿಲ್ಲುವುದಿಲ್ಲ. ತಾನು ನಿಮಗೆ ಹೇಳಿದಂತೆ ನೀವು ಕಾಲಿಡುವ ಎಲ್ಲಾ ಪ್ರದೇಶಗಳ ಜನಗಳಿಗೂ ನಿಮ್ಮಿಂದ ದಿಗಿಲೂ ಮತ್ತು ಹೆದರಿಕೆಯೂ ಉಂಟಾಗುವಂತೆ ನಿಮ್ಮ ದೇವರಾದ ಯೆಹೋವನು ಮಾಡುವನು.
[26] ಇಗೋ ನೋಡಿರಿ, ಈ ಹೊತ್ತು ನಾನು ಆಶೀರ್ವಾದವನ್ನೂ ಮತ್ತು ಶಾಪವನ್ನೂ ನಿಮ್ಮ ಮುಂದೆ ಇಡುತ್ತಾ ಇದ್ದೇನೆ.
[27] ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ನೀವು ವಿಧೇಯರಾಗಿ ನಡೆದರೆ ಆಶೀರ್ವಾದವೂ,
[28] ಈ ಆಜ್ಞೆಗಳಿಗೆ ಅವಿಧೇಯರಾಗಿ, ನಾನು ಈಗ ಬೋಧಿಸುವ ಮಾರ್ಗವನ್ನು ಬಿಟ್ಟು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಅವಲಂಬಿಸಿದರೆ ಶಾಪವೂ ನಿಮಗುಂಟಾಗುವವು.
[29] ನೀವು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಹೋಗುವ ಆ ದೇಶಕ್ಕೆ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸೇರಿಸಿದ ನಂತರ ನೀವು ಗೆರಿಜ್ಜೀಮ್ ಬೆಟ್ಟದ ಮೇಲೆ ಆಶೀರ್ವಾದವನ್ನೂ ಮತ್ತು ಏಬಾಲ್ ಬೆಟ್ಟದ ಮೇಲೆ ಶಾಪವನ್ನೂ ಪ್ರಕಟಿಸಬೇಕು.
[30] ಆ ಬೆಟ್ಟಗಳು ಯೊರ್ದನ್ ನದಿಯ ಆಚೆ, ಪಡುವಣ ದಾರಿಯ ಪಶ್ಚಿಮದಲ್ಲಿ ಕಾನಾನ್ಯರು ವಾಸಿಸುವ ಅರಾಬಾ ಪ್ರದೇಶದಲ್ಲಿ, ಗಿಲ್ಗಾಲಿಗೆ ಎದುರಾಗಿ ಮೋರೆ ಎಂಬ ವೃಕ್ಷದ ಬಳಿಯಲ್ಲಿ ಇವೆ.
[31] ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ನೀವು ಯೊರ್ದನ್ ನದಿಯನ್ನು ದಾಟಬೇಕು. ನೀವು ಆ ದೇಶವನ್ನು ಸ್ವಾಧೀನಮಾಡಿಕೊಂಡು, ಅದರಲ್ಲಿ ವಾಸಮಾಡುವಾಗ
[32] ನಾನು ಈಗ ನಿಮಗೆ ತಿಳಿಸುವ ಎಲ್ಲಾ ಆಜ್ಞಾವಿಧಿಗಳನ್ನು ಅನುರಿಸಿ ನಡೆಯಲೇಬೇಕು.